ಹುಬ್ಬಳ್ಳಿ: ಇತ್ತೀಚೆಗಷ್ಟೇ ನಗರದಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ರಾಜ್ಯವೇ ಪ್ರಕರಣದಿಂದಾಗಿ ಹೊತ್ತಿ ಉರಿಯುತ್ತಿದೆ. ಇದರ ಮಧ್ಯೆಯೇ ಅನ್ಯಕೋಮಿನ ಯುವಕ ಯುವತಿಯ ಮೇಲೆ ಹಲ್ಲೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ನಗರದ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಫ್ತಾಬ್ ಹಲ್ಲೆ ಮಾಡಿರುವ ಆರೋಪಿ. ಈಗಾಗಲೇ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ಅಫ್ತಾಬ್ ನನ್ನ ವಿಚಾರಣೆ ಮಾಡಿದ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಸಂತ್ರಸ್ತ ಯುವತಿಗೆ ಅಫ್ತಾಬ್ ಪರಿಚಯಸ್ಥ. ಸ್ನೇಹ ಇದ್ದ ವೇಳೆ ಯುವತಿಗೆ ಕೆಲವು ಉಡುಗೊರೆಗಳನ್ನು ನೀಡಿದ್ದಾನೆ. ಹೀಗೆ ಗಿಫ್ಟ್ ಕೊಡಿಸುವ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಹಲ್ಲೆಗೊಳಗಾಗಿರುವ ಸಂತ್ರಸ್ತೆ ಮಾಹಿತಿ ನೀಡಿದ್ದು, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಫ್ತಾಬ್ ನನಗೆ ಎರಡು ವರ್ಷದಿಂದ ಪರಿಚಯ. ಅಫ್ತಾಬ್ ಮತ್ತು ನನ್ನ ನಡುವೆ ಸ್ನೇಹವಿತ್ತು. ಆದರೆ, ಆತ ನನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ನನ್ನ ಹುಟ್ಟು ಹಾಗೂ ರಂಜಾನ್ ದಿನ ಬಲವಂತವಾಗಿ ನನಗೆ ಉಡುಗೊರೆ ನೀಡಿದ್ದಾನೆ. ನೇಹಾ ಪ್ರಕರಣದ ನಂತರ ಸ್ನೇಹ ಕಡಿದುಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆತ ನನಗೆ ಕರೆ ಮಾಡಿ ಹಣ್ಣಿನ ಅಂಗಡಿ ಬಳಿ ಬರಲು ತಿಳಿಸಿದ್ದ. ಅಫ್ತಾಬ್ ಅಂಗಡಿ ಹತ್ತಿರ ಹೋಗಿ ಆತನ ಗಿಫ್ಟ್ ಮರಳಿ ನೀಡಲು ಮುಂದಾದೆ. ಆತ ಗಿಫ್ಟ್ ಸುಟ್ಟು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಅಫ್ತಾಬ್ ನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.