“ಬಲಪಂಥೀಯ ಕಾರ್ಯಕರ್ತರು ಚರ್ಚ್‌ಗಳಿಗೆ ನುಗ್ಗುತ್ತಾರೆ, ಜನರ ಮೇಲೆ ದಾಳಿ ಮಾಡುತ್ತಾರೆ, ಆದರೆ ಅಂತಿಮವಾಗಿ ಬಲವಂತದ ಮತಾಂತರದ ಆರೋಪದ ಮೇಲೆ ಪಾದ್ರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅನೇಕರು ಈಗ ಜೂಮ್ ಕರೆಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ” ಎಂದು ಬೆಳಗಾವಿಯ ಪಾದ್ರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಚರ್ಚ್‌ಗೆ ಹೋಗುವ ಕ್ರಿಶ್ಚಿಯನ್ನರ ಒಂದು ವಿಭಾಗವು ಪ್ರಾರ್ಥನಾ ಸಭೆಗಳನ್ನು ನಡೆಸುವುದರ ವಿರುದ್ಧ ಬೆಳಗಾವಿ ಪೊಲೀಸರು ‘ಸ್ನೇಹಪರ ಎಚ್ಚರಿಕೆ’ ನೀಡಿದ ಪರಿಣಾಮ ಕ್ರೈಸ್ತರು ಆತಂಕಕ್ಕೆ ಒಳಗಾಗಿದ್ದಾರೆ.
ಹಿಂಸಾವಾದಿ ಹಿಂದುತ್ವ ಗುಂಪುಗಳ ಇತ್ತೀಚಿನ ಸರಣಿ ದಾಳಿಗಳ ಪರಿಣಾಮ ಕ್ರಿಶ್ಚಿಯನ್ ಸಮುದಾಯದಲ್ಲಿ ಕಾಡುತ್ತಿರುವ ಅಭದ್ರತೆಯನ್ನು ಗಮನಿಸಿದರೆ, ಪೋಲಿಸರ ಈ ಕ್ರಮವು ಕೆಟ್ಟ ಪ್ರೇರಣೆಯಿಂದ ಹೊಮ್ಮಿದೆ ಎಂಬುದು ಅರ್ಥವಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ಮೇಲೆ ಕ್ರಮ ಕೈಗೊಳ್ಳುವ ಬದಲು, ಕ್ರಿಶ್ಚಿಯನ್ನರನ್ನು ಸುಮ್ಮನಿರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕೆಲವು ಪಾದ್ರಿಗಳನ್ನು ಕರೆಸಿದ ಪೊಲೀಸರು, ಬಲಪಂಥೀಯ ಗುಂಪುಗಳು ಕ್ರೈಸ್ತರ ಮೇಲೆ ದಾಳಿ ಮಾಡಬಹುದು ಮತ್ತು ನಮಗೆ ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಲ್ಲದೇ, ಪ್ರಾರ್ಥನೆಗಳನ್ನು ನಡೆಸದಂತೆ ತಿಳಿಸಿದರು ಎಂದು ಫಾದರ್ ಒಬ್ಬರು ಹೇಳಿದ್ದಾರೆ.
ಇದು ಒಂದು ಎಚ್ಚರಿಕೆಯೋ ಅಥವಾ ಬೆಳಗಾವಿ ಪೊಲೀಸರು ಹಿಂಸಾವಾದಿ ಬಲಪಂಥೀಯ ಗುಂಪುಗಳ ಬೆಂಬಲಿಗರೋ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.
ಫಾದರ್ ಥಾಮಸ್ ಜಾನ್ಸನ್ ಪ್ರಕಾರ, “ಪೊಲೀಸರು ಲಿಖಿತವಾಗಿ ಏನನ್ನೂ ನೀಡದ ಕಾರಣ ದೂರುವುದೂ ಅಸಾಧ್ಯ. ಈ ಕ್ರಮ ಕೋಮು ಸೌಹಾರ್ದತೆಯನ್ನು ಕಾಪಾಡಲು ಎಂದು ಪೊಲೀಸರು ಹೇಳುತ್ತಾರೆ. ಪಾದ್ರಿ ಚೆರಿಯನ್ ಮೇಲೆ ಹಲ್ಲೆ ನಡೆದ ಕ್ಯಾಂಪ್ ಮತ್ತು ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿಮ್ಮ ಸ್ವಂತ ಚರ್ಚ್ ಕಟ್ಟಡಗಳಿದ್ದರೆ, ನೀವು ಪ್ರಾರ್ಥನೆ ಸಭೆಗಳನ್ನು ನಡೆಸಬಹುದು. ಆದರೆ ಬಾಡಿಗೆ ಕಟ್ಟಡಗಳಲ್ಲಿ ಅಥವಾ ಖಾಸಗಿ ಮನೆಗಳಲ್ಲಿ ನಡೆಸಬೇಡಿ ಎಂದು ಪೊಲೀಸರು ಪಾದ್ರಿಗಳಿಗೆ ಹೇಳಿದ್ದಾರೆ.
ಕುತೂಹಲಕಾರಿಯಾಗಿ, ಬೆಳಗಾವಿಯಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಸಭೆಗಳನ್ನು ಕೈಬಿಡುವಂತೆ ಕ್ರೈಸ್ತರ ಗುಂಪುಗಳಿಗೆ ತಿಳಿಸಲಾಗಿದೆ. ಡಿಸೆಂಬರ್ 13 ರಿಂದ 24 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ.
ಸ್ಥಳೀಯ ಮೂಲಗಳ ಪ್ರಕಾರ,ಜಿಲ್ಲೆಯ 25 ಕ್ಕೂ ಹೆಚ್ಚು ಪಾದ್ರಿಗಳನ್ನು ಪೊಲೀಸರು ಸಂಪರ್ಕಿಸಿದ್ದಾರೆ ಮತ್ತು ಪ್ರಾರ್ಥನಾ ಸಭೆಗಳನ್ನು ಕೈ ಬಿಡುವಂತೆ ಕೇಳಿಕೊಂಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಶ್ರೀರಾಮ ಸೇನೆ ಮತ್ತು ಬಜರಂಗದಳ ಸೇರಿದಂತೆ ಹಲವಾರು ಹಿಂದುತ್ವವಾದಿ ಗುಂಪುಗಳು ರಾಜ್ಯದ ಹಲವಾರು ಭಾಗಗಳಲ್ಲಿ ಕ್ರಿಶ್ಚಿಯನ್ ಪಾದ್ರಿಗಳಿಂದ ಬಲವಂತದ ಮತಾಂತರ ಎಂದು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಪ್ರಾರ್ಥನಾ ಸಭೆಗಳಿಗೆ ಬಾಡಿಗೆಗೆ ನೀಡುತ್ತಿದ್ದ ಕಟ್ಟಡಗಳ ಮಾಲೀಕರಿಗೆ ಪ್ರಾರ್ಥನಾ ಸಭೆಗಳಿಗೆ ಸ್ಥಳಾವಕಾಶ ನೀಡದಂತೆ ತಿಳಿಸಲಾಗಿದೆ ಎಂದು ಪಾದ್ರಿ ಜಾನ್ಸನ್ ಹೇಳುತ್ತಾರೆ. ಕೆಲವರಿಗೆ ಬಲಪಂಥೀಯ ಗುಂಪುಗಳು ಬೆದರಿಕೆ ಹಾಕಿವೆ, ಬೆದರಿಕೆಗೆ ಒಳಗಾದವರಿಗೆ ಪೊಲೀಸರು ‘ಪ್ರಾರ್ಥನೆ ಬಿಡುಚಂತೆ ಉಚಿತ ಸಲಹೆ’ ನೀಡುತ್ತಿದ್ದಾರೆ.
ಬೆಳಗಾವಿಯ ಫುಲ್ ಗಾಸ್ಪೆಲ್ ಚರ್ಚ್‌ಗೆ ಸಂಬಂಧಿಸಿದ ಹೆಚ್ಚಿನ ಪಾದ್ರಿಗಳು ಚರ್ಚ್ ಹೊಂದಿಲ್ಲದ ಕಾರಣ ಬಾಡಿಗೆ ಹಾಲ್‌ಗಳಲ್ಲಿ ಪ್ರಾರ್ಥನಾ ಅವಧಿಗಳನ್ನು ನಡೆಸುತ್ತಿದ್ದಾರೆ. ಮತ್ತು ಈಗ ಅವರು ಶ್ರೀರಾಮ ಸೇನೆಯಂತಹ ಹಿಂದುತ್ವ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ನಮ್ಮ ಭಾನುವಾರದ ಪ್ರಾರ್ಥನೆಯಲ್ಲಿ ಸುಮಾರು 20 ಭಕ್ತರು ಭಾಗವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ದಿನಗೂಲಿ ಮಾಡುವವರಾಗಿದ್ದು, ಯಾವುದೇ ತೊಂದರೆಗೆ ಸಿಲುಕುವ ಭಯದಲ್ಲಿದ್ದಾರೆ. ಬೆಳಗಾವಿಯಲ್ಲಿ, ಕ್ಯಾಥೋಲಿಕರಂತಲ್ಲದೆ, ಅವರು ಹೆಚ್ಚು ಪ್ರಭಾವಶಾಲಿಯಾಗಿಲ್ಲದ ಕಾರಣ ಅವರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ, ”ಎಂದು ಅನಾಮಧೇಯರಾಗಿ ಉಳಿಯಲು ಬಯಸಿದ ಇನ್ನೊಬ್ಬ ಪಾದ್ರಿ ಹೇಳಿದ್ದಾರೆ. ಪ್ರಾರ್ಥನಾ ಮಾಡಲು ಬಾಡಿಗೆಗೆ ನೀಡುತ್ತಿದ್ದ ಕಟ್ಟಡಗಳ ಮಾಲಿಕರಿಗೆ ಪ್ರಾರ್ಥನಾಕ್ಕೆ ಸ್ಥಳಾವಕಾಶ ನೀಡದಂತೆ ಸೂಚಿಸಲಾಗಿದೆ ಎಂದು ಪಾದ್ರಿಗಳು ಹೇಳುತ್ತಾರೆ.
ಕಳೆದ ಎರಡು ವಾರಗಳಿಂದ, ಅನೇಕ ಸಭಾಂಗಣ ಮಾಲೀಕರು ತಮ್ಮ ಆಸ್ತಿಗೆ ಹಾನಿಯಾಗುವ ಭಯದಲ್ಲಿ ಜಾಗವನ್ನು ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ ಎಂದು ಪಾದ್ರಿ ಬೆನ್ನಿ ಹೇಳಿದರು. “ಪ್ರಮೋದ್ ಮುತಾಲಿಕ್ ಅದೇ ಪ್ರದೇಶದವರು ಆದ್ದರಿಂದ ಅವರು ಮತ್ತು ಶ್ರೀರಾಮ ಸೇನೆಯು ಇಲ್ಲಿ ತುಂಬಾ ಸಕ್ರಿಯವಾಗಿದೆ” ಎಂದು ಅವರು ಹೇಳಿದರು.
ಬಾಡಿಗೆಗೆ ಕೊಡುತ್ತಿದ್ದ ಅಂತಹ ಸಭಾಂಗಣಗಳ ಕೆಲವು ಮಾಲೀಕರು,, ಪಾದ್ರಿಗಳು ಸದ್ಯಕ್ಕೆ ತಮ್ಮ ಕಟ್ಟಡಗಳಲ್ಲಿ ಪ್ರಾರ್ಥನೆಗಳನ್ನು ನಡೆಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ ಎನ್ನುತ್ತಾರೆ.
ಬೆಳಗಾವಿಯ ಥಿಯಾಸಾಫಿಕಲ್ ಸೊಸೈಟಿಯ ಸದಸ್ಯರಾಗಿರುವ ಜೋತಿಬಾ ಜಾಧವ್ ಅವರು ಭಾನುವಾರದ ಪ್ರಾರ್ಥನೆಗಾಗಿ ಸಭಾಂಗಣವನ್ನು ಬಾಡಿಗೆಗೆ ನೀಡುತ್ತಿದ್ದೇವೆ. ಆದರೆ ಪ್ರಾರ್ಥನೆಗಾಗಿ ಸಭಾಂಗಣವನ್ನು ಬಾಡಿಗೆಗೆ ನೀಡಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಲು ಮುಂದಾದರೂ, ಇನ್ನೂ ಹಲವಾರು ಮಾಲೀಕರು ಅವರು ಉಂಟು ಮಾಡಬಹುದಾದ ಹಾನಿಯಿಂದಾಗಿ ಚಿಂತಿತರಾಗಿದ್ದಾರೆ. “ಮರಾಠಾ ಕಾಲೋನಿಯಲ್ಲಿ ಕೆಲವೇ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದರು. ಪೊಲೀಸರು ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಸಭಾಂಗಣಗಳಿಗೆ ರಕ್ಷಣೆ ನೀಡುವ ಬದಲು ಪಾದ್ರಿಗಳಿಗೆ ಬಾಡಿಗೆ ನೀಡದಂತೆ ಹಾಲ್ ಮಾಲೀಕರನ್ನು ಕೇಳುತ್ತಿದ್ದಾರೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ.ಎಂದು ದಿ ನ್ಯೂಸ್ ಮಿನಟ್ ವರದಿ ಮಾಡಿದೆ.
ಬಲಪಂಥೀಯ ಗುಂಪುಗಳು ಚರ್ಚ್‌ಗಳ ಮೇಲೆ ದಾಳಿ ಮಾಡಬಹುದೆಂಬ ಭಯವಿದೆ ಎಂದು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನ್ಯೂಸ್ ಮಿನಟ್‌ಗೆ ಖಚಿತಪಡಿಸಿದ್ದಾರೆ. “ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ ಎರಡು ಅಥವಾ ಮೂರು ಇತರ ಕಾನೂನು ವ್ಯಾಪ್ತಿಗಳಲ್ಲಿಯೂ ಸಹ.ಈ ಪರಿಸ್ಥಿತಿ ಇದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಎರಡು ವಾರಗಳ ಹಿಂದೆ ಶಿವಾಜಿ ಕಾಲೋನಿಯಲ್ಲಿ ಕ್ರೈಸ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಅಂತಹ ಘಟನೆ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ
ಚರ್ಚ್‌ಗಳಲ್ಲಿ ಮತ್ತು ಸುತ್ತಮುತ್ತ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದ್ದೇವೆ. ಬೇರೆ ಜಾತಿಯ ಜನರನ್ನು ಪ್ರಾರ್ಥನೆಗೆ ಕರೆತರದಂತೆ ನಾವು ಕೇಳಿದ್ದೇವೆ ಏಕೆಂದರೆ ಅವರ ಮೇಲೆ ಮತಾಂತರದ ಆರೋಪವಿದೆ. ನಾವು ಸಭೆಗಳನ್ನು ಚರ್ಚ್‌ಗಳಲ್ಲಿ ಮಾತ್ರ ನಡೆಸುವಂತೆ ಕೇಳಿಕೊಂಡಿದ್ದೇವೆ, ಬಾಡಿಗೆ ಹಾಲ್‌ಗಳು ಅಥವಾ ಮನೆಗಳಲ್ಲಿ ಅಲ್ಲ. ವಿಧಾನಸಭೆಯ ಚಳಿಗಾಲದ ಅಧಿವೇಶನದವರೆಗೂ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದೇವೆ’ ಎಂದು ನ್ಯೂಸ್ ಮಿನಟ್‌ಗೆ ತಿಳಿಸಿದ್ದಾರೆ.
ಬುಧವಾರ, ರೆವರೆಂಡ್ ನಂದು ಕುಮಾರ್ ಮತ್ತು ರೆವರೆಂಡ್ ಡೆರೆಕ್ ಫೆರ್ನಾಂಡಿಸ್ ನೇತೃತ್ವದಲ್ಲಿ ಬಿಷಪ್‌ಗಳು ಮತ್ತು ಕ್ರಿಶ್ಚಿಯನ್ ಮುಖಂಡರ ನಿಯೋಗವು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ಕೋರಿ ಮನವಿ ಸಲ್ಲಿಸಿತು. ಮನವಿ ಪತ್ರದಲ್ಲಿ, “ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರಲ್ಲಿ ಕ್ರಿಶ್ಚಿಯನ್ನರಿಗೆ ರಕ್ಷಣೆ ನೀಡುವ ಬದಲು ಸಮಾಜದ ಕೆಲವು ಗುಂಪುಗಳ ಜನರು ಒಡ್ಡುವ ಬೆದರಿಕೆಗಳಿಂದಾಗಿ ನಮ್ಮ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ಪ್ರಾರ್ಥನೆ ಮಾಡದಂತೆ ನಿರ್ಬಂಧಿಸುವ ಬದಲು ಕಿಡಿಗೇಡಿಗಳನ್ನು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಾರ್ಥನಾ ಮಂದಿರಗಳಲ್ಲಿ ನಡೆಯುತ್ತಿರುವುದೆಲ್ಲ ಸಂವಿಧಾನದ ಚೌಕಟ್ಟಿನಲ್ಲಿಯೇ ಇದೆ ಎಂದು ತಿಳಿಸಲಾಗಿದೆ.
ಏತನ್ಮಧ್ಯೆ, ಬಲಪಂಥೀಯ ಸಂಘಟನೆಗಳು ಮತ್ತು ಕೆಲವು ಬಿಜೆಪಿ ನಾಯಕರಿಂದ ‘ಮತಾಂತರ-ವಿರೋಧಿ’ ಕಾನೂನಿಗೆ ಕೂಗು ಬೆಳೆಯುತ್ತಿದೆ, ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದಂತಹ ಇತರ ರಾಜ್ಯಗಳ ಸಾಲಿನಲ್ಲಿ ಕಾನೂನನ್ನು ತರಲು ರಾಜ್ಯ ಸರ್ಕಾರವು ಉದ್ದೇಶವನ್ನು ಹೊಂದಿದೆ. ಅಸೆಂಬ್ಲಿ ಅಧಿವೇಶನ ನಡೆಯಲಿರುವ ಬೆಳಗಾವಿಯಲ್ಲಿ ಕ್ರಿಶ್ಚಿಯನ್ನರು ಹಿಂದೂ ಸಂಘಟನೆಗಳಿಂದ ಮತ್ತಷ್ಟು ಕಿರುಕುಳದ ಭಯವನ್ನು ಅನುಭವಿಸುತ್ತಿದ್ದಾರೆ.
ಪ್ರಾರ್ಥನೆ ಮಾಡಬೇಡಿ ಎನ್ನುವುದು.ದೇವಸ್ಥಾನಗಳಲ್ಲಿ ಪೂಜೆ ಮಾಡಬೇಡಿ ಎನ್ನುವುದು ಎರಡೂ ಒಂದೇ. ಪುಂಡರ ಗುಂಪುಗಳಿಗೆ ಇದೆಲ್ಲ ಅರ್ಥ ಆಗುವುದಿಲ್ಲ. ಅವುಗಳ ಹಿಂದೆ ಅಜೆಂಡಾ ಒಂದಿದೆ ಮತ್ತು ಇದು ಅವರಿಗೆ ಆದಾಯ ತಂದು ಕೊಡುವ ದಂಧೆಯೂ ಆಗಿದೆ.
ಇಂತಹವರನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಪೊಲೀಸರೇ ಪ್ರಾರ್ಥನೆ ಕೈಬಿಡಿ ಎನ್ನುವುದು ವಿಪರ್ಯಾಸ.
ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಮೊದಲು ಗಲಾಟೆ ಆಗಬಹುದು ಎಂಬ ಭಯವಿದ್ದರೆ, ಪುಂಡ ಗುಂಪುಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.