ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ರಾಷ್ಟ್ರ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಜಾಬ್ Vs ಕೇಸರಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಆಫೀಸ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫಾರ್ ಫ್ರೀಡಂ (IRF), ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಇದರಿಂದ ಹೆಣ್ಣುಮಕ್ಕಳನ್ನು ಅಪ್ರಧಾನ ಹಾಗೂ ಅವಮಾನ ಮಾಡಿದಂತಾಗುತ್ತದೆ ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ IRFನ ಯುಎಸ್ ರಾಯಭಾರಿ ರಶಾದ್ ಹುಸೇನ್ “ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಪನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿದೆ. ಭಾರತದ ಕರ್ನಾಟಕ ರಾಜ್ಯವು ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿರ್ಧರಿಸಬಾರದು. ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಅಪ್ರಧಾನ ಹಾಗೂ ಅವಮಾನಗೊಳಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಕುರಿತಾಗಿ ಪ್ರತಿಕ್ರಿಯಿಸಿರುವ ಮೊದಲ ರಾಜತಾಂತ್ರಿಕ ಅಧಿಕಾರಿ ಅವರಾಗಿದ್ದಾರೆ. ಅವರ ಈ ಹೇಳಿಕೆಯೂ ಮೆಲ್ಬೋರ್ನ್ನಲ್ಲಿ ನಡೆದ ನಾಲ್ಕನೇ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ರನ್ನು ಭೇಟಿಯಾದ ಕೆಲವೇ ನಿಮಿಷಗಳ ನಂತರ ಈ ಹೇಳಿಕೆ ಹೊರಬಿದ್ದಿದೆ.





