ನಾನು ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ. ಯಾರಿಗೆ ತಾಕತ್ತಿದೆ ಬಂದು ತಡೆಯಲಿ ಎಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕುಂದಾಪುರದಲ್ಲಿ ಉಂಟಾದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶನಿವಾರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಬೆಂಬಲಿಸಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕಿ ಕನೀಜ್, ಹಿಜಾಬ್ ನಮ್ಮ ಹಕ್ಕು. ನಾವು ಯಾವುದೇ ಕಾರಣಕ್ಕೂ ಹಿಜಾಬ್ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನೂ ಸಹ ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯ ಇದ್ದವರು ತಡೆಯಲಿ ಎಂದು ಸವಾಲೆಸೆದಿದ್ದಾರೆ.
ಮುಂದುವರೆದು, ಹಿಜಾಬ್ ಧರಿಸುವುದನ್ನು ತಡೆಯುವುದು, ಹಲವು ಕೋಮುಸೌಹಾರ್ದ ಕೆಡಿಸುವ ವಿಷಯಗಳು ರಾಜ್ಯದಲ್ಲಿ ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿವೆ. ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದವರಿಗೆ ಸಂವಿಧಾನ ನೀಡಿದ ಹಕ್ಕಾಗಿದೆ. ಹಿಂದಿನ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಆರೋಪಿಸಿದ್ದಾರೆ.
ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.