ಬೆಳಗಾವಿ:ಹೆಣ್ಣುಮಕ್ಕಳು ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿಯಲ್ಲಿ ಕೆಚ್ಛೆದೆಯಿಂದ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ (Kittur Rani Channamma) ಭಾರತೀಯ ಮಹಿಳೆಯರ ಪಾಲಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು.
ವೀರರಾಣಿ ಕಿತ್ತೂರು ಚನ್ನಮ್ಮನವರ ಐತಿಹಾಸಿಕ 200ನೇ ವಿಜಯೋತ್ಸವ ಹಾಗೂ ಕಿತ್ತೂರು ಉತ್ಸವದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸ್ವಾಭಿಮಾನಿಗಳ ನಾಡು ಕಿತ್ತೂರಿನಲ್ಲಿ ವಿಜಯೋತ್ಸವ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದರು.
ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಚೆನ್ನಮ್ಮ. ಮಹಿಳೆಯರು ಹೊರಗೆ ಬಾರದಂತಹ ಸ್ಥಿತಿ ಇದ್ದಾಗ ಹೊರಗೆ ಬಂದು ಬ್ರಿಟಿಷರ ವಿರುದ್ಧ ಹೋರಾಡಿದವರು ಚೆನ್ನಮ್ಮ.ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾರೆ ನಮ್ಮ ಚನ್ನಮ್ಮ ಎಂದು ಹೇಳಿದರು.
ಇಂದಿನ ಪೀಳಿಗೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮರೆಯುತ್ತಿದೆ.ಆದರೆ, ಅದಾಗಬಾರದು, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಮೊದಲಾವರು ನಮಗೆ ಆದರ್ಶರಾಗಬೇಕು ಎಂದು ಸಚಿವರು ಕರೆ ನೀಡಿದರು.
ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ, ನಮ್ಮ ಮುಖ್ಯಮಂತ್ರಿ, ಸರ್ಕಾರದ ಮೇಲಿರಲಿ. ಸರ್ಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ಕೊಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿ ನೀಡಲಾಗುತ್ತಿದೆ.ನಾಡಿನ ಅಭಿವೃದ್ಧಿ, ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮಿಗಳು ದೆಹಲಿಯಲ್ಲಿ ಚನ್ನಮ್ಮನ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರಿಂದ ಅವರು ಕೂಡ ಅಂದು ಹಾಜರಿರುವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.