ಬೆಂಗಳೂರು, ಜೂನ್ 3: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಮಹತ್ವದ ಜನಪರ ನಿರ್ಧಾರಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ, ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ಯುವಕರ ಸಂಘಗಳ ಸ್ಥಾಪನೆ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನ ಸೇರಿದಂತೆ ಆರು ಪ್ರಮುಖ ತೀರ್ಮಾನಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಇದು ಯುವ ಯುಗದ ಆರಂಭ. ರಾಜ್ಯದ ಯುವಕರು, ರೈತರು, ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಾಗಿದೆ” ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ಹೆಣ್ಣುಮಕ್ಕಳಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯವಿದ್ದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಬೇಡಿಕೆಯನ್ನು ಪರಿಗಣಿಸಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ಸರ್ಕಾರ, 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಶೀಘ್ರದಲ್ಲೇ ನೇಮಕಾತಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ
ಖಾಸಗಿ ಕ್ಷೇತ್ರದಲ್ಲೂ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಹೊಸ ಉದ್ಯೋಗ ವಿನಿಮಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಖಾಸಗಿ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಯುವಕರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ. ಇದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.
ಪಂಚಾಯಿತಿ ಮಟ್ಟದಲ್ಲಿ 10 ಸಾವಿರ ಯುವಕರ ಸಂಘ
ರಾಜ್ಯದ ಪ್ರತಿ ಪಂಚಾಯಿತಿಯಲ್ಲೂ ಯುವಕರ ಸಂಘಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟು 10 ಸಾವಿರ ಸಂಘಗಳನ್ನು ಸ್ಥಾಪಿಸಿ, ಪ್ರತಿ ಸಂಘಕ್ಕೆ 10 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ ಬೆಳವಣಿಗೆ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ಉದ್ದೇಶದಿಂದ ಈ ಸಂಘಗಳು ಕಾರ್ಯನಿರ್ವಹಿಸಲಿವೆ.
ಒಸಿ-ಸಿಸಿ ಸಮಸ್ಯೆಗೆ ಪರಿಹಾರ
ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಒಸಿ (Occupancy Certificate) ಮತ್ತು ಸಿಸಿ (Completion Certificate) ಸಮಸ್ಯೆ ನಿವಾರಣೆಗೆ ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. 2500 ಚದರ ಅಡಿವರೆಗಿನ ಮನೆಗಳಿಗೆ ಕೆಲವು ಷರತ್ತುಗಳೊಂದಿಗೆ ಒನ್‌ಟೈಮ್ ಪರಿಹಾರ ಕಲ್ಪಿಸಲು ತೀರ್ಮಾನಿಸಲಾಗಿದೆ.
ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ
ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಲಾಗುವುದು. ಇದನ್ನು ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯ ಭಾಗವೆಂದು ಮುಖ್ಯಮಂತ್ರಿ ವಿವರಿಸಿದರು.
ಬೆಂಗಳೂರಿನ ರಸ್ತೆಗಳಿಗೆ ₹2,000 ಕೋಟಿ
ರಾಜಧಾನಿ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಹೊರತುಪಡಿಸಿ, ನಗರದ ಪ್ರಮುಖ ರಸ್ತೆಗಳನ್ನು ಮುಂದಿನ ಮೂರು ರಿಂದ ನಾಲ್ಕು ತಿಂಗಳೊಳಗೆ ಡಾಂಬರೀಕರಣ ಮಾಡಲು ಸರ್ಕಾರ ಗುರಿ ಹೊಂದಿದೆ.
ರೈತರ ಸಮಸ್ಯೆಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು ಎಂದಿರುವ ಮುಖ್ಯಮಂತ್ರಿ, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ತಡೆಯುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸಲಾದ ಈ ನಿರ್ಧಾರಗಳು ಡಿಕೆ ಶಿವಕುಮಾರ್ ಸರ್ಕಾರದ ಆಡಳಿತದ ದಿಕ್ಕು ಮತ್ತು ಆದ್ಯತೆಗಳನ್ನು ಸ್ಪಷ್ಟಪಡಿಸಿವೆ.






