ಬಿಜೆಪಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂದು ಹೇಳಿಕೊಂಡಿದೆ. ಆದರೆ ಎಲ್ಲರ ವಿಕಾಸವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಇನ್ನೊಂದೆಡೆ ‘ಸಬ್ ಕಾ ಹಾತ್ ಸಬ್ ಕಾ ಸಾತ್’ (ಎಲ್ಲರ ಕೈಗಳು ಎಲ್ಲರ ಜೊತೆ ಅತಾರ್ಥ್ ಪರಸ್ಪರ ಹೊಂದಾಣಿಕೆ) ಎಂಬ ಮಂತ್ರ ಪಠಿಸುತ್ತಿದೆ. ಮೊದಲಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಆಗಲು ಪೈಪೋಟಿ ಶುರುವಾಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
‘ಸಬ್ ಕಾ ಹಾತ್ ಸಬ್ ಕಾ ಸಾತ್’ ಹಿನ್ನಲೆಯಲ್ಲಿ ಮೊದಲಿಗೆ ಲಿಂಗಾಯತ ಸಮುದಾಯದ ನಾಯಕರು ಮತ್ತು ಉತ್ತರ ಕರ್ನಾಟಕ ಮೂಲದವರೂ ಆದ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರ ಬೆನ್ನಲ್ಲೇ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಯಿತು. ಇದರ ಜೊತೆ ಜೊತೆಯಲ್ಲೇ ಒಕ್ಕಲಿಗ ಸಮುದಾಯದ ಕೆ. ಗೋವಿಂದರಾಜ್ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕನ್ನಾಗಿ ಹಾಗೂ ಲಂಬಾಣಿ ಸಮುದಾಯದ ಪ್ರಕಾಶ್ ರಾಥೋಡ್ ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕನನ್ನಾಗಿ ನೇಮಕ ಮಾಡಲಾಯಿತು. ಈಗ ಅಲ್ಪಸಂಖ್ಯಾತ ಸಮುದಾಯದ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಮುಸ್ಲಿಮರಿಗೆ ಸಂದೇಶ ರವಾನಿಸಿದ ಕಾಂಗ್ರೆಸ್
ಸಿಎಂ ಇಬ್ರಾಹಿಂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಮೇಲೆ ಅಪಾರವಾದ ಆಸೆ ಇಟ್ಟುಕೊಂಡಿದ್ದರು. ಅದೇ ಕಾರಣಕ್ಕಾಗಿ ಆಗಾಗ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವುದಾಗಿ ಹೇಳುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಇಬ್ರಾಹಿಂ ಅವರ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿಯದೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿತ್ತು. ಇದರಿಂದ ಇನ್ನಷ್ಟು ಆಕ್ರೋಶಗೊಂಡಿದ್ದ ಸಿಎಂ ಇಬ್ರಾಹಿಂ ಮತ್ತೆ ಕಾಂಗ್ರೆಸ್ ತ್ಯಜಿಸುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ‘ಮುಸ್ಲಮರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ’ ಎಂದು ಬಿಂಬಿಸತೊಡಗಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಕ ಮಾಡುವ ಮೂಲಕ ‘ಕಾಂಗ್ರೆಸ್ ಎಲ್ಲರ ಪರ ಇರುವ ಪಕ್ಷ’ ಎಂಬ ಸಂದೇಶವನ್ನು ರವಾನಿಸಿದೆ
ಲಿಂಗಾಯತರನ್ನು ಒಲಿಸಿಕೊಳ್ಳಲು ಎಂ.ಬಿ. ಪಾಟೀಲ್ ಗೆ ಮಣೆ
ಎಂ.ಬಿ. ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲು ಅವರು ಉತ್ತರ ಕರ್ನಾಟಕ ಮೂಲದವರು, ಲಿಂಗಾಯತ ಸಮುದಾಯದವರು, ಸಂಪನ್ಮೂಲ ಹೊಂದಿರುವ ವ್ಯಕ್ತಿ, ಕ್ಲೀನ್ ಇಮೇಜ್ ಇಟ್ಡುಕೊಂಡಿರುವವರು ಎಂ.ಬಿ. ಪಾಟೀಲ್ ಅವರ ತಂದೆ ಕಾಲದಿಂದಲೂ ಕಾಂಗ್ರೆಸ್ ಹೈಕಮಾಂಡ್ ಜೊತೆ ಅವರ ಕುಟುಂಬ ಬಹಳ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಜೊತೆಗೆ ಹೊಂದಾಣಿಕೆ ಉಳ್ಳವರಾಗಿದ್ದಾರೆ ಎಂಬೆಲ್ಲಾ ಕಾರಣಗಳ ಜೊತೆಗೆ ಸದ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡುತ್ತಿರುವುದರಿಂದ ಲಿಂಗಾಯತ ಸಮುದಾಯದ ಮತವನ್ನು ಕಾಂಗ್ರೆಸ್ ಕಡೆಗೆ ಸೆಳೆಯುವ ಲೆಕ್ಕಾಚಾರವೂ ಇದೆ.
