ಶಿವಮೊಗ್ಗದ ಮಂಡ್ಲಿಯಲ್ಲಿರುವ ಕೆಳದಿ ಅರಸ ಸೋಮಶೇಖರ ನಾಯಕ ಅವರ ಸಮಾಧಿಯ ಸ್ಥಳ ಕೆಲ ವರ್ಷಗಳಿಂದಲೂ ವಿವಾದದ ಕೇಂದ್ರ ಬಿಂದುವಾಗಿತ್ತು. ಎರಡು ಕೋಮುಗಳು ಈ ಜಾಗ ತಮ್ಮ ಕೋಮಿಗೆ ಸೇರಿದ್ದು ಎಂದು ಪಟ್ಟು ಹಿಡಿದಿದ್ದರು. ಹಿಂದೆ ಎಸಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಪಟ್ಟಿದ್ದರೂ ವಿವಾದ ಮಾತ್ರ ಹಾಗೆಯೇ ಮುಂದುವರಿದಿತ್ತು. ಕೊನೆಗೂ ತಾಲೂಕು ಆಡಳಿತ ಮತ್ತು ಮಹಾನಗರ ಪಾಲಿಕೆ ಈ ವಿವಾದಿತ ಸ್ಥಳವನ್ನು ಸ್ವಚ್ಛಗೊಳಿಸಿ ಫೆನ್ಸಿಂಗ್ ಮಾಡಿ ಪ್ರಾಚ್ಯವಸ್ತು ಇಲಾಖೆ ಸುಪರ್ಧಿಗೆ ಕೊಟ್ಟಿದೆ.
ಮಂಡ್ಲಿಯಲ್ಲಿ ಶತಮಾನಗಳ ಹಳೆಯದಾದ ಎರಡು ಸಮಾಧಿಗಳು ಇದ್ದವು. ಆದರೆ ಸಮಾಧಿಗಳು ಕೆಳದಿ ಅರಸ ಸೋಮಶೇಖರ ನಾಯಕ ಹಾಗೂ ಆಕೆಯ ಪತ್ನಿಯದ್ದು ಎಂದು ಇತಿಹಾಸ ಹೇಳುತ್ತಿತ್ತು. ಆದರೆ ಕೆಲ ಮುಸ್ಲಿಂ ಮುಖಂಡರು ಈ ಸಮಾಧಿಗಳು ಟಿಪ್ಪು ಸುಲ್ತಾನನ ಸೈನಿಕರದ್ದು ಎಂದು ವಾದಿಸಲಾರಂಭಿಸಿದ್ದರು. ಹೀಗಾಗಿ ಈ ಸ್ಥಳ ಶಿವಮೊಗ್ಗದ ವಿವಾದಿತ ಸ್ಥಳವಾಗಿ ಪರಿಣಮಿಸಿತ್ತು. ನಾಲ್ಕಾರು ವರ್ಷಗಳ ಹಿಂದೆ ಈ ಪ್ರಕರಣ ಶಿವಮೊಗ್ಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಅಲ್ಲಿ ವಿಚಾರಣೆ ನಡೆದು ಸಾಕ್ಷಾಧಾರಗಳನ್ನು ಪರಿಗಣಿಸಿ ಆ ಜಾಗ ಕೆಳದಿ ಅರಸರ ಸಮಾಧಿ ಸ್ಥಳವೆಂದು ತೀರ್ಪು ನೀಡಿತ್ತಲ್ಲದೆ ಆ ಜಾಗವನ್ನು ಪ್ರಾಚ್ಯವಸ್ತು ಇಲಾಖೆ ಸುಪರ್ದಿಗೆ ಒಪ್ಪಿಸಿತ್ತು.
ಈ ಜಾಗ ರಾಜಕೀಯ ತಿರುವನ್ನೂ ಪಡೆದುಕೊಂಡಿತ್ತು. ಮತೀಯ ಸಂಘರ್ಷಕ್ಕೂ ಎಡೆಮಾಡಿಕೊಡಲು ಹವಣಿಸುವಂತೆ ಕಾಣುತ್ತಿತ್ತು. ಆದರೆ ಕಂದಾಯ ಇಲಾಖೆಯ ಮಧ್ಯಪ್ರವೇಶದಿಂದ ಜಾಗವನ್ನ ಪ್ರಾಚ್ಯ ಇಲಾಖೆಗೆ ಒಪ್ಪಿಸಲಾಗುತ್ತಿದೆ ಹಾಗೂ ಬಿಗಿ ಭದ್ರತೆಯೊಂದಿಗೆ ತೆರವು ಮಾಡಲಾಗಿದೆ.
ಈ ಕುರಿತು ಮಾತನಾಡಿದ ಕೆಳದಿ ಇತಿಹಾಸ ಓದುಗ ನಿತಿನ್ ಹಿರಳೆ ಇದು ಸೋಮಶೇಖರ ಹಾಗೂ ಆತನ ಪತ್ನಿಯ ಸಮಾಧಿಯೆಂದು ಹೇಳಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳುತ್ತಾರೆ. ನಾಲ್ಕಾರು ವರ್ಷಗಳ ಬಳಿಕ ಮತ್ತೆ ಈ ವಿವಾದಿತ ಜಾಗವನ್ನು ಸ್ವಚ್ಛಗೊಳಿಸುವಾಗ ಮತ್ತೆ ಸಮಸ್ಯೆ ಆರಂಭಗೊಂಡಿತ್ತು. ಮುಸ್ಲಿಂ ಸಮಾಜದವರು ಅದು ಖಬರಸ್ಥಾನ್ ಜಾಗ ವಾಗಿದ್ದು, ನ್ಯಾಯಾಲಯದ ಆದೇಶ ಬರುವವರೆಗೆ ಸ್ವಚ್ಛತೆ ಮಾಡದಂತೆ ಆಗ್ರಹಿಸಿದ್ದು, ತಡೆಯೊಡ್ಡಿದ್ದರು. ಬಳಿಕ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮತ್ತು ಮಂಡಲೇಶ್ವರ ಸ್ವಾಮಿ ಕಮಿಟಿ ವತಿಯಿಂದ ಕೆಳದಿ ಅರಸರ ಸಮಾಧಿ ಸ್ಥಳವನ್ನು ಪ್ರಾಚ್ಯ ವಸ್ತು ಇಲಾಖೆಗೆ ಖಾತೆ ಮಾಡಿಕೊಟ್ಟು ಸಂರಕ್ಷಿಸಬೇಕು ಎಂದು ಒತ್ತಾಯಿಸಿದ್ದರು.
ಪುರಾತತ್ವ ಇಲಾಖೆಯ ಸಂಶೋಧಕರಾದ ಪ್ರೊ. ಅ. ಸುಂದರ್ ಮತ್ತಿತರರು, ಅದು ಅರಸರ ಸಮಾಧಿಗೆ ಮೀಸಲಿಟ್ಟ ಜಾಗ ಮತ್ತು ಅಲ್ಲಿರುವ ಎರಡು ಸಮಾಧಿಗಳು ಕೆಳದಿ ಮನೆತನದವರದ್ದಾಗಿದ್ದು, ಆ ಸಮಾಧಿಯ ಮೇಲೆ ಇರುವ ಪ್ರಾಣಿಗಳ ಚಿತ್ರ, ಕಮಲದ ಚಿತ್ರ ಮತ್ತು ದೀಪ ಇಡುವ ಜಾಗವನ್ನು ಹಾಗೂ ಇನ್ನಿತರ ಕುರುಹುಗಳನ್ನು ಉಲ್ಲೇಖಿಸಿ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದರು.
ಈ ನಡುವೆ ಮುಸ್ಲಿಂ ಮುಖಂಡರು ಮತ್ತು ಮಂಡಲೇಶ್ವರ ಕಮಿಟಿ ನಡುವೆ ಆ ಜಾಗದ ಹಕ್ಕಿಗಾಗಿ ವ್ಯಾಜ್ಯ ಏರ್ಪಟಿತ್ತು. ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇತ್ತೀಚೆಗೆ ಆ ಸ್ಥಳವನ್ನು (ಸುಮಾರು ೧ ಎಕರೆ ೧೯ ಗುಂಟೆ) ಪುರಾತತ್ವ ಇಲಾಖೆಗೆ ಹಸ್ತಾಂತರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿತ್ತು. ಅದಾದ ನಂತರ ಆ ಜಾಗದ ಸ್ವಚ್ಛತಾ ಕಾರ್ಯಕ್ಕೆ ಹೋದಾಗ ಮತ್ತೆ ವಿವಾದ ಭುಗಿಲೆದ್ದಿತು.
ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತದಿಂದ ಕೊನೆಗೂ ನಗರದ ಮಂಡ್ಲಿಯಲ್ಲಿರುವ ಕೆಳದಿ ವಂಶಸ್ಥರಾದ ಸೋಮಶೇಖರ ನಾಯಕ ಮತ್ತು ಅವರ ಮಡದಿಯ ಸಮಾಧಿ ಸ್ಥಳ ಸಂರಕ್ಷಿಸುವ ದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಸುತ್ತಲೂ ಬೆಳೆದ ಗಿಡ ಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ನಡೆಸಲಾಯಿತಲ್ಲದೇ, ಫೆನ್ಸಿಂಗ್ ಮಾಡಿ ಪ್ರಾಚ್ಯವಸ್ತು ಇಲಾಖೆ ಸುಪರ್ದಿಗೆ ಸಹ ಕೊಡಲಾಗಿದೆ.






