ಹಾಸನದಲ್ಲಿ ಗುಂಡಿನ ದಾಳಿಗೆ ಮತ್ತೊಂದು ಬಲಿಯಾಗಿದೆ. ತಿಂಗಳ ಅಂತರದಲ್ಲಿಯೇ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಸೋಮವಾರ ಸಂಜೆ ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಯುವಕ ನವೀನ್(39) ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ನವೀನ್ ಸೇರಿದಂತೆ ನಾಲ್ವರು ಮೀನು ಹಿಡಿಯಲು ತೆರಳಿದ್ದ ವೇಳೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ.
ನವೀನ್ ಜೊತೆಯಲ್ಲಿ ಅವರ ಗೆಳೆಯರಾದ ದಯಾನಂದ್, ಪದ್ಮನಾಭ್, ರಾಜಾಚಾರಿ ಇದ್ದರು. ಈ ದಾಳಿಯಲ್ಲಿ ದಯಾನಂದ್ ಮತ್ತು ಪದ್ಮಾನಾಭ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ನವೀನ್ ಬಿಜೆಪಿ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದರಿಂದ ಹಲವು ಅನುಮಾನಗಳು ಮೂಡಿವೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇಟೆಗೆ ತೆರಳಿದ್ದವರು ಸಿಡಿಸಿದ ಗುಂಡಿನ ದಾಳಿಯೋ ಅಥವಾ ಹತ್ಯೆ ಮಾಡಲೆಂದು ನಡೆಸಿದ ಗುಂಡಿನ ದಾಳಿಯೊ ಎಂಬ ಬಗ್ಗೆ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.