ಈಡಿಗ ಮತಗಳನ್ನು ಸೆಳೆಯಲು ಹರಿಪ್ರಸಾದ್ ಅಸ್ತ್ರ
ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಪೈಕಿ ಕರುಬರ ನಂತರ ಅತಿ ದೊಡ್ಡ ಸಮುದಾಯವೆಂದರೆ ಅದು ಈಡಿಗ. ಆದರೆ ಇತ್ತೀಚಿನ ವರ್ಷಗಳಲ್ಲಿ ಈಡಗ ಮತಗಳು ಬಿಜೆಪಿ ಕಡೆ ಹೋಗಿವೆ. ಇವುಗಳನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ತರಬೇಕಾದ ಅನಿವಾರ್ಯತೆಯೂ ಇದೆ. ಆದರೆ ಕಾಗೋಡು ತಿಮ್ಮಪ್ಪ ಅವರಿಂದ ಹಿಡಿದು ಬೇರಾವುದೇ ಕಾಂಗ್ರೆಸ್ ನಾಯಕ ಈಡಿಗ ಸಮುದಾಯದ ಮೇಲೆ ಪ್ರಭಾವ ಹೊಂದಿಲ್ಲ. ಇದ್ದುದರಲ್ಲಿ ಹರಿಪ್ರಸಾದ್ ಹಿರಿಯರು. ಇತ್ತೀಚೆಗೆ ಹೆಚ್ಚೆಚ್ಚು ದಕ್ಷಿಣ ಕನ್ನಡ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಿದ್ದಾಂತಗಳನ್ನು ಪರಿಣಾಮಕಾರಿಯಾಗಿ ಪಾಲನೆ ಮಾಡುವ ಪಕ್ಷದ ಶಿಸ್ತಿನ ಸಿಪಾಯಿ. ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಧರ್ಮದ ಹೆಸರಿನಲ್ಲಿ ನಡೆಸುವ ರಾಜಕಾರಣಕ್ಕೆ ಸರಿಯಾಗಿ ತಿರುಗೇಟು ನೀಡಬಲ್ಲವರಾಗಿದ್ದಾರೆ. ಇದರಿಂದ ಕರಾವಳಿಯಲ್ಲಿ ಪಕ್ಷಕ್ಕೆ ಅನುಕೂಲ ಆಗಬಹುದು ಎಂಬ ಕಾರಣಕ್ಕಾಗಿ ಬಿ.ಕೆ. ಹರಿಪ್ರಸಾದ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿದೆ.
ನಾಲ್ಕು ಪ್ರಮುಖ ಸಮುದಾಯಗಳಿಗೆ ಮಣೆ
ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕನಾಗಿದ್ದರೂ ಇನ್ನೊಬ್ಬ ಹಿಂದುಳಿದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಒಕ್ಕಲಿಗ ಸಮುದಾಯದ ಕೆ. ಗೋವಿಂದರಾಜ್ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕನ್ನಾಗಿ ನೇಮಿಸಿದೆ. ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರೂ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸಲೀಂ ಅಹಮದ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರೂ ಯು.ಟಿ. ಖಾದರ್ ಅವರನ್ನು ಈಗ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಹೀಗೆ ನಾಲ್ಕು ಮುಖ್ಯ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ.
ಈ ಪೈಕಿ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಈಗಾಗಲೇ ಪಕ್ಷದ ಜೊತೆಗೆ ಇದ್ದಾರೆ. ಅವರನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳಲು ಅವರಿಗೆ ಕಾಂಗ್ರೆಸ್ ಆದ್ಯತೆ ನೀಡಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಅಧಿಕಾರ-ಅವಕಾಶ ನೋಡಿ ನಡೆ ಬದಲಿಸುವ ಜಾತಿಗಳು. ಹಾಗಾಗಿ ಈಗ ಕಾಂಗ್ರೆಸ್ ಪರವಾದ ವಾತಾವರಣ ಇರುವುದರಿಂದ ಆ ಸಮುದಾಯಗಳಿಂದ ಇನ್ನಷ್ಟು ಮತ ಸೆಳೆಯಲು ಅವರಿಗೂ ಉನ್ನತ ಸ್ಥಾನಗಳನ್ನು ನೀಡಲಾಗಿದೆ. ಇದಲ್ಲದೆ ಲಂಬಾಣಿ ಸಮುದಾಯದ ಪ್ರಕಾಶ್ ರಾಥೋಡ್ ಅವರನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕನನ್ನಾಗಿ ಕೂಡ ನೇಮಕ ಮಾಡಲಾಗಿದೆ. ದಲಿತರ ಪೈಕಿ ಬಲಗೈ ಪಂಗಡದ ಧ್ರುವ ನಾರಾಯಣ್ ಅವರನ್ನು ಹಾಗೂ ಪರಿಶಿಷ್ಟ ಪಂಗಡಗಳ ಪೈಕಿ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ. ಹೀಗೆ ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ‘ಸಬ್ ಕಾ ಹಾತ್, ಸಬ್ ಕಾ ಸಾತ್’ ಮಂತ್ರ ಪಠಣ ನಡೆಸಿದೆ.