ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತೀವ್ರ ವಾಗ್ದಾಳಿ ನಡೆಸಿದ್ದು ಚುನಾವಣಾ ಕಣ ಮತಷ್ಟು ರಂಗೇರಿದೆ.
ಸಿಂಧಗಿಯಲ್ಲಿ ಪ್ರಚಾರ ಮಾಡಿದಷ್ಟು ಹಾನಗಲ್ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ ಪ್ರಚಾರ ಮಾಡುತ್ತಿಲ್ಲ. ಏಕೆಂದರೆ ಬಿಜೆಪಿಯಿಂದ ಅಥವಾ ಅಲ್ಲಿನ ಅಭ್ಯರ್ಥಿಯಿಂದ ಸೂಟ್ಕೇಸಗಳು ಸಿಗದ ಕಾರಣ ಹಾನಗಲ್ನಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ಹೆಚ್.ಡಿ.ಕೆ ವಿರುದ್ದ ಶಾಸಕ ಜಮೀರ್ ಆರೋಪಿಸಿದ್ದಾರೆ.
ಕುಮಾರಸ್ವಾಮಿರವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಲವಾರು ಮುಸ್ಲಿಂ ಮತ್ತು ಒಕ್ಕಲಿಗ ಸಮಾಜದ ಅಭ್ಯರ್ಥಿಗಳನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ʻಸೂಟ್ಕೇಸ್ ಸಂಸ್ಕೃತಿ ನಮ್ಮದಲ್ಲ, ಜೆಡಿಎಸ್ ಪಕ್ಷದ್ದುʼ ಪಕ್ಷದ ಹೈಕಮಾಂಡ್ಗೆ ಬಕೆಟ್ ಹಿಡಿದವರಿಗೆ ಮಾತ್ರ ಟಿಕೆಟ್ ಸಿಗುತ್ತದೆ ಎಂದು ಅವರ ಅಣ್ಣನ ಮಗ ಹಾಸನದ ಪ್ರಜ್ವಲ್ ರೇವಣ್ಣ ಸಾರ್ವಜನಿಕ ಸಭೆಯಲ್ಲೇ ಆರೋಪಿಸಿದರು ಎಂದು ಜಮೀರ್ ಹೇಳಿದ್ದರು.
ಈ ಹಿಂದೆ ಜೆಡಿಎಸ್ ಪಕ್ಷ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ್ದಾಗ ಇಬ್ಬರು ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಹಾನಗಲ್ ಅಭ್ಯರ್ಥಿಯಿಂದ ದೊಡ್ಡ ಸೂಟ್ಕೇಸ್ ಸಿಗದ ಕಾರಣ ಮಾಜಿ ಸಿಎಂ ಹೆಚ್.ಡಿ.ಕೆ ಹಾನಗಲ್ನಲ್ಲಿ ಬರಿ ಒಂದೇ ದಿನ ಪ್ರಚಾರ ಮಾಡಿದ್ದಾರಷ್ಟೇ ಎಂದು ಶಾಸಕ ಜಮೀರ್ ಟೀಕಿಸಿದ್ದಾರೆ.
ಕುಮಾರಸ್ವಾಮಿರವರು ಪದೇ ಪದೇ ಆರ್ಎಸ್ಎಸ್ ವಿರುದ್ದ ಆರೋಪಿಸುತ್ತಿದ್ದಾರೆ. ಏಕೆಂದರೆ, ಅವರಿಗೆ ಆರ್ಎಸ್ಎಸ್ ನಾಯಕರೆ ಹಾಗೆ ಹೇಳಿರುವ ಕಾರಣ ಹೆಚ್ಡಿಕೆ ಹಾಗೆ ಮಾತನಾಡುತ್ತಿದ್ದಾರೆ. ಆರ್ಎಸ್ಎಸ್ಅನ್ನು ದೂಷಿಸುವುದರಿಂದ ತಮ್ಮಗೇ ಮುಸ್ಲಿಂ ಸಮುದಾಯದ ಮತಗಳು ಬೀಳುತ್ತವೆ ಮತ್ತು ಇದು ಬಿಜೆಪಿಗೆ ಚುನಾವಣೇಯಲ್ಲಿ ಗೆಲ್ಲಲು ಸಹಕಾರಿಯಾಗಲಿದೆ. ಇದು ಕುಮಾರಸ್ವಾಮಿಯವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹರಕೆಯ ಕುರಿ ಬೇಕಾದಾಗ ಮಾತ್ರ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಕುಮಾರಸ್ವಾಮಿಯಿಂದ ರಾಜಕೀಯವಾಗಿ ನಾಶವಾದ 10 ಮುಸ್ಲಿಂ ನಾಯಕರ ಹೆಸರುಗಳನ್ನು ಜಮೀರ್ ಈ ವೇಳೆ ಹೇಳಿದ್ದರು. ತಮ್ಮ ಸ್ವಂತ ಅಣ್ಣ ರೇವಣ್ಣ ಉಪಮುಖ್ಯಮಂತ್ರಿಯಾಗುವುದನ್ನು ಸಹಿಸದ ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
2004ರ ಚುನಾವಣೆ ಸಮಯದಲ್ಲಿ ಹೆಚ್.ಡಿ.ದೇವೇಗೌಡರವರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಅನ್ನು ನಿರಾಕರಿಸಿದ್ದರು. ಅಂದಿನ, ಜೆಡಿಎಸ್ ಹಿರಿಯ ನಾಯಕರು ಮಧ್ಯಪ್ರವೇಶಿಸಿ ದೇವೇಗೌಡರ ಬಳಿ ಪಟ್ಟು ಹಿಡಿದ ಕಾರಣ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದರು. ಇಲ್ಲದಿದ್ದರೆ, ಹೆಚ್.ಡಿ.ಕೆ. ಬಿಬಿಎಂಪಿ ಕಚೇರಿಗಳಲ್ಲಿ ಕಸ ಗುಡಿಸಿಕೊಂಡು ಇರಬೇಕಾಗುತ್ತಿತ್ತು ಎಂದು ಕಾಂಗ್ರೆಸ್ ಶಾಸಕ ಜಮೀರ್ ಹೇಳಿದ್ದಾರೆ.