ಒಂದು ಕಡೆ ಪಂಚಮಸಾಲಿ ಲಿಂಗಾಯತ ಮತ್ತಿತರ ಬಲಾಢ್ಯ ಸಮುದಾಯಗಳು ಅತಿ ಹಿಂದುಳಿದ ಸಮುದಾಯ ಮೀಸಲಾತಿಗೆ ಹೋರಾಟ ನಡೆಸುತ್ತಿರುವಾಗಲೇ, ಮತ್ತೊಂದು ಕಡೆ ದುರ್ಬಲ ಸಮುದಾಯಗಳು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಗೃತ ಹೆಜ್ಜೆ ಇಡತೊಡಗಿವೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಕಾವೇರಿದೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರದ ಮೇಲೆ ಪಾದಯಾತ್ರೆ, ಸಮಾವೇಶ ಮುಂತಾದ ಹೋರಾಟಗಳ ಮೂಲಕ ಆ ಸಮುದಾಯ ಒತ್ತಡ ಹೇರುತ್ತಲೇ ಇದೆ. ಇದೀಗ ಅಕ್ಟೋಬರ್ 30ರೊಳಗೆ ಡಾ ಸುಭಾಷ್ ಬಿ ಅಡಿ ಅವರ ನೇತೃತ್ವದ ಮೀಸಲಾತಿ ಪುನರ್ ಪರಿಷ್ಕರಣಾ ಸಮಿತಿ ವರದಿ ಪಡೆದು, ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಹೊಸ ಗಡುವು ನೀಡಿದ್ದಾರೆ.
ಅದೇ ಹೊತ್ತಿಗೆ, ಪ್ರಬಲ ಲಿಂಗಾಯತ ಸಮುದಾಯದ ಈ ಬೇಡಿಕೆಗೆ ಸರ್ಕಾರ ಮಣಿದು 2ಎ ಮೀಸಲಾತಿ ನೀಡಿದ್ದಲ್ಲಿ, ಈಗಾಗಲೇ 102 ವಿವಿಧ ಜಾತಿಗಳಿಗೆ ಹರಿದುಹಂಚಿಹೋಗಿರುವ ಪ್ರವರ್ಗ 2 ಎ ಮೀಸಲಾತಿ ಪ್ರಮಾಣದಲ್ಲಿ ಇನ್ನಷ್ಟು ಕೊರತೆಯಾಗಲಿದೆ. ಪರಿಣಾಮವಾಗಿ ಆ ಸಣ್ಣಪುಟ್ಟ ದುರ್ಬಲ ಸಮುದಾಯಗಳು ಇನ್ನಷ್ಟು ಅವಕಾಶವಂಚಿತವಾಗಲಿವೆ ಎಂಬ ಆತಂಕ ಆ ಸಮುದಾಯಗಳ ಮಠಾಧೀಶರು, ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಈಗಿರುವ ಮೀಸಲಾತಿ ಪ್ರಮಾಣ ಸ್ವರೂಪದಲ್ಲಿ 2ಎ ಪ್ರವರ್ಗಕ್ಕೆ ಯಾವುದೇ ಹೊಸ ಜಾತಿ ಸೇರ್ಪಡೆ ಕೂಡದು ಎಂದು ಆ ಸಮುದಾಯಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಈಗಾಗಲೇ ಈ ಸಂಬಂಧ ಕಳೆದ ಶನಿವಾರ ಬೆಂಗಳೂರಿನಲ್ಲಿ ರಾಜ್ಯದ ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು ಮತ್ತು ಪ್ರಮುಖರ ಸಭೆ ನಡೆದಿದ್ದು, ಆ ಸಭೆಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2 ಎಗೆ ಸೇರಿಸಬೇಕೆಂಬ ಬಲಿಷ್ಠ ವೀರಶೈವ ಪಂಚಮಸಾಲಿ ಸಮುದಾಯದ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ಒಂದು ವೇಳೆ ಪ್ರಬಲ ಸಮುದಾಯದ ಒತ್ತಡಕ್ಕೆ ಮಣಿದು ಸರ್ಕಾರ ಪ್ರವರ್ಗ 2ಎಯ ಮೀಸಲಾತಿಯಲ್ಲಿ ಆ ಸಮುದಾಯಕ್ಕೆ ಅವಕಾಶ ಕಲ್ಪಿಸಿದಲ್ಲಿ ಎಲ್ಲಾ ಎಲ್ಲಾ ಅತಿ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂಬ ಸಂದೇಶ ರವಾನಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಡಾ ಸಿ ಎಸ್ ದ್ವಾರಕನಾಥ್, “ಪ್ರವರ್ಗ 1ರಲ್ಲಿರುವ 95 ಹಾಗೂ ಪ್ರವರ್ಗ 2 ‘ಎ’ದಲ್ಲಿರುವ 102 ಸಮುದಾಯಗಳು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ದುರ್ಬಲವಾಗಿವೆ ಎಂಬುದನ್ನು ಮನಗಂಡು ಬಲಾಢ್ಯ ಸಮುದಾಯಗಳು ಮೀಸಲಾತಿ ಕಸಿಯುವ ಈ ದಬ್ಬಾಳಿಕೆಗೆ ಮುಂದಾಗಿದ್ದಾರೆ. ಇದಕ್ಕೆ ಸರ್ಕಾರ ಮಣಿದರೆ ಬಿಸಿ ಮುಟ್ಟಿಸದೇ ಇರುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ‘ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ಎಂಬ ವೇದಿಕೆಯಡಿಯಲ್ಲಿ ಈಗಾಗಲೇ ಹೋರಾಟ ಆರಂಭವಾಗಿದ್ದು, ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು ಮತ್ತು ರಾಜಕೀಯ ನಾಯಕರು ಪಕ್ಷಾತೀತವಾಗಿ ಹೋರಾಟವನ್ನು ಬೆಂಬಲಿಸಬೇಕು ಎಂದೂ ಸಭೆಯಲ್ಲಿ ಕರೆ ನೀಡಲಾಗಿದೆ.
ಬೆಂಗಳೂರಿನ ಈ ಸಭೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸೋಮವಾರ ಅತಿ ಹಿಂದುಳಿದ ಸಮುದಾಯಗಳ ಮೀಸಲಾತಿ ರಕ್ಷಣೆಯ ನಿಟ್ಟಿನಲ್ಲಿ ಮತ್ತೊಂದು ಹೋರಾಟವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಅತಿ ಹಿಂದುಳಿದ ಸಮುದಾಯಗಳ ಮೀಸಲಾತಿ ರಕ್ಷಣೆ ಮತ್ತು ಸರ್ಕಾರಿ ಸೌಲಭ್ಯ ಮತ್ತು ಸೌಕರ್ಯಗಳ ನ್ಯಾಯಯುತ ಪಾಲು ಪಡೆಯಲು ಅನುಕೂಲವಾಗುವಂತೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅ.30ರಂದು ಶಿವಮೊಗ್ಗದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ಎಂ ರಾಮಚಂದ್ರಪ್ಪ ಹೇಳಿದ್ದಾರೆ.
ವಿಶೇಷವೆಂದರೆ; ಆ ಧರಣಿಯಲ್ಲಿ ಅಹಿಂದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದು, ಹಿಂದುಳಿದ ವರ್ಗಗಳ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿರುವ ಪ್ರಬಲ ಸಮುದಾಯಗಳು ಅತಿ ಹಿಂದುಳಿದ ಸಮುದಾಯಗಳಿಗೆ ನೀಡಿರುವ ಪ್ರವರ್ಗ 2 ಮೀಸಲಾತಿಯಲ್ಲಿ ನುಸುಳಲು ಪ್ರಬಲ ಲಾಬಿ ನಡೆಸಿವೆ. ಪ್ರಭಾವ ಮತ್ತು ಲಾಬಿಯ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಇಂತಹ ಒತ್ತಡಗಳಿಗೆ ಮಣಿದು ರಾಜ್ಯ ಸರ್ಕಾರ, ಅಂತಹ ಬಲಾಢ್ಯ ಸಮುದಾಯಗಳಿಗೆ 2 ಎ ಮೀಸಲಾತಿ ಅವಕಾಶ ಕಲ್ಪಿಸಿದಲ್ಲಿ ದುರ್ಬಲ ಸಮುದಾಯಗಳಿಗೆ ದೊಡ್ಡ ಪೆಟ್ಟು ಕೊಡಲಿವೆ. ಮತ್ತೊಂದು ಐತಿಹಾಸಿಕ ಅನ್ಯಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಹಾಗಾಗಿ, ಅಂತಹ ಒತ್ತಡಗಳಿಗೆ ಮಣಿಯಬಾರದು ಎಂದು ಸರ್ಕಾರವನ್ನು ಎಚ್ಚರಿಸಲು ಮತ್ತು ಕಾಂತರಾಜ್ ಆಯೋಗದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ಈ ಹೋರಾಟ ಆರಂಭಿಸಲಾಗುತ್ತಿದೆ ಎಂದು ಒಕ್ಕೂಟ ಹೇಳಿದೆ.
ಅಷ್ಟೇ ಅಲ್ಲದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈಗಾಗಲೇ ಇರುವಾಗ, ಕೆಲವು ಬಲಾಢ್ಯರ ಒತ್ತಡಕ್ಕೆ ಮಣಿದು ಡಾ ಸುಭಾಷ್ ಬಿ ಅಡಿ ಅವರ ನೇತೃತ್ವದ ಸಮಿತಿ ರಚನೆಯ ಅಗತ್ಯವಿಲ್ಲ. ಹಾಗಾಗಿ ಆ ಸಮಿತಿಯನ್ನು ಕೂಡಲೇ ರದ್ದುಮಾಡಬೇಕು. ಜೊತೆಗೆ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ನೀಡಿರುವಂತೆ ವಿಧಾನಸಭಾ ಮತ್ತು ಲೋಕಸಭಾ ಹಂತದಲ್ಲಿಯೂ ಹಿಂದುಳಿದ ಸಮುದಾಯಗಳಿಗೆ ಜನಸಂಖ್ಯೆ ಅನುಪಾತದ ಆಧಾರದ ಮೇಲೆ ರಾಜಕೀಯ ಮೀಸಲಾತಿ ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ಹಮ್ಮಿಕೊಂಡಿರುವುದಾಗಿ ಅದು ಹೇಳಿದೆ.
ಒಂದು ಕಡೆ ಲಿಂಗಾಯತ ಸಮುದಾಯದ ಪ್ರಾಬಲ್ಯದ ಭಾರತೀಯ ಜನತಾ ಪಕ್ಷದ ಸರ್ಕಾರ, ಪ್ರಬಲ ಮತ್ತು ಪ್ರಭಾವಿ ಪಂಚಮಸಾಲಿ ಒಳಪಂಗಡದ ಒತ್ತಡಕ್ಕೆ ಮಣಿದು ಸುಭಾಷ್ ಬಿ ಅಡಿ ನೇತೃತ್ವದ ಸಮಿತಿ ರಚಿಸಿದಾಗಲೇ ಬಿಜೆಪಿ ತನ್ನ ಮತಬ್ಯಾಂಕ್ ರಕ್ಷಣೆಗಾಗಿ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಂತಹ ತಂತ್ರ ಹೂಡಿದೆ ಎಂಬ ಸಂದೇಶ ರವಾನೆಯಾಗಿತ್ತು. ಸರ್ಕಾರದ ಅಂತಹ ನಡೆಯಿಂದಾಗಿ ಅತಿ ಹಿಂದುಳಿದ ದುರ್ಬಲ ಸಮುದಾಯಗಳಿಗೆ ಅನ್ಯಾಯವಾಗಲಿದೆ ಮತ್ತು ಆ ಸಮುದಾಯಗಳು ಇನ್ನಷ್ಟು ಕುಸಿಯಲಿವೆ ಎಂಬ ಆತಂಕ ಕೂಡ ಇತ್ತು. ಆ ಹಿನ್ನೆಲೆಯಲ್ಲೇ ಕುರುಬ, ಈಡಿಗ ಮತ್ತಿತರ ಹಿಂದುಳಿದ ಪ್ರವರ್ಗ 2ಎಯ ಸಮುದಾಯಗಳು ಆಗಲೇ ಪ್ರತಿರೋಧ ವ್ಯಕ್ತಪಡಿಸಿದ್ದವು.
ಅಂತಹ ಪ್ರತಿರೋಧದ ಬೆನ್ನಲ್ಲೇ ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ಈಡಿಗ ಮತ್ತಿತರ ಸಣ್ಣಪುಟ್ಟ ಸಮುದಾಯಗಳ ವಿವಿಧ ಮಠಗಳಿಗೆ ಭೇಟಿ ನೀಡಿ, ತಮ್ಮ ಹೋರಾಟದಿಂದ ಆ ಸಮುದಾಯಗಳ ಮೀಸಲಾತಿಗೆ ಧಕ್ಕೆಯಾಗುವುದಿಲ್ಲ ಎಂದು ಮನವೊಲಿಸುವ ಮತ್ತು ಪರೋಕ್ಷವಾಗಿ ಭವಿಷ್ಯದ ಪ್ರತಿರೋಧವನ್ನು ನಿವಾರಿಸಿಕೊಳ್ಳುವ ಯತ್ನವನ್ನೂ ನಡೆಸಿದ್ದರು.
ಆದರೆ, ಇದೀಗ ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ವಿಧಿಸಿರುವ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ದಿಢೀರನೇ ಅತಿ ಹಿಂದುಳಿದ ಸಮುದಾಯಗಳಲ್ಲಿ ಪ್ರತಿರೋಧ ಕಾವೇರತೊಡಗಿದೆ. ಏಕಕಾಲಕ್ಕೆ ಹಲವು ಕಡೆ ಸಮಾವೇಶ, ಸಭೆ, ಧರಣಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಹಿತ ಕಾಯ್ದುಕೊಳ್ಳುವ ಪ್ರಯತ್ನ ಆರಂಭಿಸಿವೆ. ಆ ಪೈಕಿ ಕೆಲವು ಸಂಘಟಕರು ಬಲಾಢ್ಯ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ಕಲ್ಪಿಸಲು ಬಿಡುವುದಿಲ್ಲ ಎಂದು ನೇರಾನೇರ ಎಚ್ಚರಿಕೆ ನೀಡಿದ್ದರೆ, ಮತ್ತೆ ಕೆಲವರು ಕಾಂತರಾಜು ಆಯೋಗದ ವರದಿ ಬಹಿರಂಗಪಡಿಸುವಂತೆ ಆಗ್ರಹಿಸುವ ಮೂಲಕ ಪರೋಕ್ಷವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಸಿವೆ.
ಹಾಗಾಗಿ, ಇದೀಗ ರಾಜ್ಯದ ಮೀಸಲಾತಿ ಹೋರಾಟ ಪರ್ವಕ್ಕೆ ಒಂದು ಕ್ಲೈಮ್ಯಾಕ್ಸ್ ಸಿಕ್ಕಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಮತ್ತು ಸ್ವತಃ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಈ ಅತ್ತ ಧರಿ, ಇತ್ತ ಪುಲಿ’ ಎಂಬಂತಹ ಬಿಕ್ಕಟ್ಟನ್ನು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.