ಹಿಂದುತ್ವವಾದಿ ಸಂಘಟನೆಗಳು ಈ ಮೊದಲು ಭಾರತದಲ್ಲಿ ಕೇವಲ ಶ್ರೀಮಂತ ಹಿಂದೂಗಳಿಂದ ಮಾತ್ರ ದೇಣಿಗೆ ಪಡೆಯುತ್ತಿದ್ದವು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಮೇಲೆ ಅನೇಕ ಬಗೆಯಲ್ಲಿ ಸರಕಾರದ ಅನುದಾನ ಪಡೆಯುವುದು ಹಾಗು ಸರಕಾರಿ ಭೂಮಿಯನ್ನು ಅಗ್ಗದ ದರದಲ್ಲಿ ಕಬಳಿಸುವುದು ಸರ್ವೇಸಾಮಾನ್ಯವಾಗಿದೆ. ಕರ್ನಾಟಕದಲ್ಲಿ ಕಳೆದ ಅವಧಿಯ ಬಿಜೆಪಿ ಆಡಳಿತದಲ್ಲಿ ಸರಕಾರದಿಂದ ಗರಿಷ್ಠ ಲಾಭ ಪಡೆದದ್ದು ಹಿಂದುತ್ವವಾದಿ ಸಂಘಟನೆಗಳು ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ. ಈ ಪಿಡುಗು ವಿದೇಶಕ್ಕೂ ಹರಡಿದ್ದು ˌ ವಿದೇಶಗಳಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ಅನೇಕ ಹೆಸರಿನ ಸಂಘಟನೆಗಳನ್ನು ಸ್ಥಾಪಿಸಿದ ಹಿಂದಿತ್ವವಾದಿಗಳು ಅಲ್ಲಿನ ಸರಕಾರದಿಂದ ದೇಣಿಗೆ ಪಡೆದು ಹಿಂದುತ್ವದ ಚಟುವಟಿಕೆಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಪರಿಹಾರಾರ್ಥವಾಗಿ ಅಮೆರಿಕ ಸರಕಾರದಿಂದ ಅಲ್ಲಿನ ಹಿಂದುತ್ವವಾದಿ ಸಂಘಟನೆಗಳು ನಿಧಿ ಪಡೆದು ವಂಚಿಸಿದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.

ಪ್ರಸಿದ್ಧ ಸಮಾಜಿಕ ಮಾಧ್ಯಮ ಟ್ವಿಟರ್ ಸಂಸ್ಥೆಯು ಅಮೇರಿಕೆದಲ್ಲಿ ಸಂಘ ಪರಿವಾರಕ್ಕೆ ಸೇರಿದ ಸ್ವಯಂಸೇವಾ ಸಂಸ್ಥೆಯೊಂದಕ್ಕೆ $ 2.5 ಮಿಲಿಯನ್ ಧನರಾಶಿ ದೇಣಿಗೆ ನೀಡಿದ್ದನ್ನು ವಿರೋಧಿಸಿ ಎರಡು ವರ್ಷಗಳ ಹಿಂದೆ ಯುಎಸ್ ಮೂಲದ ಪತ್ರಕರ್ತ ಪೀಟರ್ ಫ್ರೆಡ್ರಿಚ್ ಉಪವಾಸ ಸತ್ಯಾಗ್ರಹ ಮಾಡಿದ್ದರು. ಸೀಯಾಸಾತ್.ಕಾಮ್ ಸುದ್ದಿ ಸಂಸ್ಥೆಯು ಈ ಪತ್ರಕರ್ತನನ್ನು ಸಂಪರ್ಕಿಸಿದಾಗ “ಇದು ಗಂಭೀರವಾದ ಸಂಗತಿಯಾಗಿದೆ” ಎಂದು ಆತ ಪ್ರತಿಕ್ರಿಯಿಸಿದ ಬಗ್ಗೆ ವರದಿಯಾಗಿತ್ತು. ಯುಎಸ್ ನಲ್ಲಿ ಆರ್‌ಎಸ್‌ಎಸ್ ನ ಗುಪ್ತ ಚಟುವಟಿಕೆಗಳನ್ನು ಪತ್ತೆಹಚ್ಚುವ ಕಾರ್ಯ ಮಾಡುತ್ತಿರುವ ಕ್ಯಾಲಿಫೋರ್ನಿಯಾ ಮೂಲದ ಪತ್ರಕರ್ತ ಪೀಟರ್ ಫ್ರೆಡ್ರಿಚ್ ಆಗ ಉಪವಾಸ ಸತ್ಯಾಗ್ರಹ ಕೈಕೊಂಡಿದ್ದರು. ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡಾರ್ಸೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಹವರ್ತಿ ಸಂಸ್ಥೆಯಾಗಿರುವ ಸೇವಾ ಇಂಟರನ್ಯಾಷನಲ್ ಸಂಸ್ಥೆಗೆ ೨.೫ ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದನ್ನು ಈ ಪತ್ರಕರ್ತ ಬಲವಾಗಿ ವಿರೋಧಿಸಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದ ಸುದ್ದಿ ಅಂದು ಸೀಯಾಸತ್.ಕಾಮ್ ನಲ್ಲಿ ಕಾಣಿಸಿಕೊಂಡಿತ್ತು.
