ಬೀದರ್:ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾದ ರೌಡಿಶೀಟರ್ ಕಾಲಿಗೆ ಪಿಎಸ್‌ಐ ಗುಂಡು ಹಾರಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುರುಬಕೇಳಗಿ ಗ್ರಾಮದಲ್ಲಿ ನಡೆದಿದೆ. ಕುರುಬಕೇಳಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದ ರೌಡಿಶೀಟರ್‌ನನ್ನು ಹಿಡಿಯಲು ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಕಾನ್ಸ್ಟೇಬಲ್ ಗುರುನಾಥ್, ಹೆಡ್‌ಕಾನ್ಸ್ಟೇಬಲ್ ರಾಜೇಂದ್ರ ಮೇಲೆ ರೌಡಿಶೀಟರ್ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಪ್ರಕಾಶ ಸ್ವಾಮಿ ಎಂಬುವವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಹಣಮಂತಪ್ಪ ಹಾಗೂ ಪ್ರಕಾಶ ಸ್ವಾಮಿ ನಡುವೆ ಗಲಾಟೆಯಾಗಿದೆ.
ಹನುಮಂತಪ್ಪ ಎಂಬುವವರ ಸುಪಾರಿ ಮೇರೆಗೆ ಪ್ರಕಾಶ ಸ್ವಾಮಿಯನ್ನು ಅಪಹರಣ ಮಾಡಿದ್ದ ಸಂಗಮೇಶ & ಗ್ಯಾಂಗ್‌ನ 6 ಜನರ ಪೈಕಿ ಮೂವರನ್ನ ಮಹಾರಾಷ್ಟ್ರದ ನಿಜಾಮಾಬಾದ್‌ನಲ್ಲಿ ಬಂಧಿಸಲಾಗಿದೆ. ಮುಖ್ಯ ಆರೋಪಿ ಸಂಗಮೇಶ ಹಾಗೂ ವಿಜಯ್, ಗುಂಡಪ್ಪಾ ಬಂಧನವಾದ ಬಳಿಕ ಭಾಲ್ಕಿಗೆ ಕರೆತರುವ ವೇಳೆ ರೌಡಿಶೀಟರ್ ತಪ್ಪಿಸಿಕೊಂಡಿದ್ದಾನೆ.
ಟಾಯ್ಲೆಟ್‌ಗೆ ಹೋಗ್ತಿನಿ ಎಂದು ಪಿಎಸ್‌ಐರನ್ನು ತಳ್ಳಿ ಪರಾರಿಯಾಗಿದ್ದ ಸಂಗಮೇಶನನ್ನು ಕುರುಬಕೇಳಗಿಯ ಸಿದ್ದೇಶ್ವರ ದೇವಸ್ಥಾನದ ಬಳಿ ಅವಿತುಕೊಂಡಿದ್ದಾಗ ಇಂದು ಬಂಧಿಸಲಾಗಿತ್ತು. ಸದ್ಯ ಗುಂಡೇಟು ತಿಂದ ರೌಡಿಶೀಟರ್‌ಗೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.