2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಪಕ್ಷದ ನಾಯಕರು ಹಾಗೂ ಮುಖಂಡರು ಆಯಾ ಪಕ್ಷಗಳ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ರಾಜ್ಯ ಚುನಾವಣಾ ಅಖಾಡದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಈ ಬಗ್ಗೆ ಖುದ್ದು ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಡಿಕೆ ಸುರೇಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಸಹ ನಾಮಪತ್ರ ಸಲ್ಲಿಸುತ್ತೇನೆ. ಆದ್ರಿಂದ ಬೆಂಗಳೂರಿಗೆ ಹೋಗ್ತಾ ಇದ್ದೀನಿ ಅಂತ ಸ್ಫೋಟಕ ಹೇಳಿಕೆ ನೀಡಿದ್ರು. ಆದರೆ ನಾಮಪತ್ರ ಸಲ್ಲಿಸುವ ಕ್ಷೇತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿಕೆ ಸುರೇಶ್, ಯಾವ ಕ್ಷೇತ್ರದಿಂದ ಅರ್ಜಿ ಹಾಕ್ತೀನಿ ಅಂತ ನನಗೂ ಸಹ ಗೊತ್ತಿಲ್ಲ. ವರಿಷ್ಠರ ಸೂಚನೆಯಂತೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲಾದ್ರೂ ಒಂದು ಕಡೆ ಅರ್ಜಿ ಹಾಕ್ತೀನಿ ಅಂತ ಮಾಹಿತಿ ನೀಡಿದರು.