ಶಿವಮೊಗ್ಗದಲ್ಲಿ ಹರಿವ ಅವಳಿ ನದಿಗಳಾದ ತುಂಗಾ ಹಾಗೂ ಭದ್ರಾ ಕೂಡ್ಲಿಯಲ್ಲಿ ಸಂಗಮವಾಗಿ ತುಂಗಾ ಭದ್ರಾ ನದಿಯಾಗಿ ಹರಿದು ಸಾಗುತ್ತವೆ. ಈ ನದಿ ಮಲೆನಾಡಿನಲ್ಲಿ ವಿಶಿಷ್ಟ ಜೀವಸಂಕುಲಕ್ಕೆ ಆಶ್ರಯ ನೀಡಿದೆ. ಖಗ-ಮೃಗ, ಜಲಚರಗಳಿಗೆ ಆವಾಸ ಸ್ಥಾನವಾಗಿವೆ. ಅಳಿವಿನಂಚಿಗೆ ಬಂದಿರುವ ಮೊಸಳೆಗಳಿಗೂ ಕೂಡ ಸಂತಾನೋತ್ಪತ್ತಿಗೆ ಪ್ರಾಶಸ್ತ್ಯವಾದ ಸ್ಥಳ ಎಂದು ಸಾಬೀತು ಮಾಡಿದೆ. ಈ ಭಾಗದ ಜನರಿಗೆ ಮೊದಲಿಂದಲೂ ಭದ್ರಾ ನದಿ ನೀರಿನಲ್ಲಿ ಮೊಸಳೆಗಳಿರುವ ಮಾಹಿತಿ ಇದೆ. ಹಾಗೂ ಭದ್ರಾ ನದಿಯಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ ಆದರೆ ತುಂಗಾ ನದಿಯಲ್ಲಿ ಮೊಸಳೆಗಳಿವೆ ಎಂಬುದರ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ. ಆದರೆ ಈಗ ಮೀನುಗಾರರಿಗೆ ಸಿಗುತ್ತಿರುವ ಮೊಸಳೆಗಳು ಜನರಿಗೆ ಆಘಾತ ಮೂಡಿಸಿದ್ದರೆ ಪರಿಸರಾಸಕ್ತರಿಗೆ ಖುಷಿ ತಂದಿದೆ.
ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಎಂಬುವರು ಹಾಕಿದ ಮೀನುಗಾಳಕ್ಕೆ ಮರಿ ಮೊಸಳೆಯೊಂದು ಸಿಲುಕಿಕೊಂಡಿದ್ದು ಗ್ರಾಮಸ್ಥರಲ್ಲಿ ಸಂಚಲನ ಮೂಡಿಸಿದೆ. ಕಳೆದ ವರ್ಷವೂ ಸಹ ಇವರಿಗೆ ಈ ಭಾಗದಲ್ಲಿ ಮೊಸಳೆಯೊಂದು ಕಂಡಿತ್ತು. ಈಗ ತುಂಗಾ ನದಿ ತೀರದಲ್ಲಿ ಸಂಗಮಕ್ಕಿಂತ ಹಿಂದೆ ಮೊಸಳೆಗಳು ವಾಸವಿದ್ದು ಮರಿಗಳನ್ನ ಮಾಡಿಕೊಂಡಿವೆ ಎಂಬುದು ಖಾತ್ರಿಯಾಗಿದೆ. ರಶೀದ್ಗೆ ಸಿಕ್ಕ ಮರಿ ಮೊಸಳೆಯನ್ನ ಗಾಳದಿಂದ ಬಿಡಿಸಲಾಗದೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶಿವಮೊಗ್ಗ ವನ್ಯಜೀವಿ ವಿಭಾಗ ತಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದರೆ, ಶಾಂತಿ ಸಾಗರ ವಿಭಾಗ ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿ ಹಳ್ಳಿಗರಿಗೇ ಜವಾಬ್ದಾರಿ ವಹಿಸಿದೆ. ಸದ್ಯ ಮೊಸಳೆಯನ್ನ ತುಂಗಾ ಭದ್ರಾ ನದಿಗಳು ಸೇರುವ ಕೂಡಲಿಯಲ್ಲಿ ಬಿಟ್ಟು ಬರೋದಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ.
ಈ ಕುರಿತು ಮಾತನಾಡಿದ ಪಿಳ್ಳಂಗಿರಿ ರಂಗನಾಥ ಸ್ವಾಮಿ ದೇಗುಲದ ಅರ್ಚಕ ಮಿಥುನ್ ಅಯ್ಯಂಗಾರ್, ಮೊಸಳೆಗಳು ಭದ್ರಾದಲ್ಲಿ ಸಾಮಾನ್ಯವಾಗಿ ಕಾಣುತ್ತವೆ ಆದರೆ ತುಂಗಾ ನದಿಯಲ್ಲಿ ಅದರಲ್ಲೂ ಜನನಿಬಿಡ ಪ್ರದೇಶದಲ್ಲಿನ ತೀರದಲ್ಲಿ ಕಾಣಸಿಗುವುದು ಭಯ ಮೂಡಿಸಿದೆ. ತುಂಗಾ ನದಿಯಲ್ಲಿ ರೈತರ ಪಂಪ್ಸೆಟ್ಗಳು, ಮರಳು ಗಣಿಗಾರಿಕೆ ಅವ್ಯಾಹತವಾಗಿ ಸಾಗಿದೆ. ಇದರಿಂದ ಮೊಸಳೆಗಳು ವಿಚಲಿತಗೊಂಡು ಚದುರಿಕೊಂಡಿವೆ ಎಂದು ಹೇಳುತ್ತಾರೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಐ ಎಂ ನಾಗರಾಜ್ ತುಂಗಾ ನದಿ ಮೊಸಳೆ ಆವಾಸ ಸ್ಥಾನ ಎಂದು ಹೇಳುತ್ತಾರೆ. ಗಾಜನೂರಿನಲ್ಲಿ ನಿರ್ಮಿಸಿರುವ ತುಂಗಾ ಮೇಲ್ದಂಡೆ ಯೋಜನೆ ( ಡ್ಯಾಂ) ಹಿನ್ನೀರಲ್ಲಿ ಮೊಸಳೆಗಳು ಸಾಕಷ್ಟಿವೆ. ತುಂಗಾ ನದಿಯಲ್ಲಿ ಮೀನುಗಳು ಸಹ ಹೆಚ್ಚಾಗಿರೋದ್ರಿಂದ ಆಹಾರಕ್ಕೆ ಸಮಸ್ಯೆ ಇಲ್ಲ. ಈ ಭಾಗದ ಮೊಸಳೆಗಳು ಚಾನಲ್ಗಳ ಮೂಲಕವೂ ಸಂಚರಿಸುತ್ತವೆ ಆದರೆ ಎಲ್ಲಿಯೂ ಜನರ ಮೇಲೆ ದಾಳಿ ನಡೆಸಿಲ್ಲ ಎನ್ನುತ್ತಾರೆ.
ಗಾಜನೂರಿನವರೇ ಆದ ಪರಿಸರಾಸಕ್ತ ನಿತಿನ್ ಹೇರಳೆ ಅರಣ್ಯ ಇಲಾಖೆಯ ಇಬ್ಬಂದಿತನವನ್ನ ಪ್ರಶ್ನೆ ಮಾಡುತ್ತಾರೆ. ಅಳಿವಿನಂಚಿಗೆ ಬಂದಿರುವ ಮೊಸಳೆಗಳು ತುಂಗಾ ನದಿಯಲ್ಲೇನೋ ಸಂತಾನೋತ್ಪತ್ತಿ ಮಾಡುತ್ತಿವೆ ಆದರೆ ಅರಣ್ಯ ಇಲಾಖೆ ನಿಷೇಧಿತ ಪರಿಸರದಲ್ಲಿ ವಿವೇಚನಾರಹಿತವಾಗಿ ಹೋಟೆಲ್, ರೆಸ್ಟೋರೆಂಟ್ಗಳಿಗೆ ಅನುಮತಿ ನೀಡಿದೆ. ಮೀನುಗಾರಿಕೆ ನಿಷೇಧವಿದ್ದರೂ ಕಾನೂನು ಪರಿಪಾಲನೆ ಮಾಡುತ್ತಿಲ್ಲ. ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದೆ ಎಂದರು.