ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಅವರೊಂದಿಗೆ ಹಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ಕಿರಿಯ ವಯಸ್ಸಿನಲ್ಲಿ ಮಂತ್ರಿಯಾಗಿ ನಾಯಕರೊಬ್ಬರು ಸಾಧನೆ ದಾಖಲೆ ಬರೆದಿದ್ದಾರೆ.
ಟಿಡಿಪಿ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು (Kinjarapu Ram Mohan Naidu) ಅತಿಕಿರಿಯ ವಯಸ್ಸಿನ ಸಚಿವರಾಗಿ ದಾಖಲೆ ನಿರ್ಮಿಸಿದ್ದಾರೆ. ಕೇವಲ 36 ವರ್ಷಗಳಲ್ಲಿ ಕೇಂದ್ರ ಸಚಿವರಾಗಿ ದಾಖಲೆ ಬರೆದಿದ್ದಾರೆ. ನರೇಂದ್ರ ಮೋದಿ ಸತತ ಮೂರು ಬಾರಿ ಪ್ರಧಾನಿ ಆದಂತೆ, ರಾಮಮೋಹನ್ ನಾಯ್ಡು ಸತತ ಮೂರನೇ ಬಾರಿ ಸಂಸದರಾಗಿದ್ದಾರೆ. 2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆ ಬರೆದಿದ್ದರು. ಈಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಕೇಂದ್ರ ಮಂತ್ರಿಯಾದ ದಾಖಲೆ ಬರೆದಿದ್ದಾರೆ. ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವೇ ಅವರಿಗೆ ಸಂದಿದೆ.
ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಟಿಡಿಪಿಯಿಂದ ಸತತ ಮೂರು ಬಾರಿ ಅವರು ಗೆದ್ದಿದ್ದಾರೆ. ರಾಮಮೋಹನ್ ರೆಡ್ಡಿ ಅವರು ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಮಗ. ಕುತೂಹಲ ಎಂದರೆ ಯರನ್ ನಾಯ್ಡು ಕೂಡ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಿನಿಸ್ಟರ್ ಎಂಬ ದಾಖಲೆಯನ್ನು 1996ರಲ್ಲಿ ಬರೆದಿದ್ದರು. ಅವರು 2012ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಂದೆಯ ಸಾವಿನ ನಂತರ ರಾಮಮೋಹನ್ ನಾಯ್ಡು ರಾಜಕೀಯ ಪ್ರವೇಶಿಸಿದ್ದರು. ಈಗ ತಂದೆಯ ಹಾದಿಯಲ್ಲಿಯೇ ಮಂತ್ರಿಯಾಗಿದ್ದಾರೆ.