
ನಾ ದಿವಾಕರ
ವಿಕಾಸದ ಹಾದಿಯಲ್ಲಿ ಬಿರುನಡಿಗೆಯಲ್ಲಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಸರ್ಕಾರಗಳ ವಾರ್ಷಿಕ ಪ್ರಹಸನವಾಗಿರುವ ಬಜೆಟ್ ಎಂಬ ಪ್ರಕ್ರಿಯೆ ತನ್ನ ಮೂಲ ಅರ್ಥ ಮತ್ತು ಉದ್ದೇಶ ಎರಡನ್ನೂ ಕಳೆದುಕೊಂಡು, ಬಹುಶಃ ದಶಕಗಳೇ ಕಳೆದಿದೆ. ತಳಮಟ್ಟದ ಸಮಾಜ ಮತ್ತು ಶ್ರಮಿಕ ವರ್ಗಗಳನ್ನು ಕಡೆಗಣಿಸಿ, ಬಂಡವಾಳಶಾಹಿ ಕಾರ್ಪೋರೇಟ್ ವಲಯವನ್ನು ಉತ್ತೇಜಿಸುವ ಒಂದು ಹೊಸ ಪರಂಪರೆಗೆ 2014ರಲ್ಲೇ ಸುಭದ್ರ ಅಡಿಪಾಯ ಹಾಕಲಾಗಿದೆ. ಈ ತಳಸ್ತರದ ಸಮಾಜಗಳ ನಿತ್ಯ ಬದುಕನ್ನು ಮತ್ತಷ್ಟು ಸಂಕಟಗಳಿಗೆ ಈಡುಮಾಡುವ ಪ್ರಮುಖ ನಿರ್ಣಯಗಳನ್ನು ಬಜೆಟ್‌ನಿಂದಾಚೆಗೆ ಕೈಗೊಳ್ಳುವ ಒಂದು ಮಾದರಿಯನ್ನು ಜಿಎಸ್‌ಟಿ ಕಾಯ್ದೆ, ನೋಟು ಅಮಾನ್ಯೀಕರಣ ಮತ್ತು ಉದ್ಯೋಗ ಖಾತರಿ ಯೋಜನೆಗಳ ರೂಪಾಂತರ ಪ್ರಕ್ರಿಯೆಗಳಲ್ಲಿ ಕಂಡಿದ್ದೇವೆ.
ಈ ಹೊಸ ಪರಂಪರೆಯ ಮತ್ತೊಂದು ಆವೃತ್ತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಮ್ಮೆಯಿಂದ ದೇಶದ ಮುಂದಿಟ್ಟಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿರುವಂತೆ ಈ ಬಜೆಟ್ ವ್ಯರ್ಥ ಕಡತವಾಗಿದ್ದು, Scrap ಮಾಡಲು ಅರ್ಹವಾಗಿದೆ. “ ಹೇಳುವುದು ಒಂದು ಮಾಡುವುದು ಇನ್ನೊಂದು ” ಎಂಬ ನಾಣ್ಣುಡಿಗೆ ಸಾಕ್ಷಿಯಾಗಿರುವ ಇತ್ತೀಚಿನ ಬಜೆಟ್‌ಗಳು ತಮ್ಮ ಮೂಲ ಉದ್ದೇಶವನ್ನೇ ಕಳೆದುಕೊಂಡಿದ್ದರೂ, ಚುನಾವಣಾ ಪ್ರಣಾಳಿಕೆಗಳ ರೀತಿಯಲ್ಲಿ ಕೇವಲ ಭ್ರಮೆ ಹುಟ್ಟಿಸುವ ಅಥವಾ ಪೂರೈಕೆಯಾಗದ ನಿರೀಕ್ಷೆಗಳನ್ನು ಸೃಷ್ಟಿಮಾಡುವ ಮಾದರಿಯನ್ನು ಅನುಸರಿಸುತ್ತಿದ್ದು, 2026-27ರ ಬಜೆಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಈ ವರ್ಷದ ಬಜೆಟ್ ನಿರುದ್ಯೋಗ, ಬೆಲೆ ಏರಿಕೆ ಮತ್ತು ವಸತಿಹೀನತೆಯಿಂದ ಜರ್ಝರಿತವಾಗಿರುವ ಬಹುಸಂಖ್ಯೆಯ ಜನತೆಗೆ ಯಾವ ನಿರೀಕ್ಷೆಗಳನ್ನೂ ಹುಟ್ಟುಹಾಕುವುದಿಲ್ಲ. ಭರವಸೆಯನ್ನೂ ನೀಡುವುದಿಲ್ಲ. ಸಾಮಾನ್ಯವಾಗಿ ಸುಶಿಕ್ಷಿತ ಜನರೂ ಸಹ ಯಾವುದೇ ಬಜೆಟ್ಟನ್ನು ಹಿಂದಿನ ವರ್ಷದ ಬಜೆಟ್‌ನೊಂದಿಗೆ ಹೋಲಿಕೆ ಮಾಡಿ, ಆ ವರ್ಷದಲ್ಲಿ ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲಾಗಿದೆಯೇ ಎಂದು ಪರಿಶೀಲಿಸುವುದಿಲ್ಲ. ಆರ್ಥಿಕ ತಜ್ಞರು ಮಾತ್ರ ಈ ಕಸರತ್ತು ಮಾಡುತ್ತಾರೆ. ಒಂದು ರೀತಿಯಲ್ಲಿ 2026-27ರ ಬಜೆಟ್ ಯಾವುದೇ ಸ್ಪಷ್ಟ ದಿಕ್ಸೂಚಿಯನ್ನು ತೋರದೆ ಇರುವುದರಿಂದ, ಈ ತುಲನಾತ್ಮಕ ವಿಶ್ಲೇಷಣೆ ಅವಶ್ಯವಾಗುತ್ತದೆ.
