ದೇಶದಲ್ಲಿ ಡಿಸೆಂಬರ್ 23ರಂದು ‘ರೈತರ ದಿನ’ ಆಚರಿಸಲಾಗುತ್ತಿದೆ. ದೇಶದ ಉತ್ತರ ಭಾಗದಲ್ಲಿ ‘ಕಿಸಾನ್ ದಿವಸ್’ ಎನ್ನುತ್ತಾರೆ. ಸಮಸ್ಯೆಗಳ ಕುಲುಮೆಯಲ್ಲಿ ಬೇಯುತ್ತಿರುವ ರೈತರ ಸಂಕಷ್ಟಗಳು ಹಾಸಿ ಹೊದೆಯುವಷ್ಟಿವೆ. ತಮ್ಮದೇ ದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಅನ್ನದಾತನದು. ಅವರ ಸ್ಥಿತಿಯೇ ರೈತರ ದಿನವನ್ನಾಚರಿಸುವಂತಹ ಸಂಭ್ರಮದಲ್ಲಿ ನಾವಿಲ್ಲ ಎಂಬುದನ್ನು ಪ್ರತಿದ್ವನಿಸುತ್ತದೆ. ರೈತರ ಸರಣಿ ಸಮಸ್ಯೆಗಳಿಗೆ ಕೊನೆಯೇ ಇಲ್ಲ. ಪ್ರಕೃತಿ ಪ್ರಕೋಪ, ಬೆಳೆದ ಬೆಳೆಗೆ ಬೆಲೆ ಇಲ್ಲದಿರುವುದು, ಬೆಲೆ ಏರಿಕೆಯ ಬಿಸಿ, ಬೆಂಬಲ ಬೆಲೆ ಇಲ್ಲದೇ ನಷ್ಟ, ಬೆಳೆ ವಿಮೆಯು ಕೈಸೇರದ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ರೈತರ ದಿನದಂದು ಅವರ ಸಮಸ್ಯೆಗಳತ್ತ ಒಂದು ಕ್ಷಣ ಕಿ-ಕರಣ.
ಪ್ರಕೃತಿ ಪ್ರಕೋಪ
ರೈತರಿಗೆ ನಿಜವಾದ ಶತ್ರು ಪ್ರಕೃತಿಯೇ. ಪ್ರತಿ ವರ್ಷವೂ ಕಾಲಕಾಲಕ್ಕೆ ಮಳೆಯಾಗುವುದಿಲ್ಲ. ಬರಗಾಲ ರೈತರಿಗೆ ಶಾಪವಾಗಿ ಕಾಡುತ್ತದೆ. ಕೆಲವು ವರ್ಷ ಅತಿವೃಷ್ಟಿಯ ಶಾಪ. ರೈತರ ಲೆಕ್ಕಾಚಾರಗಳು ಯಾವಾಗಲೂ ತಲೆಕೆಳಗಾಗುತ್ತವೆ. ಮಳೆ ನಿರೀಕ್ಷೆಯನ್ನಿಟ್ಟುಕೊಂಡು ದುಬಾರಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ತಂದು, ಉತ್ತು ಬಿತ್ತುವ ರೈತರಿಗೆ ಯಾವಾಗಲೂ ನಿರಾಶೆ. ಸಕಾಲದಲ್ಲಿ ಮಳೆಯಾಗದೇ ಇದ್ದರೆ, ಬಿತ್ತಿದ ಬಿತ್ತನೆ ಬೀಜ ಒಣಗಿ ಹೋಗುತ್ತದೆ. ಹಾಕಿದ ಗೊಬ್ಬರವೂ ವ್ಯರ್ಥವಾಗುತ್ತದೆ. ಒಂದು ವೇಳೆ ಅತಿವೃಷ್ಟಿಯಾದರೂ ಬಿತ್ತಿದ ಬೀಜ ಮತ್ತು ಗೊಬ್ಬರ ಮಳೆ ನೀರಲ್ಲಿ ಕೊಚ್ಚಿ ಹೋಗುತ್ತದೆ. ಸಂಕಷ್ಟಗಳು ಮಳೆಯ ರೂಪದಲ್ಲೂ ಸುರಿಯುತ್ತವೆ. ಬರಗಾಲದ ರೂಪದಲ್ಲೂ ಬಾಧಿಸುತ್ತವೆ.
ಬೆಲೆಏರಿಕೆಯ ಬರೆ
ಬರಗಾಲವಾಗಲೀ, ಅತಿವೃಷ್ಟಿಯ ಸಮಯವಾಗಲೀ ತರಕಾರಿಗಳ ಬೆಲೆ ಏರುತ್ತವೆ. ಆಗೆಲ್ಲ ಸಾಮಾನ್ಯ ಗ್ರಾಹಕರು ತರಕಾರಿ ಬೆಳೆಯುವ ರೈತರನ್ನೇ ದೂಷಿಸುತ್ತಾರೆ. ಇಂತಹ ಸಂದರ್ಭದಲ್ಲಿ ರೈತರೇ ಹೆಚ್ಚು ನಷ್ಟ ಅನುಭವಿಸುತ್ತಾರೆ. ಏರಿದ ಬೆಲೆಗಳ ಲಾಭ ರೈತರಿಗೆ ದಕ್ಕುವುದೇ ಇಲ್ಲ. ಅದು ದಲ್ಲಾಳಿಗಳ ಪಾಲಾಗುತ್ತದೆ. ನಿಜವಾಗಿಯೂ ಬೆಲೆ ಏರಿಕೆಯ ಬಿಸಿ ಹೆಚ್ಚು ತಟ್ಟುವುದು ರೈತರಿಗೇ. ಪ್ರತಿ ವರ್ಷ ರೈತರು ಬಳಸುವ ಬಿತ್ತನೆ ಬೀಜ, ರಾಸಯನಿಕ ಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳ ಬೆಲೆ ಏರುತ್ತದೆ. ಇದರ ಜತೆಗೆ ಪೆಟ್ರೋಲ್ ಡಿಸೇಲ್ ದರ ಏರಿದರೆ ಸಂಬಳ ಪಡೆಯುವ ವರ್ಗಕ್ಕಿಂತ ಹೆಚ್ಚು ಸಂಕಷ್ಟಕ್ಕೆ ಸಿಲುಕುವುದು ರೈತರೇ. ಪೆಟ್ರೋಲ್, ಡಿಸೇಲ್ ದರ ಏರಿದಂತೆಲ್ಲ, ರೈತರ ಉತ್ಪನ್ನಗಳ ಸಾಗಾಟ ದರವೂ ಏರುತ್ತದೆ. ಎಲ್ಲವನ್ನು ನಿಯಂತ್ರಿಸುವ ಸರ್ಕಾರ ಪೆಟ್ರೋಲ್ ದರವನ್ನು ನಿಯಂತ್ರಿಸುವುದಿಲ್ಲ, ಸಾಗಾಟ ದರವನ್ನು ನಿಯಂತ್ರಿಸುವುದಿಲ್ಲ.

ಮರೀಚಿಕೆಯಾದ ಬೆಂಬಲ ಬೆಲೆ
ಎಲ್ಲಾ ಕೃಷಿ ಉತ್ಪನ್ನಗಳಿಗೂ ಬೆಂಬಲ ಬೆಲೆ ಘೋಷಿಸಿ ಅದನ್ನು ಕಾನೂನುಬದ್ಧ ಮಾಡಬೇಕೆಂಬ ಬೇಡಿಕೆ ಬಳಹ ಹಿಂದಿನದು. ಈಗ ಆಯ್ದ ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಘೋಷಿಷಲಾಗುತ್ತದೆ. ಮಾರುಕಟ್ಟೆಯಲ್ಲಿ ಸುಗ್ಗಿ ವೇಳೆ ದರಗಳು ಕುಸಿಯುತ್ತವೆ. ಸರ್ಕಾರ ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಬೆಂಬಲ ಬೆಲೆಯಲ್ಲಿ ಖರೀದಿಸುವುದಿಲ್ಲ. ಖರೀದಿಸಿದ ಉತ್ಪನ್ನಗಳಿಗೆ ಹಣಪಾವತಿ ವಿಳಂಬ ಮಾಡಲಾಗುತ್ತದೆ. ಕೈಸಾಲ ಮಾಡಿದ ರೈತರು ಬಡ್ಡಿ ಹೊರೆಯಿಂದ ತಪ್ಪಿಸಿಕೊಳ್ಳಲು ಖಾಸಗಿಯವರಿಗೆ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡುತ್ತಾರೆ. ನಷ್ಟ ಅನುಭವಿಸುತ್ತಾರೆ. ದೆಹಲಿಯಲ್ಲಿ ರೈತರು ವರ್ಷವಿಡೀ ಹೋರಾಟ ಮಾಡಿದ್ದು, ಕನಿಷ್ಠ ಬೆಂಬಲ ಬೆಲೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಎಂಬ ಕಾರಣಕ್ಕೆ. ಬೆಂಬಲಬೆಲೆಯನ್ನು ಕಾನೂನುಬದ್ಧಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ.
ಮೌಲ್ಯಯುತ ಬೆಲೆ ದಕ್ಕದು
ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆಯೇ ಸಿಗುವುದಿಲ್ಲ. ರೈತರು ಎದುರಿಸುತ್ತಿರುವ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯದಾದ ಸಮಸ್ಯೆ ಇದು. ರೈತ ಸಂಘ ಹುಟ್ಟುವ ಮುನ್ನವೂ ಬೇರೆ ಬೇರೆ ರೂಪದಲ್ಲಿ ಬೆಳೆಗೆ ತಕ್ಕ ಬೆಲೆ ನೀಡುವಂತೆ ಒತ್ತಾಯಿಸಲಾಗುತ್ತಿತ್ತು. ಆದರೆ, ರೈತ ಸಂಘ ರೂಪುಗೊಂಡ ನಂತರ ಬೆಳೆಗೆ ತಕ್ಕ ಬೆಲೆ ನೀಡಬೇಕೆಂಬ ಒತ್ತಾಯಕ್ಕೆ ಸಂಘಟಿತ ಮತ್ತು ಸಾಂಸ್ಥಿಕ ಸ್ವರೂಪ ಬಂತು. ರೈತರು ಈಗಲೂ ತಮ್ಮ ಬೆಳೆಗೆ ತಕ್ಕ ಬೆಲೆ ಸಿಗದೇ, ಬೀದಿಯಲ್ಲಿ ಟೊಮಾಟೊ, ಈರುಳ್ಳಿ, ಆಲೂಗೆಡ್ಡೆ ಇತ್ಯಾದಿಗಳನ್ನು ಸುರಿದು ಪ್ರತಿಭಟಿಸುವ ಚಿತ್ರಗಳು ಸಾಮಾನ್ಯವಾಗಿ ಬಿಟ್ಟಿವೆ. ಪ್ರತಿ ಸರ್ಕಾರಗಳೂ ರೈತರ ಉದ್ಧಾರದ ಮಾತುಗಳನ್ನಾಡಿಯೇ ಅಧಿಕಾರಕ್ಕೆ ಬರುತ್ತವೆ. ಕುಸಿದ ಬೆಲೆಯನ್ನು ಮೇಲೆತ್ತುವ, ರೈತರ ಆತ್ಮವಿಶ್ವಾಸವನ್ನು ವೃದ್ಧಿಸುವ ರಚನಾತ್ಮಕ ಯೋಜನೆಗಳನ್ನು ಯಾವ ಸರ್ಕಾರವೂ ತಂದಿಲ್ಲ.
ಬೆಳೆ ವಿಮೆ ಕೈ ಸಿಗದು
ಕೃಷಿ ಬೆಳೆಗಳಿಗೆ ವಿಮಾ ವ್ಯವಸ್ಥೆ ಜಾರಿಯಲ್ಲಿದೆ. ರೈತರು ಸಾಲಪಡೆಯುವಾಗಲೇ ಬ್ಯಾಂಕುಗಳು, ರೈತರ ಸಹಕಾರ ಸಂಘಗಳು ಬೆಳೆ ವಿಮೆಯ ಪ್ರೀಮಿಯಂ ಅನ್ನು ಕಡಿತ ಮಾಡಿಕೊಂಡಿರುತ್ತವೆ. ಆದರೆ, ಪ್ರಕೃತಿ ಪ್ರಕೋಪದಿಂದ ರೈತರ ಬೆಳೆಗೆ ಹಾನಿಯಾದಾಗ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆ ರೈತರಿಗೆ ಸಿಗುವುದಿಲ್ಲ. ವಿಮಾ ಕಂಪನಿಗಳ ಹಿತಸಕ್ತಿ ಕಾಪಾಡುವ ಸಲುವಾಗಿಯೇ ವಿಮಾ ನಿಯಮಗಳನ್ನೂ ರೂಪಿಸಲಾಗಿದೆ.ಬೆಳೆ ವಿಮೆಯ ಸ್ವರೂಪವೇ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ದಕ್ಕದಂತಹ ತಾಂತ್ರಿಕ ಅಂಶಗಳನ್ನು ನಿಯಮಗಳಲ್ಲಿ ಸೇರಿಸಲಾಗಿದೆ. ಬೆಳೆ ವಿಮೆ ನಷ್ಟ ಪರಿಹಾರ ನಿರ್ಧರಿಸುವಾಗ ಆಯಾ ರೈತರ ಜಮೀನುಗಳನ್ನು ಒಂದು ಘಟಕವಾಗಿ ಪರಿಗಣಿಸುವುದಿಲ್ಲ. ಇಡೀ ಒಂದು ಹೋಬಳಿಯನ್ನು ಘಟಕವಾಗಿ ಪರಿಗಣಿಸಲಾಗುತ್ತದೆ. ಇಡೀ ಹೋಬಳಿಯಲ್ಲಾದ ಬೆಳೆ ನಷ್ಟವನ್ನು ಅಂದಾಜಿಸಿ, ಸರಾಸರಿ ನಷ್ಟ ಪರಿಹಾರ ಮೊತ್ತ ನೀಡಲಾಗುತ್ತದೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ. ಪ್ರತಿ ಜಮೀನನ್ನು ಒಂದು ಘಟಕವಾಗಿ ಪರಿಗಣಿಸದೇ ನೀಡುವ ವಿಮಾ ಪರಿಹಾರದಿಂದ ರೈತರಿ ಯಾವ ಉಪಯೋಗವೂ ಇಲ್ಲ.












