
ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಬಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ನೆರೆದಿದ್ದ 35 ಸಾವಿರ ಜನರ ಸಮ್ಮುಖದಲ್ಲಿ ‘ಕುಣಿಗಲ್ ಉತ್ಸವ’ದ ಕೊನೇ ದಿನದ ಕಾರ್ಯಕ್ರಮ ನಡೆಯಿತು. ಸಿನಿಮಾ ಸೆಟ್ ವೈಭವವನ್ನೇ ಮೀರಿಸುವಂತೆ ಹಾಕಲಾಗಿದ್ದ ಬೃಹತ್ ಸೆಟ್ ನಲ್ಲಿ ಶಾಸಕ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು.

3 ದಿನಗಳ ಕಾಲ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭ ಕಿಚ್ಚ ಸುದೀಪ್, ಹಿರಿಯನಟಿ ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ಚಲನಚಿತ್ರ ನಿರ್ಮಾಪಕ ಸಂಜಯಗೌಡ್ರು ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು.
ಕೊರೆವ ಛಳಿಯನ್ನೂ ಲೆಕ್ಕಿಸದೆ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಎಂಜಾಯ್ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಶ್ರೀ ಡಿ.ಕೆ. ಸುರೇಶ್ ನೆರೆದಿದ್ದ ಜನಸಾಗರ, ತಮ್ನ ಶಾಸಕ ರಂಗನಾಥ್ ಮೇಲೆ ಅವರಿಟ್ಟಿದ್ದ ವಿಶ್ವಾಸವನ್ನು ಕಂಡು ಮೂಕವಿಸ್ಮಿತರಾದರು.

ಈ ವೇದಿಕೆಯಲ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಮಾತನಾಡುತ್ತ ನಿಮ್ಮನ್ನೆಲ್ಲ ಕಂಡು ಬಹಳ ಸಂತೋಷವಾಯಿತು. ಇದು ಕುಣಿಗಲ್ ಜನರ ಹಬ್ಬ, ಅವರ ಉತ್ಸವ, ಮನುಷ್ಯ ನಾಲ್ಕು ಋಣಗಳನ್ನು ಇಟ್ಟುಕೊಂಡು ಹುಟ್ಟುತ್ತಾನೆ. ಅದು ತಂದೆ ತಾಯಿ ಋಣ, ಗುರುಗಳ ಋಣ, ದೇವರ ಋಣ ಹಾಗೂ ಸಮಾಜದ ಋಣ. ನಾವು ಈಗಾಗಲೇ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಸಮಾಜದ ಋಣವನ್ನು ತೀರಿಸಿದ್ದೇವೆ. ನಿನ್ನೆ ವಿಜೃಂಭಣೆಯಿಂದ ಶ್ರೀನಿವಾಸನ ಕಲ್ಯಾಣೋತ್ಸವ ನಡೆದಿದೆ. ನಾಳೆ 70 ಸಾವಿರ ಲಾಡು ಕುಣಿಗಲ್ ನ ಎಲ್ಲರ ಮನೆಗೆ ತಲುಪುತ್ತದೆ ಎಂದು ಹೇಳಿದರು.

ಶಾಸಕ ರಂಗನಾಥ್ ಮಾತನಾಡಿ ಕುಣಿಗಲ್ ಉತ್ಸವ ಯಶಸ್ವಿಯಾಗಿ ನಡೆದಿದೆ. ಇವತ್ತು ನಾವು 10 ಸಾವಿರ ಜನರನ್ನು ನಿರೀಕ್ಷಿಸಿದ್ದೆವು. ಆದರೆ 35 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಜನರು ನಮ್ಮ ಕುಣಿಗಲ್ ಉತ್ಸವವನ್ನು ದಾಖಲೆಯ ಪುಟಕ್ಕೆ ಸೇರಿಸಿದ್ದಾರೆ ಎಂದು ಹೇಳುತ್ತ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಲ್.ಆರ್. ಶಿವರಾಮೇಗೌಡ್ರು, ಉದಯ್, ಇಕ್ಬಾಲ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.






