ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿದರೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಚುನಾವಣೆ ವಿಚಾರವಾಗಿ ನವೆಂಬರ್ 8 ರಂದು ತೀರ್ಪು ಪ್ರಕಟವಾಗುವ ಸಾಧ್ಯತೆಗಳಿವೆ. ನ್ಯಾಯಾಲಯ ಏನೇ ಆದೇಶ ನೀಡಿದ್ದರು ಅದನ್ನು ಚಾಚು ತಪ್ಪದೆ ಪಾಲಿಸಲಾಗುವುದು ಎಂಧು ಹೇಳಿದ್ದಾರೆ.
ಈಗಾಗಲೇ 243 ವಾರ್ಡ್ ರಚನೆ ಕಾರ್ಯ ಪ್ರಗತಿಯಲ್ಲಿದ್ದು ಈ ವಿಚಾರವಾಗಿ ಹಲವು ಸಭೆಗಳನ್ನು ನಡೆಸಲಾಗಿದೆ. ಈ ಹಿಂದೆ ಸಭೆ ನಡೆಸಿದ್ದಾಗ ಪಾಲಿಕೆ ವ್ಯಾಪ್ತಿಗೆ ಕೆಲವು ಗ್ರಾಮಗಳ ಸೇರ್ಪಡೆ ಬಗ್ಗೆ ಈಗಾಗಲೇ ಆ ಗ್ರಾಮಗಳ ದಾಖಲೆಗಳ ಬಗ್ಗೆ ಸರ್ಮಪಕ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
243 ವಾರ್ಡ್ಗಳ ರಚನೆಯ ಕರಡು ಪ್ರತಿ ಸಿದ್ದವಾಗಿದ್ದು ಇದನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರದಿಂದ ಅನುಮತಿ ದೊರೆತರೆ ವಾರ್ಡ್ ರಚನೆ ಕಾರ್ಯ ಅಂತಿಮವಾಗಲಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ತಯಾರಿ ಆರಂಭಿಸಿದ ಪಕ್ಷಗಳು
ಬಿಬಿಎಂಪಿ ಚುನಾವಣೆ ಮಾರ್ಚ್ ಗೆ ಘೋಷಣೆಯಾಗು ಸಾಧ್ಯತೆ ಇದೆ ಎಂಬ ಸುದ್ದಿ ಹಾರಿದಾಡುತ್ತಿದೆ. ಹೀಗಾಗಿ ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆಗೆ ಈ ಭಾರಿ ಆಪ್ ಪಕ್ಷವು ಚುನಾವಣಾ ಅಖಾಡಕ್ಕೆ ಇಳಿದಿದ್ದು ನಗರದಲ್ಲಿ ಚುನಾವಣಾ ಸಿದ್ದತೆಗಳು ಮತ್ತು ಚಟುವಟಿಕೆಗಳು ಗರಿಗೆದರಿವೆ.
ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಲಾಕ್ ಮತ್ತು ವಾರ್ಡ್ ಸಮಿತಿಗಳಿಗೆ ಅಧ್ಯಕ್ಷರು, ಪದಾಧಿಕರಿಗಳ ನೇಮಕ, ಯುವ ಘಟಕಗಳಿಗೆ ನೇಮಕ ಹಾಗು ಪಕ್ಷಾಂತರ ಪರ್ವ ಶುರುವಾಗಿದೆ.
ಚುನಾವಣಾ ಆಯೋಗಕ್ಕೆ ಪತ್ರ
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಚುನಾವಣೆ ವೇಳೆ ನಿರ್ವಹಿಸಬೇಕಾದ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟತೆಯನ್ನು ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಕೂರಲು ಆಸನಗಳಿಲ್ಲ
ಪ್ರಸ್ತುತ ಜಾರಿಯಲ್ಲಿರುವ 198 ವಾರ್ಡ್ಗಳ ಪಾಲಿಕೆ ಸದಸ್ಯರಿಗೆ ಪೌರ ಸಭಾಂಗಣದಲ್ಲಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಆದರೆ, ಈಗ ಸುಪ್ರೀಂ ಕೋರ್ಟ್ನಿಂದ 243 ವಾರ್ಡ್ಗಳಿಗೆ ಚುನಾವಣೆ ನಡೆಸಲು ಆದೇಶಿಸಿದರೆ ಆಯ್ಕೆಯಾದ ಕೌನ್ಸಿಲ್ ಸದಸ್ಯರಿಗೆ ಕೂರಲು ಜಾಗವಿಲ್ಲ.
2021-22ನೇ ಸಾಲಿನ ಬಿಬಿಎಂಪಿ ಬಜೆಟ್ ನಲ್ಲಿ ಪಾಲಿಕೆಯ ಪೌರ ಸಭಾಂಗಣದ ನವೀಕರಣಕ್ಕೆ 10ಕೋಟಿ ರೂಪಾಯಿ ಅನುದಾನವನ್ನ ಮೀಸಲಿಡಲಾಗಿತ್ತು. ಇದೀಗ ಬಿಬಿಎಂಪಿ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕಾಮಗಾರಿಯನ್ನು ಮುಂದೂಡುತ್ತಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದ ನಂತರ ತರಾತುರಿಯಲ್ಲಿ ಕಾಮಗಾರಿ ಕೈಗೊಂಡು ಕಳಪೆ ಕಾಮಗಾರಿ ನಡೆಸಿ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ..