ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಲು ಮೊದಲಿನಿಂದಲೂ ಪ್ರಯತ್ನಿಸುತ್ತಿರುವ ಬಿ.ಎಲ್. ಸಂತೋಷ್ ಬಣ ಈಗ ಇನ್ನಷ್ಟು ಸಕ್ರಿಯವಾಗಿದೆ. ನಡುವೆ ಸಚಿವ ಸಂಪುಟದ ಪುನರ್ರಚನೆ ಆಗಬೇಕು, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಅಸಮರ್ಥ. ಆದುದರಿಂದ ಅಧ್ಯಕ್ಷ ಸ್ಥಾನವನ್ನು ಬದಲಿಸಬೇಕು ಎಂಬ ಕೂಗೆದ್ದಿವೆ. ಕರೋನಾದಂತಹ ಕಷ್ಟಕಾಲದಲ್ಲೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿತನಗಳು ಮಿತಿ ಮೀರಿರುವುದರ ಜೊತೆಗೆ ಪಕ್ಷದಲ್ಲಿ ಆಂತರಿಕ ಕಚ್ಚಾಟವೂ ಅತಿರೇಕಗೊಂಡಿದೆ. ಈ ಎಲ್ಲಾ ಬಿಕ್ಕಟ್ಟುಗಳನ್ನು ಬಗೆಹರಿಸುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. ಆದರೆ ಅವರು ನಿರ್ವಹಿಸುತ್ತಿರುವುದು ‘ಜೋಕರ್’ ಪಾತ್ರವನ್ನು.
ಅರುಣ್ ಸಿಂಗ್ ಜೋಕಾರ್ ಪಾತ್ರದ ಅಪರಾವತಾರಿ ಎಂಬುದನ್ನು ಈ ಹಿಂದೆಯೇ ನಿರೂಪಿಸಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಹಾಗೂ ಹಸ್ತಕ್ಷೇಪದ ಬಗ್ಗೆ ಕಟು ಶಬ್ದಗಳಿಂದ ಟೀಕೆ ಮಾಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಹಳ ಹಿಂದೆಯೇ ನೊಟೀಸ್ ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು. ನೊಟೀಸ್ ಪ್ರತಿ ಈವರೆಗೆ ಯಾವ ಮಾಧ್ಯಮ ಪ್ರತಿನಿಧಿ ಕೈಗೂ ಸಿಕ್ಕಿಲ್ಲ. ಯಡಿಯೂರಪ್ಪ ಅವರಿಗೂ ತಲುಪಿಲ್ಲ. ಒಂದೊಮ್ಮೆ ಅವರಿಗೆ ಸಿಕ್ಕಿದ್ದರೂ ಅದನ್ನು ಮಾಧ್ಯಮದವರಿಗೆ ತಲುಪಿಸುವ ವ್ಯವಸ್ಥೆ ಆಗುತ್ತಿತ್ತು. ಈ ಮೂಲಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೊಟೀಸ್ ನೀಡಿರುವುದೇ ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅರುಣ್ ಸಿಂಗ್ ‘ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೊಟೀಸ್ ನೀಡಲಾಗಿದೆ. ಅವರು ಏನೇ ಸಮಸ್ಯೆ ಇದ್ದರು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು, ಇಲ್ಲದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು. ಇದಾದ ಮೇಲೆ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಜೊತೆಗೆ ಅರುಣ್ ಸಿಂಗ್ ಮೇಲೂ ಆರೋಪ ಮಾಡಲು ಆರಂಭಿಸಿದರು. ‘ಸೂಟ್ ಕೇಸ್ ಗಿರಾಕಿ’ ಮತ್ತು ‘ಯಡಿಯೂರಪ್ಪ ಪಕ್ಷಪಾತಿ’ ಎಂದು ಹೇಳಿದರು. ಆಗಲೇ ಈ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಕಿಮ್ಮತ್ತು ಏನು ಎನ್ನವುದು ಅರ್ಥವಾಗಿತ್ತು.
ಈಗ, ರಾಜ್ಯ ಬಿಜೆಪಿಯ ಹತ್ತು-ಹಲವು ಸಮಸ್ಯೆಗಳನ್ನು ಮೂರು ದಿನ ಎಲ್ಲರೊಂದಿಗೆ ಸಭೆ ಮಾಡಿ ಬಗೆಹರಿಸುತ್ತೇನೆ ಬಂದಿದ್ದಾರೆ ಅರುಣ್ ಸಿಂಗ್. ವಾರಕ್ಕೂ ಮೊದಲೇ ಜೂನ್ 16, 17 ಮತ್ತು 18ರಂದು ಅವರ ರಾಜ್ಯ ಪ್ರವಾಸ ಎಂದು ನಿಗದಿಯಾಗಿತ್ತು. ಆದರೂ ಶಾಸಕ ಅರವಿಂದ ಬೆಲ್ಲದ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ‘ಹೇಗೂ ಕರ್ನಾಟಕಕ್ಕೆ ಬರುತಿದ್ದೇನೆ, ಅಲ್ಲೇ ಭೇಟಿಯಾಗಿ ಚರ್ಚೆ ಮಾಡೋಣ’ ಎಂದು ಹೇಳಿ ಭೇಟಿ ನಿರಾಕರಿಸಬಹುದಿತ್ತು. ಯಡಿಯೂರಪ್ಪ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವವನೊಂದಿಗೆ ಭೇಟಿ ಮಾಡಿದರೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರಬೇಕಿತ್ತು. ಅಥವಾ ಬಿ.ಎಲ್. ಸಂತೋಷ್ ಹೇಳಿದರೂ ಎನ್ನುವ ಕಾರಣಕ್ಕೆ ಭೇಟಿ ಮಾಡಿರಬಹುದು. ಇದು ರಾಜ್ಯಕ್ಕೆ ಬರುವ ಮೊದಲೇ ಆದ ಯಡವಟ್ಟು…
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅರುಣ್ ಸಿಂಗ್ ನೇರವಾಗಿ ಬಿಜೆಪಿ ಕಚೇರಿಗೆ ಬಂದು ಸಚಿವರೊಂದಿಗೆ ಸಭೆ ಮಾಡಿದರು. ಸಭೆಯಲ್ಲಿ ‘ಕರೋನಾ ನಿರ್ವಹಣೆ ಬಗ್ಗೆ ಚರ್ಚೆ ಮಾಡಿದರಂತೆ’. ಕರೋನಾ ನಿರ್ವಹಣೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟು ಗಂಭೀರವಾಗಿವೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅರುಣ್ ಸಿಂಗ್ ‘ಕರೋನಾ ಎಕ್ಸಫರ್ಟ್’ ಎಂಬುದೂ ಗೊತ್ತಿದೆ. ಅರುಣ್ ಸಿಂಗ್ ಕರೋನಾ ಬಗ್ಗೆ ಬೈಟ್ ಕೊಡುತ್ತಿದ್ದಾಗಲೇ ಮಾಧ್ಯಮ ಪ್ರತಿನಿಧಿಗಳು ಮುಸಿಮುಸಿ ನಗುತ್ತಿದ್ದರು.
ಎರಡನೇ ದಿನ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ‘ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ಸರ್ಕಾರದಲ್ಲಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಯಿತು, ಪಂಚಮಸಾಲಿ ಲಿಂಗಾಯತರ ಪೈಕಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಿ ಎಂಬುದಾಗಿ ಅರುಣ್ ಸಿಂಗ್ ಅವರಿಗೆ ತಿಳಿಸಿದ್ದೇನೆ’ ಎಂದು ಮಾಧ್ಯಮಗಳಿಗೆ ಬಹಳ ಸ್ಪಷ್ಟವಾಗಿ ಹೇಳಿದರು. ಇನ್ನೂ ಅನೇಕರು ಯಡಿಯೂರಪ್ಪ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಶಾಸಕರ ಸಭೆ ಬಳಿಕ ಮಾತನಾಡಿದ ಅರುಣ್ ಸಿಂಗ್ ‘ಯಾವೊಬ್ಬ ಶಾಸಕರು ಯಡಿಯೂರಪ್ಪ ಬದಲಿಸುವ ವಿಷಯ ಪ್ರಸ್ತಾಪಿಸಲಿಲ್ಲ’ ಎಂದು ಹೇಳಿದ್ದಾರೆ. ಜನ ನಗುವುದಿಲ್ಲವೇ?
‘ರಿಯಲ್ ರೆಬೆಲ್’ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಭೇಟಿ ಮಾಡಲು ಸಮಾಯವಕಾಶ ಕೊಟ್ಟರು. ಆದರೆ ಕೆಲವೇ ನಿಮಿಷಗಳಲ್ಲಿ ಸಮಯಾವಕಾಶ ರದ್ದು ಮಾಡಿದರು. ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಹಾಗೂ ಹಸ್ತಕ್ಷೇಪದ ಬಗ್ಗೆ ಗುರುತರವಾದ ಆರೋಪ ಮಾಡಿದ್ದ ಯತ್ನಾಳ್ ಜೊತೆ ಮಾತನಾಡಬೇಕಿತ್ತು. ಕಡೆಪಕ್ಷ ತಮ್ಮನ್ನು ‘ಸೂಟ್ ಕೇಸ್ ಗಿರಾಕಿ’ ಮತ್ತು ‘ಯಡಿಯೂರಪ್ಪ ಪಕ್ಷಪಾತಿ’ ಎಂದು ಜರಿದಿದ್ದ ಕಾರಣಕ್ಕಾದರೂ ಮಾತನಾಡಬೇಕಿತ್ತು. ನಾಲ್ಕು ಗೋಡೆ ಮಧ್ಯೆ ಏನು ಹೇಳುತ್ತಾರೆ ಎಂದು ಕೇಳಬೇಕಿತ್ತು. ಹಾಗೆ ಮಾಡದೆ ‘ಅವರ ಜೊತೆ ಮಾತನಾಡಲು ಹೆದರಿಕೆ ಇರಬಹುದು’ ಎಂಬ ಅನುಮಾನವನ್ನು ಅವರೇ ಹುಟ್ಟುಹಾಕಿದರು. ಹೋಗಲಿ, ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗಾದರೂ ಸರಿಯಾದ ಉತ್ತರ ನೀಡಬೇಕಿತ್ತು. ‘ಕ್ರಮ ಕೈಗೊಳ್ಳಲಾಗಿದೆ’ ಎಂದಷ್ಟೇ ಹೇಳಿದರು. ‘ಏನು ಕ್ರಮ ಎಂಬ ಉಪ ಪ್ರಶ್ನೆಗೆ ಅವರ ಬಳಿ ಉತ್ತರವೇ ಇರಲಿಲ್ಲ, ‘ಅವರನ್ನೇ ಕೇಳಿ’ ಎಂದು ಜಾರಿಕೊಂಡರು.
ಮತ್ತೊಂದು ತಮಾಷೆ ಇದೆ. ಶಾಸಕರು, ಸಚಿವರು ಯಡಿಯೂರಪ್ಪ ಪರ-ವಿರೋಧವಾಗಿ ಮಾಧ್ಯಮಗಳ ಮುಂದೆ ಮಾತನಾಡಬಾರದು. ಏನೇ ವಿಷಯ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ತಾಖೀತು ಮಾಡಿದರು. ಆದರೆ ಹೆಚ್. ವಿಶ್ವನಾಥ್, ಅರವಿಂದ ಬೆಲ್ಲದ, ರೇಣುಕಾಚಾರ್ಯ, ತಿಪ್ಪಾರೆಡ್ಡಿ ಸೇರಿ ಹಲವರು ಮಾತನಾಡಿದ್ದಾರೆ. ಮತ್ತೆ ಅರುಣ್ ಸಿಂಗ್ ಮಾತಿಗೆಷ್ಟು ಕಿಮ್ಮತ್ತು ಅಂತಾ ಗೊತ್ತಾಗುವಂತಾಯಿತು.
ಕಡೆಗೆ, ಅರುಣ್ ಸಿಂಗ್ ಅವರು ಯಡಿಯೂರಪ್ಪ ಬಗ್ಗೆ ಮೃಧು ಧೋರಣೆ ಹೊಂದಿದ್ದಾರೆ. ವಿಜಯೇಂದ್ರನಿಂದ ಸೂಟ್ ಕೇಸ್ ಸಂದಾಯವಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತವೆ. ಸದ್ಯ ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಹುಟ್ಟುಕೊಂಡಿರುವ ಸಮಸ್ಯೆ ಬಗೆಹರಿಸಲೆಂದು ಬೆಂಗಳೂರಿಗೆ ಬಂದಿದ್ದಾರೆ. ಆದುದರಿಂದ ವಿಜಯೇಂದ್ರ ಜೊತೆ ಅಂತರ ಕಾಯ್ದುಕೊಳ್ಳಬಹುದಿತ್ತು. ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರ ಜೊತೆಗೆ ಮಾತ್ರ ಭೇಟಿ ಎಂದು ಇದ್ದಾಗ ವಿಜಯೇಂದ್ರ ಭೇಟಿಗೆ ಅವಕಾಶ ಕೊಡಬಾರದಿತ್ತು. ಇಂಥ ನಡೆಗಳಿಂದಾಗಿಯೇ ಅರುಣ್ ಸಿಂಗ್ ‘ಜೋಕರ್’ ಎನಿಸಿಕೊಳ್ಳುತ್ತಿರುವುದು. ಅಂದಹಾಗೆ ಅವರ ಬಗ್ಗೆ ‘ಜೋಕರ್’ ಎಂದು ಮಾತನಾಡಿಕೊಳ್ಳುತ್ತಿರುವುದು ಬಿಜೆಪಿಯ ನಾಯಕರೇ ಹೊರತು ಬೇರೆಯವರಲ್ಲ.