ಕರೋನಾ ಮಾರಣಾಂತಿಕ ವೈರಾಣು ದಾಳಿ ಮತ್ತು ಅದರೊಂದಿಗೇ ಬಂದ ಲಾಕ್ ಡೌನ್ ಎಂಬ ಮನುಷ್ಯರನ್ನು ಕಟ್ಟಿಹಾಕುವ ವ್ಯವಸ್ಥೆ ಈ ಹೊತ್ತಿನ ಜನಜೀವನದ ಮೇಲೆ ಬೀರಿದ ಪರಿಣಾಮಗಳು ಒಂದಲ್ಲಾ ಎರಡಲ್ಲ.
ಆರೋಗ್ಯ, ಶಿಕ್ಷಣ, ಸಾರಿಗೆ, ವ್ಯಾಪಾರ, ವಹಿವಾಟು, ಕೃಷಿ ಹೀಗೆ ಬದುಕಿನ ನಾನಾ ರಂಗಗಳ ಮೇಲಿನ ಕರೋನಾ ಮತ್ತು ಕರೋನಾ ಲಾಕ್ ಡೌನ್ ಪರಿಣಾಮ ಎಷ್ಟು ಅಗಾಧವಾಗಿದೆ ಎಂದರೆ; ಮುಂದಿನ ದಿನಗಳಲ್ಲಿ ಚರಿತ್ರೆಕಾರರು ಕರೋನಪೂರ್ವ ಕಾಲ ಮತ್ತು ಕರೋನೋತ್ತರ ಕಾಲ ಎಂದು ಕಾಲಗಣನೆ ಮಾಡಿದರೂ ಅಚ್ಚರಿ ಇಲ್ಲ. ಏಕೆಂದರೆ, ,ಮನುಷ್ಯನ ತೀರಾ ಖಾಸಗಿ ಬದುಕಿನಿಂದ ಹಿಡಿದು, ಅಂತಾರಾಷ್ಟ್ರೀಯ ಸಂಬಂಧಗಳವರೆಗೆ ಈ ಕರೋನಾ ಬೀರಿದ ಪರಿಣಾಮಗಳು ಅಷ್ಟು ದಟ್ಟವಾಗಿವೆ.

ಅದರಲ್ಲೂ ಜಾಗತೀಕರಣದ ಬಳಿಕ ಹೆಚ್ಚುತ್ತಲೇ ಇದ್ದ ಗ್ರಾಮ ಭಾರತ ಮತ್ತು ನಗರ ಭಾರತದ ನಡುವಿನ ಕಂದಕವನ್ನು ಪ್ರತಾಪವಾಗಿ ಹಿಗ್ಗಿಸುವಲ್ಲಿ ಕರೋನಾ ಮತ್ತು ಲಾಕ್ ಡೌನ್ ಪಾತ್ರ ಬಹಳ ದೊಡ್ಡದು. ಅದು ಕೃಷಿ ಇರಬಹುದು, ಮಕ್ಕಳ ಶಿಕ್ಷಣ ವಿರಬಹುದು, ಆರೋಗ್ಯ, ಸಂಪರ್ಕ, ಸಾರಿಗೆ,.. ಹೀಗೆ ಯಾವುದೇ ರಂಗವನ್ನು ತೆಗೆದುಕೊಂಡರೂ, ನಗರ ಮತ್ತು ಹಳ್ಳಿಗಳ ನಡುವೆ ದೇಶದಲ್ಲಿ ಅದಾಗಲೇ ಇದ್ದ ಆತಂಕಕಾರಿ ಪ್ರಮಾಣದ ತಾರತಮ್ಯವನ್ನು ಭೀಕರ ರೀತಿಯಲ್ಲಿ ಹೆಚ್ಚಿಸಿದ ಕೀರ್ತಿ ಈ ಕರೋನಾ ಮತ್ತು ಲಾಕ್ ಡೌನ್ ಗೆ ಸಲ್ಲಬೇಕು.
