ನಾ ದಿವಾಕರ
1960-70ರ ದಶಕಗಳು ಭಾರತದ ರಾಜಕಾರಣದ ವಿಪ್ಲವಕಾರಿ ದಶಕಗಳು. ಭಾರತದ ಆಳುವ ವರ್ಗಗಳು ಸ್ವಾತಂತ್ರ್ಯಾನಂತರದಲ್ಲಿ ತಮ್ಮ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಶ್ರಮಪಡುವಂತಹ ಸನ್ನಿವೇಶ ಸೃಷ್ಟಿಯಾಗಿದ್ದು ಈ ದಶಕಗಳಲ್ಲೇ. ದೇಶದ ಜನಸಾಮಾನ್ಯರಿಗೆ ಆಳುವ ವರ್ಗಗಳ ನೈಜ ಮುಖವಾಡದ ಪರಿಚಯವಾದದ್ದೂ ಈ ದಶಕದ ಬೆಳವಣಿಗೆಗಳ ನಡುವೆಯೇ. ತಮ್ಮ ಜೀವನ ಹಸನಾಗುತ್ತದೆ ಎಂಬ ಭ್ರಮೆಗೊಳಗಾಗಿದ್ದ ಜನಸಾಮಾನ್ಯರಿಗೆ ಭ್ರಮನಿರಸನವಾಗಿರುವ ಅರಿವಾದದ್ದೂ ಈ ದಶಕಗಳಲ್ಲೇ. 1960ರ ದಶಕದ ಎರಡು ಯುದ್ಧಗಳು, 20 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಆಳುವ ವರ್ಗಗಳಿಗೆ ಎದುರಾದ ಸಮಸ್ಯೆಗಳು, ಜನಸಾಮಾನ್ಯರಲ್ಲಿ ಹಠಾತ್ತನೆ ಕಂಡುಬಂದ ಪ್ರಜಾತಂತ್ರದ ಪ್ರಜ್ಞೆ, ರಾಜಕೀಯ ನಾಯಕತ್ವದ ವಿರುದ್ಧ ಸೆಟೆದು ನಿಲ್ಲುವ ಹೋರಾಟಗಳ ಪರಂಪರೆಯ ನೂತನ ಆಯಾಮಗಳು, ಸಾರ್ವಭೌಮ ಪ್ರಜೆಗಳ ಆಶೋತ್ತರಗಳನ್ನು ಈಡೇರಿಸಲೇಬೇಕಾದ ಆಳುವ ವರ್ಗಗಳ ಅನಿವಾರ್ಯತೆ ಈ ಎಲ್ಲ ವಿದ್ಯಮಾನಗಳು ಆಳುವ ವರ್ಗಗಳನ್ನು ಕಾಡತೊಡಗಿದ್ದು ಈ ದಶಕಗಳಲ್ಲೇ.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೃಷ್ಟಿಯಾದ ವಿಶಿಷ್ಟ ವಾತಾವರಣದಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡ ಹಲವಾರು ನಾಯಕರ ಪೈಕಿ ಕರ್ನಾಟಕದ ಹೆಮ್ಮೆಯ ದೇವರಾಜ ಅರಸು ಒಬ್ಬರು. ದೇವರಾಜ ಅರಸು ರಾಜಕೀಯದಲ್ಲಿ ನೆಲೆಯೂರಿದ ಅವಧಿಯಲ್ಲಿ ದೇಶದ ಇತರ ರಾಜ್ಯಗಳ ಹಲವು ನಾಯಕರ ಉಗಮವನ್ನು ಗಮನಿಸಿದಾಗ ಒಂದು ಸಮಾನ ವಿದ್ಯಮಾನವನ್ನು ಗುರುತಿಸಬಹುದು. ಈ ಎಲ್ಲ ನಾಯಕರುಗಳು ಎರಡು ಮಜಲುಗಳಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದರು. ಎರಡು ಆಯಾಮಗಳಲ್ಲಿ ತಮ್ಮ ರಾಜಕೀಯ ನೀತಿಗಳನ್ನು ಸಿದ್ಧಪಡಿಸಿದ್ದರು. ಮೊದಲನೆಯದು ೧೯೬೦ರ ದಶಕದ ಜನಾಂದೋಲನಗಳ ಆಗ್ರಹಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು. ಎರಡನೆಯದು ಆಡಳಿತ ವ್ಯವಸ್ಥೆ ಮತ್ತು ಪ್ರಭುತ್ವದ ಮೂಲ ಸ್ವರೂಪವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡೇ ʼ ಜನಪರ ʼ ಎನ್ನಬಹುದಾದ ಕೆಲವು ಆಡಳಿತಾತ್ಮಕ ನೀತಿಗಳನ್ನು ಅನುಸರಿಸುವುದು. ಈ ಸಂದರ್ಭದಲ್ಲಿ ಮೂಡಿಬಂದ ಜನಪರ ನೀತಿಗಳೇ ಭೂಸುಧಾರಣೆ, ಹಿಂದುಳಿದ ವರ್ಗಗಳ ಪರಿಗಣನೆ ಮತ್ತು ಮೀಸಲಾತಿ ಸೌಲಭ್ಯಗಳು ಮತ್ತು ಗ್ರಾಮೀಣ-ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ. ಭಾರತದ ರಾಜಕಾರಣದಲ್ಲಿ ಬಿಹಾರದ ಕರ್ಪೂರಿ ಠಾಕೂರ್ ಮತ್ತು ಕರ್ನಾಟಕದ ದೇವರಾಜ ಅರಸು ಈ ಕಾಲಘಟ್ಟದ ಮಹಾನ್ ನಾಯಕರಾಗಿ ಹೊರಹೊಮ್ಮುತ್ತಾರೆ.
ಆಡಳಿತದಲ್ಲಿ ಅರಸು
ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದ ದೇವರಾಜ ಅರಸು ಒಂದು ಕಾಲಘಟ್ಟದಲ್ಲಿ ಶ್ರೀಮತಿ ಇಂದಿರಾಗಾಂಧಿಯವರ ಬಲಗೈ ಭಂಟರಾಗಿದ್ದುದು ವಾಸ್ತವ. ಆದರೆ ತಮ್ಮ ಕಾಂಗ್ರೆಸ್ ಪಕ್ಷದ ಮೇಲಿನ ನಿಷ್ಠೆ ಮತ್ತು ಇಂದಿರಾ ಗಾಂಧಿಯ ನಾಯಕತ್ವದ ಮೇಲಿನ ವಿಶ್ವಾಸ ಅರಸು ಅವರ ಆತ್ಮವಿಶ್ವಾಸಕ್ಕಾಗಲಿ, ಸ್ವಾಭಿಮಾನಕ್ಕಾಗಲಿ ಅಡ್ಡಿ ಬರಲಿಲ್ಲ ಎನ್ನುವುದು ವಿಶೇಷ. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಸೃಷ್ಟಿಯಾದ ಅಲೆ ಅರಸು ಅವರನ್ನು ಕಂಗೆಡಿಸಲಿಲ್ಲ. ನಿಜಲಿಂಗಪ್ಪ, ದೇವೇಗೌಡ, ರಾಮಕೃಷ್ಣಹೆಗಡೆ ಮುಂತಾದ ನಾಯಕರು ಕಾಂಗ್ರೆಸ್ ತೊರೆದರೂ ಅರಸು ಇಂದಿರಾಗಾಂಧಿಯ ಬೆಂಬಲಕ್ಕೆ ನಿಂತಿದ್ದರು. 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅರಸು ತುರ್ತುಪರಿಸ್ಥಿತಿಯ ವೇಳೆಯಲ್ಲಿ ಇಂದಿರಾಗಾಂಧಿಗೆ ನಿಷ್ಠಾವಂತರಾಗಿದ್ದುದು ಇಂದಿಗೂ ಚರ್ಚಾರ್ಹವಾಗಿಯೇ ಉಳಿದಿದೆ. ಆದರೆ ಈ ಅಪಭ್ರಂಶವನ್ನು ಹೋಗಲಾಡಿಸಿದ್ದು ಅರಸು ಅವರ ಜನಪರ ರಾಜಕಾರಣ ಮತ್ತು ಜನಪರ ಆಡಳಿತ ನೀತಿಗಳು.

1975ರ ಸಂದರ್ಭದಲ್ಲಿ ಇಡೀ ದೇಶದಲ್ಲಿ ಇಂದಿರಾ ವಿರೋಧಿ ಅಲೆ ಇದ್ದರೂ ಕರ್ನಾಟಕದಲ್ಲಿ ಅರಸು ಕಾಂಗ್ರೆಸ್ ಪತಾಕೆಯನ್ನು ಎತ್ತಿಹಿಡಿಯಲು ಕಾರಣ ಇಂದಿರಾ ವರ್ಚಸ್ಸು ಅಲ್ಲ, ಅರಸು ಅವರ ರಾಜಕೀಯ ಜಾಣ್ಮೆ ಮತ್ತು ಜನಪ್ರಿಯತೆ. ಈ ಜನಪ್ರಿಯತೆಯ ಫಲವಾಗಿಯೇ 1977ರಲ್ಲಿ ದೇಶಾದ್ಯಂತ ಜನತಾಪಕ್ಷದ ವಿಜಯಪತಾಕೆ ಹಾರುತ್ತಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿತ್ತು. ಅಷ್ಟೇ ಅಲ್ಲ 1978ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರು ಕ್ಷೇತ್ರದಿಂದ ಜಯಶಾಲಿಯಾಗಿದ್ದರು. 1978ರಲ್ಲಿ ಕೆಲ ಕಾಲದ ರಾಷ್ಟ್ರಪತಿ ಆಳ್ವಿಕೆಯ ನಂತರ ಪುನಃ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಅರಸು ಈ ಅವಧಿಯಲ್ಲಿ ಇಂದಿರಾಗಾಂಧಿಯೊಡನೆ ಸಂಘರ್ಷಕ್ಕಿಳಿದು 1980ರಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಷ್ಟ್ರಮಟ್ಟದಲ್ಲಾಗಲೀ ರಾಜ್ಯ ಮಟ್ಟದಲ್ಲಾಗಲೀ ತಮ್ಮ ವರ್ಚಸ್ಸನ್ನು ಮೀರಿ ಬೆಳೆಯುವ ಯಾವುದೇ ರಾಜಕಾರಣಿಯನ್ನು ಸಹಿಸಿಕೊಳ್ಳದ ಇಂದಿರಾಗಾಂಧಿಯ ಚಾಣಾಕ್ಷತೆಗೆ ಅರಸು ಬಲಿಯಾದದ್ದು ವಿಡಂಬನೆಯಾದರೂ ಸತ್ಯ.
ದೇವರಾಜ ಅರಸು ಒಬ್ಬ ದಾರ್ಶನಿಕ ನಾಯಕ ಮತ್ತು ಜನಪರ ಕಾಳಜಿ ಇದ್ದ ರಾಜಕಾರಣಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದಿರಾಗಾಂಧಿ ರೂಪಿಸಿದ್ದ ಗರೀಬಿ ಹಠಾವೋ ಯೋಜನೆಯಡಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅರಸು ತಂತ್ರಜ್ಞರು ಮತ್ತು ವಿದ್ವಾಂಸರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಭೂ ಸುಧಾರಣೆಗೆ ನಾಂದಿ ಹಾಡಿದ್ದರು. ಉಳುವವನಿಗೇ ಭೂಮಿ ಎಂಬ ಘೋಷವಾಕ್ಯಕ್ಕೆ ತಾತ್ವಿಕ ನೆಲೆ ಒದಗಿಸಿದ ಅರಸು ರಾಜ್ಯಾದ್ಯಂತ ಈ ಯೋಜನೆಯನ್ನು ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಭೂರಹಿತರ ಪಾಲಿಗೆ ವರದಾನವಾಗಿದ್ದರು. ಕರ್ನಾಟಕದ ರಾಜಕಾರಣದಲ್ಲಿ ಪ್ರಬಲರಾಗಿದ್ದ ಲಿಂಗಾಯತ ಮತ್ತು ಒಕ್ಕಲಿಗರ ವಿರೋಧದ ನಡುವೆಯೂ ಅರಸು ಭೂ ಸುಧಾರಣೆಗೆ ಕಾಯಕಲ್ಪ ನೀಡಿದ್ದು ಸ್ತುತ್ಯಾರ್ಹ. ಇದರಿಂದ ಅರಸು ಎರಡು ಪ್ರಬಲ ಸಮುದಾಯಗಳ ರಾಜಕೀಯ ಬೆಂಬಲ ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ದೇವರಾಜ ಅರಸು ಒಬ್ಬ ಜನಾನುರಾಗಿ ನಾಯಕರಾಗಿ ಹೊರಹೊಮ್ಮಿದ್ದರು. ಭೂಮಾಲೀಕರು ಮತ್ತು ಜಮೀನ್ದಾರರ ವಿರೋಧದ ನಡುವೆ ಹಿಂದುಳಿದ-ದಲಿತ ಸಮುದಾಯದ ಭೂ ರಹಿತ ರೈತರು ಮತ್ತು ಕೃಷಿ ಕಾರ್ಮಿಕರ ದೃಷ್ಟಿಯಲ್ಲಿ ಅರಸು ಅಚ್ಚಳಿಯದೆ ಉಳಿದರು. ಭೂ ಸುಧಾರಣೆಯಲ್ಲಿ ಅರಸು ಯಶಸ್ವಿಯಾಗಿದ್ದು ನಿಜ. ಆದರೆ ಭೂಮಿಯ ವಿತರಣೆ ಮತ್ತು ಹಂಚಿಕೆಯನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದೂ ಅಷ್ಟೇ ಸತ್ಯ.

ಅಪರೂಪದ ವ್ಯಕ್ತಿತ್ವ
ಈ ವೈಫಲ್ಯವೇ ದೇವರಾಜ ಅರಸು ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಅಡ್ಡಿಯಾಗಿತ್ತು. 1978ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾಗಾಂಧಿ ಚುನಾಯಿತರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರಸು ವ್ಯಕ್ತಿಗತವಾಗಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದರೂ ರಾಜಕೀಯ ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನೆರಳಿನಲ್ಲೇ ಬೆಳೆದುಬಂದಿದ್ದು 1980ರಲ್ಲಿ ಸಾಬೀತಾಗಿತ್ತು. 1977ರಲ್ಲಿ ಅಭೂತಪೂರ್ವ ವಿಜಯ ಸಾಧಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿದ ಜನತಾಪಕ್ಷ ಒಳಜಗಳಗಳಿಂದ ಕುಸಿದು ಬಿದ್ದಾಗ ತುರ್ತುಪರಿಸ್ಥಿತಿಯ ಕರಾಳ ನೆನಪುಗಳನ್ನು ಹೊತ್ತ ಕಾಂಗ್ರೆಸ್ ಪಕ್ಷ ಮತ್ತು ಇಂದಿರಾಗಾಂಧಿ ಮತ್ತೊಮ್ಮೆ ಅಧಿಕಾರ ರಾಜಕಾರಣಕ್ಕೆ ಮರಳಲು ಕಾತುರದಿಂದಿದ್ದುದು ವಾಸ್ತವ. ಆದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ, ಪ್ರಜಾತಂತ್ರ ಮೌಲ್ಯಗಳನ್ನೂ ಲೆಕ್ಕಿಸದೆ ಇಂದಿರಾ ಅವರೊಂದಿಗೆ ಇದ್ದ ಅರಸು ಹಠಾತ್ತನೆ 1980ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯುವ ನಿರ್ಧಾರ ತೆಗೆದುಕೊಂಡಿದ್ದರು. ಬಹುಶಃ ಎಂಟು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ತಾವು ಕೈಗೊಂಡ ಜನಪರ ಯೋಜನೆಗಳು ತಮ್ಮ ರಾಜಕೀಯ ಮೆಟ್ಟಿಲುಗಳಾಗಿ ಪರಿಣಮಿಸುತ್ತವೆ ಎಂಬ ಭ್ರಮೆ ಅರಸು ಅವರನ್ನು ಆವರಿಸಿದ್ದಿರಬೇಕು.
ಆದರೆ ಒಬಿಸಿ ವರ್ಗಗಳನ್ನು ಧೃವೀಕರಿಸುವುದರ ಹೊರತಾಗಿ, ತಮ್ಮದೇ ಆದ, ಸೈದ್ಧಾಂತಿಕ ನೆಲೆ ಮತ್ತು ಪರ್ಯಾಯ ರಾಜಕಾರಣದ ಪರಿಕಲ್ಪನೆ ಇಲ್ಲದ ಅರಸು ಹೀನಾಯ ಸೋಲು ಅನುಭವಿಸಬೇಕಾಯಿತು. ಇಲ್ಲಿ ಅರಸು ಅನುಸರಿಸಿದ ರಾಜಕೀಯ ಮಾರ್ಗದ ಪರಾಮರ್ಶೆ ಅಗತ್ಯ. ಒಬ್ಬ ಸುಧಾರಣಾವಾದಿ ರಾಜಕಾರಣಿಯ ಇತಿಮಿತಿಗಳನ್ನು ಅರಸು ಅವರ ರಾಜಕೀಯ ಜೀವನದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮೇಲೆ ಉಲ್ಲೇಖಿಸಿದ ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ನೋಡಿದಾಗ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣಾವಾದವನ್ನು ಮೀರಿ ಮುನ್ನಡೆಯುವ ದಾರ್ಶನಿಕ ರಾಜಕಾರಣವನ್ನು ನಿರೀಕ್ಷಿಸುವುದೂ ಅಸಾಧ್ಯ. ಈ ದೃಷ್ಟಿಯಿಂದ ನೋಡಿದಾಗ ದೇವರಾಜ ಅರಸು ಕರ್ನಾಟಕದ ರಾಜಕಾರಣದಲ್ಲಿ ಇಂದಿಗೂ ತಮ್ಮ ಪ್ರಸ್ತುತತೆ ಉಳಿಸಿಕೊಂಡಿದ್ದಾರೆ.

ಮೌಲ್ಯಗಳೇ ನಶಿಸಿಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಅರಸು ಅನುಸರಿಸಿದ ಮೌಲ್ಯಯುತ ರಾಜಕಾರಣ ದಾರಿದೀಪವಾಗಬೇಕಿದೆ. ರಾಜಕೀಯ ನಿವೃತ್ತಿಯ ನಂತರ ಅರಸು ನಡೆಸಿದ ಸರಳ ಜೀವನ ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಬೇಕಿದೆ. ರಾಜಕಾರಣ ಎಂದರೆ ಧನಾರ್ಜನೆಯ ಒಂದು ಮಾರ್ಗ, ರಾಜಕೀಯ ಅಧಿಕಾರ ಪೀಠ ಎಂದರೆ ಭ್ರಷ್ಟಾಚಾರ, ಮಾಫಿಯಾ ಮತ್ತು ವೈಭೋಗದ ಕೇಂದ್ರ ಎಂದು ಮನೆಮಾತಾಗಿರುವ ಈ ಸಂದರ್ಭದಲ್ಲಿ ಅರಸು ಅವರಂತಹ ಸರಳ ಸಜ್ಜನ ರಾಜಕಾರಣಿ ಹೆಚ್ಚು ಪ್ರಸ್ತುತ ಎನಿಸುತ್ತಾರೆ. ಆದರೆ ಅರಸು ಪ್ರಶ್ನಾತೀತರಾಗಿರಲಿಲ್ಲ. ಆಗಿಯೂ ಇಲ್ಲ. ಅವರ ಹಲವಾರು ರಾಜಕೀಯ ನಿರ್ಣಯಗಳು ಇಂದಿಗೂ ಚರ್ಚೆಗೊಳಗಾಗಬೇಕಿದೆ. ಆಗ ಮಾತ್ರ ಅರಸು ಹಾಕಿಕೊಟ್ಟ ಮಾರ್ಗದ ಕೆಲವು ಸೂಕ್ಷ್ಮ ತರಂಗಗಳನ್ನಾದರೂ ಇಂದಿನ ರಾಜಕಾರಣಿಗಳು ಗ್ರಹಿಸಲು ಸಾಧ್ಯ.
-೦-೦-೦-