ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೆಂಬ ಕಾರಣಕ್ಕೆ ಪ್ರಾಂಶುಪಾಲರು ತರಗತಿಗೆ ಪ್ರವೇಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕಳೆದ ಮೂರು ದಿನಗಳಿಂದ ನಾವು ಕಾಲೇಜಿಗೆ ಬಂದರೂ ಸಹ ತರಗತಿಗೆ ಹಾಜರಾಗಲು ಬಿಡುತ್ತಿಲ್ಲ. ಪ್ರಾಂಶುಪಾಲರಾದ ರುದ್ರೇಗೌಡ ತರಗತಿಯೊಳಗೆ ಬುರ್ಖಾ ಧರಿಸಿಕೊಂಡು ಕೂರಲು ಬಿಡುವುದಿಲ್ಲ ಎಂದು ಹೇಳಿರುವುದಾಗಿ ವಿದ್ಯಾರ್ಥಿನಿಯರು ದೂರಿದ್ದಾರೆ.
ನಮ್ಮಗೆ ಉರ್ದು, ಬ್ಯಾರಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಮಾತನಾಡಲು ಬಿಡುವುದಿಲ್ಲ. ಬೇರೆ ವಿದ್ಯಾರ್ಥಿನಿಯರಿಗೆ ತುಳು, ಕೊಂಕಣಿಯಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆ ಮತ್ತು ವಿದ್ಯಾರ್ಥಿಗಳ ನಡುವೆ ತಾರತ್ಯಮವನ್ನ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತರಗತಿಗಳಿಗೆ ಪ್ರವೇಶ ನಿರಾಕರಿಸುತ್ತಿರುವುದರಿಂದ ನಮ್ಮಗೆ ಹಾಜರಾತಿ ಕೊರತೆ ಎದುರಾಗುತ್ತದೆ ಮತ್ತು ಈ ವಿಚಾರವಾಗಿ ನಮ್ಮ ತಂದೆ ತಾಯಿ ಪ್ರಾಂಶುಪಾಲರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು ಸಹ ಪ್ರಾಂಶುಪಾಲರು ನಮ್ಮ ತಂದೆ ತಾಯಿಯ ಜೊತೆಗೆ ಮಾತನಾಡಲು ಸಿದ್ದರಿಲ್ಲ. ಅವರು, ಯಾವುದೇ ಕಾರಣಕ್ಕೂ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದಾಗಿ ವಿದ್ಯಾರ್ಥಿನಿಯರು ಹೇಳುತ್ತಾರೆ.
ಈ ಕುರಿತು ವಿದ್ಯಾರ್ಥಿ ಸಂಘಟನೆಗಳಾದ SDPI ಮತ್ತು ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾದ ಮುಖಂಡರು ವಿದ್ಯಾರ್ಥಿನಿಯರಿಗೆ ಅವಕಾಶ ನೀಡುವಂತೆ ಪ್ರಾಂಶುಪಾಲರಿಗೆ ಮನವಿಯನ್ನು ಸಲ್ಲಿಸಿದ್ದರು ಸಹ ಪ್ರಾಂಶುಪಾಲ ರುದ್ರೇಗೌಡ ಯಾವುದಕ್ಕೂ ಜಗ್ಗುತ್ತಿಲ್ಲ ಎಂದು ಹೇಳಿದ್ದಾರೆ.

ಆರು ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಈ ಕೋಮುವಾದಿಗಳ ವಿರುದ್ದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ SDPI ಅಧ್ಯಕ್ಷ ನಜೀರ್ ಅಹಮದ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಾಂಶುಪಾಲ ರುದ್ರೇಗೌಡ, ʻʻಕಾಲೇಜಿನಲ್ಲಿ 60ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಆರು ವಿದ್ಯಾರ್ಥಿನಿಯರು ಮಾತ್ರ ಬುರ್ಖಾ ಧರಿಸುತ್ತಾರೆ ಉಳಿದಂತೆ ಯಾರೂ ಸಹ ಬುರ್ಖಾವನ್ನ ಧರಿಸುವುದಿಲ್ಲ. ಕಾಲೇಜು ನಿಯಮಗಳಿಗೆ ಪೋಷಕರು ಬದ್ದವಾಗಿರುವುದಾಗಿ ಈ ಹಿಂದೆ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದರು ಮತ್ತು ಕಾಲೇಜಿನ ನಿಯಮಗಳಿಗೆ ಬದ್ದವಾಗಿರುವುದಾಗಿ ತಿಳಿಸಿದ್ದರುʼʼ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಸಿಯಿರುವ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ʻʻಘಟನೆ ನನ್ನ ಗಮನಕ್ಕೆ ಬಂದಿದ್ದು ತನಿಖೆಗೆ ಆದೇಶಿಸಲಾಗಿದೆ. ಪಿಯು ಇಲಾಖೆಯ ಉಪನಿರ್ದೇಶಕರಿಗೆ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿʼʼ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












