ರಾಜ್ಯದಲ್ಲಿ ಮತ್ತೆ ಹೊಸ ಐದು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟಾರೆ ರಾಜ್ಯದಲ್ಲಿ ಎಂಟು ಓಮೈಕ್ರಾನ್ ಕೇಸ್ ಪತ್ತೆಯಾದಂತಾಗಿದೆ. ಈಗಾಗಲೇ ಓಮೈಕ್ರಾನ್ ರೂಪಾಂತರಿಯಿಂದ ಮೂರನೇ ಅಲೆ ಭೀತಿಯೂ ಎದುರಾಗಿದೆ. ಹೀಗಾಗಿ ಕೆಲವು ಕಠಿಣ ಕ್ರಮಗಳು ಸರ್ಕಾರದಿಂದ ತೆಗೆದುಕೊಳ್ಳಲಾಗಿದೆಯಾದರೂ, ಆಗಾಗ್ಗೆ ಹೊಸ ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿದೆ. ಇನ್ನು ಹೊಸದಾಗಿ ಬೆಳಕಿಗೆ ಬಂದಿರುವ ಐದು ಓಮೈಕ್ರಾನ್ ಸೋಂಕಿತರ ಹಿನ್ನೆಲೆಯ ಸಂಕ್ಷಿಪ್ತ ವಿವರ ಇಲ್ಲಿದೆ.
ಓಮೈಕ್ರಾನ್ ಕೇಸ್ 4 : 19 ವರ್ಷದ ಯುವತಿಗೆ ಓಮೈಕ್ರಾನ್ ದೃಢ
19 ವರ್ಷದ ಯುವತಿ ಇಂಗ್ಲೆಂಡ್ನಿಂದ ವಾಪಾಸ್ ಆಗಿದ್ದರು. ಡಿಸೆಂಬರ್13ರಂದು ಯುಕೆಯಿಂದ ಬೆಂಗಳೂರಿಗೆ ಬಂದಿದ್ದ ಯುವತಿ, ಕೊರೊನಾ ನೆಗೆಟಿವ್ ರಿಪೋರ್ಟ್ನೊಂದಿಗೆ ಆಗಮಿಸಿದ್ದರು. ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟೆಸ್ಟ್ ವೇಳೆ ಸೋಂಕು ದೃಢವಾಗಿದೆ. ಅದೇ ದಿನ ವಿಮಾನ ನಿಲ್ದಾಣದಿಂದ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಸೋಂಕಿತೆಯ ಅಪೇಕ್ಷೆಯ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕಿತೆಗೆ ಯಾವುದೇ ಸಂಪರ್ಕತೆ ಪತ್ತೆಯಾಗಿಲ್ಲ. ಅಂದಹಾಗೆ, ಇವರು ಎರಡು ಡೋಸ್ ಕೋವಿಶೀಲ್ಡ್ ಪಡೆದುಕೊಂಡಿದ್ದಾರೆ.
ಓಮೈಕ್ರಾನ್ ಕೇಸ್ 5: 52 ವರ್ಷದ ವ್ಯಕ್ತಿಗೆ ಓಮೈಕ್ರಾನ್
ಡಿ.13ರಂದು ನೈಜೀರಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟೆಸ್ಟ್ ವೇಳೆ ಸೋಂಕು ದೃಢವಾಗಿದೆ. ಪಾಸಿಟಿವ್ ಬಂದಿದ್ದರೂ ಈತನಿಗೆ ಬೆಳಗಾವಿಗೆ ತೆರಳಲು ಅವಕಾಶ ನೀಡಲಾಗಿತ್ತು. ಹೀಗಾಗಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ್ದ ಓಮೈಕ್ರಾನ್ 52 ವರ್ಷದ ಸೋಂಕಿತ. ಮರುದಿನ ಸೋಂಕಿತನಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ರವಾನಿಸಲಾಗಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರ ಟೆಸ್ಟ್ ವರದಿ ಬರಬೇಕಿದೆ. ಇವರು ಕೂಡ 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು.
ಓಮೈಕ್ರಾನ್ ಕೇಸ್ 6: 70 ವರ್ಷದ ವೃದ್ಧೆಗೆ ಸೋಂಕು
ಡಿಸೆಂಬರ್ 3ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ವೃದ್ಧೆ, ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿ ವಾಪಾಸ್ ಆಗಿದ್ದರು. ದೆಹಲಿ ಓಮೈಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ವೃದ್ಧೆ, ಸೋಂಕಿನ ಲಕ್ಷಣ ಹಿನ್ನೆಲೆ ಡಿಸೆಂಬರ್ 5ರಂದು ವೃದ್ಧೆಗೆ RTPCR ಟೆಸ್ಟ್ ಮಾಡಲಾಗಿದೆ. ನಗರದ ಮಹದೇವಪುರದ ಖಾಸಗಿ ಲ್ಯಾಬ್ನಲ್ಲಿ ಟೆಸ್ಟಿಂಗ್ ನಡೆಸಲಾಗಿದೆ. ಡಿಸೆಂಬರ್ 6ರಂದು ವೃದ್ಧೆಗೆ ಓಮೈಕ್ರಾನ್ ಸೋಂಕು ಇರೋದು ದೃಢವಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇವರೂ ಕೂಡ 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು.
ಓಮೈಕ್ರಾನ್ ಕೇಸ್ 7: 36 ವರ್ಷದ ವ್ಯಕ್ತಿಗೆ ತಗುಲಿದ ಓಮೈಕ್ರಾನ್
ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿ ಡಿಸೆಂಬರ್ 3ರಂದು ದೆಹಲಿಯಿಂದ 36 ವರ್ಷದ ಇವರು ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದರು. ಇವರೂ ಕೂಡ 70 ವರ್ಷದ ಓಮೈಕ್ರಾನ್ ಸೋಂಕಿತೆಯಂತೆ ದೆಹಲಿಯಲ್ಲಿ ಪತ್ತೆಯಾದ ಓಮೈಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಹೀಗಾಗಿ ಡಿಸೆಂಬರ್ 5ರಂದು ಇವರಿಗೆ RTPCR ಟೆಸ್ಟ್ ಮಾಡಲಾಗಿದೆ. ಡಿಸೆಂಬರ್ 6ರಂದು ವರದಿ ಬಂದಿದ್ದು, ಓಮೈಕ್ರಾನ್ ತಗುಲಿರುವುದು ಧೃಡವಾಗಿದೆ. ಅಂದೇ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಇವರೂ ಪಡೆದಿದ್ದರು. 70 ವರ್ಷದ ವೃದ್ಧೆ ಹಾಗೂ 36 ವರ್ಷದ ಈತ ತಾಯಿ-ಮಗ ಎಂದು ಹೇಳಲಾಗುತ್ತಿದೆ.
ಓಮೈಕ್ರಾನ್ ಕೇಸ್ 8: 33 ವರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಓಮೈಕ್ರಾನ್
ಡಿಸೆಂಬರ್ 8ರಂದು ದಕ್ಷಿಣ ಆಫ್ರಿಕಾದಿಂದ ದೆಹಲಿಗೆ ಪ್ರಯಾಣ ಮಾಡಿದ್ದ ಈ 33 ವರ್ಷದ ಓಮೈಕ್ರಾನ್ ಸೋಂಕಿತ ಅದೇ ದಿನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ವರದಿ ನೆಗೆಟಿವ್ ಇತ್ತು. ಆದರೆ ಡಿಸೆಂಬರ್ 10ರಂದು ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದ್ದಕ್ಕೆ ಮತ್ತೆ ಟೆಸ್ಟ್ ನಡೆಸಲಾಗಿದೆ. ವರದಿಯಲ್ಲಿ ಓಮೈಕ್ರಾನ್ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೂ ಕೂಡ 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು.
ಹೊಸ ಐದು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಒಟ್ಟು 8 ಓಮೈಕ್ರಾನ್ ಕೇಸ್ ಪತ್ತೆಯಾಗಿದೆ. ಈ ಪೈಕಿ 4 ಪ್ರಕರಣಗಳು WHO ಗುರುತಿ ಮಾಡಿದ At Risk ದೇಶದಿಂದ ಬಂದವರು. 3 ಪ್ರಕರಣಗಳು ದೆಹಲಿಯಿಂದ ಬಂದವರಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಉಳಿದಂತೆ ಒಬ್ಬ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರುವುದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ʻಪ್ರತಿಧ್ವನಿʼಗೆ ತಿಳಿಸಿದೆ.