ಹಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರಾಜ್ಯದ ಹಲವೆಡೆ ಅವಾಂತರ ಸೃಷ್ಟಿಸಿಯಾಗಿದೆ. ಭಾನುವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.
ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ ಮತ್ತು ಅವಿಭಜಿತ ಬಳ್ಳಾರಿ ಜಿಲ್ಲೆಗಳಲ್ಲಿ ಎಕರೆಗಟ್ಟಲೆ ಜಾಗ ಜಲಾವೃತವಾಗಿದೆ ಮತ್ತು ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಸಮೀಕ್ಷೆ ನಡೆಸಲು ಯಾವೊಬ್ಬ ಅಧಿಕಾರಿಯು ಇನ್ನು ಸಹ ಬಂದಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಈ ಮಧ್ಯೆ ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗಿದ್ದು ನದಿಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಅಣೆಕಟ್ಟಿನ ಎಲ್ಲಾ 32 ಕ್ರಸ್ಟ್ ಗೇಟ್ಗಳಿಂದ 1ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಇದರ ಪರಿಣಾಮ ಗಂಗಾವತಿ ಮತ್ತು ಕಂಪ್ಲಿ ನಡುವಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ.

ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯು ವಿಶ್ವ ಪ್ರಸಿದ್ಧ ತಾಣವಾದ ಹಂಪಿಯಲ್ಲಿ ಜಲದಿಗ್ಬಂಧನ ನಿರ್ಮಾಣವಾಗಿದೆ. ಪುರಂದರ ಮಂಟಪ, ಕಾಲುಸಂಕ, ಚಕ್ರತೀರ್ಥ ಸ್ನಾನಘಟ್ಟ, ರಾಮ-ಲಕ್ಷ್ಮಣ ದೇವಸ್ಥಾನ ಆನೆಗೊಂದಿಯಲ್ಲಿರುವ ನವ ಬೃಂದಾವನ ಸಂಪೂರ್ಣ ಜಲಾವೃತಗೊಂಡಿದೆ. ಕೃಷ್ಣದೇವರಾಯರ ಸಮಾಧಿ ಸಂಪೂರ್ಣ ಮುಳುಗಡೆಯಾಗಿದೆ.
ಗಂಗಾವತಿ, ಕಂಪ್ಲಿ, ಸಿರಗುಪ್ಪ ತಾಲೂಕಿನ ರೈತರು ಪ್ರವಾಹಕ್ಕಿಂತ ಮುಂಚೆಯೇ ಅಕಾಲಿಕ ಮಳೆಯಿಂದಾಗಿ ಕಬ್ಬು, ಭತ್ತ ಮತ್ತು ಬಾಳೆ ತೋಟಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದವು.
ಇದೇ ವೇಳೆ ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಎಕರೆಗಟ್ಟಲೇ ಜಾಗದಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ, ಜೋಳ, ಶೇಂಗಾ ಬೆಳೆಗಳು ಮಳೆಯಿಂದಾಗಿ ಕೊಯ್ಲು ಸಮಯದಲ್ಲಿ ಹಾಳಾಗಿವೆ.

ಇತ್ತ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲು ಸಹ ಪರಿಸ್ಥಿತ ಬದಲಾಯಿಸಿಲ್ಲ ಸಾವಿರಾರು ಎಕರೆಯಲ್ಲಿ ಬೆಳೆದಿದ ಭತ್ತದ ಬೆಳೆ ಹಾಳಾಗಿದ್ದು ಹೂವಿನಹಡಗಲ್ಲಿ ತಾಲೂಕು ಒಂದರಲ್ಲೇ 1200 ಹೆಕ್ಟೆರ್ ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿದೆ.
ಸೋಮವಾರ ರಾಜ್ಯದ ಕರಾವಳಿ ಭಾಗವಾದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೇ ಮುನ್ಸೂಚನೆ ನೀಡಿರುವ ಕಾರಣ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 23ರ ನಂತರ ರಾಜ್ಯಾದ್ಯಂತ ಮಳೆಯ ಅಬ್ಬರ ತಗ್ಗಲಿದೆ ಎಂದು ಐಎಂಡಿ ತಿಳಿಸದೆ.