ಸುಧಾರಣೆ ಕಾಣದ ಆರ್ಥಿಕತೆ
ಕಳೆದ ಬಜೆಟ್‌ನಲ್ಲಿ ಮಧ್ಯಮ ವರ್ಗಗಳಿಗೆ ಹಿಂದೆಂದೂ ಕಾಣದಂತಹ ತೆರಿಗೆ ಕಡಿತವನ್ನು ಘೋಷಿಸಿದ್ದು , ಈ ಉಪಕ್ರಮದ ಪರಿಣಾಮವಾಗಿ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ ಎಂದು ಹೇಳಲಾಗಿತ್ತು. ತೆರಿಗೆ ಕಡಿತ ಮಾಡುವುದರ ಮೂಲಕ ತೆರಿಗೆ ಪಾವತಿದಾರ ಸಂಖ್ಯೆಯನ್ನು ಹೆಚ್ಚಿಸಬಹುದು, ಇದರಿಂದ ಮಧ್ಯಮ ವರ್ಗಗಳ ಆದಾಯವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಫಲಗೂಡಿಲ್ಲ. ಓಟ್ಟು ತೆರಿಗೆಯ ಅಂದಾಜು 14.38 ಲಕ್ಷ ಕೋಟಿ ರೂಗಳಾಗಿತ್ತು. ಆದರೆ ಪರಿಷ್ಕೃತ ಅಂದಾಜುಗಳ (Revised estimate) ಪ್ರಕಾರ 13.12 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿದೆ. ಅಂದರೆ 1.26 ಲಕ್ಷ ಕೋಟಿ ರೂ ಕೊರತೆ ಉಂಟಾಗಿದೆ. ಜಿಎಸ್‌ಟಿ ಸಂಗ್ರಹದಲ್ಲೂ ಇದೇ ರೀತಿ 1.31 ಲಕ್ಷ ಕೋಟಿ ರೂಗಳಷ್ಟು ಕೊರತೆ ಕಂಡುಬಂದಿದೆ, ಕಾರ್ಪೋರೇಟ್ ತೆರಿಗೆ, ಕೇಂದ್ರ-ರಾಜ್ಯ ಸರ್ಕಾರಗಳ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆಯಾಗಿದೆ. ಆದಾಗ್ಯೂ ಕಳೆದ ವರ್ಷದ ನಿರೀಕ್ಷೆಗೆ ಪ್ರತಿಯಾಗಿ 1.92 ಲಕ್ಷ ಕೋಟಿ ರೂ ತೆರಿಗೆ ಕಡಿಮೆ ಸಂಗ್ರಹವಾಗಿದೆ.

ಸರ್ಕಾರ ತನ್ನ ಪ್ರಮುಖ ವೆಚ್ಚಗಳಿಗಾಗಿ ತೆರಿಗೆ ಆದಾಯವನ್ನೇ ಅವಲಂಬಿಸುವಾಗ, ಈ ರೀತಿಯ ಆದಾಯ ಕೊರತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅನಿವಾರ್ಯವಾಗಿ ವೆಚ್ಚಗಳನ್ನು ಕಡಿಮೆ ಮಾಡಬೇಕಾಗುತ್ತದೆ. ತತ್ಪರಿಣಾಮವಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸರ್ಕಾರದ ವೆಚ್ಚಗಳು ಕಡಿಮೆಯಾಗಿವೆ. 76,123 ಕೋಟಿರೂಗಳ ರಕ್ಷಣಾ ವೆಚ್ಚ ದೇಶದ ಅಖಂಡತೆ ಮತ್ತು ಸುಭದ್ರತೆಯ ದೃಷ್ಟಿಯಿಂದ ಅತ್ಯವಶ್ಯ ಎಂದು ಸಮರ್ಥಿಸಲಾಗುತ್ತದೆ. ಆದರೆ ಸಾಮಾನ್ಯ ಜನರ ದೃಷ್ಟಿಯಿಂದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕವಾದ ಕೃಷಿ -6,985 ಕೋಟಿ , ಶಿಕ್ಷಣ-6,701 ಕೋಟಿ , ಆರೋಗ್ಯ-3,686 ಕೋಟಿ, ಗ್ರಾಮೀಣಾಭಿವೃದ್ಧಿ-53,067 ಕೋಟಿ ಹಾಗೂ ನಗರಾಭಿವೃದ್ಧಿ-39,573 ಕೋಟಿ ರೂಗಳ ವೆಚ್ಚ ಕಡಿಮೆಯಾಗಿರುವುದು ನಿರಾಶಾದಾಯಕವಾಗಿ ಕಾಣುತ್ತದೆ. ಕಳೆದ ಬಜೆಟ್‌ನಲ್ಲಿರುವಂತೆಯೇ ಈ ಬಾರಿಯೂ ಸರ್ಕಾರದ ಆದ್ಯತೆ ಹಣಕಾಸು ಶಿಸ್ತು, ಬಂಡವಾಳ ವೆಚ್ಚ (CAPEX) , ಸರಬರಾಜು ಬದಿಯ (Supply side) ಕ್ರಮಗಳ ಮೂಲಕ ಉದ್ಯೋಗ ಸೃಷ್ಟಿ ಮತ್ತು ಎಮ್‌ಎಸ್‌ಎಮ್‌ಇಗಳಿಗೆ ಸಾಲದ ಖಾತರಿ ಇವೇ ನೀತಿಗಳನ್ನು ಅವಲಂಬಿಸಿದಂತೆ ಕಾಣುತ್ತದೆ.
ಆದರೆ ಕಳೆದ ಬಾರಿಯ ಈ ಉಪಕ್ರಮಗಳು ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗಿಲ್ಲ. ಯುವ ಸಮೂಹದ ದೃಷ್ಟಿಯಿಂದ ಉದ್ಯೋಗಾವಕಾಶಗಳು ಯಥಾಸ್ಥಿತಿಯಲ್ಲಿವೆ. ಕಾರ್ಪೋರೇಟ್ ಬಂಡವಾಳ ಹೂಡಿಕೆಯಲ್ಲಿ ವೃದ್ಧಿ ಕಂಡುಬಂದಿಲ್ಲ. ಸರಬರಾಜು ಬದಿಯ ಆರ್ಥಿಕ ಉಪಕ್ರಮಗಳು ಸಫಲವಾಗಬೇಕಾದರೆ ಆರ್ಥಿಕತೆಯಲ್ಲಿ ಬೇಡಿಕೆಯ (Demand) ಪ್ರಮಾಣ ಹೆಚ್ಚಾಗಬೇಕು ಎಂಬ ಕನಿಷ್ಠ ತಿಳುವಳಿಕೆ ಇದ್ದಿದ್ದರೆ ಬಹುಶಃ ಬಜೆಟ್ ರಚನೆ ಹೊಸ ದಿಕ್ಕಿನಲ್ಲಿ ಕಾಣುತ್ತಿತ್ತು. ಬಂಡವಾಳವೆಚ್ಚ (CAPEX) ಬೇಡಿಕೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸತ್ಯ. ಆದರೆ ಎಲ್ಲ ವಲಯಗಳಲ್ಲೂ ಇದು ಸಾಧ್ಯವಾಗುವುದಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಕೃಷಿ ವಲಯಗಳ ವೆಚ್ಚಗಳಿಗೂ, ಮೂಲ ಸೌಕ್‌ಯಗಳಿಗಾಗಿ, ಉದಾಹರಣೆಗೆ ಹೆದ್ದಾರಿಗಳಿಗಾಗಿ, ಮಾಡುವ ವೆಚ್ಚಗಳಿಗೂ ನಡುವೆ ಅಪಾರ ವ್ಯತ್ಯಾಸಗಳಿರುತ್ತವೆ.

ಉದ್ಯೋಗ-ಆದಾಯ ಮತ್ತು ಜನಜೀವನ
ಕೃಷಿ-ಆರೋಗ್ಯ-ಶಿಕ್ಷಣದ ವೆಚ್ಚಗಳು ಬೇಡಿಕೆಯನ್ನು ಹೆಚ್ಚಿಸುವುದೇ ಅಲ್ಲದೆ ಉದ್ಯೋಗವನ್ನೂ ಸೃಷ್ಟಿಸುತ್ತವೆ. ಆದರೆ ಅಭಿವೃದ್ಧಿ ವೆಚ್ಚಗಳನ್ನೂ ಮೀರಿ ಮೂಲ ಸೌಕರ್ಯಗಳ ವೆಚ್ಚಗಳೇ ಪ್ರಧಾನವಾದಾಗ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಿಲ್ಲ. ಸಮಸ್ಯೆ ಇನ್ನೂ ಜಟಿಲವಾಗುತ್ತದೆ. 2030ರ ವೇಳೆಗೆ ಭಾರತ ಅತಿ ಹೆಚ್ಚಿನ ಯುವ ಶಕ್ತಿಯನ್ನು ಹೊಂದಿರುತ್ತದೆ, ಅದರ ಪ್ರಯೋಜನವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದ್ದರೂ, ಪ್ರಸ್ತುತ ಆರ್ಥಿಕತೆಯಲ್ಲೇ ಈ ಸಾಧ್ಯತೆಗಳನ್ನು ಭಗ್ನಗೊಳಿಸಲಾಗುತ್ತಿದೆ. ಯುವ ಸಮೂಹದಲ್ಲಿ ಅತಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ತಲೆದೋರಿದೆ. ನಗರ ಪ್ರದೇಶಗಳಲ್ಲ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯಾವುದೇ ಔದ್ಯಮಿಕ ಯೋಜನೆಗಳೂ ಸಹ ಬಜೆಟ್‌ನಲ್ಲಿ ಕಾಣುವುದಿಲ್ಲ. Rare Earth Materials ವಲಯ ಮತ್ತು ರಕ್ಷಣಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳು ಮಾತ್ರ ಕಾಣುತ್ತವೆ.
ಈ ಬಜೆಟ್‌ನ ಮತ್ತೊಂದು ನಿರಾಶಾದಾಯಕ ಆಯಾಮವನ್ನು ಸಾಮಾಜಿಕ ವಲಯದ ಯೋಜನೆಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸಮೀಪದಲ್ಲಿರುವಾಗ ಕೇಂದ್ರ ಬಜೆಟ್‌ನಲ್ಲಿ ಆ ರಾಜ್ಯಗಳಿಗೆ ಹಲವು ವಿಶೇಷ ಯೋಜನೆಗಳನ್ನು,ಅನುದಾನಗಳನ್ನು ಹಾಗೂ Freebies ಎಂದು ಗುರುತಿಸಲಾಗುವ ಸವಲತ್ತುಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಸ್ಥಿರತೆಯ ದೃಷ್ಟಿಯಿಂದಲೂ ಕೆಲವು ಸಾಮಾಜಿಕ ಉಪಕ್ರಮಗಳನ್ನು ಘೋಷಿಸುವುದು ವಾಡಿಕೆ. ಆದರೆ 2026-27ರ ಬಜೆಟ್ ಇಂತಹ ಯಾವುದೇ ಘೋಷಣೆಗಳನ್ನು ಕಾಣಲಾಗುವುದಿಲ್ಲ. ಸರ್ಕಾರದ ಸ್ಥಿರತೆಯ ಬಗ್ಗೆ ಯಾವುದೇ ಅನುಮಾನ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಏಕೆಂದರೆ ನೀತಿಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟಕ್ಕೆ ಬಿಜೆಪಿಗಿಂತಲೂ ತುಸು ಹೆಚ್ಚಾಗಿಯೇ ಬೆಂಬಲಿಸುವುದು ಖಚಿತವಾದಂತಿದೆ.

ತಳಮಟ್ಟದ ಸಮಾಜದಲ್ಲಿ ಆರ್ಥಿಕ ಅಸಮಾನತೆಗಳು ಹೆಚ್ಚಾಗುತ್ತಿದ್ದು, ನಿರುದ್ಯೋಗ ಮತ್ತು ವಸತಿಹೀನತೆಯ ಸಮಸ್ಯೆಗಳು ಉಲ್ಬಣಿಸುತ್ತಿರುವ ಹೊತ್ತಿನಲ್ಲಿ ವಾರ್ಷಿಕ ಬಜೆಟ್ ಸಾಮಾಜಿಕ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಷಾದಕರ. ಜನಸಂಖ್ಯೆಯ ದುರ್ಬಲ ವರ್ಗಗಳೆಂದೇ ಪರಿಗಣಿಸಲಾಗುವ ಮಕ್ಕಳು, ಗರ್ಭಿಣಿ ಮಹಿಳೆಯರು, ವೃದ್ಧರು, ಒಂಟಿ ಮಹಿಳೆಯರು, ವಿಕಲಾಂಗರು ಬಜೆಟ್‌ನಿಂದ ಯಾವುದೇ ಪ್ರಯೋಜನವನ್ನು ನಿರೀಕ್ಷಿಸಲಾಗುವುದಿಲ್ಲ. ಈ ವರ್ಗಗಳ ಸಾಮಾಜಿಕ ಭದ್ರತೆಗಾಗಿಯೇ ರೂಪಿಸಲಾಗಿರುವ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (NSAP), ಮಾತೃತ್ವ ಸೌಕರ್ಯಗಳನ್ನು ಕಲ್ಪಿಸುವ (SAMARTHYA), ಶಿಶುವಿಹಾರಗಳನ್ನು ಉತ್ತೇಜಿಸುವ (PALNA), ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆ (PM POSHAN) ಇವೇ ಮುಂತಾದ ತಳಸಮಾಜವನ್ನು ತಲುಪುವ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿಲ್ಲ.
ಬಜೆಟ್ ಮೂಲಕ ಮಂಜೂರು ಮಾಡಲಾಗಿರುವ ಅನುದಾನದ ಪ್ರಮಾಣ ಗರಿಷ್ಠ ಶೇಕಡಾ 5.2ರಷ್ಟನ್ನು ಸಕ್ಷಮ್ ಅಂಗನವಾಡಿ ಯೋಜನೆಯಲ್ಲಿ ಕಾಣಬಹುದು. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಯೋಜನೆಗಳಿಗೆ ಕಳೆದ ವರ್ಷದ ಬಜೆಟ್‌ನಲ್ಲಿ ಅಂದಾಜಿಸಿದ್ದ ಮೊತ್ತಕ್ಕಿಂತಲೂ ಕಡಿಮೆ ಖರ್ಚು ಮಾಡಿರುವುದು ಪರಿಷ್ಕೃತ ಅಂದಾಜು ಅಂಕಿಅಂಶಗಳಲ್ಲಿ ಸ್ಪಷ್ಟವಾಗುತ್ತದೆ. ಬಹು ಮುಖ್ಯವಾದ ಶಿಕ್ಷಣ (ಶೇಕಡಾ 6.4) ಮತ್ತು ಆರೋಗ್ಯ (ಶೇ 8.3) ಕ್ಷೇತ್ರಗಳಿಗೂ ಬಜೆಟ್‌ನಲ್ಲಿ ಅಲ್ಪಮೊತ್ತವನ್ನು ಹೆಚ್ಚಿಸಲಾಗಿದೆ. ಈ ಎರಡು ಪ್ರಧಾನ ವಲಯಗಳಲ್ಲೂ ಸಹ ಕಳೆದ ಬಜೆಟ್‌ನಲ್ಲಿ ಅಂದಾಜಿಸಿದ ಮೊತ್ತಕ್ಕಿಂತಲೂ, ಕ್ರಮವಾಗಿ ಶೇ 3.7 ಮತ್ತು ಶೇ 5.2ರಷ್ಟು ಕಡಿಮೆ ವೆಚ್ಚ ಮಾಡಲಾಗಿದೆ. 2025-26ರ ಬಜೆಟ್‌ನಲ್ಲಿ ಆದ್ಯತೆಯಾಗಿ ಬಿಂಬಿಸಲಾಗಿದ್ದ ಹಲವು ಕ್ಷೇತ್ರಗಳಲ್ಲೂ ಸರ್ಕಾರದ ವೆಚ್ಚದ ಪ್ರಮಾಣ ಅಂದಾಜಿಗಿಂತಲೂ ಕಡಿಮೆ ಇರುವುದು ನಿರಾಶಾದಾಯಕ ಅಂಶವಾಗಿದೆ. ನಗರಾಭಿವೃದ್ಧಿ ಶೇ 41, ಗ್ರಾಮೀಣಾಭಿವೃದ್ಧಿ ಶೇ 20, ಈಶಾನ್ಯ ರಾಜ್ಯಗಳ ಅಭಿವೃದ್ಧಿ ಶೇ 24 ಮತ್ತು ಸಮಾಜ ಕಲ್ಯಾಣ ಯೋಜನೆಗಳಲ್ಲಿ ಶೇ 17ರಷ್ಟು ವೆಚ್ಚ ಕಡಿಮೆ ಮಾಡಲಾಗಿದೆ.

ಈಡೇರದ ಭರವಸೆ ತಪ್ಪಾದ ಹೆಜ್ಜೆ
ನರೇಂದ್ರ ಮೋದಿ ಸರ್ಕಾರದ ಹೆಮ್ಮೆಯ ಯೋಜನೆಗಳೆಂದೇ ಹೇಳಲಾಗುವ ಜಲಜೀವನ್ ಮಿಷನ್‌ಗೆ ಅಪೇಕ್ಷಿತ ಮೊತ್ತಕ್ಕಿಂತಲೂ ಕಡಿಮೆ ವೆಚ್ಚ ಮಾಡಲಾಗಿದ್ದು, ಬಜೆಟ್ ಅಂದಾಜು 67 ಸಾವಿರ ಕೋಟಿ ಇದ್ದರೂ ಪರಿಷ್ಕೃತ ಅಂದಾಜು 17 ಸಾವಿರ ಕೋಟಿ ರೂಗಳಷ್ಟಾಗಿದೆ. PMAY-ಗ್ರಾಮೀಣ ಯೋಜನೆ ಮತ್ತು PMAY-ನಗರ ಯೋಜನೆಗಳಲ್ಲೂ ಸಹ ವೆಚ್ಚದ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ ಸಹ ಈ ಪ್ರಮುಖ ಹೆಮ್ಮೆಯ ಯೋಜನೆಗಳಿಗೆ ಪ್ರಸ್ತುತ ಬಜೆಟ್‌ನಲ್ಲಿ ಮಂಜೂರಾಗಿರುವ ಅನುದಾನದ ಮೊತ್ತ ಯಥಾಸ್ಥಿತಿಯಲ್ಲಿದೆ. ಒಟ್ಟಾರೆಯಾಗಿ ನೋಡಿದಾಗ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 2025-26ರ ಬಜೆಟ್‌ನಲ್ಲಿ 5,41,850 ಕೋಟಿ ಮಂಜೂರಾಗಿದ್ದರೂ, ವೆಚ್ಚ ಮಾಡಿರುವುದು 4,20,078 ಕೋಟಿ ರೂಗಳಷ್ಟೇ. ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗಳಿಗೆ ಅಲ್ಪಮೊತ್ತದ ಹೆಚ್ಚಳ , 5,48,798 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ.
ಒಕ್ಕೂಟ ವ್ಯವಸ್ಥೆಗೆ ಈಗಾಗಲೇ ಮಾರಕವಾಗಿರುವ ಜಿಎಸ್‌ಟಿ ಕಾಯ್ದೆ ಮತ್ತು ರಾಜ್ಯಗಳ ನಿಧಿ ಹಂಚಿಕೆಯ ನೀತಿ ಈ ಬಜೆಟ್‌ನಲ್ಲಿ ಮತ್ತಷ್ಟು ಜಟಿಲವಾಗಲಿದೆ. ರಾಜ್ಯಗಳ ನಿಧಿ ಹಂಚಿಕೆ (Devolution of funds to state) ಯಥಾಸ್ಥಿತಿಯಲ್ಲಿರುವುದು, ರಾಜ್ಯಗಳ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಉದ್ಯೋಗ ಖಾತರಿ ಯೋಜನೆಯನ್ನು (MNREGA) ರದ್ದುಪಡಿಸಿ ಜಾರಿಗೊಳಿಸಲಾಗಿರುವ VB G-RAM-G ಕಾಯ್ದೆಯ ಅನುಸಾರ, ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯಸರ್ಕಾರಗಳೇ ಭರಿಸಬೇಕಾಗುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಹೊಸ ಯೋಜನೆಗೆ 96 ಸಾವಿರ ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆಯಾದರೂ, ಇದರಲ್ಲಿ 38 ಸಾವಿರ ಕೋಟಿ ರೂಗಳನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗುತ್ತದೆ. ಹಣಕಾಸು ಆಯೋಗದ ಶಿಫಾರಸಿನ ಅನುಸಾರ ರಾಜ್ಯಗಳಿಗೆ ಕೇಂದ್ರದಿಂದ ಶೇಕಡಾ 41ರಷ್ಟು ನಿಧಿ ಹಂಚಿಕೆಯಾಗಬೇಕಾದರೂ, ವಾಸ್ತವವಾಗಿ ಶೇ 34ರಷ್ಟನ್ನು ಮಾತ್ರ ನೀಡಲಾಗುತ್ತಿದೆ. ಈ ಸನ್ನಿವೇಶದಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ಹೊರೆ ಹೊರಬೇಕಾಗುತ್ತದೆ.

ಕೇಂದ್ರ ಸರ್ಕಾರದ Flagship ಯೋಜನೆಗಳೆಂದೇ ಗುರುತಿಸಲಾಗುವ , ನಗರಾಭಿವೃದ್ಧಿಯನ್ನೇ ಕೇಂದ್ರೀಕರಿಸಲಾಗಿರುವ ಪ್ರಧಾನಮಂತ್ರಿ ವಸತಿ ಯೋಜನೆ-ನಗರ (PMAY-Urban) ಈ ಬಜೆಟ್‌ನಲ್ಲಿ 1,169 ಕೋಟಿ ರೂಗಳ ಕಡಿಮೆ ಅನುದಾನ ಪಡೆಯಲಿದೆ. ನಗರಗಳಲ್ಲಿ ವಸತಿ ಸಮಸ್ಯೆ ಉಲ್ಬಣಿಸಿ, ತಾರಕಕ್ಕೇರಿರುವ ಸನ್ನಿವೇಶದಲ್ಲಿ ಇದು ಹಿಮ್ಮುಖ ಚಲನೆಯ ಕ್ರಮವಾಗಿ ಕಾಣುತ್ತದೆ. 2019ರಿಂದಲೂ ಸರ್ಕಾರದ ಅತ್ಯಂತ ಹೆಮ್ಮೆಯ ಯೋಜನೆಯಾಗಿಯೇ ಇರುವ ಸ್ವಚ್ಛ ಭಾರತ್ ಮಿಷನ್-ನಗರ , ಯೋಜನೆಗೆ ಈ ಬಜೆಟ್‌ನಲ್ಲಿ ಅನುದಾನವನ್ನು 5,000 ಕೋಟಿ ರೂಗಳಿಂದ 2,500 ಕೋಟಿ ರೂಗಳಿಗೆ ತಗ್ಗಿಸಲಾಗಿದೆ. ನಗರಗಳ ತ್ಯಾಜ್ಯ ನಿರ್ವಹಣೆ ನಿರಂತರ ಪ್ರಕ್ರಿಯೆಯಾಗಿದ್ದು, ತ್ಯಾಜ್ಯ ಸಂಸ್ಕರಣೆ, ಒಳಚರಂಡಿ ಸಂಸ್ಕರಣೆ, ಮಲದ ಕೆಸರು ನಿರ್ವಹಣೆ ಮತ್ತು ಕಾರ್ಮಿಕರ ಸುರಕ್ಷತೆಗಾಗಿ ಹೆಚ್ಚಿನ ಹಣ ಖರ್ಚುಮಾಡಬೇಕಾಗುತ್ತದೆ. ಆದರೆ ಈ ನಿಮಿತ್ತ ವೆಚ್ಚದ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಿರುವುದು,. ನಗರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಸರ್ಕಾರದ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸುತ್ತದೆ.
ಸಾಮಾನ್ಯವಾಗಿ ಯಾವುದೇ ಅರ್ಥವ್ಯವಸ್ಥೆಯಲ್ಲಿ ಉತ್ತಮ ನಗರಾಭಿವೃದ್ಧಿ ಮತ್ತು ಆದಾಯ ಹೆಚ್ಚಳದಿಂದಲೇ ಅಭಿವೃದ್ಧಿಯ ಸೂಚ್ಯಂಕಗಳೂ ಹೆಚ್ಚಳ ಕಾಣುತ್ತವೆ. ಜಿಡಿಪಿಯಲ್ಲಿ ಪ್ರಮುಖ ಪಾಲು ಇಲ್ಲಿ ಸೃಷ್ಟಿಯಾಗುವುದೇ ಅಲ್ಲದೆ, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಯ ಉನ್ನತೀಕರಣಕ್ಕೆ ಸುಸಜ್ಜಿತನಗರಗಳು ಕೇಂದ್ರವಾಗಿರುತ್ತವೆ. ವಿಚಿತ್ರ ಎಂದರೆ ಈ ಬಜೆಟ್‌ನಲ್ಲಿ ಈ ಪ್ರಧಾನ ವಲಯವನ್ನೇ ಅಲಕ್ಷಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಗ್ರಾಮೀಣ ವಿಭಾಗಕ್ಕೇನೂ ಪ್ರಾಮುಖ್ಯತೆ ನೀಡಿಲ್ಲ. ಗ್ರಾಮ ಭಾರತದಲ್ಲಿ ತಳಮಟ್ಟದ ದುಡಿಯುವ ವರ್ಗಗಳಿಗೆ ಸಂಜೀವಿನಿಯಂತಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಈಗಾಗಲೇ ರದ್ದುಪಡಿಸಲಾಗಿದ್ದು, ಉದ್ಯೋಗದ ಸಾಂವಿಧಾನಿಕ ಹಕ್ಕನ್ನೇ ಕಸಿದುಕೊಳ್ಳಲಾಗಿದೆ.

ಮುಂದುವರೆದ ಕೃಷಿ ವಲಯದ ನಿರ್ಲಕ್ಷ್ಯ
ಇಂದಿಗೂ ದೇಶದ ಶೇಕಡಾ 60ಕ್ಕೂ ಹೆಚ್ಚು ಜನರ ಜೀವನಾಧಾರವಾಗಿರುವ ಕೃಷಿ ವಲಯದ ಬೆಳವಣಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕುಸಿತ ಕಾಣಲಿದೆ. ಕೃಷಿ ಅಭಿವೃದ್ಧಿಯು ಶೇಕಡಾ 4.6ರಿಂದ 3.1ಕ್ಕೆ ಕುಸಿಯುವ ಸೂಚನೆಗಳಿವೆ. ದೇಶದ ಒಟ್ಟು ದುಡಿಮೆಗಾರರ ಶೇಕಡಾ 45ರಷ್ಟನ್ನು ಪ್ರತಿನಿಧಿಸುವ ಮತ್ತು ಜಿಡಿಪಿಯ ಶೇಕಡಾ 17ರಷ್ಟನ್ನು ಒದಗಿಸುವ ಕೃಷಿ ವಲಯಕ್ಕೆ ಯಾವುದೇ ಉತ್ತೇಜನವನ್ನು ಬಜೆಟ್‌ನಲ್ಲಿ ಕಾಣಲಾಗುವುದಿಲ್ಲ. ಸಹಾಯಧನವನ್ನೇ (Subsidy) ಅಭಿವೃದ್ಧಿ ವೆಚ್ಚಗಳಿಗಿಂತಲೂ ಮುಖ್ಯವಾಗಿ ಪರಿಗಣಿಸುವ ನೀತಿಯನ್ನು ಮುಂದುವರೆಸಲಾಗಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯಕ್ಕೆ ಶೇಕಡಾ 5.4ರಷ್ಟು ಹೆಚ್ಚಿನ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಇಲಾಖೆಗೇ ಒಳಪಡುವ ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗಕ್ಕೆ ಅನುದಾನವನ್ನು ಶೇಕಡಾ 3ರಷ್ಟು ಕಡಿಮೆ ಮಾಡಲಾಗಿದೆ. ಈ ನಡುವೆ ಮೀನುಗಾರಿಕೆ, ಹೈನುಗಾರಿಕೆ, ಡೈರಿ ಉದ್ಯಮಕ್ಕೆ ಶೇಕಡಾ 26.7ರಷ್ಟು ಅನುದಾನ ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಉತ್ಪಾದಕೀಯತೆ ಹೆಚ್ಚಿರುವ ಗ್ರಾಮೀಣ ಆರ್ಥಿಕತೆ ಇಲ್ಲದಾದರೆ ವಿಕಸಿತ ಭಾರತದ ದೂರಗಾಮಿ ಕಲ್ಪನೆಯನ್ನು ಸಾಕಾರಗೊಳಿಸಲಾಗುವುದಿಲ್ಲ. ಗ್ರಾಮೀಣ ಜನತೆಯ ಜೀವನೋಪಾಯವನ್ನು ಉತ್ತಮಪಡಿಸಲು ಇರುವ ಏಕೈಕ ಮಾರ್ಗ ಎಂದರೆ ಅಭಿವೃದ್ಧಿ ವೆಚ್ಚಗಳನ್ನು ಹೆಚ್ಚಸುವುದು. ಆದರೆ ಕಲ್ಯಾಣ ಯೋಜನೆಗಳು ಮತ್ತು ಸಹಾಯಧನಕ್ಕೇ ಹೆಚ್ಚು ಒತ್ತು ನೀಡಿರುವುದು ಇದಕ್ಕೆ ತದ್ವಿರುದ್ಧವಾದ ನೀತಿಯಾಗಿದೆ. ಭಾರತದ ಕೃಷಿ ವಲಯ ಎದುರಿಸುತ್ತಿರುವ ಹಲವು ಆಯಾಮಗಳ ಬಿಕ್ಕಟ್ಟುಗಳನ್ನು ನಿವಾರಿಸಲು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಸಹಾಯಧನ ಒದಗಿಸುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಗಳು ಗ್ರಾಮೀಣ ಬಡತನವನ್ನು ಹೋಗಲಾಡಿಸಲು ನೆರವಾಗುತ್ತವೆ.
ಈ ಜಟಿಲ ಸಿಕ್ಕುಗಳ ನಡುವೆ ಕೇಂದ್ರ ವಿತ್ತ ಸಚಿವರು 2026-27ರ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ಕಳೆದ ಹತ್ತು ವರ್ಷಗಳ ಅನುಭವದಲ್ಲಿ ಹೇಳುವುದಾದರೆ, ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಇನ್ನೂ ಆಘಾತಕರ ಸಮಸ್ಯೆಗಳು ಎದುರಾಗಲಿವೆ. ಗ್ರಾಮೀಣ ಉದ್ಯೋಗ ಹಕ್ಕನ್ನು ಈಗಾಗಲೇ ಕಸಿದುಕೊಳ್ಳಲಾಗಿದೆ. ಔದ್ಯಮಿಕ ಉದ್ಯೋಗನ್ನು ಹೆಚ್ಚಿಸಲು ಅಗತ್ಯವಾದ ಉತ್ಪಾದನಾ ವಲಯವನ್ನು ಉತ್ತೇಜಿಸುವ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಾಗಿಲ್ಲ. ಇದು ವಿದ್ಯಾವಂತ ಯುವ ಸಮೂಹದ ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ. ಬಹುಶಃ ಮುಂದಿನ ವರ್ಷದಲ್ಲಿ ಆಹಾರದ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆಗಳು ರೂಪಾಂತರ ಹೊಂದುವ ಸಾಧ್ಯತೆಗಳು ನಿಚ್ಛಳವಾಗಿವೆ.
ಭರವಸೆ ಮೂಡಿಸದ ಕನಸುಗಳು

ನಿರುದ್ಯೋಗ, ಬಡತನ, ವಸತಿ ಹೀನತೆ ಮತ್ತು ಸುಸ್ಥಿರ ಬದುಕಿಗಾಗಿ ಪರದಾಡುತ್ತಿರುವ ತಳಸಮಾಜದ ಶ್ರಮಿಕ ವರ್ಗಗಳಿಗೆ ಹಾಗೂ ರೈತಾಪಿ ಸಮುದಾಯಗಳಿಗೆ ಭರವಸೆ ಹುಟ್ಟಿಸುವ ಯಾವುದೇ ಅಂಶವನ್ನೂ ಬಜೆಟ್‌ನಲ್ಲಿ ಗುರುತಿಸಲಾಗುವುದಿಲ್ಲ. ಬದಲಾಗಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಯನ್ನು ರಕ್ಷಿಸುವ ಎಲ್ಲ ಕ್ರಮಗಳನ್ನೂ ಬಜೆಟ್ ಅಳವಡಿಸಿಕೊಂಡಿದೆ. ವಿಕಸಿತ ಭಾರತದ ಕಲ್ಪನೆಯಲ್ಲೇ ಈ ವರ್ಗಗಳನ್ನು ನಿರ್ಲಕ್ಷಿಸುವ ಮತ್ತು ಮೇಲ್ಪದರದ ಸಮಾಜವನ್ನು (Elite socity) ಉತ್ತೇಜಿಸುವ ಧ್ಯೇಯ ಅಂತರ್ಗತವಾಗಿದೆ. ಇದರ ಒಂದು ನಿದರ್ಶನವನ್ನು ಈ ವರ್ಷದ ಬಜೆಟ್‌ನಲ್ಲಿ ನಗರಾಭಿವೃದ್ಧಿಗಾಗಿ ನಿಗದಿಪಡಿಸಿರುವ ಮೊತ್ತದಲ್ಲಿ ಗುರುತಿಸಬಹುದು.
ನಗರಗಳ ಉನ್ನತೀಕರಣಕ್ಕೆ, ಆಧುನಿಕೀಕರಣಕ್ಕೆ ನಿಗದಿಪಡಿಸಿರುವ 85,522 ಕೋಟಿ ರೂಗಳಲ್ಲಿ 28,740 ಕೋಟಿ ರೂಗಳು ಮೆಟ್ರೋ ರೈಲುಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಶೇಕಡಾ 33.6ರಷ್ಟು. ಇದೇ ಪ್ರಮಾಣದ ವೆಚ್ಚವನ್ನು ಸಾಮಾನ್ಯ ನಾಗರಿಕರಿಗೆ ನಿಲುಕುವ ರಸ್ತೆ ಸಾರಿಗೆ, ಸಾರ್ವಜನಿಕ ಸಾರಿಗೆ, ಉಪನಗರ ರೈಲು ಮಾರ್ಗಗಳು, ಮೋಟಾರುವಾಹನ ಮುಕ್ತ ಸಂಚಾರ ಇಂತಹ ಯೋಜನೆಗಳಲ್ಲಿ ಗುರುತಿಸಲಾಗುವುದಿಲ್ಲ. ಸಾರ್ವಜನಿಕ ಸಾರಿಗೆಯನ್ನು ಅತ್ಯಾಧುನಿಕ ರೈಲು ಮಾರ್ಗಗಳಿಗೆ ಸಮೀಕರಿಸುವ ಮೂಲಕ, ಸಾಮಾನ್ಯ ಜನತೆ ಅವಲಂಬಿಸುವ ಸಾರಿಗೆ ಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿದೆ. ಈ ಅಭಿವೃದ್ಧಿ ಮಾದರಿಯೇ ಭಾರತದ ಬಹುಸಂಖ್ಯೆಯ ಜನತೆಗೆ ಮಾರಕವಾಗಲಿದ್ದು, ಪರಿಸರ ನಾಶಕ್ಕೂ ಕಾರಣವಾಗಲಿದೆ.

ನವ ಉದಾರವಾದಿ ಬಂಡವಾಳಶಾಹಿ ಮಾರುಕಟ್ಟೆ, ಕಾರ್ಪೋರೇಟ್ ಔದ್ಯಮಿಕ ಬೆಳವಣಿಗೆ ಮತ್ತು ಮೇಲ್ಪದರ ಸಮಾಜದ, ಮೇಲ್ವರ್ಗಗಳ ಆರ್ಥಿಕ ಅಭಿವೃದ್ಧಿ ಈ ಮೂಲ ಮಂತ್ರಗಳನ್ನೇ ಆಧರಿಸಿದ ಅರ್ಥವ್ಯವಸ್ಥೆಯನ್ನು ನವ ಭಾರತ ಸದ್ದಿಲ್ಲದೆ ಅಂತರ್ಗತಗೊಳಿಸಿಕೊಳ್ಳುತ್ತಿದೆ. ನಾಲ್ಕು ಕಾರ್ಮಿಕ ಸಂಹಿತೆಗಳು, ಜಿ ರಾಮ್ ಜಿ ಕಾಯ್ದೆ ಇವೆಲ್ಲವೂ ಪೂರ್ವಸೂಚನೆಗಳಾಗಿ ಕಾಣುತ್ತಿವೆ. ಭಾರತದ ಆದಿವಾಸಿಗಳು, ಬುಡಕಟ್ಟು ಸಮಾಜಗಳು, ಗ್ರಾಮೀಣ ಬಡಜನತೆ, ಮಹಿಳೆಯರು, ತಳಸಮುದಾಯಗಳಲ್ಲಿ ಅವಕಾಶವಂಚಿತರು, ರೈತರು ಮತ್ತು ಕೃಷಿ ಕಾರ್ಮಿಕರು ಮುಂದಿನ ದಿನಗಳಲ್ಲಿ ಕಾಣಬಹುದಾದ ಕರಾಳ ಸನ್ನಿವೇಶಗಳ ಮುನ್ಸೂಚನೆಯಾಗಿ 2026-27ರ ವಾರ್ಷಿಕ ಬಜೆಟ್ ಕಾಣುತ್ತಿದೆ. ಇದರ ವಿರುದ್ಧ ಸೆಣಸಲು ಬೇಕಾಗಿರುವುದು ʼ ಪರ್ಯಾಯ ರಾಜಕಾರಣ ʼ ಅಲ್ಲ, ʼ ರಾಜಕೀಯ ಪರ್ಯಾಯ ʼ . (Not Alternative Politics but Political Alternative )̤
ಏಕೆಂದರೆ ಸಂಸದೀಯ ಬಲ ಇಲ್ಲದ, ಮತದಾರರ ಸುಭದ್ರ ತಳಪಾಯ ಇಲ್ಲದ ಎಡಪಕ್ಷಗಳ ಹೊರತಾಗಿ ಯಾವುದೇ ಪಕ್ಷವೂ ಈ ನವ ಉದಾರವಾದಿ ಆರ್ಥಿಕ ನೀತಿಗಳನ್ನು ತಾತ್ವಿಕವಾಗಿ ವಿರೋಧಿಸುವುದಿಲ್ಲ. ಒಂದು ಹೊಸ ರಾಜಕೀಯ ಪರ್ವ, ದುಡಿಯುವ ವರ್ಗಗಳನ್ನು ಪ್ರತಿನಿಧಿಸುವ ಹೊಸ ಸಮಾಜ ಹಾಗೂ ಅವಕಾಶವಂಚಿತರಿಗೆ ಹೊಸ ಬದುಕು ಕಲ್ಪಿಸುವ ಅರ್ಥಿಕತೆ ನಮ್ಮ ಆದ್ಯತೆಯಾಗಬೇಕಿದೆ. ಇದು ಸಾಂಕೇತಿಕ ಸಾರ್ವತ್ರಿಕ ಮುಷ್ಕರಗಳಿಂದ ಮಾತ್ರವೇ ಸಾಧ್ಯವಾಗುವುದಿಲ್ಲ. ಎಡ ಪಕ್ಷಗಳ ಐಕ್ಯತೆ ಮತ್ತು ತಳಮಟ್ಟದ ಸಾಮಾನ್ಯ ಜನತೆಯ ಧೃವೀಕರಣದ ಮೂಲಕ ಸಾಧ್ಯವಾಗುತ್ತದೆ. ತತ್ವ ಸಿದ್ದಾಂತಗಳ ಹೊರತಾಗಿ ವರ್ತಮಾನದ ಭಾರತಕ್ಕೆ ಬೇಕಿರುವುದು ವಿವೇಕ, ವಿವೇಚನೆ ಮತ್ತು ಸಾಮಾಜಿಕ ಪ್ರಜ್ಞೆ.
(ಆಕರ ಬರಹಗಳು : What does the budget offer urban India – Tikendra Singh panwar :
Building on a Tax gamble that did not pay off – Rohit Azad & Indranil chowdhry :
Pushing welfare towards the states – Dipa Sinha
The Hindu
And
Finance minister has bypassed large parts of Farm sector – Ashok Ghulati – Indian Express)

-೦-೦-೦-೦-೦-






