ನೂರು ವರ್ಷಗಳ ಹಿಂದೆಯೇ ಬೆಳಗಾವಿ ವ್ಯಾಕ್ಸಿನ್ ಒಂದರ ತಯಾರಿಕೆಯ ಕೇಂದ್ರ ಬಿಂದುವಾಗಿತ್ತು. ಇಡೀ ದೇಶಕ್ಕಲ್ಲದೇ ನೆರೆಹೊರೆಯ ದೇಶಗಳಿಗೂ ಇಲ್ಲಿಂದಲೇ ಲಸಿಕೆ ಸರಬರಾಜು ಆಗುತ್ತಿತ್ತು.
ಕರೋನಾ ಹೆಮ್ಮಾರಿಗೆ ವಿಶ್ವದ ಅನೇಕ ದೇಶಗಳು ಹಲವಾರು ಲಸಿಕೆಗಳನ್ನು ಕಂಡು ಹಿಡಿಯುತ್ತಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಆದರೆ ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆಯೇ ಲಸಿಕಾ ತಯಾರಿಕಾ ಕೇಂದ್ರ ಒಂದು ಇತ್ತು ಎಂದರೆ ನಿಮಗೆ ಅಚ್ಚರಿಯಾಗಬಹುದು.
ಹೌದು, ಬೆಳಗಾವಿಯಲ್ಲಿ ನೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ವ್ಯಾಕ್ಸಿನ್ ಡಿಪೊ ಹೆಸರಿನ ಅತ್ಯಂತ ಹಳೆಯ ಕಟ್ಟಡದಲ್ಲಿ 1909 ರಿಂದಲೇ ವಿವಿಧ ಲಸಿಕೆಗೆಳು ಸಿದ್ಧವಾಗುತ್ತಿತ್ತು. ಎಷ್ಟೋ ಜನರಿಗೆ ಜನರಿಗೆ ಗೊತ್ತಿಲ್ಲ. ಜಾನುವಾರುಗಳಿಗೆ ಬರುತ್ತಿದ್ದ ಸಿಡುಬು ರೋಗದ ಚಿಕಿತ್ಸೆಗಾಗಿ ಲಸಿಕೆಯೊಂದನ್ನು ಕಂಡು ಹಿಡಿದದ್ದು ಇಲ್ಲಿಯೇ.
1904 ರಲ್ಲಿ ಕ್ಯಾಪ್ಟನ್ ಹುಚಿನ್ಸನ್ ಎಂಬ ಬ್ರಿಟಿಶ್ ಅಧಿಕಾರಿ ಬೆಳಗಾವಿಯಲ್ಲಿ ಲಸಿಕಾ ತಯಾರಿಕಾ ಕೇಂದ್ರ ಆರಂಭಿಸಿದರು. 1909 ರಲ್ಲಿ ಇದಕ್ಕಾಗಿಯೇ ಒಂದು ಕಟ್ಟಡ ಕಟ್ಟಲಾಯಿತು. ಆ ಹಳೆಯ ಕಲ್ಲಿನ ಕಟ್ಟಡವೇ ಈಗಲೂ ಬೆಳಗಾವಿಯ ಟಿಳಕವಾಡಿಯ ಮೊದಲ ರೈಲು ಗೇಟ್ ಸಮೀಪದಲ್ಲಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಟಿಳಕವಾಡಿಯಲ್ಲಿ.
ಈ ಕಟ್ಟಡದಲ್ಲಿಯೇ ಕೆಲವು ಆರೋಗ್ಯ ಇಲಾಖೆಯ ಕಚೇರಿಗಳಿವೆ. ಲಸಿಕೆ ತಯಾರಿಕೆಗಾಗಿ ಆರಂಭದಲ್ಲಿ ಆಕಳು ಕರುಗಳನ್ನು ವಧೆ ಮಾಡಲಾಗುತ್ತಿತ್ತು.ಅವುಗಳ ತಲೆಗಳಲ್ಲಿಯ ಕೆಲವು ಮಾಂಸವನ್ನು ತೆಗೆದುಕೊಳಲಾಗುತ್ತಿತ್ತು. ನಂತರ ಕುರಿಗಳನ್ನು ಬಳಸಿಕೊಳ್ಳಲಾಯಿತು. ಮತ್ತೆ ಎಮ್ಮೆ ಕರುಗಳನ್ನೂ ವಧಿಸಲಾಯಿತು.

1956 ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬರುವವರೆಗೂ ಮುಂಬಯಿ ಪ್ರಾಂತದಲ್ಲಿಯೇ ಇದ್ದ ಬೆಳಗಾವಿಯಲ್ಲಿ ತಯಾರಾದ ಸಿಡುಬು ರೋಗದ ಲಸಿಕೆಯು ಇಡೀ ದೇಶಕ್ಕಲ್ಲದೇ ನೆರೆಹೊರೆಯ ದೇಶಗಳಿಗೂ ಪೂರೈಸಲ್ಪಡುತ್ತಿತ್ತು.
ಸದ್ಯ ಲಸಿಕೆಯನ್ನು ಸಂಗ್ರಹಿಸಿಡಲು ಶೈತ್ಯಾಗಾರಗಳನ್ನು ಬಳಸಲಾಗುತ್ತಿದೆ. ನಿರ್ಧಿಷ್ಟ ತಾಪಮಾನದಲ್ಲಿಯೇ ಲಸಿಕೆಯನ್ನು ಇರಿಸಲಾಗುತ್ತಿದೆ. ಆದರೆ 19 ನೇ ಶತಮಾನದ ಆರಂಭದಲ್ಲಿ ಈಗಿನಂತೆ ತಂತ್ರಜ್ಞಾನ ಇರಲಿಲ್ಲ. ಸದ್ಯ ಇರುವ ವ್ಯಾಕ್ಸಿನ್ ಡಿಪೊದ ಪರಿಸರದಲ್ಲಿಯ ಕಟ್ಟಡಗಳೇ ನಿಸರ್ಗದತ್ತ ತಂಪು ವಾತಾವರಣ ಹೊಂದಿದ್ದವು. ಅಲ್ಲಿಯೇ ಶೇಖರಿಡಲಾಗುತ್ತಿತ್ತು.
1977 ರವರೆಗೆ ಸಿಡುಬು ರೋಗವು ಸಂಪೂರ್ಣವಾಗಿ ನಿವಾರಣೆಯಾಯಿತು. ನಂತರ ಇಲ್ಲಿ ನಾಯಿ ಕಡಿತಕ್ಕೆ ನೀಡಲಾಗುವ ರೇಬಿಸ್ ಲಸಿಕೆ ತಯಾರಿಕೆ ಆರಂಭವಾಯಿತು. ಅನೇಕ ವರ್ಷಗಳ ಕಾಲ ಈ ಲಸಿಕೆ ತಯಾರಾಗುತ್ತಿತ್ತು. ಕ್ರಮೇಣ ಅದೂ ಸಹ ನಿಂತು ಹೋಯಿತು. ಈ ಡಿಪೊ ಕಟ್ಟಡದಲ್ಲಿ ಕುರಿ, ಎಮ್ಮೆ ಕರು ಮತ್ತು ಆಕಳು ಕರುಗಳನ್ನು ವಧಿಸುತ್ತಿದ್ದ ʼವಧೆ ಉಗ್ರಾಣಗಳುʼ ಇನ್ನೂ ಇವೆ. 1909 ರಲ್ಲಿ ಇಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ಹೆಸರುಗಳುಳ್ಳ ಫಲಕವೂ ಇದೆ.
ಸದ್ಯ ಕೊರೋನಾ ಲಸಿಕೆಯನ್ನೂ ಸಹ ಇದೇ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿ ಇದೆ. 156 ಎಕರೆ ಪ್ರದೇಶ ಹೊಂದಿರುವ ವ್ಯಾಕ್ಸಿನ್ ಡಿಪೊದಲ್ಲಿ ಸಾವಿರಾರು ಗಿಡಮೂಲಿಕೆಯ ಗಿಡಮರಗಳೂ ಇವೆ. ಅಲ್ಲಿ ಪ್ರವೇಶಿಸಿದರೆ ನಿಸರ್ಗದ ಮಡಿಲಲ್ಲಿ ಇದ್ದಂತೆ ಭಾಸವಾಗುತ್ತದೆ. ಕೊರೋನಾ ಲಸಿಕೆಯೇ ಸದ್ಯ ಸುದ್ದಿಯಲ್ಲಿರುವಾಗಲೇ ಅಪರೂಪದ ಲಸಿಕಾ ತಯಾರಿಕೆ ಕೇಂದ್ರವೇ ಬೆಳಗಾವಿಯಾಗಿತ್ತು ಎಂಬುದು ಬೆಳಗಾವಿಗರಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ.











