• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ನವ ಉದಾರವಾದಿ ಆರ್ಥಿಕ ನೀತಿಗಳ ನಡುವೆ ನಶಿಸುತ್ತಿರುವ ಮಾನವ ಹಕ್ಕುಗಳು!

ನಾ ದಿವಾಕರ by ನಾ ದಿವಾಕರ
December 10, 2021
in ಅಭಿಮತ
0
ನವ ಉದಾರವಾದಿ ಆರ್ಥಿಕ ನೀತಿಗಳ ನಡುವೆ ನಶಿಸುತ್ತಿರುವ ಮಾನವ ಹಕ್ಕುಗಳು!
Share on WhatsAppShare on FacebookShare on Telegram

ಡಿಸೆಂಬರ್ 10 ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ದುಡಿಯುವ ವರ್ಗಗಳು ತಮ್ಮ ಜೀವನೋಪಾಯದ ಮಾರ್ಗಗಳನ್ನೇ ಕಾಣದೆ ಕಂಗೆಟ್ಟುಹೋಗುತ್ತಿರುವ ಸಂದರ್ಭದಲ್ಲಿ ಮಾನವ ಹಕ್ಕುಗಳ ದಿನಾಚರಣೆ ವಿಶೇಷ ಮಹತ್ವ ಪಡೆಯುತ್ತದೆ. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದ್ದು ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಆಡಳಿತ ನೀತಿಗಳು ಜನಸಾಮಾನ್ಯರ ಬದುಕನ್ನು ದಿನೇದಿನೇ ದುಸ್ತರಗೊಳಿಸುತ್ತಿವೆ. ಆಳುವ ವರ್ಗಗಳು ಬಂಡವಾಳಶಾಹಿಗಳ, ಕಾರ್ಪೋರೇಟ್ ಉದ್ದಿಮೆಗಳ ಹಿತಾಸಕ್ತಿಗಳಿಗಾಗಿಯೇ ಆಡಳಿತ ನೀತಿಗಳನ್ನು ಅನುಸರಿಸುತ್ತಿರುವುದನ್ನು ಅಮೆರಿಕದಿಂದ ಭಾರತದವರೆಗೆ ಎಲ್ಲ ರಾಷ್ಟ್ರಗಳಲ್ಲೂ ಕಾಣಬಹುದಾಗಿದೆ.

