ಅನೇಕರಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು. ಕೆಲವರ ಪಾಲಿಗೆ ಅವು ಎಂದಿಗೂ ನಿರ್ಜೀವ ಅಲ್ಲ. ನಿಜಕ್ಕೂ ಅವುಗಳು ಪ್ರೀತಿಯ ಸೆಲೆಗಳಾಗಿವೆ. ಅದರ ಮೇಲೆ ಅದೇನೋ ವ್ಯಾಮೋಹ. ಈಗಲೂ ಬಹಳಷ್ಟು ಗ್ರಾಮೀಣ ಭಾಗಗಳಲ್ಲಿ ಪುರಾತನ ವಸ್ತುಗಳ ಬಳಕೆಯಾಗುತ್ತಿವೆ. ಅವುಗಳನ್ನು ಒಟ್ಟು ಗೂಡಿಸಿ ಪ್ರದರ್ಶನಕ್ಕೀಟ್ಟಿದ್ದಾರೆ ವಿದ್ಯಾರ್ಥಿಗಳು.
ಹೌದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಇತ್ತೀಚಗೆ ಶಿವಮೊಗ್ಗದ ದೊಡ್ಡಮತ್ಲಿ, ಆಡಿನಕೊಟ್ಟಿಗೆ, ರೇಚಿಕೊಪ್ಪ ಮತ್ತು ಕೆರೆಹಳ್ಳಿಗಳಲ್ಲಿ ಎನ್ಎಸ್ಎಸ್ ಶಿಬಿರ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು ಗ್ರಾಮದ ಮನೆ ಮನೆಗೆ ತೆರಳಿ ಪುರಾತನ ವಸ್ತುಗಳನ್ನು ಸಂಗ್ರಹಿಸಿ ವಿನೂತನ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಗ್ರಾಮೀಣ ಭಾಗದ ಜನರನ್ನು ಈ ಸಂಗ್ರಾಲಯ ಕೈ ಬೀಸಿ ಕರೆಯುತ್ತಿದ್ದು, ವಿದ್ಯಾರ್ಥಿಗಳು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದನ್ನು ನೋಡುತ್ತಿದ್ದರೆ ಹಬ್ಬ, ಹರಿದಿನಗಳು ನೆನಪಿಗೆ ಬರುತ್ತವೆ. ತಾತ ಮುತ್ತಾರ ನೆನಪಿನ ಜೊತೆಗೆ ಆ ದಿನಗಳಲ್ಲಿ ನಡೆಯುತ್ತಿರುವ ಆಚರಣೆ, ದಿನಂಪ್ರತಿ ಅಡುಗೆ ತಯಾರಿಸಲು ಉಪಯೋಗಿಸಿದ ಪಾತ್ರೆ ಪಗಡೆಗಳ ನೆನಪು ಮರುಕಳಿಸುತ್ತದೆ.
ಶಿವಮೊಗ್ಗದ ಹಳ್ಳಿಯೊಂದರಲ್ಲಿ ನಡೆದ ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಸಿಕ್ಕ ಹಳೆಯ ವಸ್ತುಗಳು ಈಗ ಒಂದು ಮ್ಯೂಸಿಯಂ ಆರಂಭಕ್ಕೆ ದಾರಿಯಾಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೂ ವೀಕ್ಷಣೆಯ ತಾಣವಾಗಿದೆ.
ಈ ಸಂಗ್ರಹಾಲಯವು ಪ್ರಾಚೀನ ಪರಂಪರೆಯ ಪುಟಗಳನ್ನು ನೆನಪಿಸುವಂತಿದ್ದು, ಭಾರೀ ಪ್ರಶಂಸೆಗೂ ಪಾತ್ರವಾಗಿದೆ. ಈ ವಿಶಿಷ್ಟ ಮ್ಯೂಸಿಯಂ ಗೆ ಸಹ್ರಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮೋಹನ ಚಂದ್ರಗುತ್ತಿ ರೂವಾರಿ ಎಂಬುದು ವಿಶೇಷ. ಇಲ್ಲಿ ಹಳೆ ಕಾಲದ ಫಿಲಿಪ್ಸ್ ರೇಡಿಯೋಗಳು, ಬೆತ್ತದ ಬುಟ್ಟಿಗಳು, ಮರದಿಂದ ನಿರ್ಮಿತ ಎತ್ತಿನ ಬಂಡಿ ಚಕ್ರಗಳು, ಮರದ ಹುಟ್ಟುಗಳು, ಹುಲ್ಲಿನ ಚಾಪೆ, ಹೊಸ್ತಿಲ ಬಾಗಿಲಿನ ಚೌಕಟ್ಟು, ಲ್ಯಾಟೀನುಗಳು ಹೀಗೆ ಮಲೆನಾಡಿನ ಸೊಗಡನ್ನು ನಮ್ಮ ಕಣ್ಮುಂದೆ ತರುವಂತಿದೆ.
ಏಳು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಕೊನೆಯ ದಿನ ಪುರಾತನ ವಸ್ತುಗಳನ್ನು ಸಂಗ್ರಹಿಸಿ ತರಬೇಕು ಎಂದು ಸೂಚಿಸಲಾಗಿತ್ತು. ಶಿಬಿರದ ವಿದ್ಯಾರ್ಥಿಗಳು ಆಗಲೇ ಹಳ್ಳಿ ಒಡನಾಟವಿರುವುದರಿಂದ ಇಂತಹ ವಸ್ತುಗಳನ್ನು ಸಂಗ್ರಹಿಸಿ ತಂದರು. ಬಹಳ ಮುಖ್ಯವಾಗಿ ಈ ಹಳ್ಳಿಗಳಲ್ಲಿ ಜನರೇ ಪ್ರೀತಿಯಿಂದ ಈ ವಸ್ತುಗಳನ್ನ ತಲೆ ಮೇಲೆ ಹೊತ್ತುಕೊಂಡು ತಂದು ಶಿಬಿರಕ್ಕೆ ತಲುಪಿಸಿದ್ದರು. ಅವುಗಳನ್ನೆಲ್ಲಾ ಸಂಗ್ರಹಿಸಿ ಕಾಲೇಜಿನಲ್ಲಿ ಕ್ರಮಬದ್ಧವಾಗಿ ಜೋಡಿಸಿ ವೈಜ್ಞಾನಿಕವಾಗಿ ಅಣಿಗೊಳಿಸಲಾಗಿದೆ.
ಹಿಂದಿನ ಕಾಲದಲ್ಲಿ ಗೃಹ ಬಳಕೆಯಾಗುತ್ತಿದ್ದ ರೈತಾಪಿ ಹಿನ್ನೆಲೆಯ ಅಮೂಲ್ಯ ಪರಿಕರಗಳನ್ನು ಸಂಗ್ರಹಿಸುವ ಯೋಚನೆ ಹಳೆಯ ಸಂಪ್ರದಾಯಗಳನ್ನು ನೆನಪು ಮಾಡಿಕೊಳ್ಳಲು ಈ ಮ್ಯೂಸಿಯಂ ಮಾದರಿಯಾಗಿದೆ ಎಂದೇ ಹೇಳಬಹುದು.