ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಗೋವಾ ಮತ್ತು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಭಿನ್ನ ರಾಜಕೀಯ ತಂತ್ರಗಾರಿಯನ್ನು ಅನುಸರಿಸಲಿದೆ. ಈಗಾಗಲೇ ಗೋವಾದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಎಸ್.ಪಿ. ಮತ್ತು ಬಿಜೆಪಿ ನಡುವಿನ ಬಿರುಸಿನ ಸ್ಪರ್ಧೆಯ ನಡುವೆ ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಹೆಣಗಾಡುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಏಕಾಂಗಿ ಹೋರಾಟ ನಡೆಸಲು ಕಾಂಗ್ರೆಸ್ ಸಿದ್ದವಾಗಿದೆ. ಈ ಕುರಿತಾಗಿ ಅಧಿಕೃತವಾಗಿ ಘೋಷಣೆ ಮಾಡಿರುವ ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಉತ್ತರ ಪ್ರದೇಶದ ಎಲ್ಲಾ 403 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದ್ದು, ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
“2017ರ ಉನ್ನಾವೊ ಅತ್ಯಾಚಾರ ಪ್ರಕರಣ,2020ರ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಎಸ್ ಪಿ ಹಾಗೂ ಬಿ ಎಸ್ ಪಿಯ ಯಾವೊಬ್ಬ ನಾಯಕನೂ ಹೋರಾಟಕ್ಕೆ ಮುಂದಾಗಲಿಲ್ಲ. ಇಂತಹ ಸಂದರ್ಭದಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಮಾತ್ರ,” ಎಂದು ಪ್ರಿಯಾಂಕ ಇತರೆ ಪಕ್ಷಗಳ ವಿರುದ್ದ ಹರಿಹಾಯ್ದಿದ್ದಾರೆ.

ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿರುವ ಕಾರ್ಯಕರ್ತರಿಗೆ ಮನ್ನಣೆ ನೀಡಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ, ಎಂದು ಕಾಂಗ್ರೆಸ್ ಹೇಳಿದೆ.
ಇತ್ತೀಚಿಗೆ ದೆಹಲಿಯಿಂದ ಲಕ್ನೋವರೆಗೆ ಪ್ರಿಯಾಂಕ ಗಾಂಧಿ ಹಾಗೂ ರಾಷ್ಟ್ರೀಯ ಲೋಕ ದಳ ಪಕ್ಷದ ಮುಖ್ಯಸ್ಥ ಜಯಂತ್ ಚೌಧರಿ ಅವರು ಜತೆಯಲ್ಲಿ ಪ್ರಯಾಣ ಬೆಳೆಸಿದ್ದರು. ಶಿವಪಾಲ್ ಸಿಂಗ್ ಯಾದವ್ ಅವರ ನೂತನ ಪಕ್ಷ ಪ್ರಗತಿಶೀಲ ಸಮಾಜವಾದಿ ಪಕ್ಷದ ಘೋಷಣೆಯ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಪ್ರಮೋದ್ ಕೃಷ್ಣಂ ಕಾಣಿಸಿಕೊಂಡಿದ್ದರು. ಹೀಗಾಗಿ RLD ಹಾಗೂ ಪ್ರಗಿತಶೀಲ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು.
ಈಗ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಪ್ರಿಯಾಂಕ ಗಾಂಧಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪಕ್ಷ ಸಂಘಟಿಸಲು ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಸಮಾವೇಶ ಮಾಡಿರುವ ಪ್ರಿಯಾಂಕ, ಬಿಜೆಪಿಯ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಾಗಿ ಅವರಿಗೆ ಸ್ವಾತಂತ್ರ್ಯದ ಮಹತ್ವದ ಕುರಿತು ತಿಳಿವಳಿಕೆಯಿಲ್ಲ. ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಹಾಗೂ ಅಂಬೇಡ್ಕರ್’ನಂತಹ ಮಹಾನ್ ನಾಯಕರು ಮಾತ್ರ ಸ್ವತಂತ್ರ ಭಾರತದ ಭವ್ಯತೆಯ ಕುರಿತು ಕಲ್ಪನೆ ಹೊಂದಿದ್ದರು, ಎಂದು ಪ್ರಿಯಾಂಕ ಹೇಳಿದ್ದಾರೆ.