ADVERTISEMENT

ಈ ನಡುವೆಯೇ ವಿಶ್ವದ ಜನತೆ ಮತ್ತೊಂದು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಿದೆ. ಎರಡನೆ ಮಹಾಯುದ್ಧದ ನಂತರದಲ್ಲಿ ಯುದ್ಧಗಳ ಭೀಕರತೆ ಮತ್ತು ಅದರಿಂದುಂಟಾಗುವ ಸಾವು ನೋವುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವಶಾಂತಿಗಾಗಿ ರೂಪುಗೊಂಡ ವಿಶ್ವ ಸಂಸ್ಥೆಯು, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಕ್ಕುಗಳಿರುವುದನ್ನು ಮನಗಂಡು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಕರಡು ಸಿದ್ಧಪಡಿಸಲು ಒಂದು ಸಮಿತಿಯನ್ನು ರಚಿಸಿತ್ತು. ಇದನ್ನು ಪ್ರತಿನಿಧಿಸುವುದೇ ಅಲ್ಲದೆ ಮೊದಲ ಅಧ್ಯಕ್ಷೆಯಾಗಿ ಕರಡು ಸಿದ್ಧಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು 1933 ರಿಂದ 45ರವರೆಗೆ ಅಮೆರಿಕದ ಪ್ರಥಮ ಮಹಿಳಾ ಪ್ರಜೆಯಾಗಿದ್ದ ಅಧ್ಯಕ್ಷ ರೂಸ್‍ವೆಲ್ಟ್ ಅವರ ಪತ್ನಿ ಇಲೆನಾರ್ ರೂಸ್‍ವೆಲ್ಟ್. ಪೂರ್ವ ಪಶ್ಚಿಮಗಳ ಸಂಘರ್ಷದ ನೆಲೆಯಲ್ಲೇ ಒಂದು ಸರ್ವಸಮ್ಮತ ಮಾನವ ಹಕ್ಕುಗಳ ಒಡಂಬಡಿಕೆಯನ್ನು ಸಿದ್ಧಪಡಿಸುವಲ್ಲಿ ಇಲೆನಾರ್ ಯಶಸ್ವಿಯಾಗಿದ್ದರು.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಜಾರಿಗೊಳಿಸಿದ ಹತ್ತು ವರ್ಷಗಳ ನಂತರ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ “ ಮಾನವ ಹಕ್ಕುಗಳು ಎಲ್ಲಿ ಆರಂಭವಾಗುತ್ತವೆ ” ಎನ್ನುವ ವಿಷಯವನ್ನು ಕುರಿತು ಉಪನ್ಯಾಸ ನೀಡಿದ್ದ ರೂಸ್‍ವೆಲ್ಟ್ ಹೀಗೆ ಹೇಳುತ್ತಾರೆ : “ ಮಾನವ ಹಕ್ಕುಗಳು ಮೂಲತಃ ಎಲ್ಲಿ ಆರಂಭವಾಗುತ್ತದೆ. ಸಣ್ಣ ಪುಟ್ಟ ಸ್ಥಳಗಳಲ್ಲಲಿ, ನಮ್ಮ ಮನೆಗಳ ಹತ್ತಿರ. ಇದು ಎಷ್ಟು ಸಣ್ಣ ಪ್ರಮಾಣದ್ದಾಗಿರುತ್ತದೆ ಎಂದರೆ ಇದನ್ನು ವಿಶ್ವ ಭೂಪಟದಲ್ಲಿ ಗುರುತಿಸಲಾಗುವುದಿಲ್ಲ. ಆದರೂ ಅದು ಪ್ರತಿಯೊಬ್ಬ ವ್ಯಕ್ತಿಯ ಪ್ರಪಂಚವೇ ಆಗಿರುತ್ತದೆ. ಆ ವ್ಯಕ್ತಿಯ ಬದುಕಿನ ನೆರೆಹೊರೆ, ವ್ಯಾಸಂಗ ಮಾಡುವ ಶಾಲೆ ಕಾಲೇಜು, ನೌಕರಿ ಮಾಡುವ ಕಾರ್ಖಾನೆ, ಕಚೇರಿ, ತೋಟ, ಎಸ್ಟೇಟ್ ಎಲ್ಲೆಡೆಯೂ ಇದು ಪ್ರಕಟವಾಗುತ್ತದೆ. ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು ಸಮಾನ ನ್ಯಾಯ ಕೇಳುವ, ಸಮಾನ ಅವಕಾಶಕ್ಕಾಗಿ ಹಂಬಲಿಸುವ, ಸಮಾನ ಘನತೆಗಾಗಿ ಹೋರಾಡುವ, ಯಾವುದೇ ತಾರತಮ್ಯವಿಲ್ಲದ ಈ ಜಾಗಗಳಿಗಾಗಿ ಮನುಷ್ಯ ಹಂಬಲಿಸುತ್ತಾನೆ. ಈ ಜಾಗಗಳಲ್ಲಿ ಈ ಹಕ್ಕುಗಳಿಗೆ ಅರ್ಥವಿಲ್ಲದೆ ಹೋದರೆ ಅವುಗಳಿಗೆ ಮತ್ತೆಲ್ಲಿಯೂ ಮಾನ್ಯತೆ ಇರುವುದಿಲ್ಲ. ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಈ ಹಕ್ಕುಗಳನ್ನು ಕಾಪಾಡುವ ಪ್ರಯತ್ನವನ್ನು ಪ್ರತಿಯೊಬ್ಬ ಪ್ರಜೆಯೂ ಮಾಡದೆ ಹೋದರೆ ನಾವು ವಿಶಾಲ ವಿಶ್ವದ ಪ್ರಗತಿಯನ್ನು ನಿರೀಕ್ಷಿಸುವುದು ವ್ಯರ್ಥ ಎನಿಸುತ್ತದೆ ”. ಇಲೆನಾರ್ ಅವರ ಮಾತುಗಳು ಇಂದು ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ ?

ಆರ್ಥಿಕ ಹಿಂಜರಿತಕ್ಕೆ ಕೋವಿದ್ ಕಾರಣವೇ ?

