ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಬದುಕು ನಿಜಕ್ಕೂ ನಲುಗಿದೆ. ಬಹುಪಾಲು ಬೆಳೆ ಮಳೆಹಾನಿಗೆ ತುತ್ತಾಗಿ ರೈತ ಕಂಗಾಲಾಗಿದ್ದಾನೆ. ಜೊತೆಜೊತೆಗೆ ತರಕಾರಿಗಳ ರಾಣಿ ಎಣಿಸಿಕೊಂಡ ಟೊಮೇಟೊ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಗ್ರಾಹಕರು ಕೂಡ ಅದರ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುವಂತಾಗಿದೆ.
ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗಿ ಗದ್ದೆಗಳಲ್ಲಿ, ತೋಟಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ಕಟಾವಿಗೆ ಸಿದ್ಧವಾದ ಬೆಳೆಗಳು ಹಾಗೂ ತರಕಾರಿ ಬೆಳೆಗಳು ನೀರು ಪಾಲಾಗಿವೆ. ಅಲ್ಲಲ್ಲಿ ಸ್ವಲ್ಪ ಉಳಿದ ಬೆಳೆಗಳು ಮಾರುಕಟ್ಟೆಗೆ ಬಂದರೆ ದಲ್ಲಾಳಿಗಳ ಕೈವಾಡದಿಂದ ಮತ್ತೆ ರೈತರಿಗೆ ಅನ್ಯಾಯವಾಗಿ ಗ್ರಾಹಕರ ಹೊಟ್ಟೆ ಮೇಲೆ ಬರೆ ಬೀಳುವಂತಾಗಿದೆ.
ತಿರುವನಂತಪುರಂನ ಚಾಲಾ ಮಾರುಕಟ್ಟೆಯಲ್ಲಿ ಟೊಮೆಟೋ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಬೆಲೆ 140-160 ರೂಪಾಯಿ ನಡುವೆ ಬೆಲೆ ನಿಗಧಿಯಾಗಿದೆ. ಮಳೆಯೀಮದಾಗಿಯೇ ದರಗಳ ಮೇಲೆ ಪರಿಣಾಮ ಬೀರಿವೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.
ಟೊಮೆಟೋಗೆ ಗ್ರಾಹಕರೇ ಇಲ್ಲ!
ವಿವಿಧ ರಾಜ್ಯಗಳಿಂದ ಆಮದಾಗಿ ಬಂದ ಟೊಮೆಟೋ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಂಡರೂ ಜನರು ಹತ್ತಿರ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸುಮ್ಮನೆ ಕುಳಿತಿರುವುದು ಯಶವಂತಪುರ ಮಾರುಕಟ್ಟೆಯಲ್ಲಿ ಗಮನಿಸಬಹುದು.

ಸಾರಿಗೆ ವ್ಯವಸ್ಥೆ ದುಪ್ಪಟ್ಟು!
ಎಪಿಎಂಸಿ ಗಳಿಂದ ವ್ಯಾಪಾರಿಗಳು ಮಾರುಕಟ್ಟೆಗೆ ತರಕಾರಿಗಳನ್ನು ಶಿಫ್ಟ್ ಮಾಡಬೇಕಾದರೆ ಈಗ ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು. ತರಕಾರಿಗಳನ್ನು ಸಾಗಿಸಿದ ನಂತರ ಬೆಲೆ ಏರಿಕೆಯಿಂದ ಯಾರೂ ಮಾರುಕಟ್ಟೆ ಕಡೆ ಸುಳಿಯುತ್ತಿಲ್ಲ ಎನ್ನೋದು ಬಹುತೇಕ ವ್ಯಾಪಾರಿಗಳ ಅಳಲು.
ನಮ್ಮಂತ ಬಡವರಿಗೆ ಬೆಲೆಯೇ ಇಲ್ಲ!
ದಿನದಿಂದ ದಿನಕ್ಕೆ ತರಕಾರಿಗಳ ಬೆಲೆಗಳಲ್ಲಿ ಏರುಪೇರಾಗುತ್ತಿದೆ. ದಿನಕ್ಕೆ ಎಷ್ಟು ಬೇಕೋ ಅಷ್ಟು ತರಕಾರಿ ಕೊಂಡೋಯ್ಯುವ ಗ್ರಾಹಕರೇ ನಮ್ಮಲ್ಲಿ ಅಧಿಕ. ಹೀಗಾಗಿ ಬೆಲೆ ಏರಿಕೆಯಿಂದಾಗಿ ಅದೆಷ್ಟೋ ಬಡವರಿಗೆ ತರಕಾರಿ ಕೊಳ್ಳಲು ಆಗುತ್ತಿಲ್ಲ. ನಮ್ಮಂತಹ ಬೀದಿ ಬದಿಯ ವ್ಯಾಪಾರಿಗಳಿಗೆ ಇದು ದೊಡ್ಡ ಸಮಸ್ಯೆ ಎನ್ನುತ್ತಾರೆ ಯಶವಂತರಪುರದ ಬೀದಿ ವ್ಯಾಪಾರಿ.