ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನೆಮಾದ ಸ್ಪೆಷಲ್ ಪೋಸ್ಟರ್ ಅನ್ನು ಗಣರಾಜ್ಯೋತ್ಸಕ್ಕೆ ಚಿತ್ರತಂಡ ಬಿಡುಗಡೆಗೊಳಿಸಿ ಅಪ್ಪು ಅಭಿಮಾನಿಗಳಿಗೆ ಖುಷಿ ನೀಡಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ ಎನ್ನುವ ಲೈನ್ ಅನ್ನು ಪೋಸ್ಟರ್ ನಲ್ಲಿ ಬರೆಯಲಾಗಿದ್ದು, ಸದ್ಯ ಈ ಪೋಸ್ಟರ್ ನೋಡಿದ ಅಪ್ಪು ಅಭಿಮಾನಿಗಳು ಟ್ವೀಟ್ ಮಾಡಿ, ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ.
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರು ಈ ಪೋಸ್ಟರ್ ಅನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಬರೆದುಕೊಂಡು, ಜೇಮ್ಸ್ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.
ಶೂಟಿಂಗ್ ಕಂಪ್ಲೀಟ್, ರಿಲೀಸ್ ಬಾಕಿ
ಇದೀಗ ಚಿತ್ರತಂಡ ಜೇಮ್ಸ್ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು, ಮಾರ್ಚ್ 17 ರಂದು ಅಪ್ಪು ಬರ್ತ್ ಡೇ ದಿನ ಸಿನಿಮಾ ಬಿಡುಗಡೆಗೊಳಿಸಲು ತಯಾರಿಯಲ್ಲಿದ್ದು, ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಂತೂ ಪುನೀತ್ ಅಭಿಮಾನಿಗಳು ಜೇಮ್ಸ್ ಸಿನೆಮಾ ತೆರೆ ಮೇಲೆ ನೋಡಲು ಕಾತರರಾಗಿದ್ದು, ಮತ್ತೊಮ್ಮೆ ಅಪ್ಪು ಅವರ ನಟನೆಯನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.