ಕಾಲೇಜಿಗೆ ಸೀಮಿತವಾಗಿದ್ದ ಹಿಜಾಬ್ ವಿವಾದ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಕರ್ನಾಟಕ ದಮರ್ಯಾದೆಯನ್ನು ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಕಳೆಯಲು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಹಿಜಾಬ್ ಕುರಿತಂತೆ ಎರಡು ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿವೆ.
ಸದ್ಯ ದೇಶದಾದ್ಯಂತ ಚರ್ಚೆಗೆ ಒಳಗಾಗುತ್ತಿರುವ ಹಿಜಾಬ್ ವಿವಾದವು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿಯ ರಾಜ್ಯ ಘಟಕವು ಹಿಜಾಬ್ ವಿವಾದ ಕುರಿತಂತೆ ಟ್ವೀಟ್ ಮಾಡಿ, ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನು ತುರುಕಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗ ಇರುವುದು. ಅಂದು ಇಲ್ಲದ ವಿವಾದ ಇಂದೇಕೆ? ಚಾಮರಾಜಪೇಟೆಗೆ ವಲಸೆ ಹೋಗುವುದಕ್ಕಾಗಿ ಸಿದ್ದರಾಮಯ್ಯ ಅವರು ಹಿಜಾಬ್ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬ್ರಿಟಿಷರಿಂದ ಬಂದ ಬಳುವಳಿ. ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ, ಒಡೆದು ಹಾಕುವ ಕಾಂಗ್ರೆಸ್ ಆಟ ನಡೆಯಲ್ಲ. ಹಿಜಾಬ್ ಪ್ರಕರಣದ ಹಿಂದಿರುವ “ಕಾಣದ ಕೈ”ಗಳು ಯಾರು ಎಂಬುದು ತಿಳಿಯದಷ್ಟು ಮೂರ್ಖರು ಯಾರೂ ಇಲ್ಲ ಎಂದು ಮಗದೊಂದು ಟ್ವೀಟ್ ನಲ್ಲಿ ಹೇಳಿದೆ.