ಬೆಂಗಳೂರು (Bengaluru): ಬೆಂಗಳೂರಿನಲ್ಲಿ ವಿದೇಶಿ ಮಹಿಳೆ (foreign woman) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಜ್ಬೇಕಿಸ್ತಾನ (Uzbekistan) ಮೂಲದ ಜರೀನಾ (Zarina) ಸಾವನ್ನಪ್ಪಿರುವ ಮಹಿಳೆ. ಬಿಡಿಎ (BDA) ಮೇಲ್ಸೇತುವೆ ಬಳಿಯ ಹೊಟೇಲ್‌ನಲ್ಲಿ ಕೊಲೆ (Murder) ನಡೆದಿದೆ. ಹೋಟೆಲ್‌ನ ಎರಡನೇ ಮಹಡಿಯಲ್ಲಿ ರೂಮ್ ಪಡೆಯಲಾಗಿತ್ತು. ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆ ಜರೀನಾ, ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದರು.
ನಿನ್ನೆ ಸಂಜೆ ಬಳಿಕ ರೂಮ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇದ್ದ ಕಾರಣಕ್ಕೆ ನಿನ್ನೆ ಸಂಜೆ 4.30 ರ ಸುಮಾರಿಗೆ ಮಾಸ್ಟರ್ ಕೀ ಮೂಲಕ ರೂಮ್ ಬಾಗಿಲು ತೆರೆದು ಹೋಟೆಲ್ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಶವವಾಗಿ ಪತ್ತೆಯಾಗಿದ್ದ ವಿದೇಶಿ ಮಹಿಳೆ ಜರೀನಾ ದೇಹದ ಮೇಲೆ ಗಾಯದ ಕಲೆಗಳು ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಎಫ್ಎಸ್ಎಲ್ (FSL), ಬೆರಳಚ್ಚು ಹಾಗೂ ಶ್ವಾನದಳದವರು ಬಂದಹ ಪರಿಶೀಲನೆ ಮಾಡಿದ್ದಾರೆ.
ಶೇಷಾದ್ರಿಪುರಂ ಪೊಲೀಸರು ಮಹಿಳೆ ವಾಸವಿದ್ದ ಕೊಠಡಿಯಲ್ಲಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್, ಸಿಎಆರ್ ಡಿಸಿಪಿ ಅರುಣಾಂಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೊಟೇಲ್ ದಾಖಲಾತಿ ಪುಸ್ತಕ ಪರಿಶೀಲನೆ ಕೂಡ ನಡೆದಿದೆ. ಕೊಠಡಿಯಲ್ಲಿ ಬೆರಳಚ್ಚು ತಜ್ಞರಿಂದ ಪರಿಶೀಲನೆ ಮಾಡಿಸಲಾಗಿದೆ.
ಸುಮಾರು 30 ವರ್ಷ ವಯಸ್ಸಿನ ಜರೀನಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್‌ನ ಸಿಸಿಟಿವಿ (CCTV) ಹಾಗೂ ಲೆಡ್ಜರ್ ಬುಕ್ ಪರಿಶೀಲನೆ ನಡೆದಿದ್ದು, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ (Bowring Hospital) ರವಾನೆ ಮಾಡಲಾಗಿದೆ.
ನಿನ್ನೆ ಸಂಜೆ ಪೋನ್ ತೆಗೆಯದೆ ಇದ್ದಾಗ, ಜರೀನಾ ಪೋನ್ ತೆಗೆಯುತ್ತಿಲ್ಲ ಅಂತಾ ಹೊಟೇಲ್‌ಗೆ ಕರೆ ಬಂದಿತ್ತು. ಈ ವೇಳೆ ಮಾಸ್ಟರ್ ಕೀ ಮೂಲಕ ಬಾಗಿಲು ತೆರೆದಾಗ ಶವ ಪತ್ತೆಯಾಗಿದೆ ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಹೋಟೆಲ್ ಮ್ಯಾನೇಜರ್ ಕೊಟ್ಟ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
#Karnataka #bengaluru #murder #murdercase #womenmurder #crime