ದೆಹಲಿ ಗಡಿಯಲ್ಲಿನ ಪ್ರತಿಭಟ ನಿರತ ರೈತರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ರಾಕೇಶ್ ಟಿಕಾಯತ್ “ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ, ಅವರು ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಯನ್ನಾಗಿ ಪರಿವರ್ತಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಪೊಲೀಸರು ಗಾಜಿಪುರ ಮತ್ತು ಟಿಕ್ರಿ ಗಡಿಯಿಂದ ಸಿಮೆಂಟ್ ಬ್ಲಾಕ್‌ಗಳು ಮತ್ತು ಬ್ಯಾರಿಕೇಡ್‌ಗಳನ್ನು ತೆಗೆದ ಎರಡು ದಿನಗಳ ನಂತರ ಟಿಕಾಯತ್ ಅವರ ಪ್ರತಿಕ್ರಿಯೆ ಬಂದಿದೆ. ರೈತರನ್ನು ಹೊರಹಾಕಲು ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ರೈತರ ಆಂದೋಲನ ಪ್ರಾರಂಭವಾದ 11 ತಿಂಗಳುಗಳಿಂದ ಹೆದ್ದಾರಿಗಳನ್ನು ಮುಚ್ಚಲಾಗಿತ್ತು. ಇದರಿಂದ ಹಲವು ಮಂದಿ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಅನಾನುಕೂಲತೆಯಾಗುತ್ತಿದೆ ಎಂದು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ, ರೈತರನ್ನು ಹೊರಹಾಕಲು ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ.
ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿಗಳೇ ನಮ್ಮ ವಾಸಸ್ಥಳವಾಗಬಹುದು- ಟಿಕಾಯತ್
ಸರ್ಕಾರ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಗುಡಿಸಲುಗಳನ್ನು ಎಳೆಯಲು ಪ್ರಯತ್ನಿಸಿದರೆ, ರೈತರು ಅವುಗಳನ್ನು ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸುತ್ತಾರೆ. ಈಗಾಗಲೇ ಗುಡಿಸಲುಗಳನ್ನು ಒಡೆದುಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ಇನ್ನೂ ಹೀಗೆ ಘಟನೆಗಳಾದರೆ, ಪರಿಣಾಮ ಚೆನ್ನಾಗಿರಲ್ಲ ಎಂದು ರಾಕೇಶ್ ಟಿಕಾಯತ್ ಎಎನ್‌ಐಗೆ ತಿಳಿಸಿದರು.
ರೈತರಿಗೆ ಆಂದೋಲನ ನಡೆಸುವ ಹಕ್ಕಿದ್ದರೂ ಅನಿರ್ದಿಷ್ಟಾವಧಿವರೆಗೆ ರಸ್ತೆ ತಡೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತಿಳಿಸಿತ್ತು. ಆದರೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ ಎಂದು ರೈತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಟಿಕ್ರಿ ಗಡಿಯಲ್ಲಿ ರಸ್ತೆ ವಿಸ್ತರಣೆಯಾದರೆ ಬಹದ್ದೂರ್‌ಗಢ್ ಮತ್ತು ರಾಷ್ಟ್ರ ರಾಜಧಾನಿಯ ನಡುವೆ ಪ್ರಯಾಣಿಸುವವರಿಗೆ ಮತ್ತು ಹರಿಯಾಣದಿಂದ ರಾಜಸ್ಥಾನಕ್ಕೆ ಹೋಗುವವರಿಗೆ ಸಹಾಯ ಮಾಡುತ್ತದೆ. ಕಳೆದ ವರ್ಷ ನವೆಂಬರ್ 26 ರಿಂದ ಸಾವಿರಾರು ರೈತರು ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಕ್ಯಾಂಪ್ಗಳನ್ನು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳು ರೈತರ ಹಿತಾಸಕ್ತಿಗೆ ವಿರುದ್ಧವಾಗಿವೆ!
ಕೇಂದ್ರವು ಕಾನೂನುಗಳು ರೈತರಪರ ಎಂದು ಹೇಳಿದರೂ, ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾನಿರತ ರೈತರು ಪ್ರತಿಪಾದಿಸುತ್ತಿದ್ದಾರೆ. ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಪರಿಸ್ಥಿತಿ ಅತಂತ್ರವಾಗಿದೆ ಎಂದು ಟಿಕಾಯತ್ ತಿಳಿಸಿದ್ದಾರೆ.
ರೈತರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಗಳಿಂದ ರೈತರಿಗಾಗುವ ಸಮಸ್ಯೆಗಳಿಗೆ ಪರಿಹಾರಗಳೇ ಸಿಗುತ್ತಿಲ್ಲ. 6 ರಂದು ಸಿಂಘು ಗಡಿ ಭಾಗದ ರೈತರ ಬೃಹತ್ ಸಮಾವೇಶದಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು ಎಂದು ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ತಿಳಿಸಿದ್ದಾರೆ.