ಕೊರೋನಾದ ಹೊಸವತಾರ ಒಮಿಕ್ರಾನ್ ಮೂರನೇ ಅಲೆ ಭೀತಿ ಹುಟ್ಟಿಸಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಫೆಬ್ರವರಿ ಹೊತ್ತಿಗೆ ಮೂರನೇ ಅಲೆಯ ದಾಂಗುಡಿಯನ್ನು ತಜ್ಞರು ಪ್ರೆಡಿಕ್ಟ್ ಮಾಡಿದ್ದಾರೆ. ಇದರ ನಡುವೆ ಬೆಂಗಳೂರು ಸೇರಿದಂತೆ ಇಡೀ ದೇಶವೇ ಖುಷಿ ಪಡುವ ಸುದ್ದಿಯೊಂದು ಹೊರ ಬಿದ್ದಿದೆ.
ಒಮಿಕ್ರಾನ್ ಆತಂಕದ ನಡುವೆ ಜನರಿಗೆ ಸಿಹಿಸುದ್ದಿ
ಒಮಿಕ್ರಾನ್ ಇಡೀ ಜಗತ್ತನ್ನು ಮತ್ತೊಮ್ಮೆ ಆತಂಕದ ದವಡೆಗೆ ದೂಡಿದೆ. ಇನ್ನೇನು ಎಲ್ಲಾ ಮುಗೀತು ಎನ್ನುವಷ್ಟರಲ್ಲಿ ಕೊರೋನಾ ಹೊಸ ಅವತಾರದಲ್ಲಿ ಲಗ್ಗೆ ಇಟ್ಟಿದ್ದು, ಒಮಿಕ್ರಾನ್ ಜನರನ್ನು ನಿದ್ದೆಗೆಡಿಸುತ್ತಿದೆ. ಕೊರೋನಾದ ಹಲವು ಬಗೆಯ ರೂಪಾಂತರಿಗಳಲ್ಲಿ ಡೆಲ್ಟಾ ಹಾಗೂ ಒಮಿಕ್ರಾನ್ ಅತೀ ಹೆಚ್ಚು ಆತಂಕ ಹುಟ್ಟಿಸಿಬಿಟ್ಟಿದೆ. ಇನ್ನೇನು ಬೆರಳೆಣಿಕೆಯಷ್ಟೇ ಒಮಿಕ್ರಾನ್ ಕೇಸ್ಗಳು ಪತ್ತೆಯಾಗಿದ್ದರೂ ಕೂಡ ಮೂರನೇ ಅಲೆಗೆ ಈ ರೂಪಾಂತರಿ ಕಾರಣವಾದರೂ ಆಗಬಹುದು ಎಂಬ ಅಭಿಪ್ರಾಯವೂ ಇದೆ. ಇದರ ನಡುವೆ ಬೆಂಗಳೂರಿನ ಜನರು ನಿಟ್ಟುಸಿರು ಬಿಡುವ ಸಂಗತಿಯೊಂದು ಬಯಲಾಗಿದೆ.

ಬೆಂಗಳೂರಿಗರಿಗೆ ಓಮಿಕ್ರಾನ್ ನಿಂದ ಪಾರಾಗುವ ರಕ್ಷಣಾ ಕವಚ ಸೃಷ್ಟಿಯಾಗಿದ್ಯಾ?
ಒಮಿಕ್ರಾನ್ ನಿಂದ ಜಗತ್ತಿನ ವಿವಿಧ ದೇಶಗಳು ಕಂಗಾಲಾಗಿ ಹೋಗುತ್ತಿದೆ. ಹೀಗಾಗಿ ಈ ಒಮಿಕ್ರಾನ್ ನಿಂದ ದೇಶದ ಜನರು ಸೇಫ್ ಆಗ್ತಾರಾ ಎಂಬ ಪ್ರಶ್ನೆ ಸದ್ಯ ಉದ್ಭವವಾಗಿದೆ. ಇದಕ್ಕೆ ಸೆರೋ ಸರ್ವೇಯೊಂದು ಉತ್ತರ ಸಿಗುವಂತೆ ಮಾಡಿದೆ. ವಿದೇಶಗಳಲ್ಲಿ ಆರ್ಭಟಿಸುತ್ತಿರುವ ಓಮಿಕ್ರಾನ್ ಆಟ ಭಾರತದಲ್ಲಿ ಹೇಗಿರುತ್ತೆ ಪ್ರಶ್ನೆಗೆ ಈ ಸರ್ವೇ ಉತ್ತರಿಸಿದೆ. ಈ ಸರ್ವೇಯ ಪ್ರಕಾರ ಓಮಿಕ್ರಾನ್ ಆಗಲೀ ಯಾವುದೇ ರೂಪಾಂತರಿಯಾಗಲಿ ಭಾರತೀಯರನ್ನ ಕಾಡೋದು ಕಷ್ಟ ಎನ್ನುತ್ತಿದೆ. ಅದರಲ್ಲೂ ಮುಖ್ಯವಾಗಿ ಇಡೀ ದೇಶದಲ್ಲೇ ಕೊರೋನಾ ಹಾಟ್ಸ್ಪಾಟ್ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಬೆಂಗಳೂರಿಗೂ ಕೂಡ ಈ ಒಮಿಕ್ರಾನ್ ಕಾಟ ದೊಡ್ಡಮಟ್ಟದಲ್ಲಿ ಇರುವುದಿಲ್ಲ ಎಂದು ವರದಿಯಾಗಿದೆ.
ಒಮಿಕ್ರಾನ್ ಬಗ್ಗೆ ಭಯ ಬೇಡ.. ಬೆಂಗಳೂರಿಗರಲ್ಲಿ ಹೆಚ್ಚಿದೆ ಪ್ರತಿಕಾಯ ಶಕ್ತಿ.
ಸೆರೋ ಸರ್ವೆಯಲ್ಲಿ ದೇಶದ 67% ಜನರಲ್ಲಿ ಕೊರೋನಾ ಪ್ರತಿಕಾಯ ಶಕ್ತಿ ಉಂಟಾಗಿದೆ ಎಂದು ಬಯಲಾಗಿದೆ. ಡೆಲ್ಟಾ ಹಾವಳಿಯಿಂದ ಊಹೆಗೂ ಮೀರಿ ಸಾವು ನೋವುಗಳು ಸಂಭವಿಸಿತ್ತು. ಜನರು ಡೆಲ್ಟಾ ರೂಪಾಂತರಿ ಹೊತ್ತಲ್ಲೇ ಹೋರಾಡಿ ಗೆದ್ದಿದ್ದಾರೆ. ಇದರಿಂದಾಗಿ ಜನರಲ್ಲಿ ಕೋವಿಡ್ ಪ್ರತಿಕಾಯ ಶಕ್ತಿ ಸೃಷ್ಟಿಯಾಗಿದೆ. ದೆಹಲಿಯಲ್ಲಿ 97% ಮಂದಿಯಲ್ಲಿ, ಮುಂಬೈನಲ್ಲಿ 85% ರಿಂದ 90%ರಷ್ಟು ಜನರಲ್ಲಿ, ಬೆಂಗಳೂರಿನಲ್ಲೂ 75% ಕ್ಕೂ ಅಧಿಕ ಮಂದಿಯಲ್ಲಿ ಪ್ರತಿಕಾಯ ಶಕ್ತಿ ರೂಪೂಗೊಂಡಿದೆ ಎಂದು ಖ್ಯಾತ ವೈರಾಣು ತಜ್ಞ ಡಾ ಪವನ್ ಕುಮಾರ್ ತಿಳಿಸಿದ್ದಾರೆ.
ಇದು ದೇಶದ ಜನರಲ್ಲಿ ನ್ಯಾಚುರಲ್ ಆಗಿ ಉಂಟಾಗಿರುವ ಪ್ರತಿರೋಧ ಶಕ್ತಿಗಳ ಬಗ್ಗೆ ನಡೆದಿರುವ ಅಧ್ಯಯನ. ಹೀಗಿದ್ದರೂ ಒಮಿಕ್ರಾನ್ ಸೋಂಕು ತಗುಲುವುದಿಲ್ಲ ಎಂದಲ್ಲ. ತಗುಲಿದರೂ ಅದನ್ನು ಗೆಲ್ಲುವ ತಾಕತ್ತು ಜನರಲ್ಲಿದೆ ಎಂದರ್ಥ. ತಜ್ಞರ ಪ್ರಕಾರ ಈ ನ್ಯಾಚುರಲ್ ಆಗಿ ಸೃಷ್ಟಿಯಾಗಿರುವ ಪ್ರತಿಕಾಯದ ಜೊತೆಯಲ್ಲಿ ಲಸಿಕೆಯನ್ನು ಜನರು ಪಡೆದರೆ ಎರಡನೇ ಅಲೆಯಲ್ಲಿ ಆದ ಸಾವು ನೋವುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದೇನೆ ಇದ್ದರೂ ಜನರು ಮೈಮರೆಯುವಂತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಜನರು ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.





