ಇದು ಜಾಲಿ! ಎಲ್ಲೆಂದರಲ್ಲಿ ಜಾಲಿಯಾಗಿ ಬೆಳೆಯುವ ಜಾತಿಯ ಮುಳ್ಳು ಪೊದೆಯಿದು. ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಇದು ಬೇರು ಬಿಟ್ಟು, ತನ್ನದೆಯಾದ ದಟ್ಟ ಪೊದೆಯಾಕಾರದ ಕಾಡನ್ನು ಬೆಳೆಯುವ ಛಾತಿಯನ್ನು ಹೊಂದಿದೆ.
ಉತ್ತರ ಕರ್ನಾಟದ ಜಿಲ್ಲೆಗಳ ಬಯಲು ಪ್ರದೇಶದಲ್ಲಿ ಮತ್ತು ಡೋಣಿ ಸಾಲಿನಲ್ಲಿ ಹಾಗೂ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬೆಳೆಯುವ ಜಾಲಿ, ಬಹುಪಯೋಗಿ ಮುಳ್ಳಿನ ಕಂಟಿಯಾಗಿದೆ.
ಜಾಲಿ ಜಾತಕ
ಸ್ವತಂತ್ರ ಪೂರ್ವದಲ್ಲಿ ಜಾಲಿಯನ್ನು ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸುವ ಮತ್ತು ಅಗ್ಗಿಷ್ಟಿಕೆಯನ್ನು ಉರಿಸಿಕೊಳ್ಳಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಇದನ್ನು ಕರ್ನಾಟಕದಲ್ಲಿ ಸರ್ಕಾರಿ ಜಾಲಿ ಅಂತಲೂ ಕರೆಯುತ್ತಾರೆ. ಮೂಲತಃ ಇದು ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿ ಕಂಡು ಬರುವ, ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲವಿದು.
ರಾಜ್ಯದ ಬಳ್ಳಾರಿ ಭಾಗದಲ್ಲಿ ಈ ಜಾಲಿ ಮರವು ಮೊದಲ ಬಾರಿಗೆ ಬೇರು ಬಿಟ್ಟ ಉದಾಹರಣೆಯಿದೆ. ಈಗಲೂ ಈ ಮುಳ್ಳು ಪೊದೆಯನ್ನು ಬಳ್ಳಾರಿ ಜಾಲಿಯಂದು ಉತ್ತರ ಕರ್ನಾಟಕದ ರೈತರು ಗುರುತಿಸುತ್ತಾರೆ. ಬಳ್ಳಾರಿ ಜಾಲಿ ಇದು, ಮೂಲತಃ ಹಂದಿ ಸಾಕಾಣಿಕೆಗೆ ಬಳಕೆಯಾಗುವ ಪೊದೆಯಾಗಿದೆ. ಜಾಲಿಗಿಡದ ಹೊಂಬಣ್ಣದ ಹಣ್ಣಾದ ಕಾಯಿಗಳು ಬೆಲ್ಲದ ರುಚಿಯನ್ನು ಹೊಂದಿರುತ್ತವೆ. ಅದರೊಳಗಿರುವ ಬೀಜಗಳು ವಿಷಕಾರಿಯಾಗಿರುತ್ತವೆ. ಇದರ ಕಾಯಿಗಳನ್ನು ಹಂದಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರೊಂದಿಗೆ ಜಾಲಿಗಿಡ, ರೈತರ ಪಾಲಿಗೆ ಹೊಲದ ಬದುಗಳಲ್ಲಿ ಜೀವಂತ ಬೇಲಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರು ಇದನ್ನು ಉರುವಲಾಗಿ ಬಳಸುತ್ತಾರೆ.
ಬಹುಪಯೋಗಿ ಈ ಜಾಲಿ
ಜಾಲಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ದೊಡ್ಡ ಜಾಲಿ, ಸಣ್ಣ ಜಾಲಿ, ರಾಮಜಾಲಿ, ಕರಿಜಾಲಿ, ಹಿಕ್ಜಾಲಿ, ಜೀನಿಕಂಟಿ ಎಂದು ಕರೆಯಲ್ಪಡುತ್ತದೆ. ಬಿದರಿನಂತೆ ಇದು ಮೆದುವಾಗಿ ಬಾಗುವ ಗುಣವನ್ನು ಹೊಂದಿದೆ. ಹಸಿ ಕಟ್ಟಿಗೆಯನ್ನು ಬಿಲ್ಲಿನಂತೆ ಬಾಗಿಸಬಹುದು. ಬಲಿತ ಕಟ್ಟಿಗೆಯನ್ನು ಉರುವಲು ಇದ್ದಿಲನ್ನಾಗಿ ಪರಿವರ್ತಿಸುತ್ತಾರೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ತೆಲಗಿ, ಜಾಯವಾಡಗಿ ಹಾಗೂ ಇಂಡಿ ತಾಲೂಕಿನ ಭತಗುಣಕಿ, ನಂದ್ರಾಳ, ಹಲಸಂಗಿ, ಅಜನಾಳ, ಹೊರ್ತಿ, ಬುದಿಹಾಳ, ಬೇನೂರ ಆಸು ಪಾಸಿನ ಗ್ರಾಮಗಳಲ್ಲಿ ಜಾಲಿಕಟ್ಟಿಗೆಯಿಂದ ಇದ್ದಿಲು ತಯಾರಿಸಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಗೆ ಬರದ ಭೂಮಿಯಲ್ಲಿ ಬರಬರನೇ ಮೆಲೆದ್ದು, ದಟ್ಟ ಪೊದೆಯಾಗಿ ಬೆಳೆಯುವ ಈ ಜಾಲಿ ಗಿಡಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿವೆ. ನೀರು ಹಾಗೂ ಸಂರಕ್ಷಣೆಯ ಅವಶ್ಯಕತೆ ಇಲ್ಲದೆ, ಬಯಲು ಪ್ರದೇಶದ ಸಿಕ್ಕ ಸಿಕ್ಕಲ್ಲಿ ಬೆಳೆದು ನಿಲ್ಲುವ ಜಾಲಿಗಿಡ, ತನ್ನದೆ ಆದ ವಿಶೇಷತೆಯನ್ನು ಹೊಂದಿ, ಭಾರತೀಯರ ಮನೆ, ಮನದಲ್ಲಿ ಅಚ್ಚಾಗಿ ಉಳಿದುಕೊಂಡಿದೆ.
ವರ್ಷದ ಹನ್ನೆರಡು ತಿಂಗಳು ಬೆಳೆದು ನಿಲ್ಲುವ ಈ ಜಾಲಿ ಗಿಡ, ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಅನಂತಪುರ, ನೇಪಾಳ ಗಡಿಭಾಗದ ಗೋರಕಪುರ, ಗೌರಿಪಾಂಟಾ ಹಾಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಕಂಡು ಬರುತ್ತದೆ. ಅಲ್ಲದೆ ಶ್ರೀಲಂಕಾ, ಮಾಲ್ಡ್ವೀಸ್ ದ್ವೀಪಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ಅಮೇಜಾನ್ ತಪ್ಪಲು ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ.
ವಿಷಕಾರಿ ನಂಜು ಮುಳ್ಳು
ಈ ಜಾಲಿಗಿಡ ತನ್ನ ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡರೂ ಎಲೆಗಳು ಮಾತ್ರ ಚಿಕ್ಕದಾಗಿರುತ್ತವೆ. ಕಾಯಿಗಳಂತೂ ಗೇಣುದ್ದ ಸಪೂರವಾಗಿ ಬೆಳೆದಿರುತ್ತವೆ. ಜಾಲಿ ಮುಳ್ಳು ಮನುಷ್ಯನ ಕೈ, ಕಾಲಿಗೆ ಚುಚ್ಚಿದರೆ, ನಂಜಾಗಿ ತೀವ್ರ ನೋವುಂಟು ಮಾಡುತ್ತದೆ. ಈ ಸಸ್ಯ ಗಿಡವಾಗಿ, ಮರವಾಗಿ ಬೆಳೆದರೂ ಕೂಡ, ತಂಪಾದ ನೆರಳು ನೀಡುವುದಿಲ್ಲ. ಈ ಗಿಡಗಳ ಸುತ್ತಮುತ್ತ ವಾತಾವರಣ ಬಿಸಿಯಾಗಿರುವುದು ಸಾಮಾನ್ಯ. ಆದರೂ ಈ ಜಾಲಿಗಿಡ ದೇಶದ ತುಂಬಾ ಕಂಡು ಬರುವುದು ವಿಶೇಷ.
ಜಾಲಿ ಎನ್ನುವುದು ಜಾಲಿ ಜಾಲಿ: ಪಿ.ಲಂಕೇಶ್

ಖ್ಯಾತ ಹಿರಿಯ ಪತ್ರಕರ್ತ, ಸಾಹಿತಿ ಪಿ. ಲಂಕೇಶ ಅವರು ತಮ್ಮ ‘ಮರೆಯುವ ಮುನ್ನ’ಎಂಬ ಅಂಕಣದಲ್ಲಿ ಜಾಲಿ ಗಿಡದ ಬಗ್ಗೆ ಟಿಪ್ಪಣಿ ಮಾಡಿದ್ದಾರೆ. ಅಂದೊಮ್ಮೆ ಅವರು ಬಳ್ಳಾರಿಗೆ ಕಾರಿನಲ್ಲಿ ತಮ್ಮ ಪ್ರಗತಿ ರಂಗದ ರಾಜಕೀಯ ಪಕ್ಷದ ಪ್ರಚಾರಕ್ಕೆ ತೆರಳುತ್ತಿದ್ದಾಗ ಜಾಲಿಗಿಡವನ್ನು ಕಂಡು, ‘ಈ ಜಾಲಿ ಅಂದರೆ, ಜನರಿಗೆ ಜಾಲಿ ಅಲ್ವಾ ? ಮುಂಜಾನೆ ಎಮರ್ಜೆನ್ಸಿಗೆ ಹೋಗಲು ಜನರಿಗೆ ಮರೆಮಾಡುತ್ತದೆ. ಕುರಿ, ಆಡುಗಳಿಗೆ ಜಾಲಿ ಗಿಡದ ಕಾಯಿ ಮೇವಿನ ಆಹಾರವಾಗಿದೆ. ಇದು ಜನೋಪಯೋಗಿವಾಗಿದೆ ಅಲ್ವಾ ಎಂದು ಬರೆಯುತ್ತಾರೆ.
ಮೂಲತಃ ಪಿ. ಲಂಕೇಶ ಅವರು ಶಿವಮೊಗ್ಗದವರು, ಅನಂತರ ಬೆಂಗಳೂರಿಗೆ ಬಂದವರು. ಈ ಜಾಲಿ ಗಿಡವನ್ನು ಯಾವತ್ತೂ ಕಾಣದ ಅವರು, ಬಳ್ಳಾರಿಗೆ ಬಂದಾಗ, ಈ ಮುಳ್ಳುಕಂಟಿಯ ಗಿಡದ ಬಗ್ಗೆ ಸೋಜಿಗ ವ್ಯಕ್ತಪಡಿಸುತ್ತಾರೆ. ಆದರೆ ನಾವು ಜಾಲಿ ಗಿಡದೊಂದಿಗೆ, ಜಾಲಿಯಾಗಿಯೇ ಬೆಳೆದವರು. ಮೈಸುಡುವ ಬಿಸಿಲು, ಮುಳ್ಳಿನೊಂದಿಗೆ ನೋವು ನುಂಗಿ ಬದುಕು ಕಟ್ಟಿಕೊಂಡು, ಖುಷಿಪಟ್ಟವರು. ಹೀಗಾಗಿ ಈ ಜಾಲಿ ಗಿಡದ ಮುಳ್ಳು ಹಾಗೂ ನಮಗೂ ಅವಿನಾಭಾವ ಸಂಬಂಧವಿದೆ.
- ಬರಹ : ಪರಶಿವ