ಕೋವಿದ್ 19 ಒಂದು ನೈಸರ್ಗಿಕ ವೈರಾಣು. ಇದು ಜಗತ್ತಿನ ಎಲ್ಲ ಆರ್ಥಿಕತೆಗಳನ್ನೂ ಪಲ್ಲಟಗೊಳಿಸಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಬಲಿ ಪಡೆದಿರುವ ಈ ವೈರಾಣು ಇನ್ನೂ ಮಾನವ ಜಗತ್ತನ್ನು ಬೆಂಬಿಡದೆ ಕಾಡುತ್ತಲೇ ಇದೆ. ಆದರೆ ಕೋವಿದ್ ಸಾಂಕ್ರಾಮಿಕ ಸೊಂಕಿಗಿಂತಲೂ ಹೆಚ್ಚಿನ ಹಾನಿ ಮಾಡಿರುವುದು, ಈ ಅವಧಿಯಲ್ಲಿ ವಿಶ್ವದ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ನೀತಿಗಳು. ಕೊರೋನಾ ನಿಯಂತ್ರಣದ ದೃಷ್ಟಿಯಿಂದ ಸರ್ಕಾರಗಳು ಘೋಷಿಸಿದ ಲಾಕ್‍ಡೌನ್‍ಗಳು ನಿತ್ಯ ದುಡಿಮೆಯನ್ನೇ ಅವಲಂಬಿಸುವ ಕೋಟ್ಯಂತರ ದುಡಿಯುವ ಜೀವಿಗಳ ಬದುಕನ್ನು ಹೈರಾಣಾಗಿಸಿರುವುದು ಕಟು ಸತ್ಯ.
ಭಾರತದ ಪ್ರಸ್ತುತ ಆರ್ಥಿಕ ಹಿನ್ನಡೆ ಮತ್ತು ದುಸ್ಥಿತಿಗೆ ಕೋವಿದ್ 19 ಒಂದೇ ಕಾರಣ ಎನ್ನುವುದು ಅರ್ಧಸತ್ಯ ಮಾತ್ರ. ಕೋವಿದ್ ಎರಡನೆ ಅಲೆಯ ಪರಿಣಾಮ ಕಡಿಮೆಯಾಗುತ್ತಿರುವ ಸಂದರ್ಭದಲ್ಲೂ ದೇಶದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಲೇ ಇದ್ದು, ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ 15 ಲಕ್ಷ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಸಿಎಂಐಇ ಸಂಸ್ಥೆಯ ಮಾಹಿತಿಯ ಅನುಸಾರ ಉದ್ಯೋಗಿಗಳ ಸಂಖ್ಯೆ 399.38 ದಶಲಕ್ಷದಿಂದ 397.78 ದಶಲಕ್ಷಕ್ಕೆ ಕುಸಿದಿದೆ. ಈ ಉದ್ಯೋಗ ನಷ್ಟ ಬಹುತೇಕವಾಗಿ ಅನೌಪಚಾರಿಕ ಕ್ಷೇತ್ರದಲ್ಲೇ ಸಂಭವಿಸಿದ್ದು, ಅಸಂಘಟಿತ ವಲಯದಲ್ಲಿ ಹೆಚ್ಚಿನ ನಿರುದ್ಯೋಗ ಸೃಷ್ಟಿಯಾಗಿದೆ. ಆಗಸ್ಟ್ ವೇಳೆಗೆ ನಗರ ಪ್ರದೇಶಗಳ ನಿರುದ್ಯೋಗ ಪ್ರಮಾಣ ಶೇ 9.78ರಷ್ಟಾಗಿದ್ದು, ಶೇ 1.5ರಷ್ಟು ಹೆಚ್ಚಾಗಿದೆ. ಗ್ರಾಮೀಣ ನಿರುದ್ಯೋಗ ಪ್ರಮಾಣವೂ ಶೇ 1.3ರಷ್ಟು ಹೆಚ್ಚಾಗಿದ್ದು ಶೇ 7.64ಕ್ಕೆ ತಲುಪಿದೆ.

ಈ ಆರ್ಥಿಕ ಹಿನ್ನಡೆಗೆ ಮೂಲ ಕಾರಣ 2016ರಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣ ಮತ್ತು ನಂತರ ಅನುಷ್ಟಾನಕ್ಕೆ ತಂದ ನೂತನ ಜಿಎಸ್‍ಟಿ ಪದ್ಧತಿಯೇ ಆಗಿದೆ. 2018ರ ವೇಳೆಗೇ ತೀವ್ರ ಹಿನ್ನಡೆ ಎದುರಿಸುತ್ತಿದ್ದ ಭಾರತದ ಆರ್ಥಿಕತೆಗೆ ಮೋದಿ ಸರ್ಕಾರ ಘೋಷಿಸಿದ ಹಠಾತ್ ಲಾಕ್‍ಡೌನ್‍ನಿಂದ ಮತ್ತಷ್ಟು ಹಿನ್ನಡೆಯಾಗಿತ್ತು. ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ದುಡಿಮೆಯ ಕ್ಷೇತ್ರಗಳನ್ನು ತೊರೆದು ತವರಿಗೆ ಮರಳಲಾರಂಭಿಸಿದ್ದರು. ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತಮ್ಮ ಊರುಗಳನ್ನು ತಲುಪಲು ಹೊರಟ ವಲಸೆ ಕಾರ್ಮಿಕರ ಪೈಕಿ ನೂರಾರು ಜನ ದಾರಿಯಲ್ಲೇ ಅಸುನೀಗಿದ್ದೂ ಹೌದು. 2019ರ ವೇಳೆಗೆ ದೇಶದ ಕೃಷಿ ಉತ್ಪಾದನೆಯೂ ಕುಂಠಿತಗೊಂಡಿದ್ದು ಶೇ 60.4ರಷ್ಟು ಬೆಳೆಯನ್ನು ಮಾತ್ರವೇ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗಿತ್ತು.

2020ರ ಮೊದಲ ಲಾಕ್‍ಡೌನ್ ಆರಂಭವಾಗುವುದಕ್ಕೂ ಮುನ್ನವೇ ಫೆಬ್ರವರಿ ತಿಂಗಳಲ್ಲಿ 134.2ರಷ್ಟಿದ್ದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಏಪ್ರಿಲ್ ವೇಳೆಗೆ 54 ಕ್ಕೆ ಕುಸಿದಿತ್ತು. ಏಪ್ರಿಲ್ ನಂತರದಲ್ಲಿ ಕೊಂಚ ಹೆಚ್ಚಳ ಕಂಡುಬಂದರೂ ಆಗಸ್ಟ್ ವೇಳೆಗೆ ಮತ್ತೊಮ್ಮೆ ತೀವ್ರ ಕುಸಿತ ಉಂಟಾಗಿತ್ತು. 2011-12ರಿಂದಲೇ ಭಾರತದ ಆರ್ಥಿಕ ಕುಸಿತ ಆರಂಭವಾಗಿದ್ದನ್ನು ಹಲವು ಅಂಕಿಅಂಶಗಳೇ ಸಾಬೀತುಪಡಿಸುತ್ತವೆ. ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೂ ತನ್ನ ಹಣಕಾಸು ನೀತಿಯನ್ನು ಬದಲಿಸಲು ಸರ್ಕಾರ ಮುಂದಾಗದ ಕಾರಣ ಜಿಡಿಪಿ ಅನುಪಾತದಲ್ಲೂ ಕುಸಿತ ಉಂಟಾಗಿತ್ತು. 2020ರ ಎಫ್‍ಐಸಿಸಿಐ ಸಮೀಕ್ಷೆಯ ಅನುಸಾರ ಶೇ 73ರಷ್ಟು ಉದ್ಯಮಗಳಿಗೆ ಬೇಡಿಕೆ ಕಡಿಮೆಯಾಗಿತ್ತು, ಶೇ 35ರಷ್ಟು ಉದ್ದಿಮೆಗಳಲ್ಲಿ ಕಚ್ಚಾವಸ್ತುಗಳ ವೆಚ್ಚ ಹೆಚ್ಚಾಗಿತ್ತು ಶೇ 81ರಷ್ಟು ಉದ್ದಿಮೆಗಳಲ್ಲಿ ನಗದು ಹರಿವು ಕುಂಠಿತವಾಗಿತ್ತು. ಭಾರತದ ಶೇ 40ರಷ್ಟು ಕೃಷಿಯೇತರ ಕಾರ್ಮಿಕರು ಎಂಎಸ್‍ಎಂಇ ಉದ್ದಿಮೆಗಳನ್ನೇ ಆಶ್ರಯಿಸಿದ್ದು, 6 ಕೋಟಿ ಉದ್ದಿಮೆಗಳಲ್ಲಿ 11 ಕೋಟಿ ಕಾರ್ಮಿಕರು ಬದುಕು ಸವೆಸುತ್ತಿದ್ದಾರೆ. ದುರಾದೃಷ್ಟವಶಾತ್ ಈ ಎಂಎಸ್‍ಎಂಇ ಉದ್ದಿಮೆಗಳೇ ಲಾಕ್‍ಡೌನ್‍ನ ವ್ಯತಿರಿಕ್ತ ಪರಿಣಾಮಗಳನ್ನು ಹೆಚ್ಚಾಗಿ ಅನುಭವಿಸಬೇಕಾಯಿತು. ಈ ಉದ್ದಿಮೆಗಳ ಒಟ್ಟು ನಷ್ಟ 16 ದಶಲಕ್ಷ ಡಾಲರ್‍ಗಳಷ್ಟಾಗಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆಯೇ ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ತೀವ್ರ ಕುಸಿತವನ್ನೂ ಕಂಡಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಆರ್ಥಿಕ ಹಿಂಜರಿತ ತೀವ್ರವಾಗಿದ್ದು ಅನೇಕ ದೇಶಗಳಲ್ಲಿ ಲಾಕ್ ಡೌನ್ ಪರಿಣಾಮದಿಂದ ಅಭಿವೃದ್ಧಿ ಕುಂಠಿತವಾಗಿದೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತೀವ್ರ ಹಿನ್ನಡೆ ಉಂಟಾಗಿದ್ದು ಕೋವಿದ್ ಲಸಿಕೆಯ ನಂತರ ಕೊಂಚ ಸುಧಾರಣೆ ಕಂಡುಬರುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ಫ್ರಾನ್ಸ್ ಹೀಗೆ ಅಭಿವೃದ್ಧಿ ಹೊಂದಿದ ಮತ್ತು ಹಿಂದುಳಿದ ದೇಶಗಳಲ್ಲೂ ಸಹ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶ್ವ ಆರ್ಥಿಕತೆಯ ಸುಸ್ಥಿರತೆಗೆ ಸಂಚಕಾರ ತರುವಂತಿದೆ. ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲೇ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಆಡಳಿತ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಆಕ್ರೋಶ ಹೆಚ್ಚಾಗುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದ್ದು, ಐಎಂಎಫ್ ಮತ್ತು ವಿಶ್ವಬ್ಯಾಂಕ್ ಸಾಲಗಳ ಮೂಲಕವೇ ಈ ದೇಶಗಳ ಆರ್ಥಿಕತೆಯನ್ನು ಸಂಭಾಳಿಸಲಾಗುತ್ತಿದೆ.

ಆರ್ಥಿಕ ಹಿನ್ನಡೆ ಮತ್ತು ಮಾರುಕಟ್ಟೆ ನೀತಿಗಳು

ಈ ಆರ್ಥಿಕ ಹಿನ್ನಡೆಯ ನಡುವೆಯೇ ನರೇಂದ್ರ ಮೋದಿ ಸರ್ಕಾರ ಹಲವು ಕರಾಳ ಶಾಸನಗಳನ್ನು ಸಂಸತ್ತಿನಲ್ಲಿ ಚರ್ಚೆಯನ್ನೂ ನಡೆಸದೆ ಜಾರಿಗೊಳಿಸಿರುವುದು ಭಾರತದ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಮೂರು ಕರಾಳ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆದಿದ್ದರೂ ನವ ಉದಾರವಾದದ ಆರ್ಥಿಕ ನೀತಿಗಳು ಹಿಂಬಾಗಿಲಿನಿಂದ ಮರುಪ್ರವೇಶ ಮಾಡುವ ಸಾಧ್ಯತೆಗಳೂ ಇವೆ. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಮೈಲು ನಡೆಯುತ್ತಾ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿದ ಲಕ್ಷಾಂತರ ವಲಸೆ ಕಾರ್ಮಿಕರು ಮತ್ತು ಈ ಸಂದರ್ಭದಲ್ಲಿ ಸಂಭವಿಸಿದ ಸಾವುಗಳು ಆಡಳಿತ ವ್ಯವಸ್ಥೆಯನ್ನು ವಿಚಲಿತಗೊಳಿಸಿಲ್ಲ. ಹಾಗೆಯೇ ಒಂದು ವರ್ಷದ ರೈತ ಮುಷ್ಕರದ ಸಂದರ್ಭದಲ್ಲಿ 700 ರೈತರು ಹುತಾತ್ಮರಾಗಿದ್ದೂ ಸರ್ಕಾರವನ್ನು ಎಚ್ಚರಿಸಿಲ್ಲ. ಇದರರ್ಥ ಮಾರುಕಟ್ಟೆ ಆರ್ಥಿಕ ನೀತಿಗಳಿಗೆ ಮಾನವ ಜೀವ ನಿಕೃಷ್ಟವಾಗಿ ಕಾಣುತ್ತದೆ.

ಭಾರತದ ವಿಶ್ವಗುರು ಆಗುವ ಹೊಸ್ತಿಲಲ್ಲಿದೆ ಎಂದು ಜನಸಾಮಾನ್ಯರಲ್ಲಿ ಭ್ರಮೆ ಸೃಷ್ಟಿಸುತ್ತಿರುವ ಸಂದರ್ಭದಲ್ಲೇ ದೇಶದಲ್ಲಿ ನಿರುದ್ಯೋಗಿಗಳ ಸೇನೆ ಹೆಚ್ಚಾಗುತ್ತಲೇ ಇದೆ. ಕಳೆದ ಮೂರು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ. ಮೇಲಾಗಿ ರೈಲು ನಿಲ್ದಾಣಗಳನ್ನು, ರೈಲು ಮಾರ್ಗಗಳನ್ನು ಖಾಸಗೀಕರಣಗೊಳಿಸುವ ಮೂಲಕ ಕಾರ್ಪೋರೇಟ್ ವಲಯಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ದಾಪುಗಾಲು ಹಾಕುತ್ತಿದೆ. ಪ್ರಸಕ್ತ ಚಳಿಗಾಲದ ಸಂಸತ್ ಅಧಿವೇಶನದಲ್ಲೇ ಎರಡು ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ದೇಶದ ಪ್ರತಿಷ್ಠಿತ ವಿಮಾ ಸಂಸ್ಥೆ ಎಲ್‍ಐಸಿ ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಈ ಜನವಿರೋಧಿ ಶಾಸನಗಳನ್ನು ಸುಗ್ರೀವಾಜ್ಞೆಗಳ ಮೂಲಕ, ಸಂಸತ್ತಿನಲ್ಲಿ ಚರ್ಚೆಯನ್ನೂ ನಡೆಸದೆ ಜಾರಿಗೊಳಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ, ಈಗಾಗಲೇ ಕೃಷಿ ವಲಯವನ್ನು ಪ್ರವೇಶಿಸಿರುವ ಕಾರ್ಪೋರೇಟ್ ಹಿತಾಸಕ್ತಿಗಳು ಗ್ರಾಮೀಣ ಬದುಕಿಗೆ ಮಾರಕವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯೊಂದಿಗೆ, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಮತ್ತು ಇತರ ಮಾರುಕಟ್ಟೆಯ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಮಾರ್ಗಗಳು ಇನ್ನೂ ಮುಕ್ತವಾಗಿಯೇ ಇವೆ. ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ ರಾಜ್ಯದ ರೈತರಿಂದ ಭೂಮಿಯನ್ನು ಸುಲಭವಾಗಿ ಕಸಿದುಕೊಳ್ಳುವ ಒಂದು ಮಾರ್ಗವಾಗಲಿದೆ. ಎಂಎಸ್‍ಎಂಇ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವುದರೊಂದಿಗೇ ಉದ್ಯಮಗಳ ಮಾಲೀಕರಿಗೆ ಕಾರ್ಮಿಕರನ್ನು ತಮ್ಮ ಮನಬಂದಂತೆ ವಜಾ ಮಾಡುವ, ನೇಮಕ ಮಾಡುವ ಹಕ್ಕು ನೀಡಲಾಗಿದೆ. ಅಷ್ಟೇ ಅಲ್ಲದೆ ದುಡಿಮೆಯ ಅವಧಿಯನ್ನೂ ಹೆಚ್ಚಿಸಲಾಗಿದೆ. ಹಾಗಾಗಿ ಕಾರ್ಮಿಕರು ಕಡಿಮೆ ಕೂಲಿಗೆ ಹೆಚ್ಚಿನ ಶ್ರಮ ವ್ಯಯಿಸಬೇಕಿದೆ.

ನೌಕರಿಯ ಭದ್ರತೆಯೇ ಇಲ್ಲದ ಅನೌಪಚಾರಿಕ ಕ್ಷೇತ್ರದ, ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ಇಂದು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. 2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಅಸಂಘಟಿತ ವಲಯದ 80 ಲಕ್ಷ ಕಾರ್ಮಿಕರು ತಮ್ಮ ಭವಿಷ್ಯ ನಿಧಿಯ ಹಣವನ್ನು ಮುಂಚಿತವಾಗಿಯೇ ಹಿಂಪಡೆದಿರುವುದಾಗಿ ವರದಿಯಾಗಿದೆ. 30 ಸಾವಿರ ಕೋಟಿ ರೂಗಳಷ್ಟು ಭವಿಷ್ಯ ನಿಧಿಯನ್ನು ಇಪಿಎಫ್ ಸದಸ್ಯರು ಹಿಂಪಡೆದಿದ್ದಾರೆ. ಇದು ಕಾರ್ಮಿಕ ವಲಯದಲ್ಲಿ ಇರುವ ಬಿಕ್ಕಟ್ಟನ್ನು ತೋರುತ್ತದೆ. ಕಳೆದ ಒಂದು ವರ್ಷದಲ್ಲಿ 1 ಲಕ್ಷ 53 ಸಾವಿರ ರೈತರು, ಕೃಷಿ ಕಾರ್ಮಿಕರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದ ಸಂದರ್ಭದಲ್ಲೇ ಈ ಸಾವುಗಳೂ ಸಂಭವಿಸಿರುವುದನ್ನು ಹೇಗೆ ಅರ್ಥೈಸಬಹುದು. ಆತ್ಮಹತ್ಯೆಗೆ ಶರಣಾದ ಕೃಷಿಕರ ಪೈಕಿ 37,666 ದಿನಗೂಲಿ ಕೃಷಿ ಕಾರ್ಮಿಕರಿದ್ದಾರೆ.

ಪ್ರಜೆಗಳ ಬದುಕುವ ಹಕ್ಕುಗಳಿಗಾಗಿ

ನವ ಉದಾರವಾದದ ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕಿನ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿದೆ. ಭಾರತದ ಸಂವಿಧಾನ, ಪ್ರತಿಯೊಬ್ಬ ಪ್ರಜೆಗೂ ಒಂದು ಘನತೆಯ, ಗೌರವದ, ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಡಲು ಬಯಸುತ್ತದೆ. ಹಾಗೆಯೇ ಸಾಂವಿಧಾನಿಕ ನಿಯಮಗಳನ್ನೂ ರೂಪಿಸಲಾಗಿದೆ. ಆದರೆ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಬದಿಗೊತ್ತಿ, ಮುಕ್ತ ಮಾರುಕಟ್ಟೆ ನೀತಿಗಳನ್ನು ಅಪ್ಪಿಕೊಳ್ಳುತ್ತಿರುವ ನವ ಭಾರತದ ಆಳುವ ವರ್ಗಗಳು ಈ ಸಾಂವಿಧಾನಿಕ ಆಶಯಗಳನ್ನೇ ಮಣ್ಣುಪಾಲು ಮಾಡುತ್ತಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಈ ಜನವಿರೋಧೀ ಕಾನೂನುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಪ್ರತಿರೋಧಗಳನ್ನು ಹತ್ತಿಕ್ಕುವ ಸಲುವಾಗಿಯೇ ಕೇಂದ್ರ ಸರ್ಕಾರ ಹಲವು ಕರಾಳ ಶಾಸನಗಳನ್ನು ಬಳಸಲಾರಂಭಿಸಿದೆ.

ಲಕ್ಷಾಂತರ ರೈತರ ಒಂದು ವರ್ಷದ ಮುಷ್ಕರವನ್ನು ಕಣ್ಣೆತ್ತಿಯೂ ನೋಡದೆ, ರೈತರ ಪ್ರತಿರೋಧವನ್ನು ಹತ್ತಿಕ್ಕಲು ಹಲವು ಅಸ್ತ್ರಗಳನ್ನು ಬಳಸಿದ ಕೇಂದ್ರ ಸರ್ಕಾರ ಮತ್ತೊಂದೆಡೆ ನಾಗರಿಕ ಸಮಾಜದ ದನಿಯನ್ನು ಅಡಗಿಸುವ ಕರಾಳ ಶಾಸನಗಳನ್ನು ಎಗ್ಗಿಲ್ಲದೆ ಬಳಸುತ್ತಿದೆ. ಸೆಕ್ಷನ್ 124ಎ ಅಡಿ ದೇಶದ್ರೋಹದ ಕಾಯ್ದೆಯನ್ನು ಮತ್ತು ಯುಎಪಿಎ ಕಾಯ್ದೆಯನ್ನು ವ್ಯಾಪಕವಾಗಿ ಬಳಸುವ ಮೂಲಕ ಎಲ್ಲ ರೀತಿಯ ಪ್ರತಿರೋಧಗಳನ್ನು ಹತ್ತಿಕ್ಕಲಾಗುತ್ತಿದೆ. ಭೀಮಾ ಕೊರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿರುವ 15 ಕಾರ್ಯಕರ್ತರು ಈ ದುರಂತ ಭಾರತದ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಜೈಲಿನಲ್ಲೇ ಮೃತಪಟ್ಟ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಈ ಕ್ರೌರ್ಯದ ಸಂಕೇತವಾಗಿ ಕಾಣುತ್ತಾರೆ.

ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸುವ ಸಂದರ್ಭದಲ್ಲಿ ಭಾರತದ ಆಳುವ ವರ್ಗಗಳು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಡಂಬಡಿಕೆಯ ನಿಯಮಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ 28ನೆಯ ಸಂಸ್ಥಾಪನಾ ದಿನದಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾನವ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ನಡುವೆ ಅಂತರ್ ಸಂಬಂಧವನ್ನು ಕಲ್ಪಿಸುತ್ತಾ “ ಮಾನವ ಹಕ್ಕುಗಳು ಎಂದರೆ ಕೇವಲ ಹಕ್ಕುಗಳ ಬಗ್ಗೆ ಮಾತ್ರವೇ ಯೋಚಿಸುವುದಲ್ಲ, ಕರ್ತವ್ಯಗಳ ಬಗ್ಗೆಯೂ ಯೋಚಿಸಬೇಕು , ಎರಡನ್ನೂ ಪ್ರತ್ಯೇಕಿಸಿ ನೋಡಲಾಗದು, ಪ್ರಜೆಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರುವಂತೆಯೇ ತಮ್ಮ ಕರ್ತವ್ಯವನ್ನೂ ನಿಭಾಯಿಸಬೇಕು ” ಎಂದು ಹೇಳಿದ್ದಾರೆ. ಆದರೆ ಭಾರತದ ಯಾವುದೇ ಪ್ರಜೆಯೂ ತನ್ನ ಸಾಂವಿಧಾನಿಕ ಅಥವಾ ಸಹಜ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು, ಈ ಕರ್ತವ್ಯಗಳನ್ನು ನಿಭಾಯಿಸಬೇಕು ಎಂಬ ಪೂರ್ವಷರತ್ತು ಅನ್ವಯಿಸಲಾಗದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನತೆಯ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಪ್ರಭುತ್ವದ ಆದ್ಯತೆ ಮತ್ತು ಜವಾಬ್ದಾರಿ. ಅದೇ ವೇಳೆ ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಪ್ರಜೆಯನ್ನು ಶಿಕ್ಷಿಸುವ ಹಕ್ಕನ್ನೂ ಸಂವಿಧಾನ ನೀಡಿದೆ. ಸಮಸ್ತ ಭಾರತದ ಜನತೆ ತಮ್ಮ ಸಾಂವಿಧಾನಿಕ ಮತ್ತು ಮತೀಯ ಜವಾಬ್ದಾರಿ ಮತ್ತು ಕರ್ತವ್ಯವನ್ನು ನಿಭಾಯಿಸುತ್ತಿರುವುದರಿಂದಲೇ ಭಾರತ ಇಂದು ಜಗತ್ತಿನ ಅಗ್ರಮಾನ್ಯ ರಾಷ್ಟ್ರಗಳಲ್ಲೊಂದಾಗಿ ಹೊರಹೊಮ್ಮಿದೆ. 135 ಕೋಟಿ ಜನಸಂಖ್ಯೆಯಲ್ಲಿ ಸಂಭವಿಸುವ ಒಂದೆರಡು ಲೋಪಗಳು ಸಹಜವಾದದ್ದು.

ಹಾಗಾಗಿ ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನ ಮೂಲಭೂತ/ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಅಧಿಕಾರ ಇದ್ದೇ ಇರುತ್ತದೆ. ಆದರೆ ಒಂದು ಪ್ರಜಾಪ್ರಭುತ್ವವನ್ನು ನಿರ್ವಹಿಸುವ ನಿಟ್ಟಿನಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಈ ದೇಶದ ಅಧಿಕಾರ ಋಜುಮಾರ್ಗದಲ್ಲಿ ನಡೆಯುತ್ತಿದೆಯೇ ? ಸಾಮಾಜಿಕಾರ್ಥಿಕ ಸಮಾನತೆ ಮತ್ತು ಮಾನವ ಸೌಹಾರ್ದತೆಯನ್ನು ಸಾಧಿಸುವಲ್ಲಿ ಆಳುವ ವರ್ಗಗಳು ಸಫಲವಾಗಿವೆಯೇ ? ಬಡವ-ಶ್ರೀಮಂತರ ನಡುವಿನ ಕಂದರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ ? ಪ್ರಜೆಗಳಿಗೆ ಸಂವಿಧಾನದತ್ತ ಹಕ್ಕುಗಳನ್ನು ಚಲಾಯಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆಯೇ ? ಭಾರತದ ಬಹುತ್ವದ ನೆಲೆಗಳನ್ನು, ಬಹುಸಾಂಸ್ಕೃತಿಕ ಆಶಯಗಳನ್ನು ಮತ್ತು ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸಲಾಗುತ್ತಿದೆಯೇ ?

ಮನುಷ್ಯನಿಗೆ ಅತ್ಯಗತ್ಯವಾದ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಈ ಸಂದರ್ಭದಲ್ಲೇ ನಾವು ಮತ್ತೊಂದು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.

Tags: BJPCongress PartyCovid 19Human RightsHuman rights dayIndiaKarnatakaಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿಮಾನವ ಹಕ್ಕುಗಳ ದಿನ
Previous Post

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ

Next Post

ತಮ್ಮ ಹಕ್ಕಿಗಾಗಿ ಸಂಘಟಿತರಾದ ಕಾರ್ಮಿಕರನ್ನು ಕೆಲಸದಿಂದ ವಜಾಮಾಡಿದ ಐಟಿಐ; 80 ಕಾರ್ಮಿಕರು ಬೀದಿಗೆ

Related Posts

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..
Uncategorized

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

by ನಾ ದಿವಾಕರ
March 1, 2026
0

ನಾ ದಿವಾಕರ  ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಸಮಾನವಾಗಿ ಗುರುತಿಸಬಹುದಾದ ಒಂದು ಲಕ್ಷಣ ಎಂದರೆ ʼ ನೈತಿಕ ಅಧಃಪತನ ಮತ್ತು ಮಾನವೀಯ ಮೌಲ್ಯಗಳ ಅವನತಿ ʼ. ಬದಲಾಗುತ್ತಿರುವ...

Read moreDetails
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

January 26, 2026
ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

November 7, 2025

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025
Next Post
ತಮ್ಮ ಹಕ್ಕಿಗಾಗಿ ಸಂಘಟಿತರಾದ ಕಾರ್ಮಿಕರನ್ನು ಕೆಲಸದಿಂದ ವಜಾಮಾಡಿದ ಐಟಿಐ; 80 ಕಾರ್ಮಿಕರು ಬೀದಿಗೆ

ತಮ್ಮ ಹಕ್ಕಿಗಾಗಿ ಸಂಘಟಿತರಾದ ಕಾರ್ಮಿಕರನ್ನು ಕೆಲಸದಿಂದ ವಜಾಮಾಡಿದ ಐಟಿಐ; 80 ಕಾರ್ಮಿಕರು ಬೀದಿಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada