ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಸೋಮವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೀಡಾದ ಅರುಣ್ ನರ್ವಾರ್ ಅವರ ಕುಟುಂಬವನ್ನು ಭೇಟಿ ಮಾಡಿ ಅವರ ಸಂಬಂಧಿಕರಿಗೆ 40 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಕೆಲಸವನ್ನು ನೀಡುವಂತೆ ಯುಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅರುಣ್ ನರ್ವಾರ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್, “ಯುಪಿ ಸರ್ಕಾರ ಪರಿಹಾರ ನೀಡುವಾಗ ತಾರತಮ್ಯ ಮಾಡುತ್ತಿದೆ. ಆದರೆ ಲಖಿಂಪುರ್ ಖೇರಿ ಮತ್ತು ಕಾನ್ಪುರದಲ್ಲಿ ರೂ 40-45 ಲಕ್ಷ ಪರಿಹಾರವನ್ನು ನೀಡಿದೆ, ಆಗ್ರಾದಲ್ಲಿ ಸರ್ಕಾರವು 10 ಲಕ್ಷ ಪರಿಹಾರವನ್ನು ನೀಡಿದೆ ಎಂದು ಆಯೋಪಿಸಿದ್ದಾರೆ.
ಸರಕಾರ ತಾರತಮ್ಯ ಮಾಡದೇ, ಅರುಣ್ ಕುಟುಂಬಕ್ಕೆ 40 ಲಕ್ಷ ಪರಿಹಾರ ನೀಡಬೇಕು, ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ಅರುಣ್ ಸಾವಿನ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಆಗ್ರದ ಜಗದೀಶ್ಪುರ ಪೊಲೀಸ್ ಠಾಣೆಯಿಂದ 25 ಲಕ್ಷ ರೂಪಾಯಿ ಕದ್ದ ಆರೋಪದ ಮೇಲೆ ನರ್ವಾರ್ ಆರೋಪಿಯಾಗಿದ್ದು, ಅಕ್ಟೋಬರ್ 19 ರಂದು ವಿಚಾರಣೆಯ ವೇಳೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಕಾನೂನಿನ ಮೇಲೆ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ರಾಕೇಶ್ ಟಿಕಾಯತ್, “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ನಾನು ರೈತರಿಗೆ ಮನವಿ ಮಾಡುತ್ತೇನೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿಯನ್ನು ವಿರೋಧಿಸಲಿದೆ. “ನಾವು ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷವನ್ನು ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವು ಈ ವಿಷಯ ಇತ್ಯರ್ಥವಾಗುವವರೆಗೆ ಮುಂದುವರಿಯುತ್ತದೆ ಮತ್ತು “ನಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಸಹ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.