ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಕುರಿತಂತೆ ಉತ್ತರಾಖಂಡ್ ಸರ್ಕಾರ ಮತ್ತು ಧಾರ್ಮಿಕ ನೇತಾರರ ನಡುವೆ ಚರ್ಚೆ ನಡೆದಿದ್ದು, ಚರ್ಚೆಯ ಬಳಿಕ, ಇದೀಗ ಕುಂಭಮೇಳವನ್ನು ಅಂತ್ಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಕೋವಿಡ್ ಎರಡನೇ ಅಲೆ ವಿಪರೀತವಾಗುತ್ತಿದ್ದರೂ ಕುಂಭಮೇಳದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ, ಯಾವುದೇ ಕೋವಿಡ್ ನಿಯಮಾವಳಿಗಳನ್ನು ಪಾಲಿಸದೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಕೊಳ್ಳುತ್ತಿದ್ದಾರೆ. ಗಂಗಾನದಿಯ ತೀರದಲ್ಲಿ ಪವಿತ್ರ ಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಏರಿಕೆಯ ಆತಂಕ ಮೂಡಿಸಿದ್ದು, ರಾಷ್ಟ್ರಾದ್ಯಂತ ಟೀಕೆಗಳಿಗೂ ಕಾರಣವಾಗಿದೆ.
ದೇಶದಾದ್ಯಂತ ದಿನವೊಂದಕ್ಕೆ 1.80 ಲಕ್ಷದಷ್ಟು ಕರೋನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಕುಂಭಮೇಳದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರಿದ್ದು, ಸಾಮಾಜಿಕ ಅಂತರ ಪರಿಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಂಭಮೇಳ ನಡೆಸಲು ಸರ್ಕಾರ ಅನುವು ಮಾಡಿಕೊಟ್ಟಿರುವುದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಕುಂಭಮೇಳ ನಡೆಯುತ್ತಿರುವ ಹರಿದ್ವಾರದಲ್ಲಿ ಒಂದೇ ದಿನ ಸಾವಿರಾರು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿಲುವು ತಳೆದಿದೆ ಎನ್ನಲಾಗಿದೆ.
ಆದರೆ, ಕುಂಭಮೇಳದಲ್ಲಿ ಗಂಗಾ ದೇವಿಯ ಆಶಿರ್ವಾದ ಇರುವುದರಿಂದ ಭಕ್ತಾದಿಗಳಿಗೆ ಸೋಂಕಿನ ಭಯ ಬಾಧಿಸುವುದಿಲ್ಲ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಕುಂಭಮೇಳವನ್ನು ಸಮರ್ಥಿಸಿಕೊಂಡಿದ್ದರು. ಕೋವಿಡ್ ಮಾರ್ಗಸೂಚಿಗಳನ್ನು ಹರಿದ್ವಾರದಲ್ಲಿ ಪಾಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಅದಾಗ್ಯೂ, ಅಧಿಕಾರಿಗಳು ಕುಂಭಮೇಳದಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಯತ್ನಕ್ಕೆ ಮುಂದಾದರೆ ಕಾಲ್ತುಳಿತಕ್ಕೊಳಗಾಗಿ ಭೀಕರ ಅವಗಢ ಸಂಭವಿಸುವ ಸಾಧ್ಯತೆಯಿದೆಯೆಂದು ಎಚ್ಚರಿಸಿದ್ದಾರೆ.
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಸಾಮಾನ್ಯವಾಗಿ 4 ತಿಂಗಳುಗಳ ಕಾಲ ನಡೆಯುತ್ತಿದ್ದವು. ಈ ಬಾರಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಅವಧಿಯನ್ನು ಒಂದು ತಿಂಗಳಿಗೆ ಸೀಮಿತಗೊಳಿಸಲಾಗಿತ್ತು. ಅದಾಗ್ಯೂ, ಕರೋನಾ ಸೋಂಕಿನ ವಿಪರೀತ ಹೆಚ್ಚಳದಿಂದಾಗಿ ಅದನ್ನು ಎರಡು ವಾರಗಳಿಗೆ ಇಳಿಸಲಾಗುತ್ತಿದೆ ಎನ್ನಲಾಗಿದೆ. ಕುಂಭಮೇಳವನ್ನು ನಿಲ್ಲಿಸುವ ಕುರಿತು ಇದುವರೆಗೂ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.