ಶಿಕ್ಷಣ ಮತ್ತು ಸಂಪರ್ಕ ವಿಷಯದಲ್ಲಂತೂ ಈ ಕಂದಕವನ್ನು ಗ್ರಾಮೀಣ ಮಕ್ಕಳ ಭವಿಷ್ಯವನ್ನೇ ಬಲಿತೆಗೆದುಕೊಳ್ಳುವ ಮಟ್ಟಿಗೆ ಹಿಗ್ಗಿಸಿದ್ದು ಕರೋನಾ ಮತ್ತು ಲಾಕ್ ಡೌನ್ ಸಂಕಷ್ಟದ ಕಾಲ. ಲಾಕ್ ಡೌನ್ ನಿಂದಾಗಿ ಇಡೀ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯೇ ನಿಂತುಹೋಗಿ, ಕಲಿಕೆ ಎಂಬುದು ಕೇವಲ ಮೊಬೈಲ್, ನೆಟ್ವರ್ಕ್, ಡೇಟಾ ಅವಲಂಬಿತವಾಗಿ ಹೋಯಿತು. ಅದರಿಂದಾಗಿ ಈಗಾಗಲೇ ಗ್ರಾಮ ಭಾರತ ಮತ್ತು ನಗರ ಭಾರತದ ನಡುವೆ ಹಾಸುಹೊಕ್ಕಾಗಿದ್ದ ಮತ್ತು ಅದೇ ಕಾರಣಕ್ಕೆ ಬದುಕಿನ ಎಲ್ಲಾ ರಂಗಗಳಲ್ಲಿ ದೊಡ್ಡ ಮಟ್ಟದ ತಾರತಮ್ಯಕ್ಕೆ, ಅಸಮಾನತೆಗೆ ಕಾರಣವಾಗಿದ್ದ ‘ಡಿಜಿಟಲ್ ಡಿವೈಡ್’ ಊಹಾತೀತ ಸ್ವರೂಪ ಪಡೆಯಿತು.

ಗ್ರಾಮೀಣ ಬಡವರು, ಕೂಲಿಕಾರ್ಮಿಕರು, ಬಡ ರೈತರು, ಕೆಳಮಧ್ಯಮವರ್ಗದವರ ಪಾಲಿಗೆ ಸ್ಮಾರ್ಟ್ ಫೋನ್ ಎಂಬುದೇ ದೊಡ್ಡ ಲಕ್ಷುರಿಯಾಗಿರುವಾಗ, ಮೊಬೈಲ್ ನೆಟ್ವರ್ಕ್ ಎಂಬುದು ಗಗನಕುಸುಮವಾಗಿರುವಾಗ, ದಿಢೀರನೇ ಹೇರಲಾದ ಆನ್ ಲೈನ್ ಶಿಕ್ಷಣ ಎಂಬುದು ಸಹಜವಾಗೇ ಗ್ರಾಮೀಣ ಹಳ್ಳಿಗಾಡಿನ ಮಕ್ಕಳನ್ನು ಶಿಕ್ಷಣದಿಂದ, ಕಲಿಕೆಯಿಂದ ಬಹುತೇಕ ಹೊರತಳ್ಳಿತು. ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ, ಕೂಲಿ ಇಲ್ಲದೆ ಹೊತ್ತಿನ ಊಟಕ್ಕೇ ಚಿಂತೆಯಲ್ಲಿರುವಾಗ ಪೋಷಕರಿಗೆ ದುಬಾರಿ ಸ್ಮಾರ್ಟ್ ಫೋನ್ ಕೊಳ್ಳುವ ಶಕ್ತಿ ಎಲ್ಲಿಂದ ಬರಬೇಕು? ಒಂದು ವೇಳೆ ಯಾರದೋ ಕೈಕಾಲು ಕಟ್ಟಿ ಫೋನ್ ಕೊಂಡರೂ, ದುರ್ಗಮ ಪ್ರದೇಶದಲ್ಲಿ ನೆಟ್ವರ್ಕ್ ಎಲ್ಲಿಂದ ತರುವುದು? ಬೇಕಾದ ಡೇಟಾ ರೀಚಾರ್ಜ್ ಹೇಗೆ ಮಾಡಿಸುವುದು? ..

ಹೀಗೆ ಹತ್ತು ಹಲವು ಬಗೆಹರಿಯಲಾಗದ ಬಿಕ್ಕಟ್ಟುಗಳು ಕೇವಲ ಮಕ್ಕಳನ್ನಷ್ಟೇ ಅಲ್ಲ; ಪೋಷಕರನ್ನೂ ತಾವು ಈ ಸಮಾಜಕ್ಕೆ ಸೇರಿದವರಲ್ಲ; ತಮ್ಮನ್ನು ಬಿಟ್ಟು ಸಮಾಜ ಬಹಳ ಮುಂದೆ ಹೋಗಿಬಿಟ್ಟಿದೆ ಎಂಬ ಅನಾಥಭಾವ ಬಿತ್ತಿದ್ದು ಹೌದು.
