ನಿನ್ನೆ ಪಂಜಾಬ್ ನಲ್ಲಿ ನಡೆದ ಘಟನೆ ವಿಚಾರವಾಗಿ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಕಚೇರಿ, ಕೇಂದ್ರ ಸಚಿವರು, ಬಿಜೆಪಿ ವಕ್ತಾರರು ಬಾಯಿಗೆಬಂದಂತೆ ಮಾತನಾಡಿ ಮಾಧ್ಯಮಗಳಿಗೆ ಸುಳ್ಳು ಹೇಳಿ ಜನರ ಮನಸ್ಸು ಕೆಡಿಸಿ, ಪಂಜಾಬ್ ನಲ್ಲಿ ಇರುವ ದಲಿತ ನಾಯಕನ ಮುಖಂಡತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗುತ್ತಿದೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಜಾಬ್ ನಲ್ಲಿ ಮೊದಲ ಬಾರಿಗೆ ದಲಿತ ನಾಯಕ ಮುಂಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಡಾ.ಚೆನ್ನಿ ಅವರು ಬಹಳ ಸರಳ, ಸಜ್ಜನ ಹಾಗೂ ಮೃಧು ಭಾಷಿಗ. ಅಂತಹ ವ್ಯಕ್ತಿ ಅಥವಾ ಸರ್ಕಾರ ಕೆಳಗಿಳಿಸಲು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ.
ನಿನ್ನೆ ಘಟನೆಯಲ್ಲಿ ಭದ್ರತಾ ಲೋಪ ಉಂಟಾಗಿದ್ದು, ಕೇಂದ್ರ ಸರ್ಕಾರದ್ದು. ಗುಪ್ತಚರ, ಎಸ್ಜಿಪಿ ಹಾಗೂ ಕೇಂದ್ರದ ಅಧಿಕಾರಿಗಳು ಮೊದಲೇ ಅಲ್ಲಿ ಹೋಗಿ, ಪ್ರತಿ ಸ್ಥಳ ಪರಿಶೀಲಿಸಿ, ಎಲ್ಲಿ ಎಷ್ಟು ಜನ ಸೇರಬೇಕು ಎಂದು ತೀರ್ಮಾನಿಸಿರುತ್ತಾರೆ. ಪ್ರಧಾನಮಂತ್ರಿಗಳ ಹೆಲಿಕಾಪ್ಟರ್ ಎಲ್ಲಿ ಇಳಿಯಬೇಕು, ಅವರು ಎಲ್ಲಿ ಸಭೆ ಮಾಡುತ್ತಾರೆ, ಯಾರು ಇರಬೇಕು ಎಂಬ ಮಾರ್ಗಸೂಚಿಗಳು ಇವೆ.
ಅವರ ಪ್ರತಿನಿಮಿಷದ ಕಾರ್ಯಕ್ರಮವನ್ನು ಪಂಜಾಬ್ ಸರ್ಕಾರಕ್ಕೆ ಕಳುಹಿಸಿರುತ್ತಾರೆ. ಆದರೂ ಅವರು ಈ ಪಟ್ಟಿ ಅನುಗುಣವಾಗಿ ಪ್ರಯಾಣ ಮಾಡಿಲ್ಲ. ಫಿರೋಜ್ ಪುರದಲ್ಲಿ ನಡೆಯಬೇಕಾಗಿದ್ದ ಸಮಾವೇಷದಲ್ಲಿ ಬಿಜೆಪಿಯವರು 75 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇತ್ತು ಆದರೆ, ಅಲ್ಲಿ 700 ಜನರು ಇದ್ದರು. ಪೊಲೀಸ್ ದಾಖಲೆಯಲ್ಲಿ 5 ಸಾವಿರ ಜನ ಇದ್ದರು ಎಂದು ಹೇಳುತ್ತಾರೆ. ಅಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ವಿವಿಧ ಪೊಲೀಸ್ ದಳದ ಅಧಿಕಾರಿಗಳೇ 4-5 ಸಾವಿರ ಜನ ಇದ್ದರು.
ಜನರ ಕೊರತೆ ಮಾಹಿತಿ ಪಡೆದ ಪ್ರಧಾನಿಗಳು, ಈ ಕಾರ್ಯಕ್ರಮ ಮೊಟಕುಗೊಳಿಸಲು ನಿರ್ಧರಿಸಿದರು. ಅವರ ಕಾರ್ಯಕ್ರಮದ ವೇಳಾಪಟ್ಟಿ ಪ್ರಕಾರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಅಲ್ಲಿ ಇಳಿದು ಸಭೆಯಲ್ಲಿ ಭಾಗವಹಿಸಬೇಕಿತ್ತು.
ತಮ್ಮ ಸಭೆಗೆ ಜನ ಸೇರಿಲ್ಲ ಎಂಬ ಸಿಟ್ಟಿಂದ ರಾಜ್ಯ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ಹೆಲಿಕಾಪ್ಟರ್ ಮೂಲಕ ಹೋಗಬೇಕಾದವರು, ರಸ್ತೆ ಮಾರ್ಗದಲ್ಲಿ ಹೋಗಲು ತೀರ್ಮಾನಿಸಿದ್ದು, ಪ್ರಧಾನಮಂತ್ರಿಗಳು ಹಾಗೂ ಅವರ ಭದ್ರತಾ ಸಿಬ್ಬಂದಿ. ಕೇವಲ 20 ನಿಮಿಷಗಳ ಮುಂಚಿತವಾಗಿ ನಿಮ್ಮ ಪ್ರಯಾಣದ ಮಾರ್ಗ ಬದಲಾಗುತ್ತದೆ.
ಪ್ರಧಾನಮಂತ್ರಿಗಳ ಬಳಿ ಹೋಗುವವರು ಕೋವಿಡ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ತೆಗೆದುಕೊಂಡು ಹೋಗಬೇಕು. ಮುಖ್ಯಮಂತ್ರಿಗಳ ಸಿಬ್ಬಂದಿ ಹಾಗೂ ಮೂರ್ನಾಲ್ಕು ಅಧಿಕಾರಿಗಳು ಕೋವಿಡ್ ಸೋಂಕಿತರಾಗಿದ್ದ ಪರಿಣಾಮ ಅವರು ಪ್ರಧಾನಿಗಳನ್ನು ಬರಮಾಡಿಕೊಳ್ಳು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹಿಂದಿನ ದಿನ ರಾತ್ರಿ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದರು.
ಜತೆಗೆ ಕೆಲವು ಕಡೆ ರೈತರು ನಿಮಗೆ ತಮ್ಮ ಮನವಿ ನೀಡಲು ರಸ್ತೆಯಲ್ಲಿ ಬರುತ್ತಾರೆ ಅದರ ಬಗ್ಗೆ ನೀವು ಯೋಚಿಸಿ, ಹವಾಮಾನವೂ ಸರಿಯಿಲ್ಲ, ಹೀಗಾಗಿ ತಮ್ಮ ಕಾರ್ಯಕ್ರಮ ರದ್ದು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗಳು ಮೊದಲೇ ಮಾಹಿತಿ ನೀಡಿದ್ದರು.
ಆದರೆ ಐಬಿ ನಿರ್ದೇಶಕರು, ಪರಿಸ್ಥಿತಿ ಉತ್ತಮವಾಗಿದೆ, ಯಾವುದೇ ತೊಂದರೆ ಇಲ್ಲ, ಕಾರ್ಯಕ್ರಮಕ್ಕೆ ಹೋಗಬಹುದು ಎಂದು ಹೇಳಿದರು. ಹವಾಮಾನ ಉತ್ತಮವಾಗಿಲ್ಲ ಎಂದು ಗೊತ್ತಿದ್ದರೂ ಹೆಲಿಕಾಪ್ಟರ್ ನಲ್ಲಿ ಬರುವುದಾಗಿ ತಿಳಿಸಿದ್ದರೂ ರೈತರು ಅಲ್ಲಲ್ಲಿ ಅಸಮಾಧಾನವಾಗಿದ್ದರೂ ಕೊನೆ ಗಳಿಗೆಯಲ್ಲಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡಲು ಮುಂದಾಗುತ್ತಾರೆ.
ಸ್ಥಳೀಯ ವಾತಾವರಣ ತಿಳಿಸಿದ್ದರೂ ಅದನ್ನು ಕೇಳದೇ ಪ್ರಯಾಣ ಮಾಡಿ, ನಂತರ ಜನ ಸೇರಿಲ್ಲ ಎಂದು ತಿಳಿದು ಸುಮಾರು 10 ಕಿ.ಮೀ ಹೋಗಿ, ಅಲ್ಲಿ ರಸ್ತೆ ತಡೆಯಲಾಗಿದೆ ಹೀಗಾಗಿ ವಾಪಸ್ ಬರುತ್ತಿರುವುದಾಗಿ ಹೇಳಿದ್ದನ್ನು ನೀವೆಲ್ಲ ನೋಡಿದ್ದೀರಿ.
ಒಬ್ಬ ಪ್ರಧಾನಮಂತ್ರಿಗಳಿಗೆ ಎಷ್ಟು ಭದ್ರತೆ ಇರುತ್ತದೆ. ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಈ ಹಿಂದಿನ ಪ್ರಧಾನಮಂತ್ರಿಗಳಿಗಿಂತ ಸುಮಾರು ಹತ್ತುಪಟ್ಟು ಹೆಚ್ಚಿನ ಭದ್ರತೆ ಇದೆ. ವಿದೇಶಿ, ಬುಲೆಟ್ ಪ್ರೂಫ ಕಾರಿದ್ದರೂ, ಪಂಜಾಬ್ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.
ಪ್ರಧಾನ ಮಂತ್ರಿ ಪ್ರಯಾಣ ಮಾಡುವ ಮುನ್ನ ಅವರ ಬೆಂಗಾವಲು ವಾಹನಗಳು ಮೊದಲೇ ಸಂಚಾರ ಮಾಡಿ ಪರಿಸ್ಥಿತಿ ನೋಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಾರೆ. ರಸ್ತೆಯಲ್ಲಿ ಹೋದರೆ, ಮೊದಲು ಹತ್ತಾರು ಗಾಡಿ ಹೋಗಿ, ನಂತರ ಅವರ ಕಾರು ಭದ್ರತೆಯೊಂದಿಗೆ ಹೋಗುತ್ತದೆ. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ.
ಪ್ರಧಾನ ಮಂತ್ರಿಗಳ ಹಾಗೂ ನನ್ನ ಕಚೇರಿ ಸಂಸತ್ತಿನ ಒಂದೇ ಆವರಣದಲ್ಲಿ ಇದ್ದರೂ, ನಾನು ಮನೆಯಿಂದ ಕಚೇರಿಗೆ ಹೋಗುವಾಗ ಪ್ರಧಾನ ಮಂತ್ರಿಗಳ ಕಾರು ಹೋಗಲಿದೆ ಎಂಬ ಕಾರಣಕ್ಕೆ ನನ್ನ ಕಾರನ್ನೇ ತಡೆದು ನಿಲ್ಲಿಸಿದ್ದಾರೆ. ನಂತರ ಅಧಿಕಾರಿಗಳು ಬಂದು ನನ್ನ ಬಳಿ ಕ್ಷಮೆ ಕೋರಿದ್ದಾರೆ. ನಾನು ಈ ವಿಚಾರವನ್ನು ಅನಗತ್ಯವಾಗಿ ದೊಡ್ಡದು ಮಾಡಲಿಲ್ಲ.
ಪಂಜಾಬ್ ಸಿಎಂ ಚನ್ನಿ ಅವರು, ಪ್ಱದಾನಮಂತ್ರಿಗಳ ಕೂದಲಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ನಮ್ಮ ಪ್ರಾಣ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಆದರೂ ಅವರ ಮೇಲೆ ಇನ್ನಿಲ್ಲದ ಆರೋಪ ಮಾಡಿ ರಾಜಕೀಯ ಮಾಡುತ್ತಾರೆ.
ರಾಜಕೀಯ, ಮತಕ್ಕಾಗಿ ದೇಶದಲ್ಲಿ ಭಾವನಾತ್ಮಕ ಆರೋಪ ಮಾಡಿದರೆ ಸರಿಯಲ್ಲ. ಸಿಎಂ ಅವರು ನನ್ನ ಜತೆ ಮಾತನಾಡುವಾಗ, ಈ ವಿಚಾರವಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಮಾಜಿ ಮುಖ್ಯಕಾರ್ಯದರ್ಶಿ ಸಮಿತಿ ಮಾಡಿ ಮೂರು ದಿನಗಳ ಒಳಗಾಗಿ ಈ ಭದ್ರತಾ ಲೋಪದ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಗಳಿಗೆ ಗೌರವ ನೀಡಿ, ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ಅದನ್ನು ಮಾಡುತ್ತೇವೆ. ಆದರೆ ಮುಖ್ಯಮಂತ್ರಿಗಳ ವಿರುದ್ಧ ಪ್ರಧಾನಮಂತ್ರಿಗಳೇ, ನಾನು ಪಾರಾದೆ, ಇದೇ ದೊಡ್ಡ ವಿಚಾರ, ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿ ಎಂದು ಹೇಳುವುದು ಎಷ್ಟು ಸರಿ.
ನಿಮಗೆ ಅಷ್ಟು ಭದ್ರತೆ ಇದ್ದರೂ, ಸ್ಥಳೀಯ ಪರಿಸ್ಥಿತಿ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದರೂ ಸಭೆ ಮಾಡಲು ಮುಂದಾಗಿ, ಕೊನೆ ಗಳಿಗೆಯಲ್ಲಿ ಪ್ರಯಾಣದ ಮಾರ್ಗ ಬದಲಿಸಿ, ಪ್ರಚಾರಕ್ಕೆ ಕೇಂದ್ರ ಭದ್ರತಾ ಸಿಬ್ಬಂದಿ ವೈಫಲ್ಯವನ್ನು ರಾಜ್ಯ ಸರ್ಕಾರದ ಮೇಲೆ ಹಾಕುವುದು ಎಷ್ಟು ಸರಿ? ಆ ಮೂಲಕ ನೀವು ಪಂಜಾಬ್ ರಾಜ್ಯಕ್ಕೆ ಮಾಡುವ ಅಪಮಾನ. ಪ್ರಧಾನಮಂತ್ರಿಗಳ ಬೆನ್ನಲ್ಲಿ ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷರು ಟೀಕೆ ಮಾಡುವುದು ಖಂಡನೀಯ.
ಇಲ್ಲಿ ಭದ್ರತಾ ಲೋಪವಾಗಿದ್ದು, ಕೇಂದ್ರ ಭದ್ರತಾ ಪಡೆಗಳಿಂದವೇ ಹೊರತು ರಾಜ್ಯ ಸರ್ಕಾರದ ಲೋಪವಿಲ್ಲ.
ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈಜೋಡಿಸಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ‘ಗುಪ್ತಚರ ಇಲಾಖೆ, ಭದ್ರತಾಪಡೆಗಳು ಅವರ ಅಧಿಕಾರಿಗಳೇ ಇದ್ದಾರೆ, ಅವರನ್ನೇ ಕೇಳಲಿ. ಬಿಜೆಪಿ ಈ ರೀತಿ ಗಿಮಿಕ್ ರಾಜಕೀಯ ಮಾಡುವುದನ್ನು ಬಿಡಬೇಕು. ಜನರಿಗೆ ಒಂದು ಅಥವಾ ಎರಡು ದಿನ ಸುಳ್ಳು ಹೇಳಬಹುದು. ಸದಾಕಾಲ ಸುಳ್ಳು ಹೇಳಿ ಬದುಕಲು ಸಾಧ್ಯವಿಲ್ಲ’ ಎಂದು ಕಿಡಿ ಕಾರಿದ್ದಾರೆ.
ಪಾಕಿಸ್ತಾನ ಗಡಿಗೆ ಹತ್ತಿರವಿರುವ ಪ್ರದೇಶ ಇದಾಗಿದ್ದು, ಕ್ಷಿಪಣಿ ದಾಳಿಗೆ ಸೂಕ್ತ ಜಾಗ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರದೇಶದಲ್ಲಿ ಕಾರ್ಯಕ್ರಮ ಇಟ್ಟಿದ್ದು, ಕಾಂಗ್ರೆಸ್ ನವರಾ ಅಥವಾ ಬಿಜೆಪಿಯವರಾ? ಸುಮ್ಮನೆ ಇಂತಹ ಆರೋಪ ಯಾಕೆ ಮಾಡುತ್ತೀರಿ?’ ಎಂದರು.
ಕೇಂದ್ರದಿಂದ ಉದ್ದೇಶ ಪೂರ್ವಕವಾಗಿ ನಡೆದ ಲೋಪವೇ ಎಂಬ ಪ್ರಶ್ನೆಗೆ, ‘ಇದು ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿ ನಡೆದ ಘಟನೆ. ಪಂಜಾಬ್ ಪೊಲೀಸರು ರೈತರನ್ನು ದಾರಿಯಿಂದ ತೆರವುಗೊಳಿಸಿದ್ದರು. ಆನಂತರ ಕೆಲವರು ಅಲ್ಲಿ ತಮ್ಮ ಮನವಿ ಸಲ್ಲಿಸಲು ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಇದ್ದರೂ ಹೆಚ್ಚು ಭದ್ರತೆ ಹೊಂದಿದ್ದ ಪ್ರಧಾನಿಗಳು ಕೊನೆ ಹಂತದಲ್ಲಿ ಹೆಲಿಕಾಪ್ಟರ್ ಮೂಲಕ ಬಾರದೆ, ರಸ್ತೆ ಮೂಲಕ ಪ್ರಯಾಣ ಮಾಡಿದ್ದಾರೆ. ಮಾಹಿತಿ ಇದ್ದರೂ ಅವರು ಅದೇ ಮಾರ್ಗದಲ್ಲಿ ಬಂದಿದ್ದು ಯಾಕೆ? ತಮ್ಮ ಸಭೆಗೆ ಜನ ಬಾರದ ಹಿನ್ನೆಲೆಯಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.