ಯುಎಸ್ ನ ಸೆವಾ ಇಂಟರ್ನ್ಯಾಷನಲ್ ಸಂಸ್ಥೆಗೆ ಟ್ವಿಟರ್ ಆಡಳಿತ ಮಂಡಳಿ ದೇಣಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಂಘ ಪರಿವಾರ ತೀವ್ರವಾದ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರದ ಸುದೀರ್ಘ ಇತಿಹಾಸ ಹೊಂದಿದೆ ಎಂದು ಪೀಟರ್ ಫ್ರೆಡ್ರಿಚ್ ತನ್ನನ್ನು ಟ್ವಿಟ್ಟರ್ನಲ್ಲಿ ಸಂಪರ್ಕಿಸಿದ ಸೀಯಾಸತ್.ಕಾಮ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದ. ಭಾರತೀಯ ಅಲ್ಪಸಂಖ್ಯಾತರನ್ನು ಹೆದರಿಸುವ ಗುರಿ ಹೊಂದಿರುವ ಸಂಘಪರಿವಾರ ಅತ್ಯಂತ ಅಪಾಯಕಾರಿ ಧಾರ್ಮಿಕ ಸಾಪ್ರದಾಯವಾದಿ ಸಂಸ್ಥೆ ಎಂದು ಫ್ರೆಡ್ರಿಚ್ ಆಗ ಹೇಳಿದ್ದರು. ಕ್ಯಾಲಿಫೋರ್ನಿಯಾ ಮೂಲದ ಪತ್ರಕರ್ತ ಪೀಟರ್ ಫ್ರೆಡ್ರಿಚ್ ಜಾಗತಿಕ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯು ನೇರವಾಗಿ ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿದೆ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ತನ್ನ ಮತೀಯವಾದಿ ಶಕ್ತಿಯನ್ನು ವಿಸ್ತರಿಸಲು ಅಂತರರಾಷ್ಟ್ರೀಯ ಹಣ ಬಳಸುತ್ತಿದೆ ಎಂದು ಅಪಾದಿಸಿದ್ದರು. ತನ್ನ ಉಪವಾಸ ಸತ್ಯಾಗ್ರಹದಲ್ಲಿ ಎಲ್ಲರೂ ಭಾಗವಹಿಸಿ ಈ ಕ್ರತ್ಯವನ್ನು ವಿರೋಧಿಸಬೇಕೆಂದು ಆತ ಜನರಿಗೆ ಮನವಿ ಮಾಡಿದ್ದರು.
ಈ ಸತ್ಯಾಗ್ರಹ ತಾನು ಒಬ್ಬಂಟಿಯಾಗಿ ಆರಂಭಿಸಿದ್ದು, ಅನೇಕರು ಬೆಂಬಲಿಸಿದ್ದಾರೆಂದು ಫ್ರೆಡ್ರಿಚ್ ಹೇಳಿದ್ದರು. ಸೋಷಲ್ ಮಾಧ್ಯಮದಲ್ಲಿ ತಮಗೆ ಬೆದರಿಕೆಗಳು ಬಂದಿದ್ದು, ನಾನು ಸಾಯುವವರೆಗೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ, ಸ್ವಯಂ ಘೋಷಿತ ಹಿಂದೂ ರಾಷ್ಟ್ರೀಯವಾದಿಗಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದರು. ಟ್ವಿಟ್ಟರ್ನಲ್ಲಿ ಮತ್ತು ಇನ್ಸ್ಟಾಗ್ರಾಮ್ನಲ್ಲಿ ನನಗೆ ಹಿಂದೂ ತೀವ್ರವಾದಿಗಳಿಂದ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಫ್ರೆಡ್ರಿಚ್ ಹೇಳಿರುವುದಾಗಿ ಸೀಯಾಸತ್.ಕಾಮ್ ವರದಿ ಮಾಡಿತ್ತು. ಕೋವಿಡ್ ಸಂದರ್ಭದಲ್ಲಿ, ಟ್ವಿಟರ್ ಸಿಇಒ, ಜ್ಯಾಕ್ ಡಾರ್ಸೆ, ಭಾರತದಲ್ಲಿ ಕೋವಿಡ್-೧೯ ಪರಿಹಾರಾರ್ಥವಾಗಿ ೧೫ ಮಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಈ ೧೫ ಮಿಲಿಯನ್ ಯುಎಸ್ ಡಾಲರ್ ಹಣದಲ್ಲಿ ಮೂರು ಸರ್ಕಾರೇತರ ಸಂಸ್ಥೆಗಳಾದ ಕೇರ್ ಗೆ ೧೦ ಮಿಲಿಯನ್ ಡಾಲರ್ ಮತ್ತು, ಏಡ್ ಇಂಡಿಯಾ ಹಾಗು ಸೆವಾ ಇಂಟರ್ನ್ಯಾಷನಲ್ ಸಂಸ್ಥೆಗಳಿಗೆ ತಲಾ ೨.೫ ಮಿಲಿಯನ್ ಯುಎಸ್ ಡಾಲರ್ ದೇಣಿಗೆ ನೀಡಿತ್ತು. ಆ ನಿಧಿಯು ಹಿಂದುತ್ವದ ಪ್ರಚಾರಕ್ಕೆ ಬಳಸುತ್ತಿದೆ ಎನ್ನುವುದು ಪೀಟರ್ ವಾದವಾಗಿತ್ತು.
ಸೀಯಾಸತ್.ಕಾಮ್ ನೊಂದಿಗೆ ಮುಂದುವರೆದು ಮಾತನಾಡಿದ ಫ್ರೆಡ್ರಿಚ್, “ಇದು ಲಘುವಾಗಿ ತೆಗೆದುಕೊಳ್ಳುವ ಸಂಗತಿಯಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸಲು ನಾನು ಆಶಿಸುತ್ತೇನೆ” ಎಂದು ಹೇಳಿದ ಬಗ್ಗೆ ವರದಿ ಮಾಡಲಾಗಿದೆ. ಸಂಘವು ತನ್ನ ಗುಪ್ತ ಕಾರ್ಯಸೂಚಿಯ ಮೂಲಕ ಭಾರತದ ಅಲ್ಪಸಂಖ್ಯಾತ ಸಮುದಾಯದ ಮೇಲೆ ಅನ್ಯಾಯವನ್ನು ಮಾಡುತ್ತಿದೆ. ಈಗ ಹೆಚ್ಚು ಕಿರುಕುಳಕ್ಕೊಳಗಾಗುತ್ತಿರುವ ಭಾರತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಇದು ಜೀವನ ಮತ್ತು ಮರಣದ ಸಂಗತಿಯಾಗಿದೆ ಎಂದು ಆ ಪತ್ರಕರ್ತ ಹೇಳಿದ್ದರು. ಪೀಟರ್ ಫ್ರೆಡ್ರಿಚ್ ೩,೩೦೦ ಕ್ಕೂ ಹೆಚ್ಚು ಜನರು ಸಹಿ ಹಾಕಿರುವ ಅರ್ಜಿಯನ್ನು ಸಹ ಸಿದ್ಧಪಡಿಸಿದ್ದರು. ಸೇವಾ ಇಂಟರ್ನ್ಯಾಷನಲ್ ಪ್ರಸ್ತುತ ೫೦೦ ಕ್ಕೂ ಹೆಚ್ಚು ಪಾಲುದಾರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಹಿಂದುತ್ವ ಸಿದ್ಧಾಂತಗಳನ್ನು ಉತ್ತೇಜಿಸುತ್ತಿವೆ ಎನ್ನಲಾಗಿದೆ. ಆಗ, ಟ್ವಿಟರ್ ಸಂಸ್ಥೆಯು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಬಗ್ಗೆ ಭಾರತದಲ್ಲಿ ‘ವಾಕ್ ಸ್ವಾತಂತ್ರ್ಯ’ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು.
ಹೊಸ ನಿಯಮಗಳನ್ನು ಪಾಲಿಸಲು ೩ ತಿಂಗಳ ವಿಸ್ತರಣೆ ನೀಡುವಂತೆ ಟ್ವೀಟರ್ ಕಂಪನಿ ಆಗ ಐಟಿ ಸಚಿವಾಲಯಕ್ಕೆ ಮನವಿ ಮಾಡಿದ್ದನ್ನು ಸ್ಮರಿಸಬಹುದು. “ಇದೀಗ, ಭಾರತದಲ್ಲಿನ ನಮ್ಮ ಉದ್ಯೋಗಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಕಳವಳಕಾರಿ ಘಟನೆಗಳು ಜರುಗುತ್ತಿವೆ ಮತ್ತು ನಾವು ಸೇವೆ ಸಲ್ಲಿಸುತ್ತಿರುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಭವನೀಯ ಬೆದರಿಕೆ ಇದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ನಾಗರಿಕ ಸಮಾಜದಲ್ಲಿ ಅನೇಕರೊಂದಿಗೆ, ನಮ್ಮ ಜಾಗತಿಕ ಸೇವಾ ನಿಯಮಗಳನ್ನು ಜಾರಿಗೊಳಿಸುವುದು ಮತ್ತು ಹೊಸ ಐಟಿ ನಿಯಮಗಳ ಪ್ರಮುಖ ಅಂಶಗಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಪೊಲೀಸರು ಬೆದರಿಕೆ ತಂತ್ರಗಳನ್ನು ಬಳಸುವುದರ ಬಗ್ಗೆ ನಮಗೆ ಅತ್ಯಂತ ಕಳವಳ ಆಗಿದೆ”ಎಂದು ಅಂದು ಟ್ವಿಟ್ಟರ್ ವಕ್ತಾರರು ಹೇಳಿದ್ದರು. ಭಾರತದಲ್ಲಿ ‘ವಾಕ್ ಸ್ವಾತಂತ್ರ್ಯ’ ಕುರಿತು ಟ್ವಿಟರ್‌ನ ಕಳವಳವನ್ನು ಉದ್ದೇಶಿಸಿ, ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದರು.

“ಟ್ವಿಟರ್‌ನ ಹೇಳಿಕೆಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅದರ ನಿಯಮಗಳು ಹೇಗಿರಬೇಕೆಂದು ನಿರ್ದೇಶಿಸುವ ಪ್ರಯತ್ನವಾಗಿದೆ. ತನ್ನ ಕಾರ್ಯಗಳು ಮತ್ತು ಉದ್ದೇಶಪೂರ್ವಕ ಧಿಕ್ಕಾರದ ಪ್ರವೃತ್ತಿಯ ಮೂಲಕ, ಟ್ವಿಟರ್ ಭಾರತದ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಇದಲ್ಲದೆ, ಟ್ವಿಟರ್ ಮಧ್ಯವರ್ತಿ ಮಾರ್ಗಸೂಚಿಗಳಲ್ಲಿನ ಆ ನಿಯಮಗಳನ್ನು ಅನುಸರಿಸಲು ನಿರಾಕರಿಸುತ್ತದೆ, ಅದರ ಆಧಾರದ ಮೇಲೆ ಇದು ಭಾರತದ ಯಾವುದೇ ಅಪರಾಧ ಹೊಣೆಗಾರಿಕೆಯಿಂದ ಸುರಕ್ಷಿತ ರಕ್ಷಣೆಯನ್ನು ಪಡೆಯುತ್ತಿದೆ” ಎಂಬರ್ಥದ ಗಂಭೀರ ಆರೋಪ ಅಂದು ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಡಿತ್ತು. ಇತ್ತೀಚಿಗೆ ಟ್ವೀಟರ್ ನ ಮಾಜಿ ಮುಖ್ಯಸ್ಥರು ಅಂದು ಭಾರತ ಸರಕಾರ ಟ್ವೀಟರ್ ಸಂಸ್ಥೆಯನ್ನು ನಿಯಂತ್ರಿಸಲು ಪ್ರಯತ್ನಿಸಿತ್ತು ಎಂದು ನೀಡಿರುವ ಹೇಳಿಕೆಯನ್ನು ಸ್ಮರಿಸಬಹುದಾಗಿದೆ. ಇದರಿಂದ ಅಂದು ಪೀಟರ್ ಅವರ ಆರೋಪಗಳಿಗೆ ಅತ್ಯಂತ ಸಮಂಜಸವಾಗಿತ್ತು ಎನ್ನಿಸುತ್ತದೆ. ಹಿಂದುತ್ವವಾದಿಗಳಿಂದ ಸರಕಾರದ ಹಣ ದುರ್ಬಳಕೆ ಕೃತ್ಯವು ಹೊಸದೇನಲ್ಲ.
ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯು ಯುಎಸ್ ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಯೋಜಿತವಾಗಿದೆ. ತನ್ನ ವೆಬ್‌ಸೈಟ್‌ನಲ್ಲಿ, ಸೆವಾ ಇಂಟರ್‌ನ್ಯಾಷನಲ್ ಹಿಂದೂ ನಂಬಿಕೆ ಆಧಾರಿತ, ಮಾನವೀಯ, ಲಾಭೋದ್ದೇಶವಿಲ್ಲದ ಸೇವಾ ಸಂಸ್ಥೆಯಾಗಿದ್ದು, ಆಂತರಿಕ ಕಂದಾಯ ಸಂಹಿತೆ ೫೦೧ (ಸಿ) (3) ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ದಾಖಲಿಸಿಕೊಂಡಿದೆ. ೨೦೦೩ ರಲ್ಲಿ ಸ್ಥಾಪನೆಯಾದ ಸೆವಾ ಇಂಟರ್ನ್ಯಾಷನಲ್ ೧೯೮೯ ರಲ್ಲಿ ಭಾರತದಲ್ಲಿ ಪ್ರಾರಂಭವಾಗಿದ್ದ ಮಂಡಲ್ ಆಯೋಗದ ಮೀಸಲಾತಿ ವಿರೋಧಿ ಮತ್ತು ರಾಮ ಮಂದಿರ ನಿರ್ಮಾಣ ಬೇಡಿಕೆಯ ದೊಡ್ಡ ಚಳವಳಿಯ ಭಾಗವಾಗಿತ್ತು ಮತ್ತು ಜಗತ್ತಿನ ಇಪ್ಪತ್ತು ದೇಶಗಳಲ್ಲಿ ಈ ಸಂಸ್ಥೆಯು ಸಕ್ರಿಯವಾಗಿದೆ ಎನ್ನುವ ಸ್ಪೋಟಕ ಮಾಹಿತಿಗಳು ಇದೀಗ ಬಹಿರಂಗಗೊಂಡಿವೆ. ಸೆವಾ ಇಂಟರ್‌ನ್ಯಾಷನಲ್‌ಗೆ ಟ್ವೀಟರ್ ಸಂಸ್ಥೆಯು ೨.೫ ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದನ್ನು ಅಂದು ಹಲವಾರು ಜನರು #TakeItBackJack ಹ್ಯಾಶ್‌ಟ್ಯಾಗ್‌ನೊಂದಿಗೆ ವಿರೋಧಿಸಿದ್ದರು.
ಆರ್‌ಎಸ್‌ಎಸ್ ನ ಗುಪ್ತ ಚಟುವಟಿಕೆಗಳನ್ನು ಪತ್ತೆಹಚ್ಚುವ ತನಿಖಾ ಪಕ್ರತರ್ಕರಾಗಿರುವ ಪೀಟರ್ ಫ್ರೆಡ್ರಿಚ್, ಭಾರತದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಯ ಮಾತೃ ಸಂಸ್ಥೆಯ ಕುರಿತು ವ್ಯಾಪಕವಾಗಿ ಬರೆದಿದ್ದಾರೆ. ಸೇವಾ ಯುಎಸ್ಎ ನ ಅಧ್ಯಕ್ಷ ರಮೇಶ್ ಭೂತಾಡ ಅವರು ಯುಎಸ್ ನ ಹಿಂದೂ ಸ್ವಯಂಸೇವಕ್ ಸಂಘದ (ಎಚ್‌ಎಸ್‌ಎಸ್) ಉಪಾಧ್ಯಕ್ಷರಾಗಿ ಮತ್ತು ಮೂಲಭೂತವಾಗಿ, ಸಂಯುಕ್ತ ರಾಜ್ಯಗಳಲ್ಲಿ ಆರ್‌ಎಸ್‌ಎಸ್ ನ ಎರಡನೇ ಅತಿ ದೊಡ್ಡ ವ್ಯಕ್ತಿಯಾಗಿರುವ ಭೂತಾಡ ಅವರು, ಭಾರತದ ಆಡಳಿತರೂಢ ಭಾರತೀಯ ಜನತಾ ಪಕ್ಷದ ಚುನಾವಣಾ ಜವಾಬ್ಧಾರಿ ಮತ್ತು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿರುವ ಕುರಿತು ಸುದೀರ್ಘ ದಾಖಲೆಯನ್ನು ಹೊಂದಿದ್ದಾರಂತೆ. “೨೦೦೨ ರಲ್ಲಿ ಮುಸ್ಲಿಂ ವಿರೋಧಿ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು”ಎಂದು ಪೀಟರ್ ಫ್ರೆಡ್ರಿಚ್ ತಮ್ಮ ಬ್ಲಾಗ್ ಪೋಸ್ಟ್‌ಗಳಲ್ಲಿ ಉಲ್ಲೇಖಿಸಿದ್ದರು.
~ ಡಾ. ಜೆ ಎಸ್ ಪಾಟೀಲ.