ರೈಲ್ವೆ ಬಜೆಟ್ ಎಂದರೆ ದೇಶದ ಕೊಟ್ಯಂತರ ಜನರು ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದರು. ತಮ್ಮೂರಿ ಹೊಸದಾಗಿ ಘೋಷಣೆಯಾಗಬಹುದಾದ ಹೊಸ ರೈಲುಗಳು, ತಮ್ಮೂರಿಗೂ ಬರಬಹುದಾದ ರೈಲು ಮಾರ್ಗಗಳು, ತಮ್ಮೂರಿಗೂ ಮುಂದೊಂದು ರೈಲು ಬರೋ ಸಾಧ್ಯತೆ ಇರೋ ಹೊಸ ರೈಲು ಮಾರ್ಗ ಸಮೀಕ್ಷೆಗಳು, ರೈಲು ದರ ಏರಿರೆ, ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್, ಸ್ಲೀಪರ್ ಕ್ಲಾಸ್, ಜನರಲ್ ಕ್ಲಾಸುಗಳ ವಿವಿಧ ಪ್ರಮಾಣದ ದರ ಏರಿಕೆ ಕುರಿತಾಗಿ ಭಾರಿ ಕುತೂಹಲದಿಂದ ಟೀವಿ ವೀಕ್ಷಿಸುತ್ತಿದ್ದರು. ಅಲ್ಲಲ್ಲಿ ಕ್ರಿಕೆಟ್ ಮ್ಯಾಚಿನಂತೆಯೇ ಚರ್ಚೆ ಮಾಡುತ್ತಿದ್ದರು. ಆ ವೈಭವವನ್ನೆಲ್ಲ ಮೋದಿ ಸರ್ಕಾರ ಏಳೂವರೆ ವರ್ಷದಲ್ಲಿ ನಾಶ ಮಾಡಿಬಿಟ್ಟಿದೆ. ರೈಲ್ವೆ ಬಜೆಟ್ ರದ್ದು ಮಾಡಲು ಮುಖ್ಯ ಕಾರಣ ಏನೆಂದರೆ- ರೈಲು ಬಜೆಟ್ ಮಂಡಿಸುವಾಗ ರೈಲ್ವೆ ಸಚಿವರ ಸುಮಾರು ಎರಡು ಗಂಟೆಗಳ ಭಾಷಣವು ನೇರ ಪ್ರಸಾರವಾಗಿ ಆ ಇಡೀ ದಿನ ರೈಲ್ವೆ ಸಚಿವರ ಮೇಲೆ ಎಲ್ಲಾ ಸುದ್ಧಿ- ವಿಶ್ಲೇಷಣೆಗಳೂ ಕೇಂದ್ರೀಕೃತವಾಗುತ್ತಿದ್ದುದು ಪ್ರಧಾನಿ ಮೋದಿ ಅವರಿಗೆ ಇಷ್ಟವಾಗಿರಲಿಲ್ಲ, ಆ ಕಾರಣಕ್ಕೆ ರೈಲ್ವೆ ಬಜೆಟ್ಟನ್ನೇ ಮುಖ್ಯ ಬಜೆಟ್ಟಿನೊಂದಿಗೆ ವಿಲೀನಗೊಳಿಸಲಾಯಿತು ಎಂಬ ‘ಆಫ್ ದಿ ರೆಕಾರ್ಡ್’ ಸುದ್ಧಿ ಇತ್ತು. ಈ ಸುದ್ಧಿಯ ಸತ್ಯಾಸತ್ಯತೆ ಏನೆಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಆಗಿನ್ನು ಆಲ್ಟ್ ನ್ಯೂಸ್ ಪ್ರವರ್ಧಮಾನಕ್ಕೆ ಬಂದಿರಲಿಲ್ಲ!
2021-22 ನೇ ಸಾಲಿನ ವಿತ್ತೀಯ ವರ್ಷದಲ್ಲಿ ಭಾರತೀಯ ರೈಲ್ವೆಯು 2.17 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಸಂಚಾರ ಆದಾಯ ಗಳಿಸುವ ಮತ್ತು 2.08 ಲಕ್ಷ ಕೋಟಿ ರೂಪಾಯಿಗಳ ಸಾಮಾನ್ಯ ವೆಚ್ಚ ಮಾಡುವ ಅಂದಾಜಿದೆ. ಪರಿಷ್ಕೃತ ಅಂದಾಜನ್ನು ಈಗಾಗಲೇ 2.01 ಲಕ್ಷ ಕೋಟಿ ರೂಪಾಯಿಗಳಿಗೆ ತಗ್ಗಿಸಲಾಗಿದೆ. ಬಜೆಟ್ಟಿನಲ್ಲಿ ಹೇಳದ ವಾಸ್ತವಿಕ ಸಂಗತಿ ಏನೆಂದರೆ ವರ್ಷದ ಮೊದಲೆರಡು ತ್ರೈಮಾಸಿಕಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಕಾರ್ಯಾಚರಣೆ ಇಲ್ಲದ ಕಾರಣ, ಕಾರ್ಯಾಚರಣೆ ಇದ್ದರೂ ಎರಡನೇ ಅಲೆ, ನಂತರದ ವ್ಯತಿರಿಕ್ತ ಪರಿಣಾಮಗಳಿಂದಾಗಿ ಸಂಚಾರದ ಆದಾಯವು 1.9 ಲಕ್ಷ ಕೋಟಿ ರೂಪಾಯಿಗಳಷ್ಟಾಗುವುದು ಕಷ್ಟ ಎನ್ನಲಾಗಿದೆ. ಎರಡು ತಿಂಗಳ ನಂತರವಷ್ಟೇ ಒಟ್ಟು ಆದಾಯದ ಚಿತ್ರಣ ಲಭ್ಯವಾಗಲಿದೆ.
ಆದರೆ, ಆದಾಯ ವೆಚ್ಚವು 2.10 ಲಕ್ಷ ಕೋಟಿ ರೂಪಾಯಿಗಳ ವ್ಯಾಪ್ತಿಯಲ್ಲಿರಬೇಕಾದರೆ, ಕಾರ್ಯನಿರ್ವಹಣೆಯ ಅನುಪಾತವು ಒಟ್ಟು 110 ಆಗಿರಬೇಕು. ಆದರೆ, ಸದ್ಯದ ಕಾರ್ಯಾಚರಣೆ ಅನುಪಾತವು 96.98ರಷ್ಟಿದೆ. 2022-23ರಲ್ಲಿ 2.39 ಲಕ್ಷ ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ. ಇದು 2021-22ರ ಅಂದಾಜಿಗಿಂತ ಶೇ.20ರಷ್ಟು ಹೆಚ್ಚು. ರೈಲ್ವೆ ಪೂರ್ಣಕಾರ್ಯಾಚರಣೆ ಆರಂಭಿಸಿರುವುದರಿಂದ ಮತ್ತು ಜನಜೀವನ ಸಾಮಾನ್ಯಸ್ಥಿತಿಗೆ ಮರಳುವುದರಿಂದ ಈ ಪ್ರಮಾಣದ ಆದಾಯ ಬರಬಹುದು.
ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ 100 ಬಹು ಮಾದರಿ ಕಾರ್ಗೊ ಟರ್ಮಿನಲ್ ಸ್ಥಾಪಿಸುವುದರಿಂದ ಈಗ ರಸ್ತೆ ಸಾರಿಗೆಗೆ ಜಾರಿ ಹೋಗಿರುವ ಸರಕು ಸಾಗಣೆ ಪಾಲನ್ನು ಮುಂಬರುವ ವರ್ಷಗಳಲ್ಲಿ ಮರಳಿ ಪಡೆಯುವುದು ಕಷ್ಟವಾಗಲಾರದು. ಆದರೆ, ಈ ಟರ್ಮಿನಲ್ ಗಳು ಮುಂದೆ ರೈಲ್ವೆಯ ಆಸ್ತಿಯಾಗಿಯೇ ಉಳಿಯುತ್ತವೆಯೇ ಅಥವಾ ಇವೂ ಖಾಸಗಿಯವರ ಪಾಲಾಗುತ್ತವೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ.
Also Read : ಭಾಗ -1 | ರಾಷ್ಟ್ರದ ‘ಜೀವನಾಡಿ’ ರೈಲ್ವೆಯನ್ನು ಮೋದಿ ಸರ್ಕಾರ ‘ಅನಾಥ’ವನ್ನಾಗಿಸುತ್ತಿದೆಯೇ?
ಆದರೆ, ಬಹುಮಾದರಿ ಸರಕು ಸಾಗಣೆ ವ್ಯವಸ್ಥೆಯು ದೀರ್ಘಕಾಲದಲ್ಲಿ ತ್ವರಿತ ಮತ್ತು ಕಡಿಮೆದರದ ಸೇವೆ ಒದಗಿಸಲಿದ್ದು, ರೈಲ್ವೆಯ ಸರಕು ಸಾಗಣೆಯಿಂದ ಬರುವ ಆದಾಯವು ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ವಂದೇ ಭಾರತ್ ರೈಲುಗಳ ವಿಸ್ತರಣೆಯಿಂದ ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ದೇಶೀಯ ತಂತ್ರಜ್ಞಾನದ ‘ಕವಚ’ ವ್ಯಾಪ್ತಿಗೆ 2000 ಕಿ.ಮೀ. ರೈಲು ಮಾರ್ಗ ತರುತ್ತಿರುವುದು ರೈಲ್ವೆ ಸುರಕ್ಷತೆಯ ಹಾದಿಯಲ್ಲಿ ದಿಟ್ಟ ಹೆಜ್ಜೆ. ಒಂದು ನಿಲ್ದಾಣ- ಒಂದು ಉತ್ಪನ್ನ ಯೋಜನೆಯಿಂದ ದೀರ್ಘಕಾಲದಲ್ಲಿ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ನೆರವಾಗಬಹುದು. ನಗರ ಸಮೂಹ ಸಾರಿಗೆ ಮತ್ತು ರೈಲು ನಿಲ್ದಾಣಗಳಿಗೆ ಬಹು ಮಾದರಿ ಸಂಪರ್ಕ ಕಲ್ಪಿಸುವ, ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು, ಜಲಮಾರ್ಗ, ಸಮೂಹ ಸಾರಿಗೆ ಮತ್ತು ಸಾರಿಗೆ ಮೂಲಭೂತ ಸೌಲಭ್ಯಗಳ ನಡುವೆ ಸಮನ್ವಯ ಸಾಧಿಸುವ ನೂತನ ಪರಿಕಲ್ಪನೆಯು ನೋಡಲಿಕ್ಕೆ ಚೆಂದವಾಗಿದೆ. ಆದರೆ, ಇದಕ್ಕೆ ಬೃಹತ್ ಪ್ರಮಾಣದ ಹೂಡಿಕೆಯ ಅಗತ್ಯವಿದೆ. ಆರ್ಥಿಕತೆ ಚೇತರಿಕೆಯನ್ನು ಜೀವಂತವಾಗಿಡುವ ಸಲುವಾಗಿ ಆದಾಯ ವೆಚ್ಚಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಬಂಡವಾಳ ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಬಜೆಟ್ ಘೋಷಿತ ಬೃಹತ್ ಯೋಜನೆಗಳಿಗೆ ಹಣಕಾಸು ಸಂಪನ್ಮೂಲ ಒದಗಿಸುವ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು. ಇಲ್ಲದಿದ್ದರೆ ರೈಲ್ವೆ ಸಾಲದಹೊರೆ ಮತ್ತೆ ಏರಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ಟಿನಲ್ಲಿ ಘೋಷಿಸಿದ ಈ ಯೋಜನೆಗಳು ದೀರ್ಘಕಾಲದಲ್ಲಿ ಲಾಭದಾಯಕ ಎನ್ನಬಹುದಾದ ಯೋಜನೆಗಳು. ಆದರೆ, ಬಿಡುಗಡೆ ಮಾಡಿರುವ ಅನುದಾನ ಏನೇನೂ ಸಾಲದು. ಮತ್ತೆ ಈ ಯೋಜನೆಗಳಿಗೆ ರೈಲ್ವೆಯೇ ಸಾಲ ಮಾಡಬೇಕಾದ ಪರಿಸ್ಥಿತಿ ಬಂದರೆ, ಅದು ರೈಲ್ವೆಯ ಸಾಲದ ಹೊರೆ ಮತ್ತಷ್ಟು ಹಿಗ್ಗಲಿದೆ. ಹಿಂದಿನ ವರ್ಷಗಳಲ್ಲಿ ಘೋಷಿಸಿರುವ ಯೋಜನೆಗಳು, ಅವುಗಳಿಗೆ ಬಿಡುಗಡೆ ಮಾಡಿರುವ ಅನುದಾನ, ಅವುಗಳ ಪ್ರಗತಿಯ ಸ್ಥಿತಿಗತಿಯ ಯಾವ ವಿವರಗಳೂ ಬಜೆಟ್ಟಿನಲ್ಲಿ ಇಲ್ಲ. ಹೊಸ ಯೋಜನೆಗಳನ್ನು ಘೋಷಣೆ ಮಾಡುವುದರ ಜತೆಗೆ ಈಗ ಅನುಷ್ಠಾನ ಹಂತದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕಿತ್ತು.
ಆದರೆ, ಆನಿಟ್ಟಿನಲ್ಲಿ ಯಾವ ಪ್ರಯತ್ನವೂ ಸಾಗಿಲ್ಲ. ಒಂದು ಕಡೆ ಆಸ್ತಿ ಮಾರಾಟ ಮಾಡುವ ಯೋಜನೆಯ ಜತೆ ಜತೆಗೆ ಖಾಸಗಿಯವರ ಸಹಭಾಗಿತ್ವದಲ್ಲಿ ಹೊಸ ಯೋಜನೆ ಅನುಷ್ಠಾನ ಮಾಡುತ್ತಿರುವುದರ ಉದ್ದೇಶವನ್ನೂ ಅರ್ಥ ಮಾಡಿಕೊಳ್ಳಬೇಕು. ಖಾಸಗಿಯವರ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಿದ ಯೋಜನೆಗಳು ವಾಪಾಸು ರೈಲ್ವೆಗೆ ಮರಳುವುದಿಲ್ಲ. ಅವು ಖಾಸಗಿಯವರ ಪಾಲಾಗಲಿವೆ. ರೈಲ್ವೆ ಪ್ರಯಾಣದರ ಏರಿಕೆ ಮಾಡಿಲ್ಲ. ಮೋದಿ ಸರ್ಕಾರ ಬಂದ ನಂತರ ದರ ಏರಿಕೆಗೆ ಬಜೆಟ್ಟಿನವರೆಗೂ ಕಾಯಬೇಕೇಕೆ ಎಂಬ ಧೋರಣೆ ಬಂದಿದೆ. ಪೆಟ್ರೋಲ್,ಡಿಸೇಲ್ ದರದಂತೆ ರೈಲು ಪ್ರಯಾಣ ದರವನ್ನೂ ಬೇಕಾದಾಗ ಏರಿಸುವ ಅವಕಾಶವನ್ನು ರೈಲ್ವೆಗೆ ನೀಡಿದೆ. ಹೀಗಾಗಿ ರೈಲುದರ ಯಾವಾಗಬೇಕಾದರೂ ಹೆಚ್ಚಾಗಬಹುದು. ಆದರೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೆ ದರ ಏರಿಕೆ ಇಲ್ಲ ಎಂಬುದಂತೂ ಗ್ಯಾರಂಟಿ!