ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಮಹತ್ವದ ದಿನ ಆಗಿದ್ದರಿಂದ ಸುಮಾರು ಒಂದು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನರು ಆಗಮಿಸಿದ್ದಾರೆ ಅನ್ನೋ ರೀತಿ ಬಿಜೆಪಿ ನಾಯಕರು ಹುಬ್ಬೇರಿಸಿದ್ದಾರೆ. ಆದರೆ ಲಕ್ಷಾಂತರ ಜನರು ಸೇರಿದ್ದ ಕಾರಣ ಮಾತ್ರ ಬೇರೆ. ಯಾಕೆಂದರೆ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಬಿ. ಎಸ್ ಯಡಿಯೂರಪ್ಪ ಅವರ ಜನ್ಮದಿನದಂದೇ ಏರ್ಪೋರ್ಟ್ ಉದ್ಘಾಟನಾ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಆಯೋಜನೆ ಮಾಡಿತ್ತು.

ಬಿಜೆಪಿಗಿಂತಲೂ ಬಿಎಸ್ ಯಡಿಯೂರಪ್ಪ ಮೇಲೆ ಅಪಾರವಾದ ಗೌರವ ಅಭಿಮಾನ ತೋರಿಸುವ ಶಿವಮೊಗ್ಗದ ಜನರು ಹುಟ್ಟುಹಬ್ಬಕ್ಕೆ ಶುಭ ಕೋರುವ ಉದ್ದೇಶದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಅಭಿಮಾನ ಮೆರೆದಿದ್ದಾರೆ.
80ನೇ ಹುಟ್ಟುಹಬ್ಬ ಜನರಿಗೆ ವಿಶೇಷ..!

ರೈತ ನಾಯಕ ಅನ್ನೋ ಪಟ್ಟ ಪಡೆದುಕೊಂಡಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹುಟ್ಟು ಹೋರಾಟಗಾರ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯ ಬೂಕನ ಕೆರೆಯಲ್ಲಿ ಹುಟ್ಟಿ, ಉದ್ಯೋಗಕ್ಕಾಗಿ ವಲಸೆ ಹೋಗಿದ್ದ ಬೂಕನಕರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಕಾಲಕ್ರಮೇಣ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಜನಸಂಘದ ಬಾವುಟ ಕಟ್ಟುವ ಜನರು ಇಲ್ಲದೆ ಇರುವ ಕಾಲದಿಂದಲೂ ಪಕ್ಷಕ್ಕಾಗಿ ದುಡಿದವರು. ಭಾರತೀಯ ಜನತಾ ಪಾರ್ಟಿ ಕಟ್ಟಿದವರು ಜೊತೆಯಾಗಿ ಬೆಳೆದವರು ಬಿ.ಎಸ್ ಯಡಿಯೂರಪ್ಪ. ಅವರಿಂದ ಅಧಿಕಾರ ಕಸಿದುಕೊಂಡ ಬಳಿಕ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಘೋಷಣೆಯನ್ನೂ ಮಾಡಿದ್ದಾರೆ. ಅದಸರ ಬೆನ್ನಲ್ಲೇ 80ನೇ ಹುಟ್ಟು ಹಬ್ಬದ ದಿನ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಆಗುತ್ತಿದೆ. ಈ ಮೂಲಕ ಆದರೂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಶಿವಮೊಗ್ಗ ಮಾತ್ರವಲ್ಲದೆ ಎಲ್ಲಾ ತಾಲೂಕುಗಳಿಂದಲೂ ಜನರನ್ನು ಕರೆತರಲಾಗಿತ್ತು.
ಶಿವಮೊಗ್ಗ ಅಂದ್ರೆ ಯಡಿಯೂರಪ್ಪ.. ಇಲ್ಲ ಎನ್ನಲಾಗದು..

ಶಿವಮೊಗ್ಗ ಜಿಲ್ಲೆ ಬಿ.ಎಸ್ ಯಡಿಯೂರಪ್ಪಗೂ ಮೊದಲೇ ಮುಖ್ಯಮಂತ್ರಿ ಪಟ್ಟವನ್ನು ನೋಡಿತ್ತು. ಆದರೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗಿರಲಿಲ್ಲ. ಆದರೆ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದಾಗಲೂ ಶಿವಮೊಗ್ಗಕ್ಕೆ ಅಪಾರವಾದ ಅನುದಾನ ನೀಡಿ, ಶಿವಮೊಗ್ಗವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಏರಿಸಿದರು. ಯಡಿಯೂರಪ್ಪ ಕಾಲದಲ್ಲಿ ಶಿವಮೊಗ್ಗ ಶರವೇಗದಲ್ಲಿ ಅಭಿವೃದ್ಧಿ ಕಂಡಿತು. ಶಿವಮೊಗ್ಗದ ರಸ್ತೆಗಳಿಂದ ಹಿಡಿದು ಪ್ರತಿಯೊಂದು ಯೋಜನೆಗಳಿಗೂ ಯಡಿಯೂರಪ್ಪ ಕಾಯಕಲ್ಪ ನೀಡಿದರು. ಮಂಡ್ಯದಿಂದ ಶಿವಮೊಗ್ಗಕ್ಕೆ ವಲಸೆ ಹೋಗಿದ್ದ ಯಡಿಯೂರಪ್ಪ ಮಲೆನಾಡಿನ ಮಗನಾಗಿ ಗುರುತಿಸಿಕೊಂಡರು. ಸೈಕಲ್ ಏರಿ ರಾಜಕೀಯ ಆರಂಭಿಸಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಹೆಮ್ಮರವಾಗಿ ಬೆಳೆದು ನಿಂತರು. ಬಹುತೇಕ ಈ ಕಾರ್ಯಕ್ರಮ ಯಡಿಯೂರಪ್ಪ ಪಾಲಿಗೆ ಕೊನೆಯ ಕಾರ್ಯಕ್ರಮ ಎನ್ನಬಹುದು. ಇನ್ಮುಂದೆ ಪ್ರಚಾರಕ್ಕೆ ಬರಬಹುದು, ಮತಯಾಚನೆ ಮಾಡಬಹುದು. ಆದರೂ ಅದು ಯಡಿಯೂರಪ್ಪ ಅವರ ಕಾರ್ಯಕ್ರಮ ಆಗಲಾರದು. ಇದೇ ಕಾರಣಕ್ಕೆ ಜನರು ಅಂತಿಮ ಅಭಿನಂದನೆ ಸಲ್ಲಿಸುವ ಕೆಲಸ ಮಾಡಿದರು ಎನ್ನಬಹುದು.
