ಸರ್ಕಾರಗಳು ಜನರ ಮೇಲೆ ತೆರಿಗೆ ಹೇರಿದರೆ ಅದರಿಂದ ಬೊಕ್ಕಸಕ್ಕೆ ಆದಾಯ ಬರುತ್ತದೆ. ಮಿತಿ ಮೀರಿ ತೆರಿಗೆ ಹೇರಿದಾಗ ಜನರು ನಷ್ಟವನ್ನಷ್ಟೇ ಅಲ್ಲ ಸಂಕಷ್ಟವನ್ನೂ ಅನುಭವಿಸುತ್ತಾರೆ. ತಾನೇ ಹೇರಿದ್ದ ಮಿತಿ ಮೀರಿದ ತೆರಿಗೆಯನ್ನು ಕಡಿತ ಮಾಡಿದರೆ ಸರ್ಕಾರಕ್ಕೆ ನಷ್ಟವಾಗುವುದಾದರೂ ಹೇಗೆ? ಅದು ಬೊಕ್ಕಸಕ್ಕಾಗುವ ನಷ್ಟವಲ್ಲ, ಅದು ತೆರಿಗೆ ಆದಾಯದಲ್ಲಿನ ಕಡಿತವಷ್ಟೇ!
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಕ್ರಮವಾಗಿ 5 ಮತ್ತು 10 ರುಪಾಯಿಗಳ ತೆರಿಗೆ ಕಡಿತ ಮಾಡಿದ ಬೆನ್ನಲ್ಲೆ ಕರ್ನಾಟಕ ರಾಜ್ಯವೂ ತಲಾ ಏಳು ರುಪಾಯಿ ತೆರಿಗೆ ಕಡಿತ ಮಾಡಿದೆ.
ತೆರಿಗೆ ಕಡಿತ ಮಾಡಿದ್ದನ್ನು ಟ್ವಿಟ್ಟರ್ ಮೂಲಕ ಪ್ರಕಟಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಬೊಕ್ಕಸಕ್ಕೆ 2,100 ಕೋಟಿ ರುಪಾಯಿ ನಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ನಷ್ಟದ ಹೊರೆಯನ್ನು ತಾವೇ ಭರಿಸುವ ಮೂಲಕ ರಾಜ್ಯದ ಜನತೆಗೆ ಏನೋ ಉಪಕಾರ ಮಾಡಿರುವಂತಿದೆ ಅವರ ಹೇಳಿಕೆ.

ವಾಸ್ತವವಾಗಿ ತೆರಿಗೆ ಕಡಿತ ಮಾಡಿದರೆ, ಅದು ಯಾವತ್ತೂ ನಷ್ಟವಲ್ಲ. ಇದು ತೆರಿಗೆ ಆದಾಯದಲ್ಲಿನ ಕೊರತೆ ಎಂದು ಪರಿಗಣಿಸಬೇಕು. ನಷ್ಟ ಎಂದು ಹೇಳುವ ಮೂಲಕ ಜನರಿಗೆ ಉಪಕಾರ ಮಾಡುತ್ತಿದ್ದೇವೆ ಎಂಬರ್ಥದಲ್ಲಿ ಹೇಳುವುದು ರಾಜ್ಯದ ಜನತೆಯನ್ನು ಹಾದಿ ತಪ್ಪಿಸಿದಂತೆಯೇ ಸರಿ.
ಅಷ್ಟಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟ್ಟರ್ ನಲ್ಲಿ ಘೋಷಿಸಿದಂತೆ ಪೆಟ್ರೋಲ್ ದರವು 95.50ರುಪಾಯಿಗೆ ಇಳಿದಿಲ್ಲ. ದರ ಪರಿಷ್ಕರಣೆಯ ನಂತರವೂ ಬೆಂಗಳೂರಿನಲ್ಲಿ ನವೆಂಬರ್ 4ರಂದು 107.64 ರುಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ನವೆಂಬರ್ 3ರಂದು ಇದ್ದ ಪೆಟ್ರೋಲ್ ದರ 113.93ಕ್ಕೆ ಹೋಲಿಸಿದರೆ ಕಡಿತವಾಗಿರುವುದು ಕೇವಲ 6.29 ರುಪಾಯಿ ಮಾತ್ರ. ಡಿಸೇಲ್ ದರದಲ್ಲಿ ಹೆಚ್ಚಿನ ಕಡಿತವಾಗಿದೆ. ನವೆಂಬರ್ 3ರಂದು ಇದ್ದ 104.50ರುಪಾಯಿಗೆ ಹೋಲಿಸಿದರೆ, ನವೆಂಬರ್ 4ರಂದು 92.03 ರುಪಾಯಿಗೆ ತಗ್ಗಿದೆ. ಅಂದರೆ ಒಟ್ಟಾರೆ ದರ ಇಳಿಕೆಯು 12.47 ರುಪಾಯಿಗಳು.
ಆ ಲೆಕ್ಕಕ್ಕೆ ನೋಡಿದರೆ, ಡಿಸೇಲ್ ಬಳಸುವ ಗ್ರಾಹಕರ ಮೇಲಿನ ಹೊರೆ ಕೊಂಚ ತಗ್ಗಿದೆ. ಇದು ಪರಿಷ್ಕೃತ ದರದ ವಿಚಾರ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿಪಾದಿಸಿರುವಂತೆ ರಾಜ್ಯದ ಬೊಕ್ಕಸಕ್ಕೆ 2,100 ರುಪಾಯಿ ನಷ್ಟ ಆಗುವುದಿಲ್ಲ. ಅದು ತೆರಿಗೆ ಆದಾಯದ ಕೊರತೆ ಆಗಬಹುದು.
ದರ ಇಳಿಕೆಯಾಗಿದೆ ಎಂದು ಸಮಾಧಾನ ಪಡುತ್ತಿರುವ ಗ್ರಾಹಕರಿಗೆ ಒಂದು ಕಹಿಸುದ್ದಿ ಮತ್ತು 2,100 ಕೋಟಿ ರುಪಾಯಿ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎನ್ನುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿಹಿ ಸುದ್ದಿ ಇದೆ. ಅದೇನೆಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುಹಾದಿಯಲ್ಲಿ ಸಾಗುತ್ತಿದೆ. ಪ್ರತಿ ಬ್ಯಾರೆಲ್ ಕಚ್ಚಾ ತೈಲ 80 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಬರುವ ದಿನಗಳಲ್ಲಿ ಇದು 100 ಡಾಲರ್ ಸಮೀಪಿಸಬಹುದು. ಅಂದರೆ, ತೈಲ ಮಾರಾಟ ಕಂಪನಿಗಳು ನಾಳೆಯಿಂದಲೇ ಮತ್ತೆ ದರ ಏರಿಕೆ ಆರಂಭಿಸಬಹುದು.

ವಾಸ್ತವವಾಗಿ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಪೆಟ್ರೋಲ್, ಡಿಸೇಲ್ ದರಗಳನ್ನು ಸ್ಥಿರವಾಗಿ ಕಾಪಾಡುವುದಾಗಿ ಭರವಸೆ ನೀಡಿಲ್ಲ. ಈಗ ಘೋಷಿತ ತೆರಿಗೆ ಕಡಿತವು ಮೋದಿ ಸರ್ಕಾರವು ಇಡೀ ದೇಶ ಲಾಕ್ಡೌನ್ ಆಗಿದ್ದ ಹೊತ್ತಿನಲ್ಲಿ ಜನರಿಗೆ ಗೊತ್ತಾಗದಂತೆ ಏರಿಸಿದ್ದ ಭಾರಿ ಪ್ರಮಾಣದ ಸುಂಕದಲ್ಲಿ ಕೊಂಚ ಕಡಿತ ಮಾಡಿದೆ ಅಷ್ಟೇ.
ಪರಿಷ್ಕೃತ ದರದ ನಂತರವೂ ಪೆಟ್ರೋಲ್ ನ ವಾಸ್ತವಿಕ ದರಕ್ಕಿಂತ ಶೇಕಡ 100ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ನವೆಂಬರ್ 4ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ (84.15 ಡಾಲರ್ ಪ್ರತಿ ಬ್ಯಾರೆಲ್) ಡಾಲರ್ ವಿರುದ್ಧ ರುಪಾಯಿ ವಿನಿಮಯ ದರ (ಒಂದು ಡಾಲರ್ ಗೆ 74.47 ರುಪಾಯಿ) ಆಧರಿಸಿ ಲೆಕ್ಕ ಹಾಕಿದರೂ ಪೆಟ್ರೋಲ್ ಪ್ರತಿ ಲೀಟರ್ ವಾಸ್ತವಿಕ ದರ 48.28 ರುಪಾಯಿ. ಡಿಸೇಲ್ ದರ 49.62 ರುಪಾಯಿ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 27.9 ರುಪಾಯಿ, ಡಿಸೇಲ್ ಮೇಲೆ 21.8 ರುಪಾಯಿಗಳ ತೆರಿಗೆ ಹೇರುತ್ತಿದೆ. ರಾಜ್ಯ ಸರ್ಕಾರಗಳು (ರಾಜ್ಯದಿಂದ ರಾಜ್ಯಕ್ಕೆ ಕೊಂಚ ವ್ಯತ್ಯಾಸವಾಗುತ್ತದೆ) ಪೆಟ್ರೋಲ್ ಮೇಲೆ 24.5 ರುಪಾಯಿ ಡಿಸೇಲ್ ಮೇಲೆ 12.65 ರುಪಾಯಿ ತೆರಿಗೆ ವಿಧಿಸುತ್ತವೆ. ಪೆಟ್ರೋಲ್ 3.8 ರುಪಾಯಿ, ಡಿಸೇಲ್ 2.6 ರುಪಾಯಿ ಪೆಟ್ರೋಲ್ ಪಂಪ್ ಗಳಿಗೆ ಕಮಿಷನ್. ಇದು ತೆರಿಗೆ ಕಡಿತದ ನಂತರದ ಪರಿಷ್ಕೃತ ದರ ಮೇಲಿನ ಲೆಕ್ಕಾಚಾರ.

ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಒಂದಾಗಿ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತಂದು ಗರಿಷ್ಠ ಪ್ರಮಾಣದ ತೆರಿಗೆ ಶೇ.28 ರಷ್ಟು ಹೇರಿದರೂ ಪೆಟ್ರೋಲ್ ಮತ್ತು ಡಿಸೇಲ್ 60 ರುಪಾಯಿ ಆಜುಬಾಜಿನಲ್ಲಿ ಜನರಿಗೆ ಸಿಗುತ್ತದೆ. ಈ ಸವಾಲನ್ನೂ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಸ್ವೀಕರಿಸುತ್ತಾರಾ?










