ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ. 2 ವರ್ಷಗಳಿಂದ ಕರೋನಾದಿಂದ ಲಕ್ಷಾಂತರ ಜನ ಸತ್ತಿದ್ದು, ಕೋಟ್ಯಂತರ ಜನ ತೊಂದರೆ ಅನುಭವಿಸಿದ್ದಾರೆ. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂತ್ರಸ್ತರು ಹಾಗೂ ಸತ್ತವರಿಗೆ ಪರಿಹಾರ ನೀಡಲಿದೆ ಎಂಬ ನಿರೀಕ್ಷೆ ಮಾಡಿದ್ದೆವು. ಅವೆಲ್ಲವೂ ಸಂಪೂರ್ಣವಾಗಿ ಹುಸಿಯಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
ಇದು ಜನಸ್ನೇಹಿ ಬಜೆಟ್ ಅಲ್ಲವೇ ಅಲ್ಲ. ಬಡವರು ಹಾಗೂ ಮಧ್ಯಮ ವರ್ಗದವರ ಪರವಾಗಿ ಸರ್ಕಾರ ಇಲ್ಲ ಎಂಬುದಕ್ಕೆ ಈ ಬಜೆಟ್ ಸಾಕ್ಷಿ. ಆದಾಯ ತೆರಿಗೆ ಯಥಾಸ್ಥಿತಿ ಮುಂದುವರಿದಿದೆ. ಬಿಜೆಪಿಯ ಈ ಹಿಂದಿನ ಬಜೆಟ್ ಗಳ ರೀತಿಯಲ್ಲೇ ಈ ಬಜೆಟ್ ನಲ್ಲೂ ಅನುಕೂಲಸ್ಥರು, ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಲಾಗಿದೆ. ಈ ಸರ್ಕಾರ ಬಡವರು ಹಾಗೂ ಮಧ್ಯಮವರ್ಗದವರಿಗಿಂತ ಶ್ರೀಮಂತರ ಪರವಾಗಿದೆ ಎಂಬುದು ಮತ್ತೊಮ್ಮೆ ಸಾಕ್ಷಿಯಾಗಿದೆ ಎಂದಿದ್ದಾರೆ.
25 ದೊಡ್ಡ ಉದ್ಯಮಿಗಳ 8 ಲಕ್ಷ ಕೋಟಿ ಮೊತ್ತದ ಎನ್ ಪಿಎ (ಕೆಟ್ಟ ಸಾಲ) ಮನ್ನಾ ಮಾಡಿದ ಸರ್ಕಾರ ಇದು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದ ಕೇಂದ್ರ ಸರ್ಕಾರ, ರೈತರು ಹಾಗೂ ಕಾರ್ಮಿಕರಿಗೆ ಯಾವುದೇ ಹೊಸ ಕಾರ್ಯಕ್ರಮಗಳನ್ನು ನೀಡಲಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಶ್ರೀಮಂತರ ಮೇಲೆ ತೆರಿಗೆ ಹಾಕಿ ಬಡವರು, ಬಿಪಿಎಲ್ ಕಾರ್ಡುಗಳ ಮೂಲಕ ಬಡವರಿಗೆ ಆಹಾರ ಪದಾರ್ಥದಿಂದ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳಲ್ಲಿ ಸಬ್ಸಿಡಿ ನೀಡುವ ಪದ್ಧತಿ ಇತ್ತು. ಆದರೆ ಇಂದು ಬಿಜೆಪಿ ಸರ್ಕಾರ ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟು, ಬಡವರು ಹಾಗೂ ಮಧ್ಯಮವರ್ಗದವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಬಡವರು ಮತ್ತಷ್ಟು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವಂತೆ ಮಾಡುವುದೇ ಈ ಬಜೆಟ್ ತಿರುಳು ಎಂದು ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅವರ ಪ್ರಣಾಳಿಕೆಯನ್ನು ಒದಿದ್ದರೋ ಇಲ್ಲವೋ, ಆದರೆ ಅವರ ಭರವಸೆಗಳನ್ನು ಮರೆತಿದ್ದಾರೆ. ಆಗ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಮುಂದಿನ ಮೇ ತಿಂಗಳಿಗೆ ಅವರು ಅಧಿಕಾರಕ್ಕೆ ಬಂದು 8 ವರ್ಷ ಪೂರ್ಣಗೊಳ್ಳುತ್ತದೆ. ಕನಿಷ್ಠ 15-16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ದೇಶದಲ್ಲಿ ಕೋಟ್ಯಂತರ ಉದ್ಯೋಗಗಳು ನಷ್ಟವಾಗಿವೆ.
ಮನಮೋಹನ್ ಸಿಂಗ್ ಅವರ 10 ವರ್ಷಗಳ ಆಡಳಿತ ಕಾಲದಲ್ಲಿ 24 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದರು. ಇವರ ಆಡಳಿತ ಅವಧಿಯಲ್ಲಿ 22 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ಕುಸಿದಿದ್ದಾರೆ. ಇದೇ ಮೋದಿ ಅವರ ಸರ್ಕಾರದ ಸಾಧನೆ.
ನದಿ ಜೋಡಣೆ ಮಾಡುತ್ತೇವೆ ಎಂದರೆ ಎಲ್ಲ ಪಕ್ಷಗಳು ಸ್ವಾಗತ ಮಾಡುತ್ತೇವೆ. ಎಲ್ಲ ರಾಜ್ಯಗಳ ಒಪ್ಪಿಗೆ ಅಗತ್ಯವಿದ್ದು, ಹೆಚ್ಚುವರಿ ನೀರು ಸಿಗುವಾಗ ಕುಡಿಯುವ ನೀರಿನ ಕೊರತೆ ನೀಗಿಸಲು ನೆರವಾಗುತ್ತದೆ. ನಮ್ಮ ದೇಶದಲ್ಲಿ ರಸ್ತೆಗಳ ಜೋಡಣೆಗೂ ಮುನ್ನ ನದಿಗಳ ಜೋಡಣೆ ಮಾಡಬೇಕು ಎಂಬ ಉದ್ದೇಶವಿತ್ತು. ಆದರೆ ವಾಜಪೇಯಿ ಅವರು ಹಾಗೂ ನಂತರದ ಸರ್ಕಾರ ರಸ್ತೆಗಳಿಗೆ ಆದ್ಯತೆ ನೀಡಿದ್ದವು. ಹೀಗಾಗಿ ಈ ನದಿ ಜೋಡಣೆ ನೆನೆಗುದಿಗೆ ಬಿದ್ದಿತ್ತು. ಈಗ ಅದನ್ನು ಕೈಗೆತ್ತಿಕೊಂಡರೆ ಸ್ವಾಗತಿಸುತ್ತೇವೆ.
ಈ ಬಜೆಟ್ ನಲ್ಲಿ ಒನ್ ನೇಷನ್ ಎಂಬುದ್ದೆಲ್ಲ ಇಲ್ಲ. ಇದರಲ್ಲಿ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಕೇಂದ್ರದವರು ರಾಜ್ಯಗಳಿಗೆ ಇದ್ದ ಅಧಿಕಾರವನ್ನು ಒಂದೊಂದಾಗಿ ಕಸಿಯುತ್ತಿದ್ದು, ಎಲ್ಲವೂ ತಮ್ಮ ನಿಯಂತ್ರಣದಲ್ಲೇ ಇರಬೇಕು ಎಂದು ವರ್ತಿಸುತ್ತಿದ್ದಾರೆ. ಐಎಎಸ್ ಅಧಿಕಾರಿಗಳ ವಿಚಾರ, ಜಿಎಸ್ ಟಿ, ಚುನಾವಣಾ ಆಯೋಗ, ಸಿಬಿಐ, ಆರ್ ಬಿಐನಂತಹ ಸ್ವಾಯತ್ತ ಸಂಸ್ಥೆಗಳು ಹಲ್ಲು ಕಿತ್ತ ಹಾವಿನಂತಾಗಿವೆ.
ಮುಂದೆ ಜಿಎಸ್ಟಿ ಹಣವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ. ಮೋದಿ ಅವರ ಆಡಳಿತ ಮುಂದುವರಿದರೆ ರಾಜ್ಯಗಳಿಗೆ ಚೆಂಬು ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.