ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಗೋಕಲ್‌ಪುರಿ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿಯಾಗಿ ವಾಗ್ವಾದ ನಡೆದು 30 ವರ್ಷದ ಮಹಿಳೆಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಮ್ರಂಜೀತ್ ಕೌರ್ ಎಂದು ಗುರುತಿಸಲಾದ ಮಹಿಳೆ ತನ್ನ ಪತಿ ಹೀರಾ ಸಿಂಗ್ ಮತ್ತು 12 ಮತ್ತು ನಾಲ್ಕು ವರ್ಷದ ಇಬ್ಬರು ಪುತ್ರರೊಂದಿಗೆ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 3.15 ರ ಸುಮಾರಿಗೆ ಗೋಕಲ್ಪುರಿ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ. ಪೋಲಿಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಅವರು ಮಾಹಿತಿ ನೀಡಿ ತಮ್ಮ ವಾಹನಗಳು ಪರಸ್ಪರ ಢಿಕ್ಕಿಯಾದ ನಂತರ ಗೋಕಲ್ಪುರಿ ಮೇಲ್ಸೇತುವೆಯ ಬಳಿ ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯೊಂದಿಗೆ ಸಿಂಗ್ ಮಾತಿನ ಚಕಮಕಿ ನಡೆಸಿದರು.ಸಿಂಗ್ ಮತ್ತು ಅವರ ಕುಟುಂಬವು ಮೇಲ್ಸೇತುವೆಯ ಕೆಳಗಿನ ರಸ್ತೆಯಲ್ಲಿ ಮುಂದುವರಿದರೆ, ಇನ್ನೊಬ್ಬ ವ್ಯಕ್ತಿ ಫ್ಲೈಓವರ್ ಮೇಲೆ ಸವಾರಿ ಮಾಡಿದರು, ಆಗಲೂ ಅವರು ಪರಸ್ಪರ ನಿಂದನೆಯನ್ನು ಮುಂದುವರೆಸಿದರು ಎಂದು ಡಿಸಿಪಿ ಹೇಳಿದರು.
ಆಕ್ರೋಶಿತನಾದ ಆರೋಪಿಯು ಫ್ಲೈಓವರ್‌ನಿಂದ ಸುಮಾರು 30-35 ಅಡಿ ದೂರದಿಂದ ಒಂದೇ ಗುಂಡು ಹಾರಿಸಿದ್ದಾನೆ ಎಂದು ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಗುಂಡು ಕೌರ್ ಎದೆಗೆ ತಗುಲಿ ಕೆಳಗೆ ಕುಸಿದು ಬಿದ್ದಳು. ಆಕೆಯ ಪತಿ ಆಕೆಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಡಿಸಿಪಿ ಟಿರ್ಕಿ ತಿಳಿಸಿದ್ದಾರೆ. ದಾಳಿಕೋರನನ್ನು ಗುರುತಿಸಿ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.