ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸಿ, ಇನ್ಸ್ಟಾಗ್ರಾಂನಲ್ಲಿ ವಿವಾದದ ಪೋಸ್ಟ್ ಮಾಡಿದ್ದ ಕಂಗನಾ ವಿರುದ್ಧ ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು (DSGMC) ದೂರು ದಾಖಲು ಮಾಡಿದ್ದಾರೆ.
ಇಡೀ ಸಿಖ್ ಸಮುದಾಯವನ್ನು ಖಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು “ಸೊಳ್ಳೆಗಳಂತೆ” ತನ್ನ ಶೂ ಅಡಿಯಲ್ಲಿ ತುಳಿದಿದ್ದಾರೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆರೋಪಿಸಿದ ನಟಿ ಕಂಗನಾ ರಣಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ದಿಲ್ಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ಕಂಗನಾ ರಣಾವತ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಳಸಿರುವ ಪದಗಳನ್ನು ಬಲವಾಗಿ ವಿರೋಧಿಸಿದೆ ಮತ್ತು ಅದನ್ನು ಅವಹೇಳನಕಾರಿ ಎಂದು ವಿರೋಧಿಸಿದೆ.
‘ಕಂಗನಾ ರಣಾವತ್ ಅವರು ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ರೈತರ ಚಳವಳಿಯನ್ನು ‘ಖಲಿಸ್ತಾನಿ ಚಳವಳಿ’ ಎಂದು ಬಣ್ಣಿಸಿದ್ದಾರೆ ಎಂದು ಸಮಿತಿ ತನ್ನ ದೂರಿನಲ್ಲಿ ಆರೋಪಿಸಿದೆ. ಸಿಖ್ ಸಮುದಾಯದ ವಿರುದ್ಧ ಕಂಗನಾ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವಳನ್ನು ಜೈಲಿಗೆ ಹಾಕಿ ಇಲ್ಲವೇ ಅಥವಾ ಮಾನಸಿಕ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದ್ದಾರೆ.
‘ಕಂಗನಾ ಪದ್ಮಶ್ರೀ ಪ್ರಶಸ್ತಿಗೆ ಅರ್ಹಳಲ್ಲ. ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಕಂಗನಾ ಅವರ ಹೇಳಿಕೆಯು ಅವರ ಕೆಟ್ಟ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಖಾಲಿಸ್ತಾನಿ ಭಯೋತ್ಪಾದಕರಿಂದಾಗಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳುವುದು ರೈತರಿಗೆ ಮಾಡಿದ ಅವಮಾನ. ಅವನು ದ್ವೇಷದ ಕಾರ್ಖಾನೆ ಎಂದು ಕಿಡಿಕಾರಿದ್ದಾರೆ.
ಕಂಗನಾ ಮತ್ತೊಂದು ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಏನಿತ್ತು?
ಖಲಿಸ್ತಾನಿ ಭಯೋತ್ಪಾದಕರು ಇವತ್ತು ಸರ್ಕಾರವನ್ನು ಟ್ವಿಸ್ಟ್ ಮಾಡ್ತಿರಬಹುದು. ಆದ್ರೆ ದೇಶದ ಏಕೈಕ ಮಹಿಳಾ ಪ್ರಧಾನಿಯನ್ನುಇವರು ಮರೆಯಬಾರದು. ಆ ಮಹಿಳಾ ಪ್ರಧಾನಿ ಇವರನ್ನು ಶೂ ಅಡಿಯಲ್ಲಿ ಸೊಳ್ಳೆಗಳಂತೆ ಹೊಸಕಿ ಹಾಕಿದ್ರು. ತನ್ನ ಜೀವವನ್ನೇ ಒತ್ತೆಯಿಟ್ರು. ಆದ್ರೆ ದೇಶ ಇಬ್ಭಾಗ ಆಗೋಕೆ ಬಿಡಲಿಲ್ಲ. ಅವರ ಹೆಸರು ಕೇಳಿದ್ರೆ ಇಂದಿಗೂ ಖಲಿಸ್ತಾನಿಗಳು ನಡುಗುತ್ತಾರೆ. ಇವರಿಗೆ ಅಂಥವರೇ ಬೇಕು ಅಂತ ಬರೆದುಕೊಂಡಿದ್ದಾರೆ.
ಆದ್ರೆ ಇಲ್ಲಿ ಕಂಗನಾ ಅವರು ರೈತರನ್ನು ಮತ್ತು ಸಿಖ್ ಸಮುದಾಯವನ್ನು ಖಲಿಸ್ತಾನಿಗಳಿಗೆ ಹೋಲಿಸಿರೋದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ “1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]’ ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದರು. ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ” ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.