ಡಿಜಿಟಲ್ ಸಾಲ ನೀಡಿಕೆ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಲು ಮತ್ತು ಇಡೀ ವ್ಯವಸ್ಥೆಯನ್ನು ಗ್ರಾಹಕ ಸ್ನೇಹಿಯಾಗಿ ರೂಪಿಸುವ ಸಲುವಾಗಿ ಡಿಜಿಟಲ್ ಸಾಲದಾತರಿಗೆ ಕಟ್ಟು ನಿಟ್ಟಾದ ನಿಯಮಗಳನ್ನು ರೂಪಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ್ದ ಸಮಿತಿಯು ಶಿಫಾರಸು ಮಾಡಿದೆ.
ಡಿಜಿಟಲ್ ಆರ್ಥಿಕ ವ್ಯವಸ್ಥೆ ವಿಸ್ತಾರಗೊಳ್ಳುತ್ತಿರುವ ಪ್ರಮಾಣದಲ್ಲೇ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಮತ್ತು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀತಿ ನಿಯಮಗಳನ್ನು ರೂಪಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 13 ರಂದು ಕಾರ್ಯನಿರ್ವಾಹಕ ನಿರ್ದೇಶಕ ಜಯಂಕ್ ಕುಮಾರ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು ಈಗ ಆರ್ಬಿಐಗೆ ಶಿಫಾರಸುಗಳನ್ನು ಸಲ್ಲಿಸಿದೆ.
ಶಿಫಾರಸುಗಳ ಪೈಕಿ ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್ಗಳನ್ನು ನೋಡಲ್ ಏಜೆನ್ಸಿಯಿಂದ ಪರಿಶೀಲನೆ ಪ್ರಕ್ರಿಯೆಗೆ ಒಳಪಡಿಸುವುದು ಪ್ರಮುಖವಾಗಿದೆ. ಅಲ್ಲದೇ, ಡಿಜಿಟಲ್ ಸಾಲ ನೀಡಿಕೆ ಪ್ರಕ್ರಿಯೆಯಲ್ಲಿನ ಎಲ್ಲಾ ಭಾಗೀದಾರರನ್ನು ಒಳಗೊಂಡಂತೆ ಸ್ವಯಂ ನಿಯಂತ್ರಣ ಸಂಘಟನೆಯನ್ನು ರಚಿಸುವುದಕ್ಕೂ ಸಮಿತಿ ಪ್ರಸ್ತಾಪ ಮಾಡಿದೆ.
ಡಿಜಿಟಲ್ ಸಾಲದ ವ್ಯವಸ್ಥೆಯಡಿ ಕೆಲವರು ಉನ್ನತ ತಾಂತ್ರಿಕತೆ ಬಳಸಿಕೊಂಡು ಅಕ್ರಮವಾಗಿ ಸಾಲ ನೀಡಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವುದು ಮತ್ತು ಇದನ್ನು ನಿಯಂತ್ರಿಸಲು ಪೂರಕ ಕಾನೂನು ಅಥವಾ ನಿಯಮಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ರೂಪಿಸಲು ಆರ್ಬಿಐ ಮುಂದಾಗಿದೆ.

ಅಕ್ರಮಗಳ ಸ್ವರೂಪಗಳನ್ನು ಅಧ್ಯಯನ ಮಾಡಿರುವ ಸಮಿತಿಯು ಡಿಜಿಟಲ್ ಸಾಲ ನೀಡಿಕೆ ಪ್ರಕ್ರಿಯೆಲ್ಲಿನ ಅಕ್ರಮಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಲು ಶಿಫಾರಸು ಮಾಡಿದೆ. ತಂತ್ರಜ್ಞಾನಾಧಾರಿತ ಮಾನದಂಡಗಳ ಅಭಿವೃದ್ಧಿ ಮತ್ತು ಸಾಲ ನೀಡಿಕೆಯಲ್ಲಿ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆ ಮತ್ತು ಇದರ ಮೇಲೆ ನಿಗಾ ವಹಿಸುವ ವ್ಯವಸ್ಥೆಯನ್ನು ರೂಪಿಸುವಂತೆಯು ಮತ್ತು ರೂಪಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನ ಮೇಲೆಯೇ ಡಿಜಿಟಲ್ ಸಾಲದಾತರಿಗೆ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರುವಂತೆಯೂ ಶಿಫಾರಸು ಮಾಡಿದೆ.
ಅಕ್ರಮಗಳನ್ನು ತಡೆಯುವ ಸಲುವಾಗಿ ಸಾಲಗಾರರ ಬ್ಯಾಂಕ್ ಖಾತೆಗಳಿಗೆ ನೇರ ಸಾಲ ವಿತರಣೆ, ಅಗತ್ಯ ಬಿದ್ದಾಗ ಸಕ್ಷಮ ಪ್ರಾಧಿಕಾರಗಳಿಂದ ಲೆಕ್ಕಪರಿಶೋಧನೆ, ಸಾಲಗಾರರ ಪೂರ್ವ ಮತ್ತು ಸ್ಪಷ್ಟ ಅನುಮತಿ ಇದ್ದಾಗ ಮಾತ್ರವಷ್ಟೇ ಆಯಾ ಗ್ರಾಹಕರು ಅಥವಾ ಸಾಲಗಾರರ ಮಾಹಿತಿ ಸಂಗ್ರಹಣೆ ಮಾಡುವಂತೆಯು ಇದೆಲ್ಲಕ್ಕಿಂತಲೂ ಮುಖ್ಯವಾಗಿ ಸಂಗ್ರಹಿಸಲಾಗುವ ಮಾಹಿತಿಯನ್ನು ದೇಶದೊಳಗೇ ಇರುವ ಸರ್ವರ್ ಗಳಲ್ಲಿ ಮಾತ್ರ ಸಂಗ್ರಹಿಸುವುದು ಕಡ್ಡಾಯ ಮಾಡುವಂತೆಯೂ ಶಿಫಾರಸು ಮಾಡಿದೆ.
ಸಾಲವಹಿವಾಟಿನಲ್ಲಿ ಅಗತ್ಯ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಗಾರಿದಮಿಕ್ ವೈಶಿಷ್ಟ್ಯಗಳ ಬಳಕೆ, ಪ್ರತಿ ಡಿಜಿಟಲ್ ಸಾಲದಾತನು ವಾರ್ಷಿಕ ಶೇಕಡಾವಾರು ಬಡ್ಡಿದರವನ್ನು ಮುಂಚಿತವಾಗಿಯೇ ಘೋಷಣೆ ಮಾಡಬೇಕು ಮತ್ತು ಪ್ರಮಾಣಿತ ಸ್ವರೂಪದಲ್ಲಿ ಪ್ರಮುಖ ಲೆಕ್ಕಪತ್ರಗಳ ವಾಸ್ತವಿಕ ಹೇಳಿಕೆಯನ್ನು ಒದಗಿಸಬೇಕು.
ಅನಪೇಕ್ಷಿತ ವಾಣಿಜ್ಯ ಸಂಹವನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸ್ವಯಂ ನಿಯಂತ್ರಣ ಸಂಘಟನೆಯು ರೂಪಿಸುವ ನೀತಿ ಸಂಹಿತಿಯನ್ನು ಪಾಲಿಸಬೇಕು ಮತ್ತು ಸಾಲವಿತರಣಾ ಸೇವೆ ಒದಗಿಸುವವರ ಕಪ್ಪುಪಟ್ಟಿಯನ್ನು ಸ್ವಯಂ ನಿಯಂತ್ರಣ ಸಂಘಟನೆಯು ನಿರ್ವಹಣೆ ಮಾಡಬೇಕು..

ಡಿಜಿಟಲ್ ಮೂಲಕ ನೀಡಿದ ಸಾಲದ ವಸೂಲಾತಿ ಮಾಡುವಾಗ ಡಿಜಿಟಲ್ ಸಾಲದಾತರು ಪ್ರಮಾಣಿತ ನೀತಿ ಸಂಹಿತೆಯ ಮೇಲೆ ಕೆಲಸ ಮಾಡಬೇಕು, ಈ ನೀತಿ ಸಂಹಿತೆಯನ್ನು ಸ್ವಯಂ ನಿಯಂತ್ರಣ ಸಂಘಟನೆಯು ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚಿಸಿ ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಸಮಿತಿ ಶಿಫಾರಸುಗಳ ಕುರಿತಂತೆ ಡಿಜಿಟಲ್ ಸಾಲೋದ್ಯೋಮದ ಎಲ್ಲಾ ಭಾಗೀದಾರರು ತಮ್ಮ ಪ್ರತಿಕ್ರಿಯೆಗಳನ್ನು ಡಿಸೆಂಬರ್ 31ರವರೆಗೂ ಸಲ್ಲಿಸಬಹುದು ಎಂದು ಆರ್ಬಿಐ ತಿಳಿಸಿದೆ.






