ಬಿಟ್ ಕಾಯಿನ್ ಪ್ರಕರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್, ಹಗರಣದ ಕುರಿತು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣ್ ದೀಪ್ ಸುರ್ಜೆವಾಲಾ, ಶನಿವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹಗರಣದ ವಿವರಗಳನ್ನು ಬಹಿರಂಗಪಡಿಸಿ, ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಪೊಲೀಸರಿಗೆ ನೀಡಿದ ಲಿಖಿತ ಹೇಳಿಕೆಯ ಪ್ರಕಾರವೇ ಇದು ಸುಮಾರು ಐದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಗರಣ. ಅಲ್ಲದೆ, ಇಂದು ಒಂದು ರಾಜ್ಯ, ಒಂದು ದೇಶಕ್ಕೆ ಸೀಮಿತವಾಗಿಲ್ಲ. ಜೊತೆಗೆ ರಾಜ್ಯ ಬಿಜೆಪಿ ಸರ್ಕಾರ ಹಗರಣದ ತನಿಖೆ ನಡೆಸುವ ಬದಲು, ಮುಚ್ಚಿಹಾಕುವ ಯತ್ನದಲ್ಲಿದೆ. ಸ್ವತಃ ಪ್ರಧಾನಿ ಮೋದಿಯವರೇ ಹಗರಣವನ್ನು ತಳ್ಳಿಹಾಕುವ ಮಾತುಗಳನ್ನಾಡಿರುವುದರಿಂದ ಈ ಕುರಿತು ಹಾಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಹಣಕಾಸು ಮತ್ತು ಕಾನೂನು ತಜ್ಞರನ್ನೊಳಗೊಂಡ ಎಸ್ ಐಟಿ ಮೂಲಕವೇ ತನಿಖೆಯಾಗಿ ಸತ್ಯಾಂಶ ಹೊರಬರಬೇಕಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೇ ಪ್ರಶ್ನೆಗಳನ್ನು ಎಸೆದಿದ್ದು, ಬರೋಬ್ಬರಿ ಐದು ಸಾವಿರ ಕೋಟಿಗೂ ಅಧಿಕ ಮೊತ್ತದ ಬಿಟ್ ಕಾಯಿನ್ ಹ್ಯಾಕ್ ಮತ್ತು ರಾಜ್ಯ ಸರ್ಕಾರದ ಇಪ್ರಕ್ಯೂರ್ ಮೆಂಟ್ ಪೋರ್ಟಲ್ ಹ್ಯಾಕ್ ಮೂಲಕ ಕೋಟ್ಯಂತರ ರೂಪಾಯಿ ದೋಚಿದ ಈ ಪ್ರಕರಣದ ವಿಷಯದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಗೆ, ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲು ಯಾಕೆ ವಿಳಂಬ ಮಾಡಲಾಯಿತು ಮತ್ತು ಈಗಲೂ ಪ್ರಮುಖ ಆರೋಪಿಯನ್ನು ರಾಜಾರೋಷವಾಗಿ ಅಲೆದುಕೊಂಡಿರಲು ಬಿಟ್ಟಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದ್ದು, ಗೃಹ ಸಚಿವರಾಗಿ ತಮ್ಮ ಅವಧಿಯಲ್ಲೇ ಪ್ರಕರಣದ ತನಿಖೆ ಹಳಿತಪ್ಪಿದೆ ಮತ್ತು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಜೊತೆಗೆ ಮುಖ್ಯಮಂತ್ರಿಯಾಗಿ ಸ್ವತಃ ತಾವೇ ಇದ್ದರೂ ಈಗಲೂ ಹಗರಣದ ಕುರಿತು ತನಿಖೆಗೆ ಮುಂದಾಗುವ ಬದಲು ಪ್ರಕರಣವನ್ನು ತಳ್ಳಿಹಾಕುವ ಮಾತುಗಳನ್ನಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.
ಮುಖ್ಯವಾಗಿ ಪ್ರಮುಖ ಆರೋಪಿ ಶ್ರೀಕೃಷ್ಣ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಸಿಸಿಬಿ ವಶದಲ್ಲಿರುವಾಗಲೇ ಆತ ಹಲವು ಬಿಟ್ ಕಾಯಿನ್ ಹ್ಯಾಕ್ ಮಾಡಿರುವ ಮತ್ತು ಹ್ಯಾಕ್ ಮಾಡಿದ ಬಿಟ್ ಕಾಯಿನ್ ಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳಿವೆ. ಶ್ರೀಕೃಷ್ಣ ಮತ್ತು ಆತನ ಸಹಚರ ರಾಬಿನ್ ಖಂಡೇಲ್ ವಾಲಾನನ್ನು 2020ರ ನವೆಂಬರ್ 24ರಂದು ಬಂಧಿಸಿದ ಪೊಲೀಸರು, 2021ರ ಏಪ್ರಿಲ್ 17ರವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು, ಆ ಅವಧಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ದಿನ ಆತನ ಮೇಲೆ ಒಂದಾದ ಮೇಲೆ ಒಂದು ಪ್ರಕರಣ ದಾಖಲಿಸಿ, 14 ದಿನಕ್ಕೊಮ್ಮೆ ನ್ಯಾಯಾಂಗ ಬಂಧನ ವಿಸ್ತರಿಸಿಕೊಂಡಿದ್ದರು. ಹಾಗಿದ್ದರೂ ಆತನ ಅಂತಾರಾಷ್ಟ್ರೀಯ ಅವ್ಯವಹಾರ ಮತ್ತು ಹಣಕಾಸು ವಂಚನೆಯ ಕುರಿತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿರಲಿಲ್ಲ. ಆತ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸಿಬಿಐ ಇಂಟರ್ ಪೋಲ್ ಮಾಹಿತಿ ಕೋರಿದ ಬಳಿಕವಷ್ಟೇ ರಾಜ್ಯ ಸರ್ಕಾರ ಆ ಕುರಿತ ಮಾಹಿತಿ ನೀಡಿದೆ. ಅಂದರೆ; ಕೇಂದ್ರದ ತನಿಖಾ ಸಂಸ್ಥೆಗಳಿಗೆ ಕೂಡಲೇ ಮಾಹಿತಿ ನೀಡಬೇಕಿದ್ದ ಅಂತರಾಷ್ಟ್ರೀಯ ಪ್ರಕರಣವನ್ನು ಗೃಹ ಸಚಿವರಾಗಿ ಬೊಮ್ಮಾಯಿ ಅವರು ಮುಚ್ಚಿಟ್ಟದ್ದು ಯಾಕೆ ಎಂದು ಕಾಂಗ್ರೆಸ್ ಕೇಳಿದೆ.
ಅಲ್ಲದೆ ಇದೇ ಅವಧಿಯಲ್ಲೇ, ಶ್ರೀಕೃಷ್ಣ ಸಿಸಿಬಿ ವಶದಲ್ಲಿರುವಾಗಲೇ 2020ರ ಡಿಸೆಂಬರ್ 1 ಮತ್ತು 2021ರ ಏಪ್ರಿಲ್ 14ರಂದು ಬಿಟ್ ಫೀನಿಕ್ಸ್ ಎಂಬ ಬಿಟ್ ಕಾಯಿನ್ ಎಕ್ಸ್ ಚೇಂಜ್ ನಿಂದ 2016ರಲ್ಲಿ ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ ಗಳನ್ನು ವಿವಿಧ ವ್ಯಾಲೆಟ್ ಗಳಿಗೆ ವರ್ಗಾವಣೆ ಮಾಡಿರುವ ಬಗ್ಗೆ, ಬಿಟ್ ಕಾಯಿನ್ ವಹಿವಾಟಿನ ನಿಗಾ ಜಾಲತಾಣ ವೇಲ್ ಅಲರ್ಟ್ನಲ್ಲಿ ದಾಖಲಿಸಲಾಗಿದೆ. ಬರೋಬ್ಬರಿ 704 ಮಿಲಿಯನ್ ಡಾಲರ್(5,240 ಕೋಟಿ ರೂ.) ಮೊತ್ತದ ಈ ವಹಿವಾಟನ್ನು ಶ್ರೀಕೃಷ್ಣನೇ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಾಗಬೇಕಾದ ಸಂಗತಿ. ಆದರೆ, ಸಿಸಿಬಿ ಪೊಲೀಸರು ಈ ಮಾಹಿತಿಯನ್ನು ಕೂಡ ತನಿಖೆ ಮಾಡಿಲ್ಲ ಮತ್ತು ಅದನ್ನು ಮುಚ್ಚಿಟ್ಟಿದ್ದಾರೆ ಎಂಬುದು ಗಮನಾರ್ಹ ಎಂಬುದು ಕಾಂಗ್ರೆಸ್ ದಾಖಲೆ ಸಹಿತ ಮಾಡಿರುವ ಆರೋಪ.
ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಪೂರಕವಾಗಿ, ಶ್ರೀಕಿ ತನ್ನ ಹೇಳಿಕೆಯಲ್ಲಿ ಈ ಬಿಟ್ ಫೀನಿಕ್ಸ್ ಎಕ್ಸ್ ಚೇಂಜ್ ಬಗ್ಗೆ ಉಲ್ಲೇಖಿಸಿದ್ದು, ಆ ಎಕ್ಸ್ ಚೇಂಜನ್ನು ತಾನು ಎರಡು ಬಾರಿ ಹ್ಯಾಕ್ ಮಾಡಿದ್ದು, ಅತಿ ಭದ್ರತೆಯ ಅದನ್ನು ಹ್ಯಾಕ್ ಮಾಡಿದ ಮೊದಲಿಗ ತಾನೇ ಎಂದು ಹೇಳಿಕೊಂಡಿದ್ದಾನೆ. ಎಕ್ಸ್ ಚೇಂಜ್ ಸರ್ವರ್ ಹ್ಯಾಕ್ ಮಾಡಿ ಅದರ ಪಾಸ್ ವರ್ಡ್ ಬದಲಾಯಿಸಿ ಅದನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 2000 (ಎರಡು ಸಾವಿರ) ಬಿಟ್ ಕಾಯಿನ್ ಗಳನ್ನು ತನ್ನ ಬಿಟ್ ಕಾಯಿನ್ ವ್ಯಾಲೆಟ್ ಗೆ ವರ್ಗಾಯಿಸಿಕೊಂಡಿದ್ದಾಗಿ ಹೇಳಿದ್ದು, ತಾನು ಹ್ಯಾಕ್ ಮಾಡಿದ ಸಮಯದಲ್ಲಿ ಒಂದು ಬಿಟ್ ಕಾಯಿನ್ ದರ 100-200 ಡಾಲರ್ ನಷ್ಟಿತ್ತು ಮತ್ತು ಅದನ್ನು ಯಕೆಯ ತನ್ನ ಗೆಳೆಯ ಆಯಂಡಿಯೊಂದಿಗೆ ತಾನು ಹಂಚಿಕೊಂಡಿದ್ದಾಗಿ ಹೇಳಿದ್ದಾನೆ. ಆತನ ಲೆಕ್ಕಾಚಾರದ ಪ್ರಕಾರವೇ ನೋಡಿದರೂ, ಆತ ಬಿಟ್ ಫೀನಿಕ್ಸ್ ನಿಂದ ಹ್ಯಾಕ್ ಮಾಡಿದ ಬಿಟ್ ಕಾಯಿನ್ ಒಟ್ಟು ಮೊತ್ತ ಸರಿಸುಮಾರು 2.5-3 ಕೋಟಿ ಕೋಟಿ ರೂ.ನಷ್ಟಾಗುತ್ತದೆ. ಆದರೆ, ಹಾಗೆ ಪಡೆದ ಭಾರೀ ಹಣವನ್ನು ತಾನು ಕೆಲವೇ ದಿನಗಳಲ್ಲಿ ದಿನಕ್ಕೆ 1ರಿಂದ 3 ಲಕ್ಷ ರೂ. ಕಚ್ಚಿನ ಲೆಕ್ಕದಲ್ಲಿ ಲಕ್ಸುರಿ ಹೋಟೆಲ್, ಹೆಂಡದ ಮೇಲೆ ಪೂರಾ ಕರ್ಚು ಮಾಡಿದೆ ಎಂದೂ ಹೇಳಿದ್ದಾನೆ(ಸಿಸಿಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖ)
ಒಟ್ಟು 11 ಪುಟಗಳ ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಎ1 ಆರೋಪಿ ಶ್ರೀಕಿ, ಹೀಗೆ ಸಾವಿರಾರು ಕೋಟಿ ರೂ. ನಷ್ಟು ಬಿಟ್ ಕಾಯಿನ್ ಹ್ಯಾಕ್, ವಿವಿಧ ಖಾತೆಗಳಿಂದ ಹಣ ದೋಚಿದ ಬಗ್ಗೆ ವಿವರಗಳನ್ನು ನೀಡಿದ್ದಾನೆ. ಹಾಗೆ ನಿಖರ ಮೊತ್ತದ ವಿವರ ನೀಡದ ವಹಿವಾಟು ಕೂಡ ಆತನ ಉಲ್ಲೇಖದಲ್ಲಿ ಹಲವಾರಿವೆ. ಆದರೆ, ಹಾಗೆ ಗಳಿಸಿದ ಸಾವಿರಾರು ಕೋಟಿ ಹಣವನ್ನು ತಾನು ಮತ್ತು ತನ್ನ ಸ್ನೇಹಿತರು ಒಂದೆರಡು ತಿಂಗಳಲ್ಲೇ ಐಷಾರಾಮಿ ಹೋಟೆಲ್, ಕುಡಿತದ ಮೇಲೆ ಸುರಿದು ಖಾಲಿ ಮಾಡಿದ್ದಾಗಿ ಪ್ರತಿ ಬಾರಿಯೂ ಹೇಳಿದ್ದಾನೆ. ಮತ್ತೆ ಇನ್ನಷ್ಟು ಮೊತ್ತವನ್ನು ತನ್ನ ಸ್ನೇಹಿತರಿಗೆ ನೀಡಿರುವುದಾಗಿಯೂ ಹೇಳಿದ್ದಾನೆ. ಆದರೆ, ಪ್ರಶ್ನೆ ಇರುವುದು ಸಾವಿರಾರು ಕೋಟಿಯಷ್ಟು ದೊಡ್ಡ ಮೊತ್ತದ ಹಣವನ್ನು ಕೇವಲ ಒಂದೆರಡು ವರ್ಷದಲ್ಲೇ ನಾಲ್ಕೈದು ಮಂದಿ ಉಡಾಯಿಸುವುದು ಹೇಗೆ? ಮತ್ತು ಎಲ್ಲೆಲ್ಲಿ ಅದನ್ನು ಕರ್ಚು ಮಾಡಿದ್ದಾರೆ ಎಂಬ ಬಗ್ಗೆ ಸಿಸಿಬಿಯ ಆರೋಪಪಟ್ಟಿಯಲ್ಲಿ ವಿವರಗಳಿಲ್ಲ!
ಬಿಟ್ ಫೀನಿಕ್ಸ್ ಹ್ಯಾಕ್ ವಿಷಯದಲ್ಲಿ ಆ ಕಂಪನಿ ಹ್ಯಾಕ್ ಕುರಿತು ಮಾಹಿತಿ ನೀಡಿದವರಿಗೆ 400 ಮಿಲಿಯನ್ ಡಾಲರ್ ಬಹುಮಾನವನ್ನೂ ಘೋಷಿಸಿತ್ತು. 2016ರಲ್ಲಿ ನಡೆದ ಬಿಟ್ ಕಾಯಿನ್ ಇತಿಹಾಸದಲ್ಲೇ ಅತಿದೊಡ್ಡದಾದ ಆ ಹ್ಯಾಕ್ ನಲ್ಲಿ ಒಟ್ಟು 1.20 ಲಕ್ಷ ಬಿಟ್ ಕಾಯಿನ್ ಗಳನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಅದರ ಮೊತ್ತ ಸರಿಸುಮಾರು 1.2 ಬಿಲಿಯನ್ ಡಾಲರ್(ಸುಮಾರು 9 ಸಾವಿರ ಕೋಟಿ!)ನಷ್ಟಿತ್ತು. ಆ ಹಿನ್ನೆಲೆಯಲ್ಲಿ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಗರಣವಾಗಿತ್ತು. ಆದರೂ, ಆರೋಪಿ ಶ್ರೀಕೃಷ್ಣ ಆ ಬೃಹತ್ ಹ್ಯಾಕ್ ನಲ್ಲಿ ತಾನೂ ಭಾಗಿಯಾಗಿದ್ದೆ ಎಂದು ಸ್ವಯಂ ಹೇಳಿಕೆ ನೀಡಿದ್ದರೂ ಯಾಕೆ ಸಿಸಿಬಿ ಪೊಲೀಸರು ಈ ವಿಷಯವನ್ನು ಯಾವುದೇ ರಾಷ್ಟ್ರೀಯ ತನಿಖಾ ಸಂಸ್ಥೆಯಾಗಲೀ, ಇಂಟರ್ ಪೋಲ್ ಗಾಗಲೀ ಮಾಹಿತಿ ನೀಡದೆ ಮುಚ್ಚಿಟ್ಟಿದರು ಎಂಬುದು ಈಗ ಎದ್ದಿರುವ ಪ್ರಶ್ನೆ.
ಈ ನಡುವೆ, ಶ್ರೀಕಿಯ ಈ ಬೃಹತ್ ಅಂತಾರಾಷ್ಟ್ರೀಯ ವಂಚನೆಯ ಹೊತ್ತಲ್ಲೇ ರಾಜ್ಯದ ಅಧಿಕಾರದ ಸೂತ್ರಧಾರರು, ಹಿರಿಯ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಿಗೆ ಸಂಬಂಧಿಸಿದವರ ವ್ಯಾಲೆಟ್ ಗಳಿಗೆ ಭಾರೀ ಮೊತ್ತದ ಬಿಟ್ ಕಾಯಿನ್ ಗಳು ವರ್ಗಾವಣೆಯಾಗಿವೆ ಎಂಬ ವರದಿಗಳಿವೆ. ಹಾಗಾಗಿ, ಆ ಭಾರೀ ಮೊತ್ತದ ಬಿಟ್ ಕಾಯಿನ್ ಮತ್ತು ನಗದು ವರ್ಗಾವಣೆಗೂ ಮತ್ತು ಸಿಸಿಬಿ ಪೊಲೀಸರ ಜಾಣ ಮೌನಕ್ಕೂ ಸಂಬಂಧವಿದೆಯೇ? ಎಂಬುದು ತನಿಖೆಯಿಂದ ಹೊರಬರಬೇಕಾದ ಸಂಗತಿ!