ಇಂತಹ ಹಳ್ಳಿಗಾಡಿನ ಮಕ್ಕಳ ಬಿಕ್ಕಟ್ಟು, ಆತಂಕಗಳನ್ನೇ ಇಟ್ಟುಕೊಂಡು ಹಳ್ಳಿಯ ಮಕ್ಕಳು, ಮಕ್ಕಳ ಪೋಷಕರನ್ನೇ ಪಾತ್ರಧಾರಿಗಳಾಗಿಸಿ ಹಳ್ಳಿಯ ಪ್ರತಿಭೆಯೇ ಸರಳ ಪರಿಕರ ಮತ್ತು ಅತಿ ಕಡಿಮೆ ಸಂಪನ್ಮೂಲದೊಂದಿಗೆ ನಿರ್ಮಿಸಿದ ಕಿರುಚಿತ್ರ ‘ದ ಫೆನ್ಸ್’. ಬಡವರು- ಶ್ರೀಮಂತರು, ಹಳ್ಳಿಯವರು- ನಗರವಾಸಿಗಳು, ವಲಸಿಗರು- ಮೂಲನೆಲೆಯವರು, ಡಿಜಿಟಲ್ ಜನರೇಷನ್-ತಂತ್ರಜ್ಞಾನ ಕೈಗೆಟುಕದ ಜನರು, .. ಹೀಗೆ ವಿವಿಧ ಸ್ತರಗಳ ನಡುವೆ ಕರೋನಾ ಮತ್ತು ಲಾಕ್ ಡೌನ್ ಸೃಷ್ಟಿಸಿದ ಬೇಲಿಗಳ ಬಗ್ಗೆ ದ ಫೆನ್ಸ್ ಮಾತನಾಡುತ್ತದೆ.

ಸಹಜ ಅಭಿನಯ, ಸರಳ ನಿರೂಪಣೆಯ ಈ ಕಿರುಚಿತ್ರ, ಮಲೆನಾಡಿನ ದಟ್ಟ ಕಾಡಿನ ನಡುವೆಯು ಮಕ್ಕಳು ಮತ್ತು ಅಲ್ಲಿಂದ ನಗರಗಳಿಗೆ ವಲಸೆಹೋದವರ ನೋವು, ಸಂಕಟವನ್ನು ಬಹಳ ಪರಿಣಾಮಕಾರಿಯಾಗಿ ನೋಡುಗರಿಗೆ ದಾಟಿಸುತ್ತದೆ ಮತ್ತು ಈ ಕೇಡುಗಾಲ ಮನುಷ್ಯರ ಬದುಕಿನಲ್ಲಿ ಸೃಷ್ಟಿಸಿರುವ ಅಜಗಜಾಂತರ ಕಂದರವನ್ನು ಸೂಕ್ಷ್ಮವಾಗಿ ದರ್ಶನ ಮಾಡಿಸುತ್ತದೆ. ಮಲೆನಾಡಿನ ಪ್ರತಿಭೆ ಅರೋಚಿ ನಿರ್ದೇಶನದ ಈ ಕಿರುಚಿತ್ರವನ್ನು ನೀವೂ ನೋಡಿ, ಮಲೆನಾಡಿನ ಮಕ್ಕಳ ಪ್ರತಿಭೆಗೆ ಬೆನ್ನುತಟ್ಟಿ. ಜೊತೆಗೆ ಅವರು ಕಾಣಿಸುತ್ತಿರುವ ಅಸಮಾನತೆಯ, ತಾರತಮ್ಯದ ಜಗತ್ತು ಭವಿಷ್ಯದಲ್ಲಿ ಸೃಷ್ಟಿಸಲಿರುವ ದುರಂತದ ಬಗ್ಗೆಯೂ ಯೋಚಿಸಿ..
‘ದ ಫೆನ್ಸ್’ ಕಿರುಚಿತ್ರ ನೋಡಲು ಇಲ್ಲಿ ಕ್ಲಿಕ್ ಮಾಡಿ…