ಉತ್ತರ ಪ್ರದೇಶದ ಬಲ್ರಾಂಪುರದಲ್ಲಿ 9.800 ಕೋಟಿ ರೂ ವೆಚ್ಚದ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೋದಿ, “ಈ ಯೋಜನೆಯಿಂದಾಗಿ 14 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಮುಖ್ಯವಾಗಿ ಪೂರ್ವ ಉತ್ತರ ಪ್ರದೇಶದ ಸುಮಾರು 29 ಲಕ್ಷ ರೈತರಿಗೆ ಇದರ ಪ್ರಯೋಜನ ದೊರಕಲಿದೆ,” ಎಂದು ತಿಳಿಸಿದರು.
ಹೆಲಿಕಾಪ್ಟರ್ ದುರಂತದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಭಾರತವು ಶೋಕದಲ್ಲಿ ಮುಳುಗಿದೆ. ಆದರೂ ಆ ನೋವಿನಲ್ಲಿ ನಾವು ನಮ್ಮ ಅಭಿವೃದ್ಧಿ ಕಡೆ ನಡೆಯಬೇಕಿದೆ. ಬಿಪಿನ್ ರಾವತ್ ಅವರು ತಾವು ಇರುವ ಸ್ಥಳದಿಂದ ಈ ಕಾರ್ಯಕ್ರಮ ನೋಡಿ ಹೆಮ್ಮೆ ಪಡುತ್ತಾರೆ. ನಾವು ಭಾರತೀಯರು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ದೇಶದ ಒಳಗೆ ಮತ್ತು ಹೊರಗೆ ಪ್ರತಿ ಸವಾಲನ್ನು ಎದುರಿಸುತ್ತೇವೆ ಎಂದು ಬಣ್ಣಿಸಿದರು.
ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ಕೂಡ ವಾಗ್ದಾಳಿ ನಡೆಸಿ, “ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಯುಪಿಯಲ್ಲಿ ಸರಯೂ ಯೋಜನೆ ಪೂರ್ಣಗೊಂಡಿರಲಿಲ್ಲ. ಈಗ ಸರಯೂ ಯೋಜನೆ ನಿಮ್ಮ ಮುಂದಿದೆ. ಇದರ ಉಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು. ಸಾವಯವ ಕೃಷಿಯತ್ತ ರೈತರು ಮರಳಬೇಕು. ಡಿ.16ರಂದು ಸಾವಯವ ಕೃಷಿ ಸಮಾವೇಶ ಆಯೋಜಿಸಲಾಗಿದೆ. ದೇಶದ ಎಲ್ಲ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿ ಸಮಾವೇಶ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಸರಯೂ ಕಾಲುವೆ ಯೋಜನೆಯು ಘಘರಾ, ಸರಯು,ರಾಪ್ತಿ, ಬಂಗಂಗಾ ಮತ್ತು ರೋಹಿಣಿ ಎಂಬ ಐದು ನದಿಗಳನ್ನು ಒಳಗೊಂಡಿದ್ದು, 1978 ರಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. 2016 ರಲ್ಲಿ ಮತ್ತೆ ಈ ಯೋಜನೆಯನ್ನು ಕೈಗೆತ್ತಿಕೊಂಡು ಈಗ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ.