—–ನಾ ದಿವಾಕರ —–
ಕ್ರಾಂತಿಯ ಕನಸು ಕಟ್ಟುವ ಮುನ್ನ ನೆಲಮಟ್ಟದ ಬದಲಾವಣೆ ಮತ್ತು ಸುಧಾರಣೆ ಅತ್ಯಗತ್ಯ

ವಿಶ್ವ ಭೂಪಟದಲ್ಲಿ ಇಡೀ ಸಾಮಾಜಿಕ ವ್ಯವಸ್ಥೆಯನ್ನು ಪಲ್ಲಟಗೊಳಿಸಿ ಹೊಸ ದಿಗಂತದತ್ತ ಸಾಗಬೇಕಾದ ಅನಿವಾರ್ಯತೆ ಕಾಣುವುದು ಬಹುಶಃ ಭಾರತದಲ್ಲಿ ಮಾತ್ರ ಎನಿಸುತ್ತದೆ. ಸಾಂಪ್ರದಾಯಿಕತೆ, ಪ್ರಾಚೀನ ಜೀವನ ಮೌಲ್ಯಗಳು, ಮಧ್ಯಕಾಲೀನ ಆದರ್ಶಗಳು ಹಾಗೂ ಸಾಮಾಜಿಕ ನೆಲೆಯಲ್ಲಿ ಎಲ್ಲ ಸ್ತರಗಳಲ್ಲೂ ಇಂದಿಗೂ ಗಟ್ಟಿಯಾಗಿ ನಿಂತಿರುವ ಪುರಾತನ ಆಚರಣೆಗಳು , ಭಾರತವನ್ನು ಬೌದ್ಧಿಕವಾಗಿ-ಸಾಂಸ್ಕೃತಿಕವಾಗಿ ಹಿಮ್ಮುಖ ಚಲನೆಗೆ ಈಡುಮಾಡಿವೆ. ಸಮಾನಾಂತರವಾಗಿ ನೋಡಿದರೆ ಭಾರತ ಇಂದು ವೈಜ್ಞಾನಿಕ ಸಾಧನೆಗಳಲ್ಲಿ, ತಂತ್ರಜ್ಞಾನ ಅವಿಷ್ಕಾರ ಮತ್ತು ನಾವೀನ್ಯತೆಗಳಲ್ಲಿ (Innovations), ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿ ಮುನ್ನಡೆಯುತ್ತಿದೆ. ಇತ್ತೀಚೆಗಷ್ಟೇ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿ ಯಶಸ್ವಿಯಾಗಿ ಹಿಂದಿರುಗಿದ್ದಾರೆ.
ಈ ವಿಶಿಷ್ಟ ಆಯಾಮದಿಂದ ನೋಡಿದಾಗ ನವ ಭಾರತದಲ್ಲಿ ಎರಡು ಸಮಾಜಗಳು ಸಮಾನಾಂತರವಾಗಿ ಭವಿಷ್ಯದ ವಿಕಾಸದ ಕನಸು ಕಟ್ಟುತ್ತಿರುವುದನ್ನು ಗುರುತಿಸಲು ಸಾಧ್ಯ. ಮಾರುಕಟ್ಟೆ ಸೂಚ್ಯಂಕಗಳು ಹಾಗೂ ಮೇಲ್ನೋಟಕ್ಕೆ ಕಾಣುವ ಮೇಲ್ಪದರ ಸಮಾಜದ (Elite Society) ಶೀಘ್ರ ಪ್ರಗತಿ ಮತ್ತು ಶೈಕ್ಷಣಿಕ ಶ್ರೇಷ್ಠತೆಯ (Academic Excellence) ದೃಷ್ಟಿಯಿಂದ ನೋಡಿದಾಗ ನವ ಭಾರತ ಈಗಾಗಲೇ ವಿಕಾಸ ಹೊಂದಿದೆ ಎಂದೋ ಅಥವಾ ಇನ್ನು ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ (2047) ಪೂರ್ಣ ವಿಕಸಿತ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದೋ ಭಾಸವಾಗುವುದು ಸಹಜ. ಈ ಭರವಸೆಯೊಂದಿಗೆ ಮುನ್ನಡೆಯುವುದು ಸ್ವಾಗತಾರ್ಹವೂ ಹೌದು.
ಆದರೆ ವಿಕಾಸದ ಕನಸು ಕಾಣುತ್ತಿರುವ ಭಾರತದಲ್ಲೇ ಮತ್ತೊಂದು ಸಮಾಜ ಇಂದಿಗೂ ಭೌತಿಕ ನೆಲೆಯಲ್ಲಿ ಜಡತ್ವದತ್ತ ಸಾಗುತ್ತಿದೆ. ಸಮಾಜದ ಕ್ರಿಯಾಶೀಲತೆ-ಚಲನಶೀಲತೆಯನ್ನು ಭಗ್ನಗೊಳಿಸುವ ಸಾಂಸ್ಕೃತಿಕ ಜಡತ್ವ ಮತ್ತು ಪ್ರಾಚೀನ ಮನಸ್ಥಿತಿಗಳಿಗೆ ಈ ಸಮಾಜ ಮುಖ್ಯ ಭೂಮಿಕೆಯೂ ಆಗಿದೆ. ಈ ಎರಡೂ ಸಮಾಜಗಳನ್ನು ಮುಖಾಮುಖಿಯಾಗಿಸಿದಾಗ, ಭಾರತದ ಸಾಂಪ್ರದಾಯಿಕ ಸಮಾಜವು ಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಪ್ರಾಚೀನ ನಂಬಿಕೆಗಳು, ಮೌಢ್ಯಾಚರಣೆಗಳು, ಅವೈಚಾರಿಕ-ಅವೈಜ್ಞಾನಿಕ ಮನೋಭಾವ ಹಾಗೂ ಮಧ್ಯಕಾಲೀನ ಊಳಿಗಮಾನ್ಯ-ಪಿತೃಪ್ರಧಾನ ಮೌಲ್ಯಗಳಿಗೆ-ಆಚರಣೆಗಳಿಗೆ ಆತುಕೊಂಡಿರುವುದನ್ನು ಎರಡೂ ಸಮಾಜಗಳಲ್ಲಿ ಕಾಣಬಹುದಾಗಿದೆ. ಮೇಲ್ಪದರ ಸಮಾಜದಲ್ಲಿ ರೂಪಾಂತರಗೊಂಡಿರುವ ಈ ಆಚರಣೆಗಳು ತಳಸ್ತರದ ಸಮಾಜದಲ್ಲಿ ಯಥಾಸ್ಥಿತಿಯಲ್ಲೇ ಕಾಣುವುದು ಪ್ರಜ್ಞಾವಂತ ಸಮಾಜವನ್ನು ಜಾಗೃತಗೊಳಿಸಬೇಕಾದ ವಿಚಾರ.