ಈಗಾಗಲೇ, ಚುನಾವಣೆಯಲ್ಲಿ ಮಹಿಳೆಯರಿಗೂ ಸಮಾನವಾಗಿ ಸ್ಪರ್ಧಿಸಲು ಅವಕಾಶ ನೀಡುವ ಭರವಸೆ ನೀಡಿರುವ ಪ್ರಿಯಾಂಕ ಗಾಂಧಿಯ ನಿರ್ಧಾರ ಹಾಗೂ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಚುನಾವಣಾ ಫಲಿತಾಂಶದ ಮೇಲೆ ನಿಚ್ಛಳವಾಗಿ ಪ್ರಭಾವ ಬೀರಲಿದೆ. ಮಿಗಿಲಾಗಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪಕ್ಷಕ್ಕೆ ಒದಗಿದ ಉತ್ತಮ ಅವಕಾಶವೂ ಇದಾಗಿದೆ.
ಗೋವಾದಲ್ಲಿ ಮೈತ್ರಿ ಸಾಧ್ಯತೆ:
ಉತ್ತರ ಪ್ರದೇಶದ ಚುನಾವಣಾ ನೀತಿಗೆ ಹೋಲಿಸಿದರೆ, ಗೋವಾದಲ್ಲಿ ಕಾಂಗ್ರೆಸ್ ವಿಭಿನ್ನ ಸೂತ್ರವನ್ನು ಅನುಸರಿಸಿದೆ. ಇಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ (NCP), ಗೋವಾ ಫಾರ್ವರ್ಡ್ ಪಾರ್ಟಿ (GFP) ಹಾಗೂ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ (MGP)ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಗೋವಾ ಕಾಂಗ್ರೆಸ್ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಅವರು ಈ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ರಾಜ್ಯದಲ್ಲಿರುವ ಭೃಷ್ಟ ಹಾಗೂ ಕೋಮುವಾದಿ ಬಿಜೆಪಿ ಸರ್ಕಾರವನ್ನು ತೊಲಗಿಸುವ ಅಗತ್ಯತೆ ಗೋವಾಕ್ಕಿದೆ ಎಂದಿದ್ದಾರೆ.
“ಗೋವಾದಲ್ಲಿ ಐದು ವರ್ಷಗಳ ಸದೃಢ ಆಡಳಿತ ನಡೆಸುವುದು ಈ ಮೈತ್ರಿಕೂಟದ ಆಶಯ. ಗೋವಾದ ಸಂಸ್ಕೃತಿ ಹಾಗೂ ಸಮುದಾಯಗಳನ್ನು ಅರಿತಿರುವ ಪಕ್ಷಗಳು ಕಾಂಗ್ರೆಸ್ ಜತೆ ಕೈಗೂಡಿಸುವುದಿದ್ದರೆ ಅವರಿಗೆ ನಾವು ಸ್ವಾಗತ ಕೋರುತ್ತೇವೆ,” ಎಂದು ಗುಂಡೂರಾವ್ ಹೇಳಿದ್ದಾರೆ.
2017ರ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಕೇವಲ 13 ಸ್ಥಾನಗಳನ್ನು ಪಡೆದಿತ್ತು. ಬಳಿಕ ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ನಡೆಸಿ ಮನೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿತ್ತು.

ಬಳಿಕ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್’ನ 13 ಶಾಸಕರು ವಿವಿಧ ಪಕ್ಷಗಳಿಗೆ ಪಕ್ಷಾಂತರಗೊಂಡಿದ್ದರು. ಬಹುತೇಕ ಶಾಸಕರು ಬಿಜೆಪಿಯ ಕಡೆ ವಾಲಿದ್ದರು. ಇತ್ತೀಚಿಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಲೂಯಿಝಿನೊ ಫಲೇರೊ ಟಿಎಂಸಿ ಸೇರ್ಪಡೆಯಾಗಿದ್ದರು. GFP ಹಾಗೂ MGP ಪಕ್ಷಗಳು ಬಿಜೆಪಿ ನೇತೃತ್ವದ ಮೈತ್ರಿಕೂಟದ ಭಾಗವಾಗಿಯೂ ಇದ್ದರು. ಆದರೆ, ಕ್ರಮೇಣ ಆ ಪಕ್ಷಗಳು ಮೈತ್ರಿಕೂಟದಿಂದ ಹೊರಬಂದವು.
ಹೀಗೆ ಗೋವಾದಲ್ಲಿ ಪ್ರಸ್ತುತ ಕೇವಲ ನಾಲ್ಕು ಜನ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ.
ಉತ್ತರ ಪ್ರದೇಶ ಹಾಗೂ ಗೋವಾದಲ್ಲಿನ ಭಿನ್ನ ರಾಜಕೀಯ ಸ್ಥಿತಿಗತಿಗಳಿಗೆ ಅನುಗುಣವಾಗಿ ವಿಭಿನ್ನ ಕಾರ್ಯತಂತ್ರವನ್ನು ರೂಪಿಸಿರುವ ಕಾಂಗ್ರೆಸ್ ಯಾವ ರೀತಿ ತನ್ನ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ಇಳಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.