ಸುಧಾರಣೆಯ ಮುಂಗಾಣ್ಕೆಯಲ್ಲಿ
ಹಾಗಾಗಿಯೇ ನವ ಭಾರತೀಯ ಸಮಾಜದಲ್ಲಿ ಕ್ರಾಂತಿಯ ಕೂಗು ಗಟ್ಟಿಯಾಗುತ್ತಿರುವ ಹಾಗೆಯೇ ಮತ್ತೊಂದು ಬದಿಯಲ್ಲಿ ಸಮಾಜ ಸುಧಾರಣೆಯ ಅಪೇಕ್ಷೆಗಳೂ ವ್ಯಾಪಿಸುತ್ತಿವೆ. ಚಾರಿತ್ರಿಕವಾಗಿ ನೋಡಿದಾಗ ಭಾರತ ಸಮಾಜ ಸುಧಾರಕರ ನಾಡು. ಬುದ್ಧ ಬಸವರಿಂದ ಗಾಂಧಿ-ಅಂಬೇಡ್ಕರ್‌ವರೆಗೆ, ಬೌದ್ಧಿಕ ನೆಲೆಯಲ್ಲಿ, ಆಧ್ಯಾತ್ಮಿಕ ಮಾರ್ಗಗಳ ಮೂಲಕ, ಪ್ರತಿರೋಧದ ಸಿದ್ಧಾಂತಗಳ ಮುಖಾಂತರ ಸಮಾಜದ ಸುಧಾರಣೆಯ ವಿಭಿನ್ನ ಆಯಾಮಗಳಿಗೆ ಸಾಕ್ಷಿಯಾಗಿದೆ. ದುರದೃಷ್ಟವಶಾತ್ ಈ ಪ್ರಯತ್ನಗಳ ನಡುವೆಯೂ ನವ ಭಾರತ ಜಾತಿ ದೌರ್ಜನ್ಯ-ತಾರತಮ್ಯ , ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಮಡಿವಂತಿಕೆಯ ಶ್ರೇಷ್ಠತೆ, ಯಜಮಾನಿಕೆಯ ಪಾರಮ್ಯ, ಪುರುಷಪ್ರಧಾನ ಮೌಲ್ಯಗಳ ಮೇಲರಿಮೆ ಇವೇ ಮುಂತಾದ ಮಧ್ಯಕಾಲೀನ ಲಕ್ಷಣಗಳನ್ನು ( Medieval Characters) ಕಾಪಾಡಿಕೊಂಡು ಬಂದಿದೆ. ಅಸ್ಪೃಶ್ಯತೆಯನ್ನು ಇಲ್ಲವಾಗಿಸಲು ಅಂಬೇಡ್ಕರ್ ಅನುಸರಿಸಿದ ಜಾತಿ ವಿನಾಶ ಮಾರ್ಗವಾಗಲೀ, ಗಾಂಧಿ ಬೋಧಿಸಿದ ಮೇಲ್ಜಾತಿಯ ಮನಃಪರಿವರ್ತನೆಯ ಹಾದಿಯಾಗಲೀ, ಸ್ವತಂತ್ರ ಭಾರತವನ್ನು ಈ ಸಾಮಾಜಿಕ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವಾಗದಿರುವುದು, ವರ್ತಮಾನದ ಸಮಾಜವನ್ನು ಚಿಂತೆಗೀಡುಮಾಡುವ ವಿಷಯವಾಗಿದೆ.

ಒಂದು ಆಶಾದಾಯಕ ಅಂಶ ಎಂದರೆ, ತಳ ಸಮಾಜದ ಅಳಿವು ಉಳಿವಿಗಾಗಿ ದೇಶವ್ಯಾಪಿಯಾಗಿ ನೂರಾರು ಹೋರಾಟಗಳು ನಡೆಯುತ್ತಿರುವಾಗಲೇ, ಸಮಾಜದ ಮತ್ತೊಂದು ಬದಿಯಲ್ಲಿ ʼ ಸಮಾಜ ಸುಧಾರಣೆ ʼಯ ಪ್ರಯತ್ನಗಳೂ ಕ್ರಿಯಾಶೀಲವಾಗಿ ನಡೆಯುತ್ತಿವೆ. ಯಾವುದೇ ಸಮಾಜದಲ್ಲಿ/ದೇಶದಲ್ಲಿ ಕ್ರಾಂತಿ ಯಶಸ್ವಿಯಾಗಬೇಕಾದರೆ, ಮೊದಲ ಮೆಟ್ಟಿಲುಗಳಾಗಿ ಕಾಣುವುದು ಸಾಮಾಜಿಕ/ಸಾಂಸ್ಕೃತಿಕ ಬದಲಾವಣೆ ಮತ್ತು ಸುಧಾರಣೆಗಳು ಎನ್ನುವುದು ಚಾರಿತ್ರಿಕ ಸತ್ಯ. ಈ ಸುಧಾರಣೆಯ ದನಿಗಳು/ಹೆಜ್ಜೆಗಳು ನೂರಾರು ಸಂಖ್ಯೆಯಲ್ಲಿ ಕಾಣಬಹುದಾದರೂ, ನಮ್ಮ ನಡುವೆಯೇ ಇಂತಹ ಒಂದು ಹೆಜ್ಜೆಗುರುತುಗಳು ಕ್ರಿಯಾಶೀಲವಾಗಿರುವುದನ್ನು ಕಂಡಾಗ, ಪ್ರಜ್ಞಾವಂತ ಮನಸ್ಸು ಪುಳಕಿತಗೊಂಡು, ಭರವಸೆಯ ನಿಟ್ಟುಸಿರು ಬಿಡುತ್ತದೆ. ಈ ಸದಾಶಯಕ್ಕೆ ಪೂರಕವಾಗಿ ನಮಗೆ ಗೋಚರಿಸಬೇಕಿರುವುದು ಕೋಲಾರ ಜಿಲ್ಲೆಯಲ್ಲಿ ಸಮಾಜ ಸುಧಾರಣೆಯ ಹಾದಿಯಲ್ಲಿ, ಅಸೃಶ್ಯತೆಯನ್ನು ಹೋಗಲಾಡಿಸಲು ಅಹರ್ನಿಶಿ ಶ್ರಮಿಸುತ್ತರುವ “ ಅರಿವು ಭಾರತ ” ಎಂಬ ಸಂಸ್ಥೆ.
ಅರಿವಿನ ಪಯಣ-ಒಂದು ವಿಶಿಷ್ಟ ಮಾದರಿ
ಡಾ. ಬಿ. ಆರ್. ಅಂಬೇಡ್ಕರ್ ಅಸ್ಪೃಶ್ಯತೆಯನ್ನು ಮೇಲ್ಜಾತಿಗಳ ಹಾಗೂ ಈ ಸಮಾಜವೇ ಸೃಷ್ಟಿಸಿರುವ ಜಾತಿವ್ಯವಸ್ಥೆಯ ನಿರಂತರತೆಯಲ್ಲಿ ಬೇರೂರಿರುವ ಸಮಸ್ಯೆ ಎಂದೇ ಕಾಣುತ್ತಾರೆ. ಇಂದಿಗೂ ವಾಸ್ತವ ಎನಿಸುವ ಈ ದಾರ್ಶನಿಕ ಮುನ್ನೋಟವನ್ನು ವಿಸ್ತರಿಸಿ ನೋಡಿದಾಗ, ಅಸ್ಪೃಶ್ಯತೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಸೀಮಿತವಾಗಿರದೆ, ತಳಸ್ತರದ ಜಾತಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಮುದಾಯಗಳಲ್ಲೂ ಬೇರೂರಿರುವುದನ್ನು ಸಮಕಾಲೀನವಾಗಿ ಗುರುತಿಸಬಹುದು. ಇನ್ನೂ ವಿಶೇಷ ಎಂದರೆ ಕೆಲವು ಬುಡಕಟ್ಟು ಸಮುದಾಯಗಳೂ ಸಹ ದಲಿತರ ಒಂದು ವರ್ಗವನ್ನು ಅಸ್ಪೃಶ್ಯರನ್ನಾಗಿ ನೋಡುವುದನ್ನೂ ಗುರುತಿಸಬಹುದು. ಹಾಗಾಗಿ ಈ ಹೀನ-ಅಮಾನುಷ ಸಾಮಾಜಿಕ ಆಚರಣೆಯನ್ನು ಬುಡಮಟ್ಟದಿಂದಲೇ ಕಿತ್ತುಹಾಕಬೇಕೆಂದರೆ ಅದು ಮೇಲ್ಜಾತಿಯ ನೆಲೆಯಲ್ಲೇ ಆರಂಭವಾಗಬೇಕು ಎಂಬ ಒಂದು ಆಶಯ ನಮ್ಮ ಸಾಮಾಜಿಕ ಅರಿವಿನ ಒಂದು ಭಾಗ.

ಗಾಂಧಿ ಇದನ್ನು ಮನಃಪರಿವರ್ತನೆಯ ನೆಲೆಯಲ್ಲಿ ವ್ಯಾಖ್ಯಾನಿಸಿದ್ದರು. ಆದರೆ ಭೌತಿಕವಾಗಿ ತಳಮಟ್ಟದ ಆಚರಣೆಗಳಲ್ಲಿ ಅಳವಡಿಸದ ಹೊರತು, ಇದು ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳುವುದಿಲ್ಲ ಎಂಬ ಅರಿವೂ ಸ್ವತಂತ್ರ ಭಾರತದ ಸಾಮಾಜಿಕ ಹೋರಾಟಗಳು ಮೂಡಿಸಿವೆ. ಈ ದೃಷ್ಟಿಯಿಂದ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಪ್ಪ 2014ರಲ್ಲಿ ಹುಟ್ಟುಹಾಕಿದ ಒಂದು ಸಮಾಜ ಸುಧಾರಕ ಸಂಸ್ಥೆ ʼ ಅರಿವು ಭಾರತ ʼ. ಈಗ ಅವರ ಮೂಲ ನಾಮಧೇಯದೊಡನೆ ʼಅರಿವುʼ ಸೇರಿಕೊಂಡಿದ್ದು, ಅರಿವು ಶಿವಪ್ಪ ಎಂದೇ ಖ್ಯಾತಿ ಪಡೆದಿದ್ದಾರೆ. ಯಾವುದೇ ಬದಲಾವಣೆ ಅಥವಾ ಸುಧಾರಣೆಯ ಪ್ರಯತ್ನಗಳು , ಇದನ್ನು ಅಪೇಕ್ಷಿಸುವ ವ್ಯಕ್ತಿಯ ನೆಲೆಯಲ್ಲೇ ಆರಂಭವಾಗಬೇಕು ಎಂಬ ತತ್ವಶಾಸ್ತ್ರೀಯ ಚಿಂತನೆಗೆ ಓಗೊಟ್ಟಿರುವ ಡಾ. ಶಿವಪ್ಪ, ತಮ್ಮ ʼ ಅರಿವು ಭಾರತ ʼ ಸಂಸ್ಥೆಯ ಮೂಲಕ ಇದನ್ನು ಸಾಕಾರಗೊಳಿಸುತ್ತಿದ್ದಾರೆ.
ವೈಯುಕ್ತಿಕವು ರಾಜಕೀಯವಾದಾಗ ,,,
ವೈಯುಕ್ತಿಕವಾಗಿ ನನ್ನ ತವರು ಜಿಲ್ಲೆಯವರಾಗಿ, ನಾನು ವ್ಯಾಸಂಗ ಮಾಡಿದ ಕಾಲೇಜಿನಲ್ಲಿ ಬೋಧಕರಾಗಿ, ನನ್ನ ಮಡದಿಯ ತವರಿನಲ್ಲಿ (ಮುಳಬಾಗಿಲು) ಈ ಸುಧಾರಣೆಯ ಪ್ರಥಮ ಹಜ್ಜೆಯನ್ನಿರಿಸಿರುವುದು, ವ್ಯಕ್ತಿಗತ ನೆಲೆಯಲ್ಲಿ ನನಗೆ ಹೆಮ್ಮೆಯ ವಿಚಾರ. ಮುಳಬಾಗಿಲು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ, ತಮ್ಮ ಮನೆಯಲ್ಲೇ ನಡೆದ ವಾರ್ಷಿಕ ಪುಣ್ಯತಿಥಿ ಕಾರ್ಯಕ್ರಮವೊಂದರಲ್ಲಿ, ಕೆಲವು ಜನರು, ಅಸ್ಪೃಶ್ಯರಾದ ಕಾರಣಕ್ಕೆ, ಮನೆಯ ಹೊರಗೇ ಕುಳಿತಿರುವುದನ್ನು ಕಂಡ ಡಾ. ಶಿವಪ್ಪ ಅವರಲ್ಲಿ ಆ ಕ್ಷಣವೇ ಉದ್ಧೀಪನಗೊಂಡ ಪ್ರತಿರೋಧದ ಅಂತರ್ದನಿ ಇಂದು ʼ ಅರಿವು ಭಾರತ ʼ ಎಂಬ ವಿಶಾಲ ಆಲದ ಮರದಂತೆ ವ್ಯಾಪಿಸಿರುವುದು ಯಾರಿಗೇ ಆದರೂ ಹೆಮ್ಮೆಯ ವಿಚಾರ. 2014ರ ಜುಲೈ 30ರಂದು ಕಂಡುಬಂದ ಆ ಬೆಳಕಿನ ಕಿಂಡಿ ಇಂದು ಒಂದು ಚಲನಶೀಲ ಜ್ಯೋತಿಯಾಗಿ ರಾಜ್ಯಾದ್ಯಂತ ಬೆಳಕು ಚೆಲ್ಲಲು ಹೊರಟಿರುವುದು, ಹೆಮ್ಮೆಯ ವಿಚಾರವಲ್ಲವೇ ?

ʼ ಅರಿವು ಭಾರತ ʼ ಸಂಸ್ಥೆಯ ಪಯಣದ ಮಾದರಿ ಮತ್ತು ದಿಕ್ಕು ವಿಭಿನ್ನವಾಗಿ ಕಾಣುವುದು ಅದರ ಮೂಲ ಉದ್ದೇಶ ಮತ್ತು ಕಾರ್ಯಸೂಚಿಯಲ್ಲಿ. ಸಾಮಾನ್ಯವಾಗಿ ದಲಿತರನ್ನು, ಅದರಲ್ಲೂ ಅಸ್ಪೃಶ್ಯ ಸಮುದಾಯದ ಜನರನ್ನು ತಮ್ಮ ಮನೆಯೊಳಗೆ ಪ್ರವೇಶಿಸಲು ಅವಕಾಶವೀಯದ ಮೇಲ್ಜಾತಿಯವರಲ್ಲಿ ಈ ಪಿಡುಗಿನ ವಿರುದ್ಧ ದನಿ ಮೂಡಿಸುವುದಾದರೂ ಹೇಗೆ ? ಗ್ರಾಂಥಿಕ ಬೋಧನೆಯೊಂದೇ ಸಾಕಾಗುವುದಿಲ್ಲ ಎನ್ನುವುದು ಕಟುವಾಸ್ತವ. ಇಲ್ಲಿ ಡಾ. ಶಿವಪ್ಪ ಅನುಸರಿಸಿದ ಭಿನ್ನ ಮಾರ್ಗ ಎಂದರೆ, ದಲಿತರ ಮನೆಯಲ್ಲಿ ಸವರ್ಣೀಯರು ಸಹಭೋಜನ ಮಾಡುವುದಷ್ಟೇ ಅಲ್ಲದೆ, ಸವರ್ಣೀಯರ ಮನೆಯಲ್ಲಿ ದಲಿತರೊಟ್ಟಿಗೆ ಕುಳಿತು ಉಣ್ಣುವ ವಿಧಾನ. ಇಲ್ಲಿ ಆಹಾರ ಎಂದರೆ ಒಂದು ಕಪ್ ಚಹಾ ಸಹ ಆಗಬಹುದು, ಭೂರಿ ಭೋಜನವೂ ಆಗಬಹುದು. ಒಟ್ಟಿನಲ್ಲಿ ಕೂಡಿಬಾಳುವ-ಕೂಡಿ ತಿನ್ನುವ ಒಂದು ಸಂಸ್ಕೃತಿಯನ್ನು ಗುರುತಿಸಬಹುದು. ಈ ವಿಭಿನ್ನ ಮಾದರಿಯೇ ʼ ಅರಿವು ಭಾರತ ʼದ ನಡಿಗೆಯನ್ನು ವಿಶಿಷ್ಟವಾಗಿಸಿದೆ.
ಹಲವು ಆಯಾಮಗಳಲ್ಲಿ ವಿಸ್ತರಿಸಿರುವ ಈ ಸುಧಾರಣಾ ಮಾದರಿಯಲ್ಲಿ, ದಲಿತರು ಮತ್ತು ಸವರ್ಣೀಯರು ಪರಸ್ಪರ ಮನೆಯೊಳಗೆ ಪ್ರವೇಶಿಸುವ ಮತ್ತು ಚಹಾ ಸೇವಿಸುವ ಚಿಂತನೆಯೇ ಅಭೂತಪೂರ್ವ ಎನ್ನಬಹುದು. ಇದು ಮೇಲ್ಜಾತಿ ಸಮಾಜಗಳನ್ನು ಬುಡಮಟ್ಟದಿಂದಲೇ ಪರಿವರ್ತನೆಯೆಡೆಗೆ ಕೊಂಡೊಯ್ಯಬಹುದು ಎಂಬ ಭ್ರಮೆಗೊಳಗಾಗದೆ, ಇಂತಹ ಒಂದೆರಡು ಪ್ರಯತ್ನಗಳು ಪ್ರತಿ ಗ್ರಾಮದಲ್ಲೂ ನಡೆದರೆ, ಅಸ್ಪೃಶ್ಯತೆ ಎಂಬ ಒಂದು ಸಾಮಾಜಿಕ ಕಳಂಕವನ್ನು ಹೋಗಲಾಡಿಸುವ ಸಣ್ಣ ಹಣತೆಯಾಗಿ ಕಾಣುತ್ತದೆ. ಈ ಪ್ರಾಚೀನ-ಅಮಾನವೀಯ ಆಚರಣೆ ಶತಮಾನಗಳಿಂದ ಸೃಷ್ಟಿಸಿರುವ ಪ್ರತ್ಯೇಕತೆಯ-ಹೊರಗಿಡುವ ಚಿಂತನಾಧಾರೆಯನ್ನು ಮತ್ತು ನಿರ್ಮಿಸಿರುವ ʼಅನ್ಯತೆಯʼ ಗೋಡೆಗಳನ್ನು ಶಾಶ್ವತವಾಗಿ ಕೆಡವಿಹಾಕುವ ಈ ಪ್ರಯತ್ನ ಡಾ. ಶಿವಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರುತ್ತಿದೆ. ಈ ಪರಿಶ್ರಮದ ಪ್ರತಿಫಲವನ್ನು ಇಂದು ಕೋಲಾರ ಜಿಲ್ಲೆಯ 60 ಗ್ರಾಮಗಳ 150ಕ್ಕೂ ಹೆಚ್ಚು ಸವರ್ಣೀಯರ ಮನೆಗಳ ಮುಂದೆ ನೇತುಹಾಕಿರುವ “ ಇದು ಅಸ್ಪೃಶ್ಯತೆ ಮುಕ್ತ ಮನೆ ” ಎಂಬ ಫಲಕದಲ್ಲಿ ಕಾಣುತ್ತದೆ.

ದೇಶಭಾಷೆಗಳ ಗಡಿ ಮೀರಿದ ನಡಿಗೆ
ʼಅರಿವು ಭಾರತʼದ ದೀರ್ಘ ನಡಿಗೆಗೆ ಗಡಿರೇಖೆಗಳಿಲ್ಲ ಅಥವಾ ಇದರ ಮೈಲುಗಲ್ಲುಗಳನ್ನೂ ಸಂಸ್ಥಾಪಕ ಶಿವಪ್ಪ ಅಷ್ಟಾಗಿ ಸಂಭ್ರಮಿಸುವುದಿಲ್ಲ ಏಕೆಂದರೆ ಇಂದಿಗೂ ಭಾರತದ ಕೋಟ್ಯಂತರ ಮನೆಗಳಲ್ಲಿ ಇಂತಹ ಒಂದು ಫಲಕ ತೂಗಿಹಾಕುವುದು ದುಸ್ಸಾಧ್ಯ ಎಂಬ ʼ ಅರಿವು ʼ ಅವರಲ್ಲಿದೆ. ಈ ಮಿತಿಯನ್ನು ದಾಟಲು ಅನುಸರಿಸಬೇಕಾದ ಕ್ರಮಗಳು ಹಲವಾರು. ಅದರಲ್ಲಿ ಶಿವಪ್ಪ ಅವರ ಸಂಸ್ಥೆ ಕಂಡುಕೊಂಡಿರುವ ಹೆಜ್ಜೆ ಎಂದರೆ, ಶಾಲಾ ಕಾಲೇಜುಗಳನ್ನು ಸಂಪರ್ಕಿಸಿ ಅಲ್ಲಿ ವ್ಯಾಸಂಗ ಮಾಡುವ ಶಿಕ್ಷಣಾರ್ಥಿಗಳಿಗೆ “ ಭಾರತವನ್ನು ಅಸ್ಪೃಶ್ಯ ಮುಕ್ತ ಮಾಡುವ ” ಪ್ರತಿಜ್ಞಾ ವಿಧಿಯನ್ನು ಬೋಧಿಸುವುದು. ಸಹಸ್ರಾರು ಶಾಲಾಕಾಲೇಜುಗಳಲ್ಲಿ ಈ ಉದಾತ್ತ ಮಾದರಿಯನ್ನು ಅಳವಡಿಸಲಾಗಿದ್ದು ಇಂದಿಗೂ ಈ ಅರಿವಿನ ನದಿಯ ಹರಿವು ನಿಂತಿಲ್ಲ. ಭವಿಷ್ಯ ಭಾರತದ ನಿರ್ಮಾತೃಗಳಾಗಿ ರೂಪುಗೊಳ್ಳುವ ಮಿಲೆನಿಯಂ ಮಕ್ಕಳಲ್ಲಿ ಮೂಡುವ ಈ ಔದಾತ್ಯ ಭಾರತವನ್ನು ನಿಜವಾಗಿಯೂ ವಿಕಸಿತ ಮಾಡುವ ಒಂದು ಕ್ರಿಯೆ ಆಗಿದೆ.
ʼ ಅರಿವು ಭಾರತ ʼ ಸಂಸ್ಥೆಯು ಅನುಸರಿಸುತ್ತಿರುವ ಮತ್ತೊಂದು ಮಾರ್ಗ ಅಸ್ಪೃಶ್ಯರ ದೇವಾಲಯ ಪ್ರವೇಶದ ಕಾರ್ಯಕ್ರಮಗಳು. ಡಾ. ಅಂಬೇಡ್ಕರ್ ಅವರು ಚಾಲನೆ ನೀಡಿದ ಈ ಕ್ರಾಂತಿಕಾರಿ ನಡೆಗೆ ಸಾಂಸ್ಥಿಕ ಸ್ವರೂಪ ನೀಡುವ ಮೂಲಕ ಡಾ. ಶಿವಪ್ಪ ಸರ್ಕಾರದ ನಿಯಂತ್ರಣದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶದ ಹಕ್ಕು ನೀಡುವ ನಿಟ್ಟಿನಲ್ಲಿ ನೂರಾರು ಗ್ರಾಮಗಳನ್ನು ಸಂಚರಿಸಿದ್ದಾರೆ. ಇಂದು ಈ ಗ್ರಾಮಗಳಲ್ಲಿ ದೇವಸ್ಥಾನಗಳ ಹೊರಗೆ “ ಈ ದೇವಾಲಯಕ್ಕೆ ಜಾತಿ ಧರ್ಮ ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ”ಎಂಬ ಫಲಕಗಳು ಕಾಣುತ್ತಿದ್ದರೆ ಅದರ ಹಿಂದೆ ʼ ಅರಿವು ಭಾರತ ʼದ ಹೆಜ್ಜೆ ಗುರುತುಗಳು ಇರುತ್ತದೆ. ದೇವಸ್ಥಾನಕ್ಕೆ ಹೋಗುವುದು, ದೈವಭಕ್ತಿಯನ್ನು ತೋರುವುದು ವ್ಯಕ್ತಿಗತವಾದರೂ, ಈ ಪ್ರವೇಶದ ಹಕ್ಕನ್ನು ಅಸ್ಪೃಶ್ಯ ಸಮಾಜದಿಂದ ಕಸಿದುಕೊಂಡಿದ್ದ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಈ ʼ ಪ್ರವೇಶ ʼ ದ ಪ್ರಕ್ರಿಯೆಯೇ ಸೆಡ್ಡುಹೊಡೆದಂತಾಗುತ್ತದೆ. ಅಂಬೇಡ್ಕರ್ ಅವರ ಹೋರಾಟವೂ ಈ ಹಕ್ಕು ಪ್ರತಿಪಾದನೆಯ ದೃಷ್ಟಿಯಿಂದಲೇ ನಡೆದಿದ್ದನ್ನು ಸ್ಮರಿಸಬಹುದು.
ಈ ವಿಭಿನ್ನ ಹಾದಿಯಲ್ಲಿ ಸಮಾಜ ಸುಧಾರಣೆಯ ಗುರಿಯಿಟ್ಟುಕೊಂಡು, ಶತಮಾನಗಳ ಸಾಮಾಜಿಕ ವ್ಯಾಧಿ, ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಶಿವಪ್ಪ ಅವರ ʼ ಅರಿವು ಭಾರತ ʼ ಗ್ರಾಮಗಳಲ್ಲಿ ಸಾರ್ವಜನಿಕ ಕೆರೆಗಳ ನೀರಿನ ಬಳಕೆಯನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನಗಳಲ್ಲೂ ಯಶಸ್ವಿಯಾಗಿದೆ. ಮತ್ತೊಂದು ಆಯಾಮದಲ್ಲಿ ಭಾರತದ ಸಾಂಪ್ರದಾಯಿಕ ಸಮಾಜ ತನ್ನ ಮಡಿ-ಮೈಲಿಗೆಯ ಪರಿಕಲ್ಪನೆಯ ಚೌಕಟ್ಟಿನೊಳಗೆ, ಗಂಡನನ್ನು ಕಳೆದುಕೊಂಡ ಮಹಿಳೆಯನ್ನೂ ಅಪವಿತ್ರ ಎಂದು ಭಾವಿಸುವ ಮನೋಭಾವವನ್ನು ಹೋಗಲಾಡಿಸುವ ಪ್ರಯತ್ನಗಳಿಗೂ ಅರಿವು ಭಾರತ ಮುಂದಾಗಿದೆ. ವಿಧವೆಯರಿಗೆ ಮರುಮದುವೆಯಾಗುವ ಅವಕಾಶ ಕಲ್ಪಿಸಲು ಒಂದು ವೇದಿಕೆಯನ್ನೇ ಸೃಷ್ಟಿಸಲಾಗಿದ್ದು, ಹಲವು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರ ಫಲ, ನೂರಾರು ಪರಿತ್ಯಕ್ತ ಮಹಿಳೆಯರು ಮತ್ತೊಮ್ಮೆ ವಿವಾಹಿತರಾಗಿ ಸುಖಜೀವನ ಸಾಗಿಸುತ್ತಿದ್ದಾರೆ.
ಹೆಗಲು ನೀಡಿದ ನೂರಾರು ಕೈಗಳೊಂದಿಗೆ
ಯಾವುದೇ ಸಮಾಜ ಸುಧಾರಣೆಯ ಹೆಜ್ಜೆಗಳನ್ನು ಗುರುತಿಸುವಾಗ ಅಂಕಿ ಸಂಖ್ಯೆಗಳನ್ನು ನೋಡುವುದು ಬೇಕಿಲ್ಲ. ಈ ಹೆಜ್ಜೆಗಳ ದೀರ್ಘ ಪಯಣದಲ್ಲಿ ಸಮಾಜದಲ್ಲಿ ಹೊಸ ಅರಿವು ಎಷ್ಟರಮಟ್ಟಿಗೆ ಮೂಡಿದೆ ಎನ್ನುವುದು ಮುಖ್ಯವಾಗುತ್ತದೆ. ಸನಾತನ ಧರ್ಮದ ಮೌಲ್ಯಗಳು ಇಂದಿಗೂ ನಿರ್ದೇಶಿಸುವ ಜಾತಿ ವ್ಯವಸ್ಥೆಯ ಮೂಲ ಸ್ವರೂಪವನ್ನು ಬದಲಿಸಲು ಇಂತಹ ಸಹಸ್ರಾರು ಹೆಜ್ಜೆಗಳು, ಕೋಟ್ಯಂತರ ಹೆಗಲುಗಳೊಂದಿಗೆ ನೊಗ ಹೊತ್ತು ಸಾಗಬೇಕಿದೆ. ಇಲ್ಲಿ ಎದುರಾಗುವ ತೊಡಕುಗಳು ಜಾತಿವ್ಯವಸ್ಥೆಯಷ್ಟೇ ವೈವಿಧ್ಯಮಯ. ಎಲ್ಲ ಗ್ರಾಮಗಳೂ ಈ ಹೆಜ್ಜೆಗಳಿಗೆ ಊರುವ ಅವಕಾಶ ನೀಡುವುದಿಲ್ಲ ಅಥವಾ ಅದರೊಳಗಿನ ಒಂದು ಸಮಾಜ/ಸಮುದಾಯದ ಆರ್ಥಿಕ ಪ್ರಾಬಲ್ಯ, ಸಾಮಾಜಿಕ ಅಂತಸ್ತು ಮತ್ತು ಸಾಂಸ್ಕೃತಿಕ ವಾರಸುದಾರಿಗೆ ಅಡ್ಡಗೋಡೆಗಳಾಗಿ ಪರಿಣಮಿಸುತ್ತವೆ. ʼ ಅರಿವು ಭಾರತ ʼ ಡಾ. ಶಿವಪ್ಪ ಅವರ ಮುಂದಾಳತ್ವದಲ್ಲಿ ಈ ಗೋಡೆಗಳನ್ನು ದಾಟಿ ಮುನ್ನಡೆದಿರುವುದು ಹರ್ಷದಾಯಕ ವಿಚಾರ.

ಕೋಲಾರ ಜಿಲ್ಲೆ ಕರ್ನಾಟಕದ ದಲಿತ ಚಳುವಳಿಯ ಉಗಮ ಸ್ಥಾನಗಳಲ್ಲೊಂದು. ಹಾಗೆಯೇ ಊಳಿಗಮಾನ್ಯ ಯಜಮಾನಿಕೆ, ಜಾತಿ ಶ್ರೇಣಿಯ ಪಾರಮ್ಯ ಹಾಗೂ ಇದರಿಂದ ಉಗಮಿಸುವ ದೌರ್ಜನ್ಯ-ತಾರತಮ್ಯಗಳಿಗೂ ತವರು ಜಿಲ್ಲೆ ಇದು. ಇಂತಹ ಒಂದು ಜಿಲ್ಲೆಯಲ್ಲಿ ತಮ್ಮ ಪ್ರಥಮ ಹೆಜ್ಜೆ ಇರಿಸುವ ಮೂಲಕ ಡಾ. ಶಿವಪ್ಪ , ಸಮಾಜ ಸುಧಾರಣೆಯ ಒಂದು ಮಾದರಿಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಅವರೇ ಒಂದೆಡೆ ಹೇಳುವಂತೆ, ಈ ನಡಿಗೆಗೆ ಸಹಸ್ರಾರು ಜನರು ಕೈಜೋಡಿಸಬೇಕಿದೆ. ʼ ಅರಿವು ಭಾರತʼದ ಪಯಣದಲ್ಲಿ ಕಾಣಬಹುದಾದ ಒಂದು ಗುಣಾತ್ಮಕ ಅಂಶ ಎಂದರೆ, ಈ ರೀತಿ ಜೋಡಿಸುವ ಕೈಗಳು ನೂರಾರು ಸಂಖ್ಯೆಯಲ್ಲಿ ಸ್ವಪ್ರೇರಣೆಯಿಂದ ಮುಂದೆ ಬಂದಿರುವುದು. ಚಿಂತಕರು, ಸಾಹಿತಿಗಳು, ಕಲಾವಿದರು, ದಲಿತ ಚಳುವಳಿಯ ಸಂಗಾತಿಗಳು, ಎಡ-ಬಲ ಪಂಥೀಯರು, ಗ್ರಾಮಗಳ ಹಿರೀಕರು ಹೀಗೆ ವೈವಿಧ್ಯಮಯ ಚಿಂತನಾಧಾರೆಗಳನ್ನು ಪ್ರತಿನಿಧಿಸುವ ಒಂದು ಸಮಾಜ ಈ ಅಭಿಯಾನದ ಭಾಗವಾಗಿದೆ.
ಭವಿತವ್ಯದ ಬೆಳಕಾಗಿ,,,,,,,
ಇತ್ತೀಚೆಗೆ ʼ ಅರಿವು ಭಾರತ ʼ ತನ್ನ ಹತ್ತು ವರ್ಷಗಳ ಪಯಣದ ನೆನಪಿನಲ್ಲಿ ಹೊರತಂದಿರುವ “ ಒಳ-ಹೊರಗು -ಅಸ್ಪೃಶ್ಯತೆಯ ಸುಧಾರಣೆಯ ಹೆಜ್ಜೆಗಳು ” ಎಂಬ ಗ್ರಂಥ ಸಚಿತ್ರ ದರ್ಶನವನ್ನು ನೀಡುವಂತಿದ್ದು, ಡಾ.ಶಿವಪ್ಪ ಮತ್ತು ಅವರೊಡನೆ ನಿರಂತರವಾಗಿ ಕೈಜೋಡಿಸುತ್ತಿರುವ 30 ಜನರ ಒಂದು ತಂಡದ ಪರಿಚಯವನ್ನೂ ಮಾಡಿಕೊಡುತ್ತದೆ. ಈ ಕೃತಿಯಲ್ಲಿರುವ ವಿದ್ವತ್‌ಪೂರ್ಣ ಲೇಖನಗಳು ಚಾರಿತ್ರಿಕವಾಗಿ-ಸಮಕಾಲೀನವಾಗಿ ಅಸ್ಪೃಶ್ಯತೆಯ ವಿಭಿನ್ನ ಆಯಾಮಗಳನ್ನು ಚರ್ಚಿಸುತ್ತವೆ. ನಾಡಿನ ಹಲವಾರು ಚಿಂತಕರು ಇದಕ್ಕೆ ಅಕ್ಷರ ಕೊಡುಗೆ ನೀಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ʼಅರಿವು ಭಾರತʼದ ಅಸ್ಪೃಶ್ಯತಾ ನಿವಾರಣೆಯ ಸುಧಾರಕ ಹೆಜ್ಜೆಗಳು ನಿರರ್ಥಕವಾಗಿಲ್ಲ/ಆಗುತ್ತಿಲ್ಲ/ಆಗುವುದೂ ಇಲ್ಲ ಎಂಬ ಒಂದು ಭರವಸೆಯ ಬೆಳಕನ್ನು ಈ ಗ್ರಂಥ ಹೊರಸೂಸುತ್ತದೆ.
ಈ ಗ್ರಾಂಥಿಕ ಆಕರಗಳನ್ನು ದಾಟಿ, ತೆರೆದ ಕಣ್ಣುಗಳಿಂದ, ಮುಕ್ತ ಹೃದಯದ ಮುಖಾಂತರ ʼ ಅರಿವು ಭಾರತ ʼ ಸಾಗುತ್ತಿರುವ ಹಾದಿಯನ್ನು ಗಮನಿಸಿದಾಗ, ಸಮಾಜ ಸುಧಾರಣೆ ಅಥವಾ ಅಸ್ಪೃಶ್ಯತೆಯಂತಹ ಸಾಮಾಜಿಕ ವ್ಯಾಧಿಯನ್ನು ಗುಣಪಡಿಸುವ ಮನಸ್ಸಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ, ಒಂದು ಹೋರಾಟದ ಮಾದರಿ ಕಾಣಸಿಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಇದು ವ್ಯಾಪಿಸಬೇಕು ಎಂಬ ಡಾ ಶಿವಪ್ಪ ಅವರ ಆಶಯಕ್ಕೆ ಸ್ಪಂದಿಸುವುದು, ʼ ಅರಿವು ಭಾರತ ʼವನ್ನು ಈವರೆಗೂ ಸ್ಪರ್ಶಿಸದ ಇನ್ನಿತರ ಗ್ರಾಮಗಳ ಮತ್ತು ಈ ಗ್ರಾಮಗಳಲ್ಲಿ ಸುಧಾರಣೆ-ಬದಲಾವಣೆ-ಕ್ರಾಂತಿಗಾಗಿ ಹಂಬಲಿಸಿ ಅಹರ್ನಿಶಿ ಹೋರಾಡುತ್ತಿರುವ ʼ ಪ್ರಗತಿಪರ ʼ ಸಂಘಟನೆಗಳ ನೈತಿಕ ಜವಾಬ್ದಾರಿ. ಸಂವಿಧಾನದ ಅರಿವು ಮೂಡಿಸುವ ಬೃಹತ್ ಅಭಿಯಾನದೊಂದಿಗೆ ʼ ಅರಿವು ಭಾರತ ʼ ಸುಧಾರಕ ಹೆಜ್ಜೆಗಳೂ ಬೆರೆಯುವುದಾದರೆ, ಬಹುಶಃ ನಮ್ಮ ಸಮಾಜದಲ್ಲಿ ಬೇರೂರಿರುವ, ರೂಪಾಂತರಗೊಂಡು ಗಟ್ಟಿಯಾಗುತ್ತಿರುವ, ಸಾಮಾಜಿಕ ತರತಮಗಳನ್ನು ನಿವಾರಿಸಲು ಸಾಧ್ಯವಾಗಬಹುದು.
ಈ ಅಭೀಪ್ಸೆಯೊಂದಿಗೇ ಡಾ. ಶಿವಪ್ಪ ಮತ್ತು ಅವರ ʼಅರಿವು ಭಾರತ ʼ ತಂಡದ ಸಮಸ್ತ ಗೆಳೆಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಮಾಜ ಸುಧಾರಣೆ ಏಕಾಂಗಿ ಹೋರಾಟವಲ್ಲ, ಅದು ಸಾಮೂಹಿಕ ಜವಾಬ್ದಾರಿ ಎಂಬ ಪಾರಂಪರಿಕ ಔದಾತ್ಯವನ್ನು ಗಮನದಲ್ಲಿಟ್ಟುಕೊಂಡು, ʼಅರಿವು ಭಾರತ ʼ ನಿಜಾರ್ಥದಲ್ಲಿ ಭಾರತವನ್ನು ವ್ಯಾಪಿಸುವ ಹಾರೈಕೆಯೊಂದಿಗೆ ಈ ಬರಹಕ್ಕೆ ವಿರಾಮ ನೀಡುತ್ತೇನೆ.
-೦-೦-೦